ಹೊರಬಂತು ‘ಕಲ್ಯಾಣಿ’ ಮೋಶನ್ ಪೋಸ್ಟರ್

Picture of Cinibuzz

Cinibuzz

Bureau Report

ಕನ್ನಡ ಚಿತ್ರರಂಗದಲ್ಲಿ ‘ಜಟ್ಟ’, ‘ಮೈತ್ರಿ’ ಮೊದಲಾದ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಬಿ. ಎಂ. ಗಿರಿರಾಜ ಈ ಬಾರಿ ‘ಕಲ್ಯಾಣಿ’ ಎಂಬ ಮತ್ತೊಂದು ವಿಭಿನ್ನ ಕಥಾಹಂದರವನ್ನು ತೆರೆಮೇಲೆ ತರುವ ತಯಾರಿಯಲ್ಲಿದ್ದಾರೆ. ಹೌದು, ಲೇಖಕ ಬಸವ ರೆಡ್ಡಿ ಅವರ ಕಥೆಗೆ ಬಿ. ಎಂ. ಗಿರಿರಾಜ ಸಿನಿಮಾ ರೂಪ ಕೊಟ್ಟು ಅದನ್ನು ‘ಕಲ್ಯಾಣಿ’ ಹೆಸರಿನಲ್ಲಿ ತೆರೆಗೆ ತರುತ್ತಿದ್ದಾರೆ. ಕೆಲ ತಿಂಗಳ ಹಿಂದೆಯೇ ಸದ್ದಿಲ್ಲದೆ ಶುರುವಾಗಿದ್ದ ಈ ಚಿತ್ರ, ಸದ್ಯ ತನ್ನ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ.

ಇದರ ನಡುವೆಯೇ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಚಿತ್ರದ ಶೀರ್ಷಿಕೆ ಮತ್ತು ಮೋಶನ್ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರದ ವಿಶೇಷತೆಗಳ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿತು. ಅಂದಹಾಗೆ, ಲೇಖಕ ಬಸವ ರೆಡ್ಡಿ ಕಥೆ ಬರೆದಿರುವ, ಬಿ. ಎಂ. ಗಿರಿರಾಜ ನಿರ್ದೇಶನದ ಹೊಸಚಿತ್ರಕ್ಕೆ ‘ಕಲ್ಯಾಣಿ’ ಎಂದು ಹೆಸರಿಡಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರು ದಶಕಗಳಿಂದ ಕಾರ್ಯಕಾರಿ ನಿರ್ಮಾಪಕರಾಗಿ 45ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿರುವ ಕುಮಾರಸ್ವಾಮಿ ಆರ್. ‘ಆರ್. ಕೆ. ಸಿನೆಮಾಸ್’ ಬ್ಯಾನರಿನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಈಗಾಗಲೇ ರಂಗಭೂಮಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಯುವ ನಟ ಸಾಮ್ರಾಟ್ ಶೆಟ್ಟಿ ‘ಕಲ್ಯಾಣಿ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಉತ್ತರ ಭಾರತದ ನಟಿ ಸಿಮ್ರನ್, ರಾಹುಲ್ ಜೇಟ್ಲಿ, ಶಮಂತ್ ರಾವ್, ಪಿ. ಡಿ. ಸತೀಶ್ ಚಂದ್ರ, ಯಮುನಾ ಶ್ರೀನಿಧಿ, ವಿಜಯ್ ಚೆಂಡೂರು, ಶೈಲೇಂದ್ರ, ರಂಗು ಸಮರ್ಪಣ್ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ‘ಕಲ್ಯಾಣಿ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

‘ಕಲ್ಯಾಣಿ’ ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಬಿ. ಎಂ. ಗಿರಿರಾಜ್, ‘ನವಿರಾದ ಒಲವಿನ ಕಥೆ ಮುನ್ನಲೆಯಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಇದರಲ್ಲಿ ನಂಬಿಕೆ, ಸ್ನೇಹ, ಐಡೆಂಟಿಟಿಯ ವಿಷಯಗಳು ಈ ಸಿನಿಮಾದಲ್ಲಿದೆ. ಬೇರೆ ಬೇರೆ ಸಂಸ್ಕೃತಿಗಳ ಮುಖಾಮುಖಿ ಈ ಸಿನಿಮಾ. ಉತ್ತರ ಭಾರತದಿಂದ ಬರುವ ಹುಡುಗಿ ದಕ್ಷಿಣ ಭಾರತದ ಹುಡುಗನ ಎರಡು ಪಾತ್ರಗಳನ್ನು ಪ್ರಧಾನವಾಗಿ ಇಟ್ಟುಕೊಂಡು ಎರಡು ಸಂಸ್ಕೃತಿಗಳ ಅನಾವರಣವನ್ನು ಈ ಚಿತ್ರದಲ್ಲಿ ಮಾಡುವ ಪ್ರಯತ್ನ ಮಾಡಿದ್ದೇವೆ. ನಾನು ಇಲ್ಲಿಯವರೆಗೆ ಮಾಡಿರುವ ಸಿನಿಮಾಗಳಿಗಿಂತ ಸಂಪೂರ್ಣ ವಿಭಿನ್ನವಾಗಿರುವಂತ ಸಿನಿಮಾ ಇದಾಗಿದೆ’ ಎಂದಿದ್ದಾರೆ.

‘ಕಲ್ಯಾಣಿ’ ಚಿತ್ರದ ಹಾಡುಗಳಿಗೆ ಬಿ. ಜೆ. ಭರತ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಪ್ರಶಾಂತ ಲಾಗರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಕಾರ್ಯವಿದೆ. ಭಟ್ಕಳ, ಬೆಂಗಳೂರು ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಇದೇ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ‘ಕಲ್ಯಾಣಿ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

ಇನ್ನಷ್ಟು ಓದಿರಿ

Scroll to Top