ಹೆಚ್ಚಿನ ಪ್ರಮಾಣದಲ್ಲಿ ರಂಗಭೂಮಿಯಲ್ಲಿಯೇ ತೊಡಗಿಸಿಕೊಂಡಿರುವ ಗಾಯಕಿ ಕಮ್ ಹಿರಿಯ ನಟಿ ಬಿ. ಜಯಶ್ರೀ. ಅಲ್ಲಿಂದಿಲ್ಲೊಂದು ಕಲಾತ್ಮಕ ಚಿತ್ರಗಳನ್ನು ಮಾಡುತ್ತಲೇ ಜಯಶ್ರೀ ತಮ್ಮ ಸಿನಿ ಯಾನವನ್ನು ಸರಾಗವಾಗಿ ಸಾಗಿಸುತ್ತಿದ್ದಾರೆ. ಮೂಕಜ್ಜಿಯ ಕನಸು ಚಿತ್ರದಲ್ಲಿ ಮೂಕಜ್ಜಿಯಾಗಿ ಅಮೋಘವಾಗಿ ಅಭಿನಯಿಸಿದ ನಂತರ ಚಿತ್ರಕಥಾ ಎನ್ನುವ ಸಿನಿಮಾದಲ್ಲಿ ಕೊರವಂಜಿಯಾಗಿ ಅಭಿನಯಿಸಲಿದ್ದಾರೆ. ಈ ಸಿನಿಮಾವನ್ನು ಯಶಸ್ವಿ ಬಾಲಾದಿತ್ಯ ನಿರ್ದೇಶನ ಮಾಡುತ್ತಿದ್ದು, ಕಥೆ, ಚಿತ್ರಕತೆಯನ್ನು ಅವರೇ ಬರೆದಿದ್ದಾರೆ. ಮೇಲಾಗಿ ಇದು ಅವರ ಚೊಚ್ಚಲ ಸಿನಿಮಾ.

ಇದು ಸಿನಿಮಾದೊಳಗೊಂದು ಸಿನಿಮಾ ಕತೆ ನಡೆಯುವ ಚಿತ್ರ. ಒಬ್ಬ ಕಲಾವಿದ ಕಷ್ಟಪಟ್ಟು ಒಂದು ಹಂತಕ್ಕೆ ಬಂದಾಗ ಆತನ ಪ್ರತಿಭೆ ಮತ್ತು ಕಲೆಯನ್ನು ಗುರುತಿಸಲಾಗುತ್ತದೆಯೋ ಇಲ್ಲವೋ? ಕಲಾವಿದ ತನ್ನನ್ನು ಗುರುತಿಸಿಕೊಳ್ಳಲು ಯಾವು ರೀತಿ ಪಯಣ ಆರಂಭಿಸುತ್ತಾನೆ. ಜತೆ ಆತನ ಎದುರಿಸುವ ಕಷ್ಟಗಳೇನು ಎಂಬುದನ್ನು ಹೇಳುವ ಸಿನಿಮಾ ಇದು. ಇಡೀ ಸಿನಿಮಾ ಸೆಸ್ಪನ್ಸ್, ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ. ಇಂಥ ಚಿತ್ರದಲ್ಲಿ ಬಿ ಜಯಶ್ರೀ ಅವರು ಕೊರವಂಜಿ ಹೇಳುವ ಪಾತ್ರ ಮಾಡುತ್ತಿದ್ದಾರೆ. ಅಲ್ಲದೇ ನಟನೆಯ ಜತೆಗೆ ಒಂದು ಹಾಡನ್ನು ಹಾಡಿದ್ದಾರೆ.











































