ಕನ್ನಡ ಚಿತ್ರರಂಗದ ಖಡಕ್ ನಟ, ನಾಯಕನಾಗಿಯೂ ಖಳನಾಯಕನಾಗಿಯೂ ತನ್ನದೇ ಆದ ಛಾಪು ಮೂಡಿಸಿರುವ ವಜ್ರಾಂಗ್ ಶೆಟ್ಟಿ ಇದೀಗ ನೆರೆರಾಜ್ಯ ತಮಿಳುನಾಡಿನಲ್ಲಿಯೂ ವಿಜಯದ ಪತಾಕೆ ಹಾರಿಸಿದ್ದಾರೆ! ಹೌದು, ಕಳೆದ ವಾರ ತೆರೆಕಂಡು ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತಿರುವ ತಮಿಳುನಾಡಿನ ಖ್ಯಾತ ನಟ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ವೃತ್ತಿಜೀವನದ ಕೊನೆಯ ಚಿತ್ರವಾದ ‘ಜನನಾಯಗನ್’ ಸಿನಿಮಾದಲ್ಲಿ ನಮ್ಮ ಕನ್ನಡಿಗ ವಜ್ರಾಂಗ್ ಶೆಟ್ಟಿ ಅಬ್ಬರಿಸುವ ಮೂಲಕ ಕಾಲಿವುಡ್ ಅಂಗಳಕ್ಕೆ ಅದ್ಧೂರಿ ಎಂಟ್ರಿ ಕೊಟ್ಟಿದ್ದಾರೆ. ಕಳೆದ ವಾರ ಚಿತ್ರಮಂದಿರಗಳಲ್ಲಿ ಪ್ರತ್ಯಕ್ಷವಾದ ಈ ಸಿನಿಮಾ ಕನ್ನಡ ಚಿತ್ರಪ್ರೇಮಿಗಳಿಗೆ ಒಂದು ಬಿಗ್ ಸರ್ಪ್ರೈಸ್ ನೀಡಿದ್ದು, ಕಾಲಿವುಡ್ ಮಂದಿ ಈ ಕನ್ನಡಿಗನ ಖಡಕ್ ನಟನೆಯನ್ನು ಕಂಡು ಬೆರಗಾಗಿ ನಿಂತಿದ್ದಾರೆ.

ಚಿತ್ರದಲ್ಲಿ ಬಾಲಿವುಡ್‌ನ ಖ್ಯಾತ ನಟ ಬಾಬ್ಬಿ ಡಿಯೋಲ್ ಬಳಿಕ ಅತ್ಯಂತ ಪ್ರಮುಖ ಹಾಗೂ ತೀವ್ರತೆಯಿಂದ ಕೂಡಿದ ಖಳನಾಯಕನ ಪಾತ್ರದಲ್ಲಿ ವಜ್ರಾಂಗ್ ಶೆಟ್ಟಿ ಮಿಂಚಿದ್ದಾರೆ. ಅದರಲ್ಲೂ ದಳಪತಿ ವಿಜಯ್ ಅವರ ಕೊನೆಯ ಚಿತ್ರದಲ್ಲಿ ಅವರ ಎದುರು ವಜ್ರಾಂಗ್ ನಡೆಸಿದ ಮಾಸ್ ಫೈಟ್ ದೃಶ್ಯಗಳಂತೂ ತಮಿಳುನಾಡಿನ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದ್ದು, ತಮಿಳು ಅಭಿಮಾನಿಗಳು ಈ ಕನ್ನಡಿಗನ ಅಬ್ಬರಕ್ಕೆ ಫಿದಾ ಆಗಿದ್ದಾರೆ.
“೬.೩ ಅಡಿ ಎತ್ತರ, ಕಟ್ಟುಮಸ್ತಾದ ಮೈಕಟ್ಟು, ಕಣ್ಣಿನಲ್ಲೇ ಭಯ ಹುಟ್ಟಿಸುವ ಖಡಕ್ ಲುಕ್ — ತಮಿಳುನಾಡಿನ ಸೋಶಿಯಲ್ ಮೀಡಿಯಾದಲ್ಲಿ ಈಗ ಧೂಳೆಬ್ಬಿಸುತ್ತಿದೆ ವಜ್ರಾಂಗ್ ಶೆಟ್ಟಿ ಮತ್ತು ದಳಪತಿ ವಿಜಯ್ ಅವರ ಮಾಸ್ ಫೈಟ್!”
ಮೂಲತಃ ಕರಾವಳಿಯ ಕುಂದಾಪುರದವರಾದ ಮಣಿ ಶೆಟ್ಟಿ, ಕನ್ನಡ ಚಿತ್ರರಂಗ ಪ್ರವೇಶಿಸಿದ ಬಳಿಕ ‘ವಜ್ರಾಂಗ್ ಶೆಟ್ಟಿ’ ಎಂದೇ ಜನಪ್ರಿಯರಾದವರು. ೬.೩ ಅಡಿ ಎತ್ತರದ ಭೀಮಕಾಯದ ನಿಲುವು ಹಾಗೂ ಆಕರ್ಷಕ ಮೈಕಟ್ಟು ಹೊಂದಿರುವ ಈ ಚೆಲುವ, ೨೦೧೪ರಲ್ಲಿ ‘ಮಿಸ್ಟರ್ ಕುಂದಾಪುರ’ ಬಿರುದನ್ನು ಮುಡಿಗೇರಿಸಿಕೊಂಡಿದ್ದರು. ತಮ್ಮ ಭವ್ಯ ವ್ಯಕ್ತಿತ್ವ ಮತ್ತು ನಟನಾ ಸಾಮರ್ಥ್ಯದಿಂದ ನಾಯಕ ಹಾಗೂ ಖಳನಾಯಕ – ಈ ಎರಡೂ ಮಾದರಿಯ ಸವಾಲಿನ ಪಾತ್ರಗಳನ್ನು ಅಷ್ಟೇ ಲೀಲಾಜಾಲವಾಗಿ ಆವಾಹಿಸಿಕೊಂಡು ಸೈ ಎನಿಸಿಕೊಂಡವರು.
ವಿನಯ್ ರಾಜ್‌ಕುಮಾರ್ ನಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ‘ಸಿದ್ದಾರ್ಥ’ ಚಿತ್ರದ ಮೂಲಕ ವಜ್ರಾಂಗ್ ಶೆಟ್ಟಿ ಖಳನಾಯಕನಾಗಿ ಗಾಂಧಿನಗರಕ್ಕೆ ಎಂಟ್ರಿ ನೀಡಿದ್ದರು. ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ, ಡಾ. ಪಾರ್ವತಮ್ಮ ರಾಜ್‌ಕುಮಾರ್ ಅವರ ನಿರ್ಮಾಣದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟವರು ಖಂಡಿತವಾಗಿಯೂ ಬೆಳೆದು ದೊಡ್ಡ ಹೆಸರು ಮಾಡುತ್ತಾರೆ ಎನ್ನುವ ಮಾತು ಚಿತ್ರರಂಗದಲ್ಲಿದೆ. ಆ ಮಾತಿಗೆ ವಜ್ರಾಂಗ್ ಶೆಟ್ಟಿ ಇಂದು ಪ್ರತ್ಯಕ್ಷ ಉದಾಹರಣೆಯಾಗಿ ನಿಂತಿದ್ದಾರೆ. ವಜ್ರೇಶ್ವರಿ ಸಂಸ್ಥೆಯಿಂದ ಶುರುವಾದ ಈ ಯಶಸ್ಸಿನ ಪಯಣದಲ್ಲಿ ಅವರು ಮುಂದೆ ‘ಮಂತ್ರಂ’ ಹಾಗೂ ‘ಬಬ್ಲುಷಾ’ ಚಿತ್ರಗಳಲ್ಲಿ ನಾಯಕನಾಗಿ ಮಿಂಚಿ ಪ್ರೇಕ್ಷಕರ ಮನಗೆದ್ದರು. ಪ್ರಜ್ವಲ್ ದೇವರಾಜ್ ನಟನೆಯ ‘ಮಾದ ಮತ್ತು ಮಾನಸಿ’ ಚಿತ್ರದಲ್ಲಿ ಎರಡನೇ ನಾಯಕರಾಗಿಯೂ ಸೈ ಎನಿಸಿಕೊಂಡರು. ಅಷ್ಟೇ ಅಲ್ಲದೆ, ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರವಾದ ‘ಜೇಮ್ಸ್’ನಲ್ಲಿ ‘ಪ್ರತಾಪ್ ಅರಸ್’ ಎನ್ನುವ ಪವರ್‌ಫುಲ್ ಖಳಪಾತ್ರದ ಮೂಲಕ ತಮ್ಮ ನಟನಾ ವೈಖರಿಯನ್ನು ಸಾಬೀತುಪಡಿಸಿದ್ದರು.
ಕನ್ನಡದಲ್ಲಿ ಸೈ ಎನಿಸಿಕೊಂಡ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾದ ಮೂಲಕ ಟಾಲಿವುಡ್‌ಗೂ ಕಾಲಿಟ್ಟ ವಜ್ರಾಂಗ್, ‘ವಿಷ್ಣು’ ಎಂಬ ಖಡಕ್ ವಿಲನ್ ಪಾತ್ರ ಮಾಡಿ ತೆಲುಗು ಪ್ರೇಕ್ಷಕರ ಗಮನ ಸೆಳೆದಿದ್ದರು. ರೆಬೆಲ್ ಸ್ಟಾರ್ ಪ್ರಭಾಸ್ ಅವರೊಂದಿಗೆ ನಡೆಯುವ ಭೀಕರ ‘ಕಾಟೇರಮ್ಮ ಫೈಟ್’ ಇಂದಿಗೂ ಟಾಲಿವುಡ್ ಅಂಗಳದಲ್ಲೂ, ಸೋಶಿಯಲ್ ಮೀಡಿಯಾದಲ್ಲೂ ಧೂಳೆಬ್ಬಿಸುತ್ತಿದೆ. ಈಗ ಸಲಾರ್‌ನಿಂದ ಟಾಲಿವುಡ್, ಜನನಾಯಗನ್‌ನಿಂದ ಕಾಲಿವುಡ್ ಹೀಗೆ ಸಾಲು ಸಾಲು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗ್ರ್ಯಾಂಡ್ ಎಂಟ್ರಿ ಕೊಡುತ್ತಿರುವ ವಜ್ರಾಂಗ್ ಶೆಟ್ಟಿ, ಎಲ್ಲಡೆ ವಿಜಯದ ಪತಾಕೆ ಹಾರಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.












































