ಚಿರು ಸರ್ಜಾ ಅಭಿನಯದ ಹೊಸ ಚಿತ್ರ ಕ್ಷತ್ರಿಯ!

Picture of Cinibuzz

Cinibuzz

Bureau Report

ಚಿರಂಜೀವಿ ಸರ್ಜಾ ನಟನೆಯಲ್ಲಿ ‘ಕ್ಷತ್ರಿಯ’ ಎನ್ನುವ ಜಬರ್ದಸ್ತ್ ಟೈಟಲ್ಲಿನ ಸಿನಿಮಾವೊಂದು ಆರಂಭವಾಗುತ್ತಿದೆ. ಕನ್ನಡ ಚಿತ್ರರಂಗದ ಸಾಕಷ್ಟು ಸ್ಟಾರ್ ಡೈರೆಕ್ಟರುಗಳ ಜೊತೆಗೆ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನಿಲ್ ಮಂಡ್ಯ ಕ್ಷತ್ರಿಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪಿ.ವಾಸು, ದಿನಕರ್ ತೂಗುದೀಪ, ತರುಣ್ ಸುಧೀರ್, ಮುಂಗಾರುಮಳೆ ಕೃಷ್ಣ ಮತ್ತು ಸಂತೋಷ್ ಅನಂದರಾಮ್ ಅವರ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮತ್ತು ರಾಜಕುಮಾರ ಸಿನಿಮಾಗಳಿಗೆ ಕೋ ಡೈರೆಕ್ಟರ್ ಆಗಿದ್ದ ಅನಿಲ್ ಮಂಡ್ಯ ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವರು. ಈಗ ಚಿರು ಹೀರೋ ಆಗಿರುವ ಕ್ಷತ್ರಿಯ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.

ಅನಿಲ್ ಸಿದ್ಧಪಡಿಸಿಕೊಂಡಿದ್ದ ಸಬ್ಜೆಕ್ಟಿಗೆ ಹೊಂದುವ ಶೀರ್ಷಿಕೆಗಾಗಿ ಸಾಕಷ್ಟು ಹುಡುಕಾಟ ನಡೆಸಲಾಗಿತ್ತು. ಕ್ಷತ್ರಿಯ ಎನ್ನುವ ಟೈಟಲ್ ಚಿತ್ರಕ್ಕೆ ಹೇಳಿಮಾಡಿಸಿದಂತಿದ್ದರೂ ಅದು ಮತ್ತೊಬ್ಬ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರ ಬಳಿ ಇತ್ತು. ನಿರ್ಮಾಪಕ ಜಯಣ್ಣ ಅನಿಲ್ ಅವರಿಗೆ ಆತ್ಮೀಯರಾಗಿದ್ದು ಕ್ಷತ್ರಿಯ ಟೈಟಲ್ ಬೇಕು ಎಂದು ವಿನಂತಿಸಿದ್ದರಂತೆ. ಜಯಣ್ಣ ಒಂದು ಮಾತು ಕೇಳುತ್ತಿದ್ದಂತೆ ಕೆ.ಪಿ. ಶ್ರೀಕಾಂತ್ ಬೇರೆ ಯೋಚನೆಗೂ ಅವಕಾಶ ಮಾಡಿಕೊಡದೆ ಪ್ರೀತಿಯಿಂದಲೇ ಶೀರ್ಷಿಕೆ ನೀಡಿದ್ದಾರಂತೆ. ಮತ್ಯಾರೇ ನಿರ್ಮಾಪಕರಾಗಿದ್ದರೂ ಇಂಥ ಕಮರ್ಷಿಯಲ್ ಟೈಟಲನ್ನು ಹೇಗೆ ಕೊಡೋದು ಅನ್ನೋದರ ಬಗ್ಗೆ ಚಿಂತಿಸುತ್ತಿದ್ದರೇನೋ. ಆದರೆ ಯಾವ ಬ್ಯಾನರಿನಲ್ಲಿ ಯಾವ ಹೀರೋ ಮಾಡಿದರೂ ಸರಿ ಸಿನಿಮಾ ಉತ್ತಮವಾಗಿ ಮೂಡಿಬಂದರೆ ಸಾಕು ಅನ್ನೋ ಮನಸ್ಥಿತಿಯಿಂದ ಶೀರ್ಷಿಕೆ ಬಿಟ್ಟುಕೊಟ್ಟಿರುವ ಶ್ರೀಕಾಂತ್ ಅವರ ಸಿನಿಮಾ ಪ್ರೀತಿ ಮತ್ತು ಜಯಣ್ಣ ಅವರ ಮಾತಿನ ಮೇಲೆ ಅವರಿಟ್ಟಿರುವ ಗೌರವ ನಿಜಕ್ಕೂ ದೊಡ್ಡದು.
ಅಂದಹಾಗೆ ಕ್ಷತ್ರಿಯ ಸಿನಿಮಾವನ್ನು ಈ ಹಿಂದೆ ಇದೇ ಚಿರು ನಟನೆಯ ಸಂಹಾರ ಚಿತ್ರವನ್ನು ನಿರ್ಮಿಸಿದ್ದ ವೈಷ್ಣವಿ‌ ಮನು ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎ.ವೆಂಕಟೇಶ್, ಕಿಶೋರ್ ಮಂಗಳವಾರಪೇಟೆ, ಎಂ.ವಿ.‌ಮನೀಶ್ ಮತ್ತು ಎಂ.ಜೆ. ವಿಷ್ಣುವರ್ಧನ್ ಸೇರಿ ನಿರ್ಮಿಸುತ್ತಿದ್ದಾರೆ. ಧರ್ಮವಿಶ್ ಸಂಗೀತ, ಡಾ. ಕೆ. ರವಿವರ್ಮ ಸಾಹಸವಿರುವ ಈ ಚಿತ್ರಕ್ಕೆ ಬಹದ್ದೂರ್ ಚೇತನ್ ಕುಮಾರ್ ಭರ್ಜರಿಯಾದ ಸಂಭಾಷಣೆ ರಚಿಸುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top