ಧ್ರುವ ಇನ್‌ ಡೇಂಜರ್‌ ಜ಼ೋನ್!

Picture of Cinibuzz

Cinibuzz

Bureau Report

ಧ್ರುವ ಇನ್‌ ಡೇಂಜರ್‌ ಜ಼ೋನ್!
ಕೇಡಿ ಕೊಟ್ಟ ಏಟಿಗೆ ತತ್ತರಿಸಿದ ಮಾರ್ಟಿನ್
ಮ್ಯಾನೇಜರ್‌ ಅಶ್ವಿನ್‌ ಔಟ್ ಆಗಿದ್ಯಾಕೆ?
ಪಾತಾಳಕ್ಕಿಳಿಸಿತಾ ಪ್ಯಾನ್ ಇಂಡಿಯಾ ಹುಚ್ಚು?

ಸ್ಯಾಂಡಲ್ವುಡ್ ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರ ಸಾಮ್ರಾಜ್ಯವೀಗ ಅತ್ಯಂತ ಅತಂತ್ರ ಸ್ಥಿತಿಗೆ ಬಂದು ತಲುಪಿದೆ. ಕರಿಯರ್ನ ಆರಂಭದಲ್ಲಿ ‘ಅದ್ದೂರಿ’, ‘ಬಹದ್ದೂರ್’ ಹಾಗೂ ‘ಭರ್ಜರಿ’ ಸಿನಿಮಾಗಳ ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್ಸ್ ನೀಡಿ, ಅತೀ ಕಡಿಮೆ ಅವಧಿಯಲ್ಲಿ ಸೂಪರ್‌ ಸ್ಟಾರ್‌ ಪಟ್ಟಕ್ಕೇರಿದವರು ಧ್ರುವ. ಆದರೆ ಈಗ ಕಾಲ ಬದಲಾಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಅತಿಯಾದ ಹಪಾಹಪಿ ಹಾಗೂ ಬಿಗ್ ಬಜೆಟ್ ಸಿನಿಮಾಗಳ ವ್ಯಾಮೋಹಕ್ಕೆ ಬಿದ್ದ ಧ್ರುವಾ ಈಗ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ಟೈಮ್ ಚೆನ್ನಾಗಿದ್ದಾಗ ಸಕಲವೂ ಕೈ ಹಿಡಿಯುತ್ತದೆ, ಆದರೆ ಲೆಕ್ಕಾಚಾರ ಚೂರು ಉಲ್ಟಾ ಆದರೂ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಧ್ರುವ ಅವರ ಇಂದಿನ ಪರಿಸ್ಥಿತಿಯೇ ಸಾಕ್ಷಿ. ಅವರ ಇತ್ತೀಚಿನ ‘ಪೊಗರು’, ‘ಮಾರ್ಟಿನ್’ ಹಾಗೂ ಬಹುನಿರೀಕ್ಷಿತ ‘ಕೆಡಿ’ ಚಿತ್ರಗಳು ಸಾಲು ಸಾಲು ಸೋಲನ್ನು ಕಂಡು, ಧ್ರುವ ಸರ್ಜಾಗೆ ‘ಹ್ಯಾಟ್ರಿಕ್ ಫ್ಲಾಪ್ಸ್’ ತಲೆನೋವನ್ನು ತಂದಿಟ್ಟಿವೆ.


ಈ ಭೀಕರ ಕುಸಿತಕ್ಕೆ ಧ್ರುವ ಅವರ ವೈಯಕ್ತಿಕ ನಿರ್ಧಾರಗಳ ಜೊತೆಗೆ, ಅವರ ನೆರಳಿನಂತೆ ಇರುತ್ತಿದ್ದ ಪರ್ಸನಲ್ ಮ್ಯಾನೇಜರ್ ಅಶ್ವಿನ್ ಕೂಡ ಪ್ರಮುಖ ಕಾರಣ ಎನ್ನುವ ಅಕ್ಷರಶಃ ಸತ್ಯ. ಈ ಹಿಂದೆ ಧ್ರುವ ಅವರ ಮ್ಯಾನೇಜರ್ ಆಗಿದ್ದ ಶಿವಾರ್ಜುನ್ ಅವರನ್ನು ಓವರ್ ಟೇಕ್ ಮಾಡಿ ಧ್ರುವ ಕ್ಯಾಂಪ್ ಸೇರಿದ್ದ ಅಶ್ವಿನ್, ಒಡಹುಟ್ಟಿದ ಸಹೋದರನಂತೆ ಆ್ಯಕ್ಷನ್ ಪ್ರಿನ್ಸ್ ಬೆನ್ನಿಗೆ ನಿಂತಿದ್ದು ಸುಳ್ಳಲ್ಲ. ಹನುಮಂತನ ಪರಮ ಭಕ್ತನಾದ ಧ್ರುವರನ್ನು ಅಷ್ಟೇ ಭಕ್ತಿ, ಗೌರವದಿಂದ ಕಾಣುತ್ತಾ ರಾಮಭಂಟನಂತೆ ಧ್ರುವ ಕಟ್ಟಿದ ಸಾಮ್ರಾಜ್ಯವನ್ನು ಆಳಲು ಶುರುಮಾಡಿದ ಅಶ್ವಿನ್ ಜೊತೆಯಾದಮೇಲೆ ಧ್ರುವ ಕಂಪ್ಲೀಟ್ ಬದಲಾಗಿಹೋದರು. ಸಿನಿಮಾ ಡೇಟ್ಸ್, ರೆಮ್ಯುನರೇಷನ್, ಫ್ಯಾನ್ಸ್ ಪೇಜ್ಗಳು, ಅಭಿಮಾನಿ ಸಂಘಗಳು, ಪ್ರಮೋಷನ್ಸ್ ಹಾಗೂ ಪರ್ಸನಲ್ ಇವೆಂಟ್ಗಳವರೆಗೆ ಎಲ್ಲವೂ ಅಶ್ವಿನ್ ಇಶಾರೆಯಂತೆಯೇ ನಡೆಯುತ್ತಿತ್ತು. ಹೀರೋ ಆದ ದಿನದಿಂದಲೂ ಧ್ರುವಾರ ದೇಖರೇಖಿ ನೋಡಿಕೊಳ್ಳುತ್ತಿದ್ದ ಮುತ್ತು ಎಂಬ ಹುಡುಗ ಕೂಡಾ ಸೈಡ್‌ ಲೈನ್‌ ಆಗಿಬಿಟ್ಟ. ಧ್ರುವ ಹೆಸರಿನಲ್ಲಿ ಫೌಂಡೇಶನ್ ಒಂದನ್ನು ಹುಟ್ಟುಹಾಕಿದ ಅಶ್ವಿನ್ ಒಂದಷ್ಟು ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಎಲ್ಲರಿಂದ ಜೈಕಾರ ಹಾಕಿಸಿಕೊಂಡಿದ್ದರು. ಆದರೆ ಇದರ ಒಳಸುಳಿ ಬೇರೆಯದ್ದೇ ಇತ್ತು.


ಧ್ರುವ ಬರ್ತ್ ಡೇ ಅಥವಾ ಸಿನಿಮಾ ಮುಹೂರ್ತಗಳಿದ್ದಾಗ ತಾನೇ ದುಡ್ಡು ಕೊಟ್ಟು ಹುಡುಗರನ್ನು ಗುಡ್ಡೆ ಹಾಕಿಸುತ್ತಿದ್ದ ಅಶ್ವಿನ್, ಸಿನಿಮಾ ರಿಲೀಸ್ ಆದಾಗ ಸೆಲೆಬ್ರೇಷನ್ಗಳ ಹೆಸರಲ್ಲಿ ಕೋಟ್ಯಂತರ ರೂಪಾಯಿ ನೀರಂತೆ ಹರಿಸುತ್ತಿದ್ದ. ಬಾಕ್ಸ್ ಆಫೀಸ್ನಲ್ಲಿ ಸುಳ್ಳು ಕಲೆಕ್ಷನ್ ತೋರಿಸಿಕೊಳ್ಳುವ ಹಪಾಹಪಿಗೆ ಬಿದ್ದು, ತಾನೇ ಕೈಯಿಂದ ದುಡ್ಡು ಕೊಟ್ಟು ಥಿಯೇಟರ್ಗಳಲ್ಲಿ ಟಿಕೆಟ್ ಹರಿಸುವ ಕೃತಕ ಸಂಸ್ಕೃತಿಯನ್ನು ಜಾರಿಗೆ ತಂದಿದ್ದ. ಇತ್ತೀಚಿನ ‘ಕೆಡಿ’ ಸಿನಿಮಾ ರಿಲೀಸ್ ವೇಳೆಯಂತೂ ಬರೋಬ್ಬರಿ ಎರಡು ಕೋಟಿ ರೂಪಾಯಿಗಳ ಟಿಕೆಟ್ಗಳನ್ನು ಅಶ್ವಿನ್ ಸ್ವತಃ ಹರಿಸಿದ್ದ ಎನ್ನುತ್ತವೆ ಗಾಂಧಿನಗರದ ನಂಬಿಕಸ್ಥ ಮೂಲಗಳು. ಆದರೆ, ಈ ಕಹಿಸತ್ಯ ನಟ ಧ್ರುವ ಸರ್ಜಾ ಅವರಿಗೆ ಗೊತ್ತಿತ್ತೋ ಇಲ್ಲವೋ ಎಂಬುದು ಎಲ್ಲರ ಮುಂದಿರುವ ಯಕ್ಷಪ್ರಶ್ನೆಯಾಗಿದೆ. ಯಾವಾಗ ‘ಕೆಡಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿತೋ, ಅಲ್ಲಿಂದ ಅಶ್ವಿನ್ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ಅಶ್ವಿನ್ ಕೈಗೆ ಧ್ರುವ ಅವರ ಆರ್ಥಿಕ ಜವಾಬ್ದಾರಿ ಹೋದ ಮೇಲೆಯೇ ಸಿನಿಮಾಗಳು ಸಕ್ಸಸ್ ಕಾಣದೆ, ಆ್ಯಕ್ಷನ್ ಪ್ರಿನ್ಸ್ ಸದ್ಯ ತೀವ್ರ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆ, ಧ್ರುವ ಅವರಿಗೆ ಅತಿಯಾಗಿ ಕ್ಲೋಸ್ ಆಗುತ್ತಿದ್ದ ಜಿಮ್ ಟ್ರೈನರ್ ಒಬ್ಬನನ್ನು ದೂರ ಇಡಲು ಹೋಗಿ, ಅದ್ಯಾರಿಗೋ ಸುಪಾರಿ ಕೊಟ್ಟಿದ್ದ ಇದೇ ಅಶ್ವಿನ್ ಪೊಲೀಸರಿಂದ ಅರೆಸ್ಟ್ ಆಗಿ ಜೈಲಲ್ಲಿ ಎಂಟ್ರಿ ಬರೆಸಿಬಂದಿದ್ದು ಇಡೀ ಜಗತ್ತಿಗೆ ಗೊತ್ತಿರುವ ವಿಚಾರ. ಇಷ್ಟೆಲ್ಲಾ ವಿವಾದಗಳು ಹಾಗೂ ಆರ್ಥಿಕ ನಷ್ಟದಿಂದ ಬೇಸತ್ತು ಹೋಗಿರುವ ಧ್ರುವ ಸರ್ಜಾ, ಅಶ್ವಿನ್ಗೆ ಗೇಟ್‌ಪಾಸ್‌ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಸುಳಿವು ಸಿಗುತ್ತಿದ್ದಂತೆ ಎಚ್ಚೆತ್ತಿರುವ ಅಶ್ವಿನ್, ಸ್ಯಾಂಡಲ್ವುಡ್ನ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಪಾಳಯಕ್ಕೆ ಸೇರುವ ಪ್ರಯತ್ನ ಮಾಡಿದ್ದಾರೆ!
ಅದೇನೇ ಇರಲಿ,‌ ಧ್ರುವಾ ಪಾಲಿಗೆ ‘ಹ್ಯಾಟ್ರಿಕ್ ಫ್ಲಾಪ್ಸ್’ ಸೈಡ್‌ ಎಫೆಕ್ಟ್ ಎಷ್ಟು ಭೀಕರವಾಗಿದೆ ಎಂದರೆ, ಕೋಟಿ ಕೋಟಿ ಬಜೆಟ್ಟಿನ ‘ಕೆಡಿ’ ಸಿನಿಮಾದ ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕುಗಳನ್ನು ಝೀ ಕಂಪನಿ ಖರೀದಿಸಿರುವುದು ಕೇವಲ 5 ಕೋಟಿ 40 ಲಕ್ಷ ರೂಪಾಯಿಗಳಿಗೆ ಮಾತ್ರ! ಇದರ ನೇರ ಪರಿಣಾಮ ಈಗ ಧ್ರುವ ಅವರ ಹೊಸ ಚಿತ್ರಗಳ ಮೇಲೆ ಬಿದ್ದಿದೆ. ಸದ್ಯ ಅವರ ನಟನೆಯ ‘ಕ್ರಿಮಿನಲ್’ ಸಿನಿಮಾ ಅರ್ಧಕ್ಕೇ ನಿಂತುಹೋಗಿದ್ದು, ಇದರ ಬೆನ್ನಲ್ಲೇ ಸೆಟ್ಟೇರಬೇಕಿದ್ದ ದುನಿಯಾ ಸೂರಿ ನಿರ್ದೇಶನದ ಚಿತ್ರ ಕೂಡ ಆರಂಭವಾಗುವುದೇ ಡೌಟು ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ‘ಕೆಡಿ’ ಸಿನಿಮಾ ಬಿಡುಗಡೆ ಮುಗಿಸಿ, ‘ಕ್ರಿಮಿನಲ್’ ಚಿತ್ರದ ಎರಡನೇ ಶೆಡ್ಯೂಲ್ನಲ್ಲಿದ್ದ ಚಿತ್ರತಂಡಕ್ಕೆ ದಿಢೀರನೆ ಹಣದ ಕೊರತೆ ಎದುರಾಗಿದ್ದು, ಶೂಟಿಂಗ್ ಸಂಪೂರ್ಣ ಸ್ಥಗಿತಗೊಂಡಿದೆ. ಈ ಚಿತ್ರಕ್ಕೆ ಭಾರಿ ಬಂಡವಾಳ ಹೂಡಲು ಮುಂದೆ ಬಂದಿದ್ದ ‘ಗೋಲ್ಡ್ ಮೈನ್ಸ್ ಪ್ರೊಡಕ್ಷನ್’ನ ಮನೀಶ್ ಶಾ, ಇಂತಹ ಪರಿಸ್ಥಿತಿಯಲ್ಲಿ ಧ್ರುವ ಅವರ ಹೊಸ ಸಿನಿಮಾ ಮೇಲೆ ಬರೋಬ್ಬರಿ 50 ಕೋಟಿ ರೂಪಾಯಿ ಬಜೆಟ್ ಹಾಕಿ ಕೈ ಸುಟ್ಟುಕೊಳ್ಳಲು ಸಿದ್ಧರಿಲ್ಲದೆ ಸದ್ದಿಲ್ಲದೆ ಒಂದು ಹೆಜ್ಜೆ ಹಿಂದೆ ಇಟ್ಟಿದ್ದಾರೆನ್ನುವ ಮಾತು ಕೇಳಿಬರುತ್ತಿದೆ.


ಸ್ವತಃ ಪ್ರೊಡಕ್ಷನ್ ಜವಾಬ್ದಾರಿಯನ್ನೂ ಹೊತ್ತಿದ್ದ ಧ್ರುವಗೆ, ನಿರ್ಮಾಣದ ವೆಚ್ಚವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸುವಂತೆ ನಿರ್ಮಾಪಕರು ಮನವಿ ಮಾಡಿದ್ದರು, ಆದರೆ ಅದು ಸಾಧ್ಯವಾಗಿಲ್ಲ. ‘ಕೆಡಿ’ ಚಿತ್ರಕ್ಕೆ ಬರೋಬ್ಬರಿ 16 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದ ಆ್ಯಕ್ಷನ್ ಪ್ರಿನ್ಸ್, ಈ ‘ಕ್ರಿಮಿನಲ್’ ಚಿತ್ರಕ್ಕೆ ಕೇವಲ 4.5 ಕೋಟಿ ರೂಪಾಯಿ ಮಾತ್ರ ಅಡ್ವಾನ್ಸ್ ಪಡೆದಿದ್ದರು. ಉಳಿದ ಹಣದ ಬದಲಾಗಿ ಸಿನಿಮಾ ರಿಲೀಸ್ ಆದ ಬಳಿಕ ಶೇಕಡಾ 25 ರಷ್ಟು ಲಾಭದ ಪಾಲು ಕೇಳಿದ್ದರು ಎನ್ನಲಾಗಿದೆ. ಈಗಾಗಲೇ ಮೊದಲ ಶೆಡ್ಯೂಲ್ ಆಕ್ಷನ್-ಕಟ್ಗೇ ಬರೋಬ್ಬರಿ 15 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಎರಡನೇ ಶೆಡ್ಯೂಲ್ನ ಕೇವಲ 4 ದಿನಗಳ ಚಿತ್ರೀಕರಣದ ಬೆನ್ನಲ್ಲೇ ಹಣ ಬಿಡುಗಡೆಯಾಗದೆ ಇಡೀ ಟೀಮ್ ಕೈಕಟ್ಟಿ ಕೂತಿದೆ. ಇಷ್ಟೆಲ್ಲಾ ಆರ್ಥಿಕ ಸಂಕಷ್ಟ ಹಾಗೂ ಕರಿಯರ್ನ ಏರುಪೇರುಗಳಿಂದ ಕಂಗೆಟ್ಟಿರುವ ಧ್ರುವ ಸರ್ಜಾ, ಶತಾಯ ಗತಾಯ ಈ ಬಿಕ್ಕಟ್ಟಿನಿಂದ ಹೊರಬರಲು ಸದ್ಯ ಹೈದರಾಬಾದ್ನಲ್ಲಿ ಬೀಡು ಬಿಟ್ಟಿದ್ದಾರೆ. ತಮ್ಮ ಸೋದರ ಮಾವ, ಅರ್ಜುನ್ ಸರ್ಜಾ ಅವರ ಬೆಂಬಲದೊಂದಿಗೆ ಟಾಲಿವುಡ್ನ ಪ್ರಭಾವಿ ನಿರ್ಮಾಣ ಸಂಸ್ಥೆಗಳ ಜೊತೆ ಸಾಲು ಸಾಲು ಮೀಟಿಂಗ್ಸ್ ನಡೆಸುತ್ತಿದ್ದು, ತೆಲುಗು ಮೂಲದ ಪ್ರೊಡ್ಯೂಸರ್ಸ್ ಮೂಲಕ ಹಣ ಹೊಂದಿಸಿಕೊಂಡು ಹೆಂಗಾದರೂ ಮಾಡಿ ‘ಕ್ರಿಮಿನಲ್’ ಸಿನಿಮಾವನ್ನು ಕಂಪ್ಲೀಟ್ ಮಾಡುವ ಧಾವಂತದಲ್ಲಿದ್ದಾರೆ. ಕೇವಲ ಮೇಕಿಂಗ್ ಹಾಗೂ ಪ್ಯಾನ್ ಇಂಡಿಯಾ ಕ್ರೇಜ್ನಿಂದ ಸಿನಿಮಾಗಳು ಗೆಲ್ಲುವುದಿಲ್ಲ ಎನ್ನುವ ಕಹಿಸತ್ಯವನ್ನು ಧ್ರುವ ಅರಿತುಕೊಳ್ಳಬೇಕಿದೆ…!


ʻಕೆಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲುʼ ಅನ್ನೋ ಮಾತಿದೆ. ಈ ವರದಿಯ ಉದ್ದೇಶ ಅಂಥದ್ದಲ್ಲ. ವೈಯಕ್ತಿಕವಾಗಿ ಧ್ರುವಾ ತುಂಬಾನೇ ಒಳ್ಳೇ ವ್ಯಕ್ತಿ. ದುಡ್ಡಿನಿಂದ ಏನು ಬೇಕಾದರೂ ಪಡೆದುಕೊಳ್ಳಬಹುದು ಎನ್ನುವ ಕೆಲವು ತಲೆತಿರುಕರ ನಡುವೆ ಧ್ರುವಾ ಸರ್ಜಾ ಭಿನ್ನವಾಗಿ ನಿಲ್ಲುವವರು. ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಮನೋಭಾವದವರು. ಅಪಾರ ಜನಪ್ರಿಯತೆ ಹೊಂದಿರುವ ಸ್ಟಾರ್.‌ ಒಳ್ಳೇದ್ಯಾವುದು ಕೆಟ್ಟದ್ಯಾವುದು ಅಂತಾ ತಿಳಿದುಕೊಳ್ಳುವ ವ್ಯವಧಾನ ಇರಿಸಿಕೊಂಡಿರುವವರು. ಇಂಥವರು ತಲೆ ಬಗ್ಗಿಸಬಾರದು. ಸೋಲು-ಗೆಲುವು ಇದ್ದಿದ್ದೇ. ಎಲ್ಲವನ್ನೂ ಮೀರಿ ಧ್ರುವಾ ಎದ್ದು ನಿಲ್ಲಲಿ ಎನ್ನುವ ಆಶಯದೊಂದಿಗೆ…

ಇನ್ನಷ್ಟು ಓದಿರಿ

Scroll to Top