ತಾಯಿ ಮಗಳ ಸುತ್ತ ಸುತ್ತುವ ಥ್ರಿಲ್ಲರ್ ‘ಮಹಿರ’

Picture of Cinibuzz

Cinibuzz

Bureau Report

ದುಡಿಮೆಗಾಗಿ ಹೊರ ದೇಶಗಳಿಗೆ ಹೋಗಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗೆ ಇತ್ತೀಚೆಗೆ ತಾಯ್ನಾಡಿನ ಪ್ರೇಮ, ಮಾತೃಭಾಷೆಯ ಮೇಲಿನ ಮಮಕಾರ ಹೆಚ್ಚಾದಂತೆ ಕಾಣುತ್ತಿದೆ. ಎನ್ನಾರೈ ಕನ್ನಡಿಗರು ಬಂದು ಸಾಲು ಸಾಲು ಸಿನಿಮಾ ನಿರ್ಮಾಣ, ನಿರ್ದೇಶನಗಳಲ್ಲಿ ತೊಡಗಿಕೊಂಡಿರುವುದು ಕಂಡುಬರುತ್ತಲೇ ಇದೆ. ಈಗ ಈ ಸಾಲಿಗೆ ಮಹಿರಾ ಎಂಬ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ. ಮಹೇಶ್‌ಗೌಡ ಲಂಡನ್‌ನಲ್ಲಿ ಇಂಜಿನಿಯರ್ ಆಗಿ ಮೂರು ವರ್ಷಗಳ ಕಾಲ ಸೇವೆಸಲ್ಲಿಸಿ ಚಿತ್ರ ಮಾಡುವ ಉದ್ದೇಶದಿಂದ ಬಿಡುವಿನ ಸಮಯದಲ್ಲಿ ಗೆಳಯರೊಂದಿಗೆ ಚರ್ಚಿಸುತ್ತಾ ಕತೆ ಬರೆದು ಮುಗಿಸಿದ್ದಾರೆ. ಮುಂದೆ ಕೆಲಸಕ್ಕೆ ರಾಜಿನಾಮೆ ನೀಡಿ, 2013ರಲ್ಲಿ ತಾಯ್ನಾಡಿಗೆ ಬಂದು ಸುನಿಲ್‌ ಕುಮಾರ್ ದೇಸಾಯಿ ಅವರ ಬಳಿ ನಿರ್ದೇಶನ ಕಲಿತು ನಂತರ ಆರಂಭಿಸಿದ ಚಿತ್ರವೇ ಮಹಿರಾ.  ಜುಲೈ 26 ರಂದು ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಮಹಿರಾ ಒಂದು ಸಂಸ್ಕ್ರತ ಪದವಾಗಿದ್ದು, ಕೇವಲ ಮೂರು ದಿನದಲ್ಲಿ ನಡೆಯುವ ಕತೆ ಈ ಚಿತ್ರದಲ್ಲಿದೆ.

ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಮಹೇಶ್‌ ಗೌಡ ಮುಖ್ಯವಾಗಿ ಅಮ್ಮ-ಮಗಳ ನಡುವಿನ ಕಥೆ ಈ ಚಿತ್ರದಲ್ಲಿದೆ, ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಈ ಹಂತದಲ್ಲಿ ನಾವು ಮಾಡೋ ಪ್ರಚಾರ ಬಹುಮುಖ್ಯವಾಗಿರುತ್ತದೆ.  ಕಥೆ ಪ್ರಾರಂಭದಲ್ಲಿ ಸೈಲೆಂಟ್ ಆಗಿದ್ದು, ವಿರಾಮದ ನಂತರ  ಆಕ್ಷನ್, ಥ್ರಿಲ್ಲರ್‌ಗೆ ಟರ್ನ್ ಆಗುತ್ತದೆ, ಕ್ಲೈಮಾಕ್ಸ್ ಬೇರೆಯದೇ ರೂಪ ಪಡೆದುಕೊಳ್ಳುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ರಾಜ್ ಬಿ.ಶೆಟ್ಟಿ ಅವರ ಪಾತ್ರದಿಂದ ಚಿತ್ರ ಹೊಸ ತಿರುವು ಪಡೆಯುತ್ತದೆ. ಮೊದಲ ಐದು ನಿಮಿಷಗಳು ಪಾತ್ರಗಳ ಪರಿಚಯವಾಗಲಿದ್ದು, ನಂತರ ಚಿತ್ರದ ಕತೆ ತೆರೆದುಕೊಳ್ಳುತ್ತದೆ. ಒಂದು ಹಂತದಲ್ಲ್ಲಿ ತಾಯಿಯ ವಿಶೇಷ ಗುಣಗಳು, ಆಕೆಗೆ ಗೊತ್ತಿಲ್ಲದ ವಿಷಯಗಳು ಮಗಳಿಗೆ ತಿಳಿಯುತ್ತದೆ. ಯಾರಿಂದ, ಯಾರು, ಯಾತಕ್ಕೋಸ್ಕರ ಮಾಡ್ತಾರೆ ಹೀಗೆ ಅನೇಕ ಅನಿರೀಕ್ಷತ ತಿರುವುಗಳು ಈ ಚಿತ್ರದಲ್ಲಿವೆ, ಸ್ಯಾಂಡಲ್‌ವುಡ್ ಎಂಟರ್‌ಟೈನಮೆಂಟ್ ಸಂಸ್ಥೆ ನಮ್ಮ ಚಿತ್ರವನ್ನು ವಿದೇಶಗಳಲ್ಲಿ ರಿಲೀಸ್ ಮಾಡುತ್ತಿದೆ  ಎಂದು ಹೇಳಿದರು.

ಮಂಗಳೂರಿನ ರಂಗಭೂಮಿ ನಟಿ ವರ್ಜೀನಿಯ ರಾಡ್ರಗೇಸ್ ಈ ಚಿತ್ರದಲ್ಲಿ  ಒಬ್ಬ ಅಂಡರ್‌ ಕವರ್ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಒಬ್ಬ ತಾಯಿಯಾಗಿ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ  ನಟಿಸಿದ್ದಾರೆ. ಚೈತ್ರ ಆಚಾರ್ ಮಗಳ ಪಾತ್ರದಲ್ಲಿದ್ದಾರೆ.  ಇಂಡಿಯನ್ ಇಂಟಿಗ್ರೇಟಡ್ ಇಲಾಖೆಯ ಮುಖ್ಯಸ್ಥನಾಗಿ ಬಾಲಾಜಿ ಮನೋಹರ್,  ತನಿಖಾದಿಕಾರಿಯಾಗಿ ರಾಜ್.ಬಿ.ಶೆಟ್ಟಿ ಅವರು  ನಟಿಸಿದ್ದಾರೆ.  ಚಿತ್ರದಲ್ಲಿ  ಆಕ್ಷನ್ ದೃಶ್ಯಗಳು ಹೆಚ್ಚಿಗೆ ಬರುವುದರಿಂದ ವರ್ಜೀನಿಯಾ ಅವರು ಚೇತನ್ ಡಿಸೋಜ ಅವರ ಬಳಿ  ತರಬೇತಿ ಪಡೆದುಕೊಂಡು ಎಲ್ಲಾ ಆಕ್ಷನ್ ಸೀನ್‌ಗಳಲ್ಲಿ  ಡ್ಯೂಪ್  ಇಲ್ಲದೆ  ಸಾಹಸ ಮಾಡಿದ್ದಾರೆ.  ಬೆಂಗಳೂರು, ಪುತ್ತೂರು, ಹೊನ್ನಾವರ ಹಾಗೂ ಮಂಗಳೂರು ಸೇರಿ ಅನೇಕ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಹಾಡುಗಳಿಗೆ ನಿಲಿಮರಾವ್-ರಾಕೇಶ್.ಯು.ಪಿ ರಾಗ ಸಂಯೋಜಿಸಿದ್ದರೆ, ಮಿಧುನ್ ಮುಕುಂದನ್ ಚಿತ್ರಕ್ಕೆ  ಹಿನ್ನಲೆ ಸಂಗೀತ ಒದಗಿಸಿದ್ದಾರೆ. ಲಂಡನ್ ಮೂಲದ ವಿವೇಕ್ ಕೊಡಪ್ಪ ಈ  ನಿರ್ಮಾಣ ಮಾಡಿರುವುದು ಚೂಚ್ಚಲ ಅನುಭವ.

ಇನ್ನಷ್ಟು ಓದಿರಿ

Scroll to Top