
ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ನಾನಾ ರೀತಿಯಲ್ಲಿ ಅಗಾಧ ಕುತೂಹಲಕ್ಕೆ ಕಾರಣವಾಗಿರುವ ಈ ಚಿತ್ರದ ಟ್ರೈಲರ್ ಬಿಡುಗಡೆಗೀಗ ಮುಹೂರ್ತ ನಿಗಧಿಯಾಗಿದೆ.
ಇದೇ ತಿಂಗಳ ಐದನೇ ತಾರೀಕಿನಂದು ಉದ್ಘರ್ಷ ಟ್ರೈಲರ್ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಇದನ್ನು ಬಿಡುಗಡೆಗೊಳಿಸಲಿರೋದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಈ ಟ್ರೈಲರ್ ಗೆ ಕಿಚ್ಚಾ ಸುದೀಪ್ ಖಡಕ್ ಧ್ವನಿ ನೀಡಿರೋದು ಮತ್ತೊಂದು ವಿಶೇಷ.

ಈ ಮೂಲಕ ಉದ್ಘರ್ಷ ಟ್ರೈಲರ್ ಮೂಲಕ ಮತ್ತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸುದೀಪ್ ಸಮಾಗಮವಾಗಿದೆ. ಸುದೀಪ್ ಅವರಂತೂ ತಮ್ಮ ಗುರುವಿನಂಥಾ ಸುನೀಲ್ ಕುಮಾರ್ ದೇಸಾಯಿಯವರ ಉದ್ಘರ್ಷ ಚಿತ್ರಕ್ಕೆ ಆರಂಭದಿಂದಲೂ ಸಾಥ್ ನೀಡುತ್ತಲೇ ಬಂದಿದ್ದಾರೆ. ಅವರು ಖಡಕ್ ವಾಯ್ಸ್ ನೀಡಿರೋ ಟ್ರೈಲರ್‍ನ ಅಸಲೀ ಖದರ್ ಇದೇ ತಿಂಗಳ 5ನೇ ತಾರೀಕಿನಂದು ಅನಾವರಣಗೊಳ್ಳಲಿದೆ.

ಮೂರು ಪಾತ್ರಗಳ ಸುತ್ತ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಈ ಚಿತ್ರ ಹೊಂದಿದೆ. ಠಾಕೂರ್ ಅವರ ಖಡಕ್ ಲುಕ್ಕಿಗೆ ತಕ್ಕುದಾದ ಪಾತ್ರವನ್ನೇ ದೇಸಾಯಿ ಸೃಷ್ಟಿಸಿದ್ದಾರೆ. ಆರಂಭದಿಂದಲೂ ದೇಸಾಯಿ ಅವರ ಚಿತ್ರಗಳನ್ನು ನೋಡಿಕೊಂಡೇ ಬಂದಿದ್ದ ಆರ್ ದೇವರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಂಜುನಾಥ್ ಡಿ ಮತ್ತು ರಾಜೇಂದ್ರ ಕುಮಾರ್ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.












































