ಕೋರ್ಟು, ಕೇಸಿನ ಕಾರಣಕ್ಕೆ ಲಹರಿ ಸಂಸ್ಥೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಾನೂನಿನ ಪರಿಧಿಯಲ್ಲಿ ಹೋರಾಟ ನಡೆಸುವುದರಲ್ಲಿ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು ಲಹರಿ ಸಂಸ್ಥೆಯದ್ದು. ಒಂದೇ ಒಂದು ಬದಲಾವಣೆ ಅಂದರೆ, ಈ ಸಲ ಲಹರಿ ಸಂಸ್ಥೆಯವರು ಯಾರ ಮೇಲೂ ಕಾನೂನು ಅಸ್ತ್ರವನ್ನು ಪರಯೋಗ ಮಾಡಿಲ್ಲ. ಬದಲಿಗೆ ಅದೇ ಸಂಸ್ಥೆಯೇ ಈಗ ಕಾನೂನಿನ ಇಕ್ಕಳಕ್ಕೆ ಸಿಕ್ಕಿದೆ!

ವಿನಯ್ ರಾಜ್ ಕುಮಾರ್ ನಟನೆಯ ಗ್ರಾಮಾಯಣ ಸಿನಿಮಾ ರಾಜ್ಯಾದ್ಯಂತ ಅತ್ಯಂತ ಅದ್ಧೂರಿಯಾಗಿ ತೆರೆಗೆ ಬಂದು ಕೇವಲ ಎರಡು ದಿನಗಳೂ ಕಳೆದಿಲ್ಲ, ಅಷ್ಟರಲ್ಲೇ ಪ್ರೇಕ್ಷಕರಿಂದ ಹಾಗೂ ಪ್ರಬುದ್ಧ ವಿಮರ್ಶಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದು ಬಾಕ್ಸ್ ಆಫೀಸ್ನಲ್ಲಿ ಒಳ್ಳೇ ಕಲೆಕ್ಷನ್ ಮಾಡುವ ಮುನ್ಸೂಚನೆ ನೀಡಿದೆ. ಇದರ ಜೊತೆಗೇ ‘ಗ್ರಾಮಾಯಣ’ ಸಿನಿಮಾಗೆ ಈಗ ಕಾನೂನಿನ ಕಂಟಕ ಕೂಡಾ ಎದುರಾಗಿದೆ. ಮೊನ್ನೆ ಅಂದರೆ, ಜೂನ್ 25, 2026 ರಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಅಧಿಕೃತವಾಗಿ ‘DIL/7/63/2026-BAN’ ಸಂಖ್ಯೆಯ ಸೆನ್ಸಾರ್ ಪ್ರಮಾಣಪತ್ರ ಪಡೆದು ಥಿಯೇಟರ್ಗಳಿಗೆ ಲಗ್ಗೆ ಇಟ್ಟ ಈ ಚಿತ್ರದ ವಿರುದ್ಧ ಮೂಲ ನಿರ್ಮಾಪಕರ ವಾರಸುದಾರರೇ ಕಾನೂನು ಸಮರ ನಡೆಸಲು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಚಿತ್ರದ ಮೂಲ ನಿರ್ಮಾಪಕ, ದಿವಂಗತ ಎನ್. ಲಕ್ಷ್ಮೀನರಸಿಂಹ ಮೂರ್ತಿ ಅವರ ಮಕ್ಕಳಾದ 18 ವರ್ಷದ ಎಲ್. ಮನೋಹರ್ ಕೃಷ್ಣ ಹಾಗೂ 10 ವರ್ಷದ ಕುಮಾರಿ ಎಲ್. ಸಂಸ್ಕೃತಿ ತಮ್ಮ ಹಕ್ಕಿಗಾಗಿ O.S. No. / 2026 ರ ದಾವೆ ಹೂಡಿದ್ದಾರೆ..
ಮೂರ್ತಿ ಅವರ ನಿಧನದ ನಂತರ, ಸಮಗ್ರ ಹಕ್ಕುಸ್ವಾಮ್ಯದ ಒಡೆತನ ಅವರ ಕಾನೂನುಬದ್ಧ ಕ್ಲಾಸ್-1 ವಾರಸುದಾರರಿಗೆ ಸೇರಬೇಕಿತ್ತು. ಹಿಂದೂ ಉತ್ತರಾಧಿಕಾರ ಕಾಯ್ದೆಯ ಅನ್ವಯ ಈ ಇಬ್ಬರು ಮಕ್ಕಳಿಗೆ ಚಿತ್ರದ ಹಕ್ಕುಗಳಲ್ಲಿ ಮೂರನೇ ಎರಡರಷ್ಟು (2/3) ಸಿಂಹಪಾಲು ಸಿಗಬೇಕಾಗಿತ್ತು. ಆದರೆ, ಥಿಯೇಟರ್ಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿರುವ ಈ ಹೊತ್ತಿನಲ್ಲಿ, ಮಕ್ಕಳ ತಾಯಿ ಹಾಗೂ ದಿವಂಗತ ಮೂರ್ತಿ ಅವರ ಪತ್ನಿಯಾದ ಲತಾ ಶ್ರೀ ಮೂರ್ತಿ ಅವರು ಉಳಿದ ಸಹ-ವಾರಸುದಾರರಾದ ಸ್ವಂತ ಮಕ್ಕಳ ಒಪ್ಪಿಗೆಯನ್ನಾಗಲಿ ಅಥವಾ ಯಾವುದೇ ಕಾನೂನುಬದ್ಧ ಅನುಮತಿಯನ್ನಾಗಲಿ ಪಡೆಯದೇ ಏಕಪಕ್ಷೀಯ ನಿರ್ಧಾರ ತಳೆದಿದ್ದಾರೆ ಎಂದು ಅರ್ಜಿಯಲ್ಲಿ ಗಂಭೀರವಾಗಿ ಆರೋಪಿಸಲಾಗಿದೆ. ಅವರು ದಿನಾಂಕ 29.11.2022 ರಂದೇ ಇಡೀ ಚಿತ್ರದ ಸರ್ವ ಹಕ್ಕುಗಳನ್ನು ಸಿನಿಮಾದ ನಿರ್ದೇಶಕ ಚಂದ್ರಪ್ಪ ಅಲಿಯಾಸ್ ದೇವನೂರು ಚಂದ್ರು ಅವರಿಗೆ ‘ಅಸೈನ್ಮೆಂಟ್ ಅಗ್ರಿಮೆಂಟ್’ ಮೂಲಕ ಗುಟ್ಟಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ತಮ್ಮ ತಂದೆಯ ಶ್ರಮದ ಫಲವಾದ ಗ್ರಾಮಾಯಣ ಚಿತ್ರದ ಒಟ್ಟು ಶೇರ್‌ನಲ್ಲಿ ತಮಗೆ ಮೂರನೇ ಎರಡರಷ್ಟು ಹಕ್ಕಿದ್ದು, ತಮ್ಮನ್ನು ಕತ್ತಲಲ್ಲಿಟ್ಟು ತಾಯಿ ಲತಾ ಶ್ರೀ ಮೂರ್ತಿ ಅವರು ನಿರ್ದೇಶಕ ದೇವನೂರು ಚಂದ್ರು ಅವರಿಗೆ ಮಾಡಿಕೊಟ್ಟ ಹಕ್ಕು ವರ್ಗಾವಣೆ ಒಪ್ಪಂದವು ಸಂಪೂರ್ಣ ಅಸಿಂಧು ಮತ್ತು ಕಾನೂನುಬಾಹಿರ ಎಂದು ಮಗ ಮನೋಹರ್ ಕೃಷ್ಣ ಆಕ್ರೋಶ ಹೇಳಿದ್ದಾರೆ. ಈ ರಹಸ್ಯ ಒಪ್ಪಂದದ ಬೆನ್ನಲ್ಲೇ ಚಿತ್ರರಂಗದ ದೈತ್ಯ ಸಂಸ್ಥೆಗಳು ರಂಗಪ್ರವೇಶ ಮಾಡಿ ವ್ಯಾಪಾರ ಕುದುರಿಸಿರುವುದು ವಿವಾದದ ಕಾವು ಹೆಚ್ಚಿಸಿದೆ. ನಿರ್ದೇಶಕ ದೇವನೂರು ಚಂದ್ರು ಅವರಿಂದ ಈ ಹಕ್ಕುಗಳನ್ನು ಪಡೆದ ಲಹರಿ ಫಿಲ್ಮ್ಸ್ ಎಲ್ಎಲ್ಪಿ, ಲಹರಿ ರೆಕಾರ್ಡಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ ಹಾಗೂ ಅದರ ಪ್ರಭಾವಿ ಚುಕ್ಕಾಣಿ ಹಿಡಿದಿರುವ ಮನೋಹರ್ ನಾಯ್ಡು ಅವರು ಚಿತ್ರದ ವ್ಯವಹಾರವನ್ನು ವಿಸ್ತರಿಸಿದ್ದಲ್ಲದೆ, ಮುಂಬೈನ ಪ್ರಖ್ಯಾತ ವೀನಸ್ ವರ್ಲ್ಡ್ವೈಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೂ ಈ ಹಕ್ಕುಗಳ ಖರೀದಿಯ ವಿಚಾರದಲ್ಲಿ ಭಾಗಿಯಾಗಿದೆ. ಈ ಎಲ್ಲಾ ಪ್ರಭಾವಿ ಪ್ರತಿವಾದಿಗಳು ಸೇರಿ ದಿವಂಗತ ನಿರ್ಮಾಪಕರ ಮಕ್ಕಳ ಹಕ್ಕನ್ನು ಕಸಿದುಕೊಂಡು, ಸಿನಿಮಾ ಪ್ರದರ್ಶನ ಹಾಗೂ ಒಟಿಟಿ ವೇದಿಕೆಗಳ ಮೂಲಕ ಕೋಟ್ಯಂತರ ರೂಪಾಯಿ ನಗದೀಕರಣಕ್ಕೆ ಮುಂದಾಗಿದ್ದಾರೆ ಎನ್ನುವುದು ಅರ್ಜಿದಾರರ ಮುಖ್ಯ ದೂರಾಗಿದೆ.
ತೆರೆಮೇಲೆ ಚಿತ್ರವು ಅದ್ಭುತ ವಿಮರ್ಶೆಗಳೊಂದಿಗೆ ಮುನ್ನುಗ್ಗುತ್ತಿದ್ದರೂ, ತೆರೆಮರೆಯ ಈ ಅಣ್ಣ-ತಂಗಿ ಇಬ್ಬರೂ ಸೇರಿ ಚಿತ್ರರಂಗದ ಈ ದೊಡ್ಡ ಸಂಸ್ಥೆಗಳ ವಿರುದ್ಧ ಸಿಡಿದೆದ್ದಿದ್ದಾರೆ. ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ದಾವೆಯಲ್ಲಿ ಅವರು ಸೂಕ್ತ ಪರಿಹಾರಗಳನ್ನು ಕೋರಿದ್ದು, ಮೊದಲನೆಯದಾಗಿ ವಿವಾದಿತ ಚಿತ್ರದ ಒಟ್ಟು ಹಕ್ಕುಸ್ವಾಮ್ಯದಲ್ಲಿ ತಮಗೆ 2/3 ಭಾಗದಷ್ಟು ಅವಿಭಜಿತ ಒಡೆತನವಿದೆ ಎಂದು ಕೋರ್ಟ್ ಘೋಷಿಸಬೇಕು ಮತ್ತು ತಾಯಿ ಲತಾ ಶ್ರೀ ಮೂರ್ತಿ ಹಾಗೂ ನಿರ್ದೇಶಕ ಚಂದ್ರು ನಡುವೆ ನಡೆದ 2022 ರ ಒಪ್ಪಂದವನ್ನು ಸಂಪೂರ್ಣ ರದ್ದುಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇಷ್ಟಕ್ಕೇ ನಿಲ್ಲದ ಮಕ್ಕಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರನ್ನು 7ನೇ ಪ್ರತಿವಾದಿಯನ್ನಾಗಿ ಮಾಡಿ, ಈ ಚಿತ್ರಕ್ಕೆ ನೀಡಿರುವ ಎಲ್ಲಾ ನೋಂದಣಿಗಳು ಮತ್ತು ಪರವಾನಗಿಗಳನ್ನು ತಕ್ಷಣವೇ ರದ್ದುಗೊಳಿಸಿ, ಮೂಲ ಸಂಸ್ಥೆಯಾದ ‘ಎಂ/ಎಸ್ ಎಲ್ಎಂಕೆ ಫಿಲ್ಮ್ ಫ್ಯಾಕ್ಟರಿ’ ಹೆಸರಿಗೆ ಹಕ್ಕುಗಳನ್ನು ಮರುಸ್ಥಾಪಿಸುವಂತೆ ಕಡ್ಡಾಯ ಜ್ಞಾಪನಾ ಪತ್ರಕ್ಕೆ ಮನವಿ ಮಾಡಿದ್ದಾರೆ.
ಸದ್ಯಕ್ಕೆ ವಿತರಕರ ಮತ್ತು ಪ್ರದರ್ಶಕರ ನಿದ್ದೆ ಗೆಡಿಸಿರುವುದು ಅರ್ಜಿದಾರರು ಸಿಪಿಸಿ ಆರ್ಡರ್ 39 ರೂಲ್ 1 ಮತ್ತು 2 ರ ಅಡಿಯಲ್ಲಿ ಸಲ್ಲಿಸಿರುವ ಮಧ್ಯಂತರ ತಡೆಯಾಜ್ಞೆ ಅರ್ಜಿ (IA). ಅತ್ಯುತ್ತಮ ಪ್ರತಿಕ್ರಿಯೆಯೊಂದಿಗೆ ಪ್ರದರ್ಶನ ಕಾಣುತ್ತಿರುವ ಈ ಚಿತ್ರಕ್ಕೆ ಒಂದು ವೇಳೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದರೆ, ತಕ್ಷಣವೇ ಚಿತ್ರಮಂದಿರಗಳಿಂದ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಬೇಕಾಗುತ್ತದೆ, ಅಷ್ಟೇ ಅಲ್ಲದೆ ಒಟಿಟಿ ಪ್ಲಾಟ್ಫಾರ್ಮ್, ಸ್ಯಾಟಲೈಟ್ ಅಥವಾ ಯಾವುದೇ ಡಿಜಿಟಲ್ ಮಾಧ್ಯಮಗಳಲ್ಲಿ ಮುಂದೆ ಬಿಡುಗಡೆ ಮಾಡಲು ಸಾಧ್ಯವೇ ಇಲ್ಲದ ಕಡ್ಡಾಯ ಕಾನೂನು ಅಡಚಣೆ ಎದುರಾಗಲಿದೆ. ಇದರೊಂದಿಗೆ 2022 ರಿಂದ ಇಂದಿನವರೆಗೆ ಪ್ರತಿಯೊಂದು ಪೈಸಾ ಆದಾಯದ ಲೆಕ್ಕಪತ್ರವನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕಾದ ಭೀತಿ ಪ್ರತಿವಾದಿಗಳಿಗೆ ಎದುರಾಗಿದೆ.
ಗ್ರಾಮಾಯಣ ಸಿನಿಮಾವನ್ನು ಅತ್ಯಂತ ಪ್ರೀತಿಯಿಟ್ಟು ಶುರು ಮಾಡಿದವರು ನಿರ್ಮಾಪಕ ಮೂರ್ತಿ. ಸಿನಿಮಾ ಆರಂಭಿಸಿದ ಮೇಲೆ ನಿರ್ದೇಶಕ ಚಂದ್ರು ಮತ್ತು ಮೂರ್ತಿ ನಡುವೆ ಅಸಮಧಾನಗಳು ಬುಗಿಲೆದ್ದಿದ್ದವು. ಮೂರ್ತಿ ತೀರಿಕೊಳ್ಳುವ ಒಂದು ತಿಂಗಳ ಮುಂಚೆ ಕೂಡಾ ಖುದ್ದು ಪತ್ರಕರ್ತರ ಮುಂದೆ ನಿರ್ದೇಶಕರಿಂದ ಆದ ಅನಾನುಕೂಲಗಳ ಬಗ್ಗೆ ಹೇಳಿಕೊಂಡಿದ್ದರು. ಮೂರ್ತಿ ತೀರಿಕೊಂಡ ಮೇಲೆ ಅವರ ಪತ್ನಿ ಸಿನಿಮಾವನ್ನು ಮಾರಿ ಕೈ ತೊಳೆದುಕೊಂಡರು. ಆದರೆ, ಸಿನಿಮಾಗಾಗಿ ಹಣ ಹೂಡಿಕೆ ಮಾಡಿದ್ದ ಮೂರ್ತಿ ಅವರ ತಂದೆ ನಾಗರಾಜ್, ಸಹೋದರಿ ಮತ್ತಿತರರು ಈಗ ನಯಾ ಪೈಸೆ ಸಿಗದೆ ಸೊರಗುವಂತಾಗಿದೆ. ಚಿತ್ರ ಬಿಡುಗಡೆಯಾಗಿ ಉತ್ತಮ ಗಳಿಕೆ ಮಾಡುತ್ತಿರುವ ಬೆನ್ನಲ್ಲೇ ಎದುರಾಗಿರುವ ಈ ಕೌಟುಂಬಿಕ ಸಮರ ಲಹರಿ ಸಂಸ್ಥೆ ಹಾಗೂ ನಿರ್ದೇಶಕ ದೇವನೂರು ಚಂದ್ರು ಅವರಿಗೆ ಈಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ನ್ಯಾಯದೇವತೆ ಈ ಅಸಹಾಯಕ ವಾರಸುದಾರರ ಕೈ ಹಿಡಿಯುತ್ತಾಳೋ ಅಥವಾ ಸಿನಿಮಾದ ದೊಡ್ಡ ಶಕ್ತಿಗಳ ವಾದ ಗೆದ್ದು ಪ್ರದರ್ಶನ ಮುಂದುವರೆಯುತ್ತದೋ ನೋಡಬೇಕು!!












































