`ನಮ್ ಋಷಿ’ ಹೆಸರಿನ ವಿಕೃತ ನಿರ್ದೇಶಕನೊಬ್ಬ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾನೆ. ಹುಚ್ಚ ವೆಂಕ್ಟನ ಅಣ್ಣನಂತಾಡುವ ಈತ ಮಾಡಿದ ಸಿನಿಮಾಗಳಿಗಿಂತಾ ಮಾಡಿಕೊಂಡ ಯಡವಟ್ಟುಗಳೇ ಜಾಸ್ತಿ. ನಮ್ ಋಷಿ ಎನ್ನುವ ಹೆಸರನ್ನಿಟ್ಟುಕೊಂಡು ಗಾಂಧಿನಗರದವರನ್ನು, ಪಾಪದ ಹೆಣ್ಣುಮಕ್ಕಳನ್ನು ಸುಲಿಯಲು ನಿಂತ ಈತನ ನಿಜ ನಾಮಧೇಯ ನಾಗರಾಜ. ಲಡ್ಡು ನಾಗ ಅಂತಲೂ ಜನ ಈತನನ್ನು ಕರೆಯುತ್ತಾರೆ. ಅಜಯ್ ರಾವ್ ನಟನೆಯ ಸೂರ್ಯ ದಿ. ಗ್ರೇಟ್ ನಿರ್ದೇಶಿಸುವ ಮೂಲಕ ಗಾಂಧೀನಗರಕ್ಕೆ ಒಕ್ಕರಿಸಿಕೊಂಡ ಈತ, ಅದಾದಮೇಲೆ `ಮರುಭೂಮಿ’ ಹೆಸರಿನ ಸಿನಿಮಾವೊಂದನ್ನು ಆರಂಭಿಸಿದ್ದ. ಆ ಸಿನಿಮಾ ರಿಲೀಸೂ ಆಗಲಿಲ್ಲ.

ಆ ಚಿತ್ರಕ್ಕೆ ಈತನೇ ಬರೆದಿದ್ದನೆನ್ನಲಾದ `ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ’ ಹಾಡು ಮಾತ್ರ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತು. ಸಿ. ಅಶ್ವಥ್ ಆ ಹಾಡನ್ನು ಹಾಡಿದ್ದ ಕಾರಣಕ್ಕೆ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ನಿಜ. ಅದಾದ ಮೇಲೆ ಗಾಯಕ ನವೀನ್ ಸಜ್ಜು ಕೂಡಾ ಇದೇ ಹಾಡನ್ನು ಚೆಂದಗೆ ಹಾಡಿ ಅದನ್ನು ಮತ್ತಷ್ಟು ಖ್ಯಾತಿಗೊಳಿಸಿದ. ಇದೇ ಋಷಿ ಈ ಹಾಡನ್ನೇ ಹೋಲುವಂತಾ ಸಾಕಷ್ಟು ಹಾಡುಗಳನ್ನು ಆಗಾಗ ಗೀಚುತ್ತಿರುತ್ತಾನಾದರೂ `ಒಳಿತು ಮಾಡು’ ಸಾಲುಗಳಷ್ಟು ಅರ್ಥವಾಗಲಿ, ಸಾರವಾಗಲಿ ಯಾವುದರಲ್ಲೂ ಮೂಡಿ ಬಂದಿಲ್ಲ. ಜೊತೆಗೆ ಅದೇ ಪದಗಳನ್ನೇ ಹಿಂದೂ ಮುಂದೂ ಮಾಡಿದಂತಷ್ಟೇ ಕಾಣುತ್ತಿವೆ. ಇದನ್ನೆಲ್ಲಾ ನೋಡಿದರೆ ನಿಜಕ್ಕೂ ಆ ಹಾಡನ್ನು ಈ ಋಷಿಯೇ ಬರೆದಿದ್ದನಾ ಅಥವಾ ಮತ್ಯಾರ ಬಳಿ ಬರೆಸಿ ತನ್ನ ಹೆಸರನ್ನು ಹಾಕಿಕೊಂಡಿದ್ದನಾ ಅನ್ನೋ ಅನುಮಾನ ಸಹಜವಾಗೇ ಮೂಡುತ್ತದೆ. ಒಂದು ಮೂಲದ ಪ್ರಕಾರ ಆ ಹಾಡಿನ ಸಂಗೀತ ಸಂಯೋಜನೆ ಮಾಡಿದ್ದ ಮಧುರಾ ಅವರೇ ಈ ಸಾಲುಗಳನ್ನು ಬರೆದಿದ್ದಂತೆ!

ಯಾವಾಗ ತನ್ನ `ಮರುಭೂಮಿ’ ತೆರೆಮೇಲೆ ಮೂಡಲೇ ಇಲ್ಲವೋ ಈ ಋಷಿ `ಕೊಟ್ಲಲ್ಲಪ್ಪೋ ಕೈ’ ಎನ್ನುವ ಮತ್ತೊಂದು ಸಿನಿಮಾವೊಂದನ್ನು ಆರಂಭಿಸಿದ. ಈ ಸಿನಿಮಾದಲ್ಲಿ ನಟಿಸಿದ್ದ ನಯನಾ ಎಂಬ ಹೆಣ್ಣು ಮಗಳಿಂದ ಹತ್ತು ಲಕ್ಷ ರುಪಾಯಿ ಪೀಕಿಕೊಂಡು ಜೊತೆಗೆ ಕೊಡಬಾರದ ಕಾಟ ಕೊಟ್ಟುಬಿಟ್ಟಿದ್ದ. ಕಡೆಗೊಂದು ದಿನ ರೊಚ್ಚಿಗೆದ್ದ ಆಕೆ ತುಂಬಿದ ಪತ್ರಿಕಾಗೋಷ್ಟಿಯಲ್ಲಿ ಆರಂಭಿಸಿ ಗಾಂಧಿನಗರದ ಬೀದಿ ತನಕ ಅಟ್ಟಾಡಿಸಿಕೊಂಡು ಮೆಟ್ಟುಮೆಟ್ಟಲ್ಲಿ ಹೊಡೆದಿದ್ದಳು. ಏಟು ತಿನ್ನಲಾರದ ರಿಷಿ ಆಟೋ ಏರಿ ಎಸ್ಕೇಪ್ ಆಗಿದ್ದ.

ಆಮೇಲೆ ಮತ್ತೆ ಲಡ್ಡು ಋಷಿ ಕಾಣಿಸಿಕೊಂಡಿದ್ದು ನಟಿ ಮೈತ್ರಿಯಾ ಗೌಡ ಕೇಸಿನಲ್ಲಿ. ಸದಾನಂದಗೌಡರ ಮಗನ ವಿಚಾರದಲ್ಲಿ ಮೈತ್ರಿಯಾ ಹೆಸರು ರಾರಾಜಿಸಿತ್ತಲ್ಲಾ? ಆಗ ಈ ಲಡ್ಡು ನಾಗ ಎಲ್ಲಿ ಕುಂತಿದ್ದನೋ? ದಡಕ್ಕನೆ ಎದ್ದು ಬಂದವನೇ `ನಾನು ಮೈತ್ರಿಯಾ ಜೊತೆ ಮದುವೆಯಾಗಿದ್ದೆ. ಆಕೆ ನನಗೆ ಮೋಸ ಮಾಡಿ ಹೋದಳು’ ಅಂತಾ ಟೀವಿ ಚಾನೆಲ್ಲುಗಳಲ್ಲಿ ಬಾಯಿಗೆ ಬಂದಂತೆ ಮಾತಾಡಿದ್ದ.

ಇದಾದ ಮೇಲೆ `ಒನ್ ವೇ’ ಅನ್ನೋ ಸಿನಿಮಾವನ್ನು ಶುರು ಮಾಡಿದ. ರಜನೀಕಾಂತ್ ಅವರ ಆತ್ಮಬಂಧು ರಾಜ್ ಬಹದ್ದೂರ್’ರನ್ನು ಕರೆತಂದು ನಟಿಸಲು ನಿಲ್ಲಿಸಿದ. ಒಂದು ಕಾಲದಲ್ಲಿ ರಜನಿಕಾಂತ್‍ಗೆ ಕಾಸು ಕೊಟ್ಟು ಮದ್ರಾಸಿಗೆ ಕಳಿಸಿದ್ದವರು ರಾಜ್ ಬಹದ್ದೂರ್. ರಜನಿ ಅದೆಷ್ಟೇ ಎತ್ತರಕ್ಕೇರಿದರೂ ಇವತ್ತಿಗೂ ರಾಜ್ ಬಹದ್ದೂರ್ ಜೊತೆಗಿನ ಸ್ನೇಹವನ್ನು ಹಾಗೇ ಕಾಪಾಡಿಕೊಂಡಿದ್ದಾರೆ. ಬೇಜಾರಾದಾಗ ಸೀದಾ ಬೆಂಗಳೂರಿನ ಗುಟ್ಟಳ್ಳಿಯಲ್ಲಿರುವ ರಾಜ್ ಬಹದ್ದೂರ್ ಮನೆಗೆ ಬಂದು, ಗೆಳೆಯನನ್ನು ಕರೆದುಕೊಂಡು ಸುತ್ತಮುತ್ತಲಿನ ಏರಿಯಾಗಳಲ್ಲಿ ಮಾರು ವೇಷದಲ್ಲಿ ತಿರುಗಾಡಿ ಹೋಗುತ್ತಾರೆ. ಸ್ನೇಹಿತನೊಬ್ಬ ಸ್ಟಾರ್ ಆದರೂ ಅದರ ಖ್ಯಾತಿಯನ್ನು ದುರುಪಯೋಗ ಮಾಡಿಕೊಳ್ಳದ ರಾಜ್ ಬಹದ್ದೂರ್ ಸರಳ ಜೀವನ ನಡೆಸುತ್ತಿರುವ ವ್ಯಕ್ತಿ. ಇಂಥವರಿಗೂ ಲಡ್ಡು ನಾಗ ಅದೇನು ಮರುಳು ಮಾಡಿದನೋ ಏನೋ? ಇಷ್ಟೂ ವರ್ಷ ತಮ್ಮ ಪಾಡಿಗಿದ್ದ ಈ ಯಪ್ಪ ದಿಢೀರನೆ ಬಂದು ಕ್ಯಾಮೆರಾ ಮುಂದೆ ನಟಿಸಲು ಶುರು ಮಾಡಿಬಿಟ್ಟಿತ್ತು. ಅದನ್ನೇ ಬಂಡವಾಳ ಮಾಡಿಕೊಡ ಲಡ್ಡು ನಾಗಿ ಸಿಕ್ಕ ಸಿಕ್ಕಲ್ಲಿ ಹಣ ಎತ್ತಿದ. ಉಮೇಶ್ ಎನ್ನುವವವರಿಂದಲೂ ಗೆಬರಿದ. ಚೆಕ್ ಬೌನ್ಸ್ ಕೇಸು ಜಡಿದು ಒಳಕ್ಕೆ ತಳ್ಳಿಸಿದರು.

ಹೀಗೆ ಜೈಲು ಸೇರಿದವನು ಇಪ್ಪತ್ತು ಸಾವಿರ ರುಪಾಯಿ ಜಾಮೀನು ಕೊಟ್ಟು ಹೊರಬರಲೂ ಆಗದಂತೆ ಪರಪ್ಪನ ಅಗ್ರಹಾರದಲ್ಲಿ ಕೊಳೆಯುತ್ತಿದ್ದ. ಈತ `ಒಳಿತು ಮಾಡು ಮನುಸ’ ಹಾಡು ಬರೆದವನಂತೆ ಅಂತಾ ಗೊತ್ತಾಗಿದ್ದೇ ಯಾರೋ ಪುಣ್ಯಾತ್ಮನೊಬ್ಬ ಜಾಮೀನು ಕೊಟ್ಟು ಹೊರಗೆ ಕರೆತಂದಿದ್ದ. ಒಂಭತ್ತು ಲಕ್ಷ ಅಮೌಂಟು ಕೊಟ್ಟು ಲಹರಿ ಆಡಿಯೋದವರು ಇವನಿಂದ ಹಾಡಿನ ಹಕ್ಕು ಪಡೆದರು ಅನ್ನೋ ಮಾಹಿತಿ ಕೂಡಾ ಇದೆ.
ಇವೆಲ್ಲಾ ಏನೇ ಆಗಲಿ, ಮೊನ್ನೆ ಶುಕ್ರವಾರ ಋಷಿ ನಿರ್ದೇಶನದ `ಒನ್ ವೇ’ ಚಿತ್ರ ತೆರೆಗೆ ಬಂದಿದೆ. ಈ ಚಿತ್ರದ ಬಿಡುಗಡೆ ಜಾಹೀರಾತಿನಲ್ಲಿ “ಒಳಿತು ಮಾಡು ಮನುಸ ಗೀತರಚನೆಕಾರ ನಮ್ ಋಷಿ ನಿರ್ದೇಶನದ ಚಿತ್ರ. ಇಪ್ಪತ್ತು ಕೋಟಿ ಬಂಡವಾಳ ಹಾಕಿ ತೆಗೆದ ಚಿತ್ರವಲ್ಲ… ಇಪ್ಪತ್ತು ಸೋತ ಜೀವಗಳ ಜೀವ ಅಡವಿಟ್ಟು ತೆಗೆದ ಚಿತ್ರ…’’ ಅಂತಾ ಬರೆದುಕೊಂಡಿದ್ದ. “ನೀನು ಸಿನಿಮಾ ತೆಗೆಯದೇ ಇದ್ದರೆ ಜೀವ ಬಿಡ್ತೀವಿ “ಅಂತಾ ಯಾರೂ ಲಡ್ಡು ನಾಗನ ಮನೆ ಮುಂದೆ ಧರಣಿ ಕೂತಿರಲಿಲ್ಲ. ಆದರೆ ಇವನ ತಿರುಪೆ ಶೋಕಿ, ಇನ್ಯಾರದ್ದೋ ಮನೆ ಹಾಳು ಮಾಡೋ ಉದ್ದೇಶದಿಂದ ಸಿನಿಮಾ ತೆಗೆದು ಅದನ್ನು ಮಹಾನ್ ಸಾಧನೆ ಅನ್ನುವಂತೆ ಪ್ರಚಾರ ಪಡೆದ. ಈ ಸಿನಿಮಾವನ್ನು ನೋಡಿ, ವಿಮರ್ಶೆ ಬರೆದ ಕನ್ನಡದ ಖ್ಯಾತ ದಿನ ಪತ್ರಿಕೆಯ ವರದಿಗಾರರೊಬ್ಬರಿಗೆ ಕರೆ ಮಾಡಿ “ಯಾವನೋ ನೀನು? ನನ್ನ ಸಿನಿಮಾ ನೋಡು ಅಂತಾ ನಾನು ಹೇಳಿದ್ನಾ ನಿನಗೆ? ಮತ್ತೀಕೆರೆಯಿಂದ ರೌಡಿಗಳನ್ನು ಕರೆಸಿ ನಿನ್ನನ್ನು ಹಂಗ್ ಮಾಡಿಸ್ತೀನಿ… ಹಿಂಗ್ ಮಾಡಿಸ್ತೀನಿ” ಅಂತಾ ರೌಡಿಗಿರಿ ಪ್ರದರ್ಶಿಸಿದ್ದಾನೆ.

ಲಡ್ಡು ನಾಗ ಅದೆಂಥಾ ಸೈಕೋ, ಸ್ಯಾಡಿಸ್ಟ್ ಎಂದರೆ “ಪತ್ರಕರ್ತರೊಬ್ಬರಿಗೆ ಹೀಗೆ ಬೈದರೆ ಅದು ಸುದ್ದಿಯಾಗುತ್ತದೆ. ಟೀವಿಯವರು ಕರೆದು ಕೂರಿಸಿಕೊಂಡು ಪ್ರಶ್ನಿಸುತ್ತಾರೆ. ಆಗಲಾದರೂ ಪ್ರಚಾರ ಸಿಕ್ಕಿ ತನ್ನ ಸಿನಿಮಾವನ್ನು ಜನ ನೋಡಬರುತ್ತಾರೆ…” ಅನ್ನೋ ಪ್ಲ್ಯಾನು ಹಾಕುವಂಥವನು. ನಿರ್ದೇಶಕರ ಸಂಘದವರು, ವಾಣಿಜ್ಯ ಮಂಡಳಿಯಲ್ಲಿ ಹೊಸದಾಗಿ ಚುನಾಯಿತರಾಗಿರುವ ಪ್ರತಿನಿಧಿಗಳು ನಮ್ ಋಷಿ ಆಲಿಯಾಸ್ ಲಡ್ಡು ನಾಗನನ್ನು ಚಿತ್ರರಂಗದಿಂದ ಬಹಿಷ್ಕರಿಸಬೇಕು. ಆ ಮೂಲಕ ಈತನನ್ನು ನಂಬಿ ಹಣ ಹಾಕಿ ಯಾಮಾರುವವರನ್ನು ರಕ್ಷಿಸುವಂತಾಗಬೇಕು. ಘನತೆ ಹೊಂದಿರುವ ಪತ್ರಕರ್ತರು, ಮಾಧ್ಯಮದವರಿಂದ ಈ ಕ್ರಿಮಿ ದೂರವಿರುವಂತೆ ಮಾಡಬೇಕು…











































