ದುಡಿದ ದುಡ್ಡು ಕೇಳಿದರೆ `ಅಮ್ಮ-ಅಕ್ಕ’ ಅನ್ನೋ ಕೊಳಕ…

Picture of Cinibuzz

Cinibuzz

Bureau Report

ಇಲ್ಲೊಂದು ವಾಯ್ಸ್ ರೆಕಾರ್ಡ್ ನೀಡಿದ್ದೇವೆ. ಮೊದಲು ಅದನ್ನು ಕೇಳಿ ನಂತರ ಈ ಸುದ್ದಿಯನ್ನು ಓದಿ…

ಇರೋಬರೋ ಅವಾಚ್ಯ ಶಬ್ದಗಳನ್ನೆಲ್ಲಾ ಪಟಪಟಾಂತ ಉದುರಿಸುತ್ತಾ, ಥೇಟು ಗಲ್ಲಿ ರೌಡಿಯಂತೆ ಮಾತಾಡಿರೋ ವ್ಯಕ್ತಿ ಕನ್ನಡ ಚಿತ್ರರಂಗದ ಬಹುದೊಡ್ಡ ನಿರ್ಮಾಪಕ. ಈ ಮಟ್ಟಿಗೆ ಥರ್ಡ್ ಗ್ರೇಡ್ ಭಾಷೆ ಉಪಯೋಗಿಸಿರುವ ಈ ಮಹಾನುಭಾವ ಯಾರಿರಬಹುದೆಂಬ ಪ್ರಶ್ನೆ ನಿಮ್ಮದಾಗಬಹುದು. ಶ್ರೀಯುತರ ಹೆಸರು ಕನಕಪುರ ಶ್ರೀನಿವಾಸ್.

ಸಿನಿಮಾದ ಚಿತ್ರೀಕರಣಕ್ಕಾಗಿ ವಾಹನ ವ್ಯವಸ್ಥೆ ಮಾಡಿದ್ದ ಬಡಪಾಯಿ ಟ್ರಾವಲ್ ಏಜೆಂಟ್ ಫೋನ್ ಮಾಡಿ ಕೊಡಬೇಕಿದ್ದ ಹಣ ಕೇಳಿದ್ದೇ ತಪ್ಪೆನ್ನುವಂತೆ `ನಿನ್ನಕ್ಕನ್, ನಿನ್ನಮ್ಮನ್, ಹಂಗ್ ಮಾಡ್ಬುಡ್ತೀನಿ, ಹಿಂಗ್ ಮಾಡ್ಬುಡ್ತೀನಿ’ ಎಂದು ಮಾತಾಡುತ್ತಿದ್ದಾರೆ ಕನಕಪುರ ಸೀನ. ಈತನ ಜೊತೆ ಯಾರಾದರೂ ವ್ಯವಹಾರ ಮಾಡಿಬಿಟ್ಟರೆ ಅವರಿಗೆ ಶ್ರೀನಿವಾಸ್ ನಾಯಿ ನರಕ ತೋರಿಸ್ತಾರೆ ಅನ್ನೋದಕ್ಕಿದು ಸಣ್ಣ ಸ್ಯಾಂಪಲ್.

ಎಲ್ಲಾ ಅಂದುಕೊಂಡಂತೇ ಆಗಿದ್ದಿದ್ದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿರುವ `ದಶರಥ’ ಸಿನಿಮಾ ಈ ಹೊತ್ತಿಗೆ ಬಿಡುಗಡೆಯಾಗಿ ಹೋಗಿರಬೇಕಿತ್ತು. ಎಂ.ಎಸ್. ರಮೇಶ್ ನಿರ್ದೇಶನದ ಈ ಸಿನಿಮಾಗೆ ನಿರ್ಮಾಣ ಹಂತದಲ್ಲಿದ್ದಾಗಲೇ ಹಣದ ಸಮಸ್ಯೆಯಾಗಿತ್ತು. ಹೀಗಾಗಿ ಆರ್.ಎಸ್. ಪ್ರೊಡಕ್ಷನ್‍ನ ಕನಕಪುರ ಶ್ರೀನಿವಾಸ್ ಈ ಸಿನಿಮಾವನ್ನು ಕಂಪ್ಲೀಟ್ ಮಾಡಿ ವಿತರಣೆಯ ಹಕ್ಕನ್ನು ಪಡೆದಿದ್ದರು. ಎಲ್ಲವೂ ಮುಗಿದು ತೀರಾ ಬಿಡುಗಡೆಗೆ ಎರಡು ದಿನ ಇದೆ ಎನ್ನುವಂತೆ ಕ್ಯಾನ್ಸಲ್ ಆಗಿಬಿಟ್ಟಿತು.

ಅದಕ್ಕೆ ಕಾರಣ ಸಿಲಿಂಡರ್ ಸ್ಫೋಟ!

ರಣಂ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಮೃತಪಟ್ಟ ಘಟನೆ ನಡೆಯಿತಲ್ಲಾ? ಚಿತ್ರೀಕರಣದ ಸಂದರ್ಭದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರೋ ಜೋಭದ್ರಗೇಡಿತನದ ವಿರುದ್ಧ ಜನ ರೊಚ್ಚಿಗೆದ್ದಿದ್ದರು. ಯಾರದ್ದೋ ಶೋಕಿಗೆ ಇನ್ಯಾರೂ ಬಲಿಯಾಗುವ ದುರಂತಗಳ ಬಗ್ಗೆ ಮಾಧ್ಯಮಗಳಲ್ಲಿಯೂ ಚರ್ಚೆಗಳಾದವು. ಹೀಗಿರುವಾಗಲೇ ಇಬ್ಬರನ್ನು ಬಲಿ ಪಡೆದ ರಣಂ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರನ್ನು ಪೊಲೀಸರು ಬಂಧಿಸಿದ್ದು, ಮತ್ತೆ ಆತ ಹೊರಗೆ ಬಂದಿದ್ದೆಲ್ಲಾ ನಡೆದುಹೋಯ್ತು.

ರಣಂ ಚಿತ್ರದ ಚಿತ್ರೀಕರಣದ ಮುಖ್ಯ ಸನ್ನಿವೇಶವೊಂದಕ್ಕೆ ಸಿಲಿಂಡರ್ ಬಳಸಲಾಗಿತ್ತು. ಅದು ಸ್ಫೋಟಗೊಂಡ ಪರಿಣಾಮವಾಗಿ ಚಿತ್ರೀಕರಣ ವೀಕ್ಷಿಸಲು ಬಂದಿದ್ದ ಇಬ್ಬರು ಮೃತಪಟ್ಟಿದ್ದರು. ಈ ಘಟನೆಯಲ್ಲಿ ಚಿತ್ರತಂಡದ ಬೇಜವಾಬ್ದಾರಿತನ ಎದ್ದು ಕಾಣುತ್ತಿತ್ತು. ಇಂಥಾದ್ದನ್ನೆಲ್ಲ ಕಣ್ಣಲ್ಲಿ ಕಣ್ಣಿಟ್ಟು ನಿಭಾಯಿಸಬೇಕಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್, ತಗುಲಿಕೊಳ್ಳೋದು ಗ್ಯಾರಂಟಿ ಎಂಬುದು ಕನ್ಪರ್ಫ್ ಆಗುತ್ತಿದ್ದಂತೆ ಅಲ್ಲಿಂದ ಪೇರಿ ಕಿತ್ತಿದ್ದರು. ಆದರೆ ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಬಾಗಲೂರು ಪೊಲೀಸರು ಶ್ರೀನಿಗಾಗಿ ಹುಡುಕಾಟ ಚಾಲ್ತಿಯಲ್ಲಿಟ್ಟಿದ್ದರು. ಕಡೆಗೂ ತಲೆತಪ್ಪಿಸಿಕೊಂಡು ಲೋಕಸಂಚಾರ ನಡೆಸುತ್ತಿದ್ದ ಶ್ರೀನಿವಾಸ್ ಸಿಕ್ಕಿಬಿದ್ದಿದ್ದರು.

ಇದೆಲ್ಲದರ ಸೈಡ್ ಎಫೆಕ್ಟ್ ನೇರವಾಗಿ ಅಮರಿಕೊಂಡಿದ್ದು `ದಶರಥ’ನಿಗೆ. ಸಿನಿಮಾ ಬಿಡುಗಡೆ ಮಾಡಬೇಕಿದ್ದ ಶ್ರೀನಿವಾಸ್ ಸಿಲಿಂಡರ್ ಸ್ಫೋಟದ ಕೇಸಿನಲ್ಲಿ ಅಂದರ್ ಆಗಿದ್ದರಿಂದ ದಶರಥ ರಿಲೀಸಾಗಲೇ ಇಲ್ಲ. ಇದಾದಮೇಲೆ ನಿರ್ಮಾಪಕರು `ಈಗಲಾದರೂ ಸಿನಿಮಾ ಬಿಡುಗಡೆ ಮಾಡಿ’ ಅಂದರೆ, `ಅಯ್ಯೋ ಬೇಕಿದ್ರೆ ನೀವೇ ರಿಲೀಸ್ ಮಾಡ್ಕಳಿ. ನಿಮ್ ಸಿನಿಮಾಗೆ ನಾನು ಇನ್ವೆಸ್ಟ್ ಮಾಡಿರೋ ದುಡ್ಡು ಮಡಗಿ..’ ಅಂತಾ ನಿರ್ಮಾಪಕರಿಗೆ ಟಾರ್ಚರ್ ಕೂಡ ಶ್ರೀನಿವಾಸ್ ಕೊಟ್ಟದ್ದುಂಟು. ಕಡೆಗೆ ಈ ವಿಚಾರ ಚೇಂಬರ್ ಮೆಟ್ಟಿಲೇರಿತು. ನ್ಯಾಯ ನೀತಿ ಮಾತಾಡಲು ಮುಂದಾದ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡರ ಮೇಲೇ ಅವಾಜು ಹಾಕುವ ಪ್ರಯತ್ನ ಮಾಡಿದ್ದ ಸೀನು. ಛೇಂಬರ್ ಮಂದಿ ಸುಮ್ಮನೆ ಬಿಡ್ತಾರಾ? ರೊಚ್ಚಿಗೆದ್ದ ಕಮಿಟಿಯವರು `ಎತ್ತಲೇ ನಿನ್ ಕಂತೆ’ ಅಂತಾ ಮಕ್ಕುಗಿದಿದ್ದರು. ಬಾಮಾ ಹರೀಶ್, ಕರಿಸುಬ್ಬು ಸೇರಿದಂತೆ ಎಲ್ಲರೂ ಶ್ರೀನಿವಾಸ್‍ಗೆ ಸರಿಯಾಗೇ ತರಾಟೆಗೆ ತೆಗೆದುಕೊಂಡಿದ್ದರು.

ಕಡೆಗೆ ನಿರ್ಮಾಪಕ ಅಕ್ಷಯ್ ಸಮರ್ಥ್ ದುಡ್ಡು ಹೊಂಚಿಕೊಂಡು ಬಂದು ಸೀನನ ಎದೆಮೇಲೆ ಸುರಿದರು. ಚಲನಚಿತ್ರ ವಾಣಿಜ್ಯ ಮಂಡಳಿಯ ಮಧ್ಯಸ್ಥಿಕೆಯ ಕಾರಣದಿಂದ ದಶರಥನಿಗೆ ಸೀನನಿಂದ ಮುಕ್ತಿ ಸಿಕ್ಕಂತಾಗಿದೆ. ಇಲ್ಲದಿದ್ದರೆ ನಿರ್ಮಾಪಕರನ್ನು ಮುಕ್ಕಿ ತಿಂದುಬಿಡುತ್ತಿದ್ದ ಈ ಮಹಾನುಭಾವ.

ಭರ್ಜರಿ’ ನಷ್ಟದ ಡ್ರಾಮಾ!

`ಭರ್ಜರಿ ಚಿತ್ರ ಕೋಟಿ ಕೋಟಿ ಬಾಚಿಕೊಂಡಿದೆ ಅನ್ನೋದೆಲ್ಲ ಅವರವರು ತಂತಮ್ಮ ಮಾರ್ಕೆಟ್ ವ್ಯಾಲ್ಯೂ ಹೆಚ್ಚಿಸಿಕೊಳ್ಳಲು ಮಾಡುತ್ತಿರೋ ಗಿಮಿಕ್ಕು. ಆ ಚಿತ್ರದಿಂದ ಬಂದಿರೋ ಲಾಭ ಹೆಚ್ಚೆಂದರೆ ಮೂರು ಕೋಟಿ ಮಾತ್ರ’… ಇಂಥಾ  ಮಾತನ್ನು ಪತ್ರಕರ್ತರ ಮುಂದೆಯೇ ಕೂತು ಸ್ವತಃ ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಬಡಬಡಿಸಿದ್ದರು.

ಅಷ್ಟಕ್ಕೂ ಶ್ರೀನಿವಾಸ್ ಯಾಕೆ ಇಂಥಾ ಮಾತಾಡಿದ್ದಾರೋ, ಇದರ ಹಿಂದೆ ಏನೇನು ಲೆಕ್ಕಾಚಾರಗಳಿವೆಯೋ ಅವರಿಗಷ್ಟೇ ಗೊತ್ತು. ಆದರೆ ಅವರೇ ತಾವು ಭರ್ಜರಿ ಚಿತ್ರಕ್ಕೆ ಹದಿನೆಂಟು ಕೋಟಿ ಸುರಿದು ನಿರ್ಮಾಣ ಮಾಡಿದ್ದಕ್ಕೆ ಇಪ್ಪತ್ತೊಂದು ಕೋಟಿ ಮಾತ್ರ ವಾಪಾಸಾಗಿದೆ ಅಂತ ಲೆಕ್ಕ ಹೇಳಿಕೊಂಡಿದ್ದಾರಂತೆ. ಇನ್ನು ಮೂವತ್ತು ಕೋಟಿ, ನಲವತ್ತು ಕೋಟಿಗಳ ಲಾಭದ ಸುದ್ದಿಯೆಲ್ಲ ಸುಳ್ಳು ಅಂತಲೂ ಅಂದಿದ್ದರು!

ಹಾಗಾದರೆ ಕೋಟಿ ಕೋಟಿ ಲಾಭದ ಬಗ್ಗೆ ಹೇಳಿಕೊಂಡು ಭರ್ಜರಿ ಚಿತ್ರದ ನಾಯಕ ಧೃವ ಸರ್ಜಾ ಬಿಲ್ಡಪ್ ತೆಗೆದುಕೊಳ್ಳುತ್ತಿದ್ದಾರಾ? ನಿರ್ದೇಶಕ ಚೇತನ್ ಕುಮಾರ್ ಅಂಥಾ ಕೆಲಸ ಮಾಡಿದ್ದಾರಾ? ಹಾಗೆ ನೋಡಿದರೆ ಭರ್ಜರಿ ಚಿತ್ರ ಶುರುವಾಗಿ ಮೂರು ವರ್ಷ ಕಳೆದರೂ ಅದು ಬಿಡುಗಡೆಯೇ ಆಗಿರಲಿಲ್ಲ. ಅದಕ್ಕೆ ಕಾರಣ ಕನಕಪುರ ಶ್ರೀನಿವಾಸ್ ಕೊಟ್ಟ ಕಾಟ ಎಂಬ ವಿಚಾರ ಈವತ್ತಿಗೂ ಗಾಂಧಿನಗರದಲ್ಲಿ ಚಾಲ್ತಿಯಲ್ಲಿದೆ. ಅದು ಹೇಳಿ ಕೇಳಿ ಧೃವಾ ಸರ್ಜಾಗೆ ಸಾಲು ಸಾಲಾಗಿ ಅವಕಾಶಗಳಿದ್ದ ಕಾಲ. ಅಂಥಾ ಹೊತ್ತಿನಲ್ಲಿ ನಾನಾ  ಚೇಷ್ಟೆ ಮಾಡಿದ್ದ ಶ್ರೀನಿವಾಸ್ ಅಂಥಾ ಅವಕಾಶವನ್ನೆಲ್ಲ ನುಂಗಿ ಹಾಕಿದ್ದರು. ನಿರ್ದೇಶಕ ಚೇತನ್ ಕುಮಾರ್ ಅವರದ್ದೂ ಇಂಥಾದ್ದೇ ಸ್ಥಿತಿ. ಧೃವ ಮತ್ತು ಚೇತನ್ ಆಗಿದ್ದಕ್ಕೆ ಮೂರು ವರ್ಷಗಳ ಕಾಲ ಯಾವ ಚಿತ್ರಗಳನ್ನೂ ಒಪ್ಪಿಕೊಳ್ಳದೆ ಕನಸಪುರ ಶ್ರೀನಿವಾಸ್ ಅವರ ಕಾಟವನ್ನೆಲ್ಲ ಅವುಡುಗಚ್ಚಿ ಸಹಿಸಿಕೊಂಡಿದ್ದರು.

ಇನ್ನುಳಿದಂತೆ ಕನಕಪುರ ಶ್ರೀನಿವಾಸ್ ವಿಚಾರದಲ್ಲಿ ಇಂಡಸ್ಟ್ರಿಯಲ್ಲಿ ಒಳ್ಳೆ ಮಾತುಗಳಿಗಿಂತ ಕಂಪ್ಲೇಂಟುಗಳ ಕಾರುಬಾರು ಬಲು ಜೋರಾಗಿದೆ. ಒಪ್ಪಿಕೊಂಡ ಕಾಸು ಕೊಡದೇ ಸತಾಯಿಸುತ್ತಾರೆಂಬುದು ಇವರ ಮೇಲಿರೋ ಘನ ಗಂಭೀರ ಆರೋಪ. ಬಹುಶಃ ಹೀಗೆ ಕಾಸು ಕೊಡದೇ ಸತಾಯಿಸೋ ಸಮಸ್ಯೆ ಶ್ರೀನಿವಾಸ್ ಅವರಿಗೆ ಸೋಂಕಿನಂತೆ ತಗುಲಿಕೊಂಡಿದೆಯೇನೋ. ಯಾಕೆಂದರೆ, ಈ ಹಿಂದೆ ಇವರು ಸಿಟಾಡೆಲ್ ಹೊಟೇಲಿನಲ್ಲಿ ಪ್ರೆಸ್‍ ಮೀಟು ಮಾಡಿ ಅದರ ಕಾಸನ್ನೂ ಕೊಡದೆ ಹೆಣ್ಣುಮಗಳೊಬ್ಬಳು ಕೆಲಸ ಕಳೆದುಕೊಳ್ಳುವಂತೆ ಮಾಡಿದ್ದ ವಿಚಾರವನ್ನು ಸ್ವತಃ ಸಿನಿಬಜ್ ಬಯಲಿಗೆಳೆದಿತ್ತು.

ಕನಕಪುರ ಶ್ರೀನಿವಾಸ್ ಅವರ ಕೀಟಲೆ ಎಂಥಾದ್ದೆಂಬುದಕ್ಕೆ ಯೋಗರಾಜ್ ಭಟ್ಟರಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲವೇನೋ. ಭಟ್ಟರು ವ್ಯವಹಾರದಲ್ಲಿ ನೀಟು. ಈ ವಿಚಾರವಾಗಿ ಯಾವ ಗದ್ದಲವನ್ನೂ ಮಾಡಿಕೊಂಡವರಲ್ಲ. ಇಂಥಾ  ಯೋಗರಾಜಭಟ್ಟರೇ ದನ ಕಾಯೋನು ಚಿತ್ರಕ್ಕೆ ಸಂಭಾವನೆ ಕೊಡಲಿಲ್ಲವೆಂದು ಕನಕಪುರ ಶ್ರೀನಿವಾಸ್ ವಿರುದ್ಧ ಕಾನೂನು ಸಮರ ಸಾರುತ್ತಾರೆಂದರೆ ಇವರ ವ್ಯವಹಾರ ಶೈಲಿಯ ಬಗ್ಗೆ ಬೇರೇನೂ ಹೇಳೋ ಅಗತ್ಯವಿಲ್ಲ!

ಹಾಗಾದರೆ ಕನಕಪುರ ಶ್ರೀನಿವಾಸ್ ಭರ್ಜರಿ ಚಿತ್ರದಿಂದ ತಮಗೆ ಲಾಭವಾಗುತ್ತಿಲ್ಲ ಎಂಬರ್ಥದಲ್ಲಿ ಮಾತಾಡುತ್ತಿದ್ದಾರೆಂಬುದು ನಿಜಕ್ಕೂ ಅಚ್ಚರಿಯ ವಿಚಾರ. ಇದರ ಮೂಲ ಕೆದಕುತ್ತಾ ಹೋದರೆ ಶ್ರೀನಿವಾಸ್ ಅವರು ನಾನಾ ಕಾರಣಗಳಿಂದ ಬೆಳೆಸಿಕೊಂಡಿರೋ ಸಾಲದ ಹುತ್ತ ಕಣ್ಮುಂದೆ ನಿಲ್ಲುತ್ತದೆ. ಭರ್ಜರಿಯಂಥಾ ಚಿತ್ರ ಕೋಟಿ ಕೋಟಿ ಬಾಚಿಕೊಂಡರೂ ಕೊಡಬೇಕಿರೋ ಕಾಸು ಕೊಡಲು ಶ್ರೀನಿವಾಸರಿಗೇನು ಧಾಡಿ ಅಂತ ಸಾಲಗಾರರು ಆಗಾಗ ರೊಚ್ಚಿಗೇಳುತ್ತಿರುತ್ತಾರೆ. ಅಂಥವರಿಂದ ತಪ್ಪಿಸಿಕೊಳ್ಳಲು ಶ್ರೀನಿವಾಸ್ ಇದೀಗ ಭರ್ಜರಿ ನಷ್ಟದ ಆಟ ಕಟ್ಟುತ್ತಿದ್ದಾರೆಂದು ಅವರನ್ನು ಹತ್ತಿರದಿಂದ ಬಲ್ಲವರೇ ಹೇಳುತ್ತಿದ್ದಾರೆ. ಭರ್ಜರಿ ಚಿತ್ರದ ವಿಚಾರಕ್ಕೆ ಬರೋದಾದರೆ ಶ್ರೀನಿವಾಸ್ ಧೃವ ತನ್ನ ಮಗನಿದ್ದಂತೆ ಅಂತೆಲ್ಲ ಪೋಸು ಕೊಡುತ್ತಿದ್ದರು. ಆದರೆ ಬೇಕೆಂದೇ ಆ ಚಿತ್ರವನ್ನು ಮೂರು ವರ್ಷಗಳ ಕಾಲ ಉಸಿರುಗಟ್ಟಿಸಿದ್ದರು.

ಸದ್ಯ ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ರವಿಚಂದ್ರನ್ ಹಾಗೂ ಉಪೇಂದ್ರ ಕಾಂಬಿನೇಷನ್ನಿನ ರವಿ ಚಂದ್ರ ಅನ್ನೋ ಸಿನಿಮಾ ಕೂಡಾ ಇದೇ ಶ್ರೀನಿವಾಸ್ ನಿರ್ಮಾಣದಲ್ಲಿ ನಿರ್ಮಾಣಗೊಳ್ಳುತ್ತಿದೆ. ಈ ಸಿನಿಮಾ ಮುಗಿದು ಬಿಡುಗಡೆಯಾಗೋ ಹೊತ್ತಿಗೆ ಇನ್ನೂ ಅದೆಷ್ಟು ಜನಕ್ಕೆ ಸೀನನ ಗುನ್ನ ಬೀಳುತ್ತದೋ ಗೊತ್ತಿಲ್ಲ!

ಅದೆಲ್ಲ ಏನೇ ಇರಲಿ, ಕಷ್ಟ ಪಟ್ಟು ದುಡಿದ ಸಿನಿಮಾ ಕಾರ್ಮಿಕರು, ತಂತ್ರಜ್ಞರು ಮತ್ತು ಕಲಾವಿದರಿಗೆ ಕೈ ಎತ್ತುವ ಮತ್ತು ಹಣ ಕೇಳಿದವರಿಗೆ ವಾಚಾಮಗೋಚರವಾಗಿ ಮಾತಾಡುವ, ಧಮಕಿ ಹಾಕುವ ಕನಕಪುರ ಶ್ರೀನಿವಾಸ್ ನಡೆ ನಿಜಕ್ಕೂ ಖಂಡನೀಯ…

ಕೆ.ಪಿ.ಶ್ರೀಕಾಂತ್ ಹೊರಬಂದಮೇಲೆ ಹೆಗಲೇರಿದ ಶನಿ!

ಕನಕಪುರ ಶ್ರೀನಿವಾಸ್ ಅನ್ನೋ ವ್ಯಕ್ತಿ ಚಿತ್ರರಂಗದಲ್ಲೇನಾದರೂ ಒಂದಿಷ್ಟು ಹೆಸರು ಅಂತಾ ಮಾಡಿದ್ದರೆ ಅದಕ್ಕೆ ಕಾರಣ ಕೆ.ಪಿ. ಶ್ರೀಕಾಂತ್ ಎಂಬ ಶ್ರಮಜೀವಿ. ಸಾಕಷ್ಟು ವರ್ಷ ಶ್ರೀನಿವಾಸ್ ನಿರ್ಮಾಣದ ಸಿನಿಮಾಗಳ ಕೆಲಸಗಳನ್ನೆಲ್ಲಾ ಜವಾಬ್ದಾರಿಯಿಂದ ನಿಭಾಯಿಸುತ್ತಿದ್ದವರು ಶ್ರೀಕಾಂತ್.

ಇಂಥಾ ವ್ಯಕ್ತಿಗೆ ಶ್ರೀನಿವಾಸ್ ಕಡೆಯಿಂದ ಅದೇನು ಅನ್ಯಾಯವಾಯಿತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಒಂದು ದಿನ ಹೊರಬಂದು `ಟಗರು’ ಸಿನಿಮಾವನ್ನು ತಮ್ಮದೇ ಬ್ಯಾನರಿನಲ್ಲಿ ನಿರ್ಮಿಸಿದರು. ಒಳ್ಳೇತನ ಮತ್ತು ಸಿನಿಮಾರಂಗ ಶ್ರೀಕಾಂತ್ ಅವರ ಕೈ ಹಿಡಿದವು. ಟಗರು ದೊಡ್ಡ ಮಟ್ಟದಲ್ಲಿ ಗೆದ್ದು ದಾಖಲೆ ನಿರ್ಮಿಸಿತು. ಆದರೆ ಅದ್ಯಾವ ಘಳಿಗೆಯಲ್ಲಿ ಶ್ರೀಕಾಂತ್ ಈತನ ಸಾವಾಸ ಬಿಟ್ಟುಬಂದರೋ ಶ್ರೀನಿವಾಸ್ ನಸೀಬೇ ಎಕ್ಕುಟ್ಟಿಹೋಗಿದೆ. ಕೈಯಿಟ್ಟಲ್ಲೆಲ್ಲಾ ಯಡವಟ್ಟುಗಳು ಸಂಭವಿಸಿ ಸಾಡೇಸಾತ್ ಹೆಗಲೇರಿದಂತಾಗಿದೆ.

ಇನ್ನಷ್ಟು ಓದಿರಿ

Scroll to Top