ಕನ್ನಡ ಚಿತ್ರರಂಗದ ಸಂಭ್ರಮ, ಪ್ರತಿಭೆಗಳ ಗೌರವ ಮತ್ತು ಸಿನಿಪ್ರಿಯರ ಹೃದಯಗಳನ್ನು ಒಂದಾಗಿಸಿದ ಅದ್ದೂರಿ ವೇದಿಕೆ

ಕನ್ನಡ ಚಿತ್ರರಂಗದ ವೈಭವ, ಕಲಾವಿದರ ಸಾಧನೆ ಮತ್ತು ಸಿನಿಪ್ರಿಯರ ಅಭಿಮಾನ ಒಂದೇ ವೇದಿಕೆಯಲ್ಲಿ ಸಂಭ್ರಮಿಸುವ ಕ್ಷಣಗಳು ಯಾವಾಗಲೂ ವಿಶೇಷವಾಗಿರುತ್ತವೆ. ಅಂತಹ ಅಪರೂಪದ ಸಂಭ್ರಮಕ್ಕೆ ಸಾಕ್ಷಿಯಾಗಿರುವ ‘ಚಿತ್ತಾರ ಸ್ಟಾರ್ ಅವಾರ್ಡ್ಸ್’ ಇದೀಗ ಮತ್ತೊಮ್ಮೆ ಕನ್ನಡಿಗರ ಮನೆಮನೆಗೆ ಬರಲು ಸಜ್ಜಾಗಿದೆ. ಕನ್ನಡ ಸಿನಿಮಾ ಜಗತ್ತಿನೊಂದಿಗೆ ಗಾಢವಾದ ಬಾಂಧವ್ಯ ಹೊಂದಿರುವ ‘ಚಿತ್ತಾರ’ ಮಾಸಪತ್ರಿಕೆ ಕಳೆದ ಹಲವು ವರ್ಷಗಳಿಂದ ಚಿತ್ರರಂಗದ ಬೆಳವಣಿಗೆ, ಸಾಧನೆ ಮತ್ತು ಸವಾಲುಗಳನ್ನು ಜನರ ಮುಂದೆ ಪ್ರಾಮಾಣಿಕವಾಗಿ ತರುತ್ತಾ ಬಂದಿದೆ. ಸಿನಿಮಾ ಕೇವಲ ಮನರಂಜನೆಯ ಮಾಧ್ಯಮವಲ್ಲ, ಅದು ಸಾವಿರಾರು ಜನರ ಕನಸುಗಳು ಮತ್ತು ಪರಿಶ್ರಮಗಳ ಸಂಗಮ ಎಂಬ ದೃಷ್ಟಿಕೋನವನ್ನು ‘ಚಿತ್ತಾರ’ ಸದಾ ಉಳಿಸಿಕೊಂಡಿದೆ.

ಅದೇ ನಂಬಿಕೆಯ ಮುಂದುವರಿದ ರೂಪವೇ ‘ಚಿತ್ತಾರ ಸ್ಟಾರ್ ಅವಾರ್ಡ್ಸ್’. 2019ರಲ್ಲಿ ಆರಂಭವಾದ ಈ ಪ್ರಶಸ್ತಿ ಸಮಾರಂಭ ಕನ್ನಡ ಚಿತ್ರರಂಗದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಮಹತ್ವದ ವೇದಿಕೆಯಾಗಿ ಬೆಳೆದಿದೆ. ಪ್ರತಿಯೊಂದು ಆವೃತ್ತಿಯೂ ಹೊಸತನ, ವೈಭವ ಮತ್ತು ಕಲಾತ್ಮಕತೆಯ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದೆ. ಈ ವರ್ಷ ನಡೆದ ಆರನೇ ಆವೃತ್ತಿಯೂ ಅದೇ ರೀತಿಯಲ್ಲಿ ಅದ್ದೂರಿ ಯಶಸ್ಸನ್ನು ಕಂಡಿದ್ದು, ಚಂದನವನದ ಸಂಭ್ರಮವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.

ಬೆಂಗಳೂರು ನಗರದ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್‌ನ ಪ್ರಮುಖ ತಾರೆಯರು, ದಕ್ಷಿಣ ಭಾರತದ ಖ್ಯಾತ ಕಲಾವಿದರು, ತಂತ್ರಜ್ಞರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ಭಾಗವಹಿಸಿದ್ದರು. ಒಂದೇ ವೇದಿಕೆಯಲ್ಲಿ ಇಷ್ಟು ಪ್ರತಿಭೆಗಳು ಒಂದಾಗಿದ್ದ ದೃಶ್ಯ ಕನ್ನಡ ಚಿತ್ರರಂಗದ ಏಕತೆ ಮತ್ತು ಶಕ್ತಿಯನ್ನು ಪ್ರತಿಬಿಂಬಿಸಿತು. ಸಾವಿರಾರು ಸಿನಿಪ್ರೇಮಿಗಳ ಉತ್ಸಾಹ ಮತ್ತು ಅಭಿಮಾನ ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಿತು.

ಈ ಅದ್ದೂರಿ ಸಂಭ್ರಮವನ್ನು ಕಣ್ತುಂಬಿಕೊಳ್ಳುವ ಅವಕಾಶ ಇದೀಗ ಪ್ರತಿಯೊಬ್ಬ ಕನ್ನಡಿಗರಿಗೂ ಸಿಗಲಿದೆ. ಜೂನ್ 21, 2026ರಂದು ಸಂಜೆ 5 ಗಂಟೆಯಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಚಿತ್ತಾರ ಸ್ಟಾರ್ ಅವಾರ್ಡ್ಸ್’ ಪ್ರಸಾರವಾಗಲಿದ್ದು, ಕನ್ನಡ ಸಿನಿಮಾ ಪ್ರೇಮಿಗಳಿಗೆ ಇದು ಹಬ್ಬದಂತ ಅನುಭವವಾಗಲಿದೆ. ಪ್ರತಿಭೆಯನ್ನು ಗೌರವಿಸುವ, ಸಾಧನೆಯನ್ನು ಸಂಭ್ರಮಿಸುವ ಮತ್ತು ಕನ್ನಡ ಚಿತ್ರರಂಗದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಈ ಕಾರ್ಯಕ್ರಮ ಕನ್ನಡ ಸಿನಿಪ್ರಿಯರ ಹೃದಯದಲ್ಲಿ ಮತ್ತೊಮ್ಮೆ ಅಚ್ಚಳಿಯದ ನೆನಪಾಗಿ ಉಳಿಯುವುದು ಖಚಿತ.












































