ʻರಥಾವರ’ ಹಾಗೂ ‘ತಾರಕಾಸುರ’ದಂತಹ ವಿಭಿನ್ನ ಹಾಗೂ ಸತ್ತ್ವಯುತ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದವರು ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ. ಆ ನಂತರ ಇವರು ನಟ ಕಿಶೋರ್ ಅವರ ಅಭಿನಯದಲ್ಲಿ ‘ರೆಡ್ ಕಾಲರ್’ ಎನ್ನುವ ಹಿಂದಿ ಚಿತ್ರವನ್ನೂ ರೂಪಿಸಿದ್ದರು. ಇತ್ತೀಚೆಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾದ ‘ಚೌಕಿದಾರ’ ಚಿತ್ರಕ್ಕೂ ಇವರದ್ದೇ ನಿರ್ದೇಶನ.

ಚಂದ್ರಶೇಖರ ಬಂಡಿಯಪ್ಪ ಕೇವಲ ಉತ್ತಮ ನಿರ್ದೇಶಕರಷ್ಟೇ ಅಲ್ಲ, ಒಬ್ಬ ಅದ್ಭುತ ಕಥೆಗಾರರೂ ಹೌದು. ಇವರು ಬರೆದ ʻದೇವರ ಕಾಲೋನಿʼ, ʻಚೈನಾಸೆಟ್ʼ ಮತ್ತು ʻಉಯಿಲುʼ ಎಂಬ ಮೂರು ಕಥೆಗಳನ್ನು ಒಳಗೊಂಡ ಕಥಾಸಂಕಲನ ‘ದೇವರ ಕಾಲೋನಿ’ ಹೆಸರಿನಲ್ಲಿ ಪ್ರಕಟವಾಗಿ ಸೌಂಡ್ ಮಾಡಿತ್ತು.
ಇನ್ನು ಯುವ ನಿರ್ದೇಶಕ ಗುರುದತ್ತ ಗಾಣಿಗ ಅವರು ಪ್ರಜ್ವಲ್ ದೇವರಾಜ್ ಅಭಿನಯದಲ್ಲಿ ನಿರ್ದೇಶಿಸುತ್ತಿರುವ ʻಕರಾವಳಿʼ ಚಿತ್ರದ ಹಿಂದಿರುವುದು ಇದೇ ಬಂಡಿಯಪ್ಪ ಅವರ ಲೇಖನಿ! ಹೌದು, ಈ ಚಿತ್ರಕ್ಕೆ ಕಥೆ ಬರೆದುಕೊಟ್ಟಿರುವುದು ಚಂದ್ರಶೇಖರ ಬಂಡಿಯಪ್ಪ.
ಯಾರೂ ಕೈಯಿಡದ, ಮುಟ್ಟಲು ಹೆದರುವ ವಿಭಿನ್ನ ಕಥಾವಸ್ತುಗಳನ್ನು ಆಯ್ಕೆ ಮಾಡಿಕೊಂಡು ತೆರೆಯ ಮೇಲೆ ರೋಚಕವಾಗಿ ಕಟ್ಟಿಕೊಡುವುದು ಚಂದ್ರಶೇಖರ ಬಂಡಿಯಪ್ಪ ಅವರ ಶೈಲಿ. ‘ರಥಾವರ’ ಚಿತ್ರದಲ್ಲಿ ಮಂಗಳಮುಖಿಯರ ವಿಶಿಷ್ಟ ಜಗತ್ತನ್ನು ಅನಾವರಣಗೊಳಿಸಿದ್ದ ಇವರು, ‘ತಾರಕಾಸುರ’ದಲ್ಲಿ ಬುಡುಬುಡುಕೆ ಜನಾಂಗದ ಸಂಸ್ಕೃತಿಯನ್ನು ಕಥಾವಸ್ತುವಾಗಿ ಆಯ್ಕೆ ಮಾಡಿಕೊಂಡಿದ್ದರು. ಇಂತಹ ದೇಸೀ ವಿಚಾರಗಳನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ರೋಚಕವಾಗಿ ಕಟ್ಟಿಕೊಡುವ ಕಲೆ ಬಂಡಿಯಪ್ಪ ಅವರಿಗೆ ಸಿದ್ಧಿಸಿದೆ.
ತಮ್ಮದೇ ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಕರಾವಳಿ ಭಾಗಕ್ಕೆ ಹೋದಾಗ, ಅಲ್ಲಿನ ಕೋಣಗಳು ಹಾಗೂ ವಿಶಿಷ್ಟ ಕಂಬಳದ ಕ್ರೀಡೆಯನ್ನು ಕಂಡ ಬಂಡಿಯಪ್ಪ ಅವರಿಗೆ ಹೊಸ ಆಲೋಚನೆ ಹೊಳೆದಿತ್ತು. “ನಮ್ಮದೇ ನೆಲದಲ್ಲಿ ಇಷ್ಟು ಸುಂದರವಾದ ಸಂಸ್ಕೃತಿ ಮತ್ತು ಅದರ ಹಿನ್ನೆಲೆಯಲ್ಲಿ ಅದ್ಭುತ ಕಥೆಯಿದೆಯಲ್ಲಾ, ಇದನ್ನು ಯಾಕೆ ಸಿನಿಮಾವಾಗಿ ಮಾಡಬಾರದು?” ಎಂದು ಚಿಂತಿಸಿದವರು, ತಕ್ಷಣವೇ ಕಥೆಯೊಂದನ್ನು ಹೆಣೆದರು. ಈ ಕಥೆಯನ್ನು ತಮ್ಮ ಆಪ್ತ ಸ್ನೇಹಿತ ಗುರುದತ್ ಗಾಣಿಗ ಅವರಿಗೆ ವಿವರಿಸಿದರು. ಹಿಂದೆ ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರ ಬಳಿ ‘ಶೈಲು’ ಸೇರಿದಂತೆ ಹಲವು ಸಿನಿಮಾಗಳಿಗೆ ಬಂಡಿಯಪ್ಪ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾಗ, ಗುರುದತ್ ಗಾಣಿಗ ಕೂಡ ಅದೇ ನಾರಾಯಣ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆ ದಿನಗಳಿಂದಲೇ ಇಬ್ಬರ ನಡುವೆ ಗಟ್ಟಿ ಬಾಂಧವ್ಯ ಬೆಳೆದುಬಂದಿತ್ತು.
ಹೀಗಾಗಿ ಚಂದ್ರು ಹೇಳಿದ ಈ ದೇಸೀ ಕಥೆ ಗಾಣಿಗ ಅವರಿಗೆ ಅಪಾರವಾಗಿ ಇಷ್ಟವಾಯಿತು. ಮಂಡ್ಯ ಸೀಮೆಯ ಬಂಡಿಯಪ್ಪ ಬರೆದ ಕಥೆಯನ್ನು ಗಾಣಿಗ ಒಪ್ಪಲೂ ಕಾರಣವಿತ್ತು. ಗುರುದತ್ ಗಾಣಿಗ ಕರಾವಳಿಯ ಭಾಗದವರು. ಕಂಬಳ, ಯಕ್ಷಗಾನಗಳನ್ನೆಲ್ಲಾ ತೀರಾ ಹತ್ತಿರದಿಂದ ಬಲ್ಲವರಾಗಿದ್ದರು. ಈ ಕಾರಣಕ್ಕೇ ಸಬ್ಜೆಕ್ಟು ಅವರನ್ನು ಸೆಳೆದಿತ್ತು. ಹೀಗೆ ರೂಪುಗೊಂಡಿದ್ದೇ ‘ಕರಾವಳಿ’ ಚಿತ್ರ. ಇಂದು ಪ್ರೇಕ್ಷಕರ ಮುಂದೆ ಬಂದು ಗೆದ್ದು ಬೀಗುತ್ತಿರುವ ‘ಕರಾವಳಿ’ ಚಿತ್ರವನ್ನು ನೋಡಿದ ಪ್ರತಿಯೊಬ್ಬರೂ, ಚಂದ್ರಶೇಖರ ಬಂಡಿಯಪ್ಪ ಅವರ ಕಥೆ ಮತ್ತು ಚಿತ್ರಕಥೆಯ ತಾಕತ್ತನ್ನು ಕೊಂಡಾಡುತ್ತಿದ್ದಾರೆ. ನೆಲದ ಸಂಸ್ಕೃತಿಗೆ ತಕ್ಕಂತೆ ರೋಮಾಂಚನಗೊಳಿಸುವ ಕಥೆ ಹೆಣೆಯುವುದರಲ್ಲಿ ತಾವೇಕೆ ‘ಸ್ಪೆಷಲಿಸ್ಟ್’ ಎಂಬುದನ್ನು ಬಂಡಿಯಪ್ಪ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.












































