ರಿಲೀಸ್ ಗೆ ರೆಡಿಯಾಗಿರುವ ಬಾಲಿವುಡ್ ನ ಬ್ಯಾಡ್ ಬಾಯ್ ನಟಿಸಿರುವ ಬಹುನಿರೀಕ್ಷಿತ ಭಾರತ್ ಚಿತ್ರಕ್ಕೆ ಅಪಶಕುನದ ಎಫೆಕ್ಟ್ ತಟ್ಟಿದ್ದು, ಸಿನಿಮಾದ ವಿರುದ್ಧ ಗುರುವಾರ ದೆಹಲಿ ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಸಲಾಗಿದೆ. ವಿಕಾಸ್ ತ್ಯಾಗಿ ಎಂಬುವರು ಅರ್ಜಿ ಸಲ್ಲಿಸಿದ್ದು, ಭಾರತ್ ಸಿನಿಮಾವು ನಮ್ಮ ಶ್ರೇಷ್ಠ ದೇಶ ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಚಿತ್ರಣವನ್ನು ಅವಮಾನಿಸುತ್ತದೆ ಎಂದು ದೂರಿದ್ದಾರೆ. ಅರ್ಜಿಯಲ್ಲಿ, ಭಾರತ್ ಚಿತ್ರದ ಶೀರ್ಷಿಕೆಯು ಸೆಕ್ಷನ್ 3ರ ಲಾಂಛನ ಮತ್ತು ಹೆಸರು(ಅಸಮರ್ಪಕ ಬಳಕೆಯ ತಡೆಗಟ್ಟುವಿಕೆ) ಕಾಯ್ದೆಯನ್ನು ಉಲ್ಲಂಘಿಸುತ್ತದೆ. ಇದರ ಪ್ರಕಾರ ಭಾರತ್ ಎಂಬ ಪದವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವಂತಿಲ್ಲ ಎಂದು ವಾದಿಸಿದ್ದಾರೆ.
ಅಲ್ಲದೆ ಚಿತ್ರದಲ್ಲಿ ಪಾತ್ರವನ್ನು ಭಾರತಕ್ಕೆ ಹೋಲಿಸಿ ಮಾಡಲಾಗಿರುವ ಡೈಲಾಗುಗಳನ್ನು ಕೂಡ ಚಿತ್ರದಿಂದ ತೆಗೆದುಹಾಕಬೇಕು. ಇದು ಭಾರತದೊಂದಿರುವ ಜನರ ಭಾವನೆಗಳನ್ನು ಪ್ರಶ್ನಿಸುವುದಲ್ಲದೇ ನೋಯಿಸುತ್ತದೆ.ಈ ಚಿತ್ರವು ಸಲ್ಮಾನ್‌ರ ವಿಶಿಷ್ಟವಾದ ನಡವಳಿಕೆ ಮತ್ತು ಅಶ್ಲೀಲತೆಯೊಂದಿಗೆ ತುಂಬಿದೆ. ಓರ್ವ ಭಾರತೀಯನಾಗಿ ಚಿತ್ರಕ್ಕೆ ಹೆಸರು ಬಳಕೆ ಅಸಮರ್ಪಕ ಮತ್ತು ಪ್ರತಿಷ್ಟಿತ ರಾಷ್ಟ್ರವನ್ನು ಪಾತ್ರವೊಂದರೊಂದಿಗೆ ತಳುಕು ಹಾಕುವುದು ಸರಿಯಲ್ಲವೆಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ. ಭಾರತ್ ಸಿನಿಮಾ ಜೂನ್ 5ಕ್ಕೆ ತೆರೆಕಾಣಲು ಸಿದ್ಧವಾಗಿದೆ.











































