ತಂಟೆಗೆ ಬಂದವರ ವಿರುದ್ಧ ಒಂಟಿ ಕಾರ್ಯಾಚರಣೆ!

Picture of Cinibuzz

Cinibuzz

Bureau Report

ಒರಟ ಐ ಲವ್ ಯೂ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀ ಅನೇಕ ವರ್ಷಗಳ ಗ್ಯಾಪ್ ನಂತರ ನಿರ್ದೇಶಿಸಿರುವ ಸಿನಿಮಾ ಒಂಟಿ. ಕಿಚ್ಚ ಸುದೀಪ್ ಅವರ ಸಂಬಂಧಿ ಮತ್ತು ಈ ಹಿಂದೆ ಶಾಂತಿನಿವಾಸ ಚಿತ್ರದಲ್ಲಿ ಸಣ್ಣ ಪಾತ್ರ ಹಾಗೂ ಈ ಸಂಜೆ ಎನ್ನುವ ಸಿನಿಮಾದಲ್ಲಿ ನಾಯಕ ನಟನಾಗಿಯೂ ಅಭಿನಯಿಸಿದ್ದ ಆರ್ಯ ಈ ಚಿತ್ರದ ಹೀರೋ.

ಈ ಚಿತ್ರದ ಟ್ರೇಲರ್ ಒಂದಿಷ್ಟು ನಿರೀಕ್ಷೆ ಹುಟ್ಟಿಸುವಂತಿತ್ತು. ನಿದೇಶಕ ಶ್ರೀ ಮತ್ತು ನಾಯಕನ ಕಂ ನಿರ್ಮಾಪಕ ಆರ್ಯ ಸರಿಸುಮಾರು ಏಳೆಂಟು ವರ್ಷಗಳ ಹಿಂದೆ ಈ ಸಂಜೆ ಸಿನಿಮಾವನ್ನು ಮಾಡಿದ್ದವರು. ಆ ಚಿತ್ರ ತೆರೆಗೆ ಬಂದು ಇಷ್ಟು ಕಾಲ ಕಳೆದಿದೆ. ಈ ನಡುವೆ ಸಿನಿಮಾದ ಪರಿಭಾಷೆ, ಪ್ರೇಕ್ಷಕರ ಅಭಿರುಚಿ ಎಲ್ಲದರಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಕನ್ನಡದ ಪ್ರೇಕ್ಷಕರು ಜಗತ್ತಿನ ಎಲ್ಲ ಭಾಷೆಯ ಸಿನಿಮಾ ನೋಡುವಂತಾಗಿದ್ದಾರೆ ಮತ್ತು ವೈವಿದ್ಯತೆಯನ್ನು ಬಯಸುತ್ತಿದ್ದಾರೆ. ಒಂಟಿ ಎನ್ನುವ ಸಿನಿಮಾದ ನಿರ್ದೇಶಕರು ಈ ಯಾವ ನಿಟ್ಟಿನಲ್ಲೂ ಇನ್ನೂ ಅಪ್ಡೇಟ್ ಆಗಿರುವ ಕುರುಹೂ ಕಾಣುತ್ತಿಲ್ಲ. ಮನೆಗೆ ಮಾರಿಯಂಥಾ ಹುಡುಗ, ಅವನ ಹೊಡೆದಾಟ, ಬಡಿದಾಟ, ಸ್ನೇಹ, ಕುಡಿತ ಜೊತೆಗೊಂದು ಲವ್ವು… ಇಂಥ ಲಾಟುಗಟ್ಟಲೆ ಸಿನಿಮಾಗಳು ಬಂದು, ನೋಡುಗರನ್ನು ಅಜೀರ್ಣಗೊಳಿಸಿ ಹೋಗಿವೆ. `ಒಂಟಿ’ಯನ್ನು ನೋಡಿದ ಯಾರಿಗೇ ಆದರೂ ನಿರ್ದೇಶಕ ಶ್ರೀ ಮಾತ್ರ ಇನ್ನೂ `ಒರಟ’ನ ಕಾಲಘಟ್ಟದಲ್ಲೇ ತಟಸ್ಥವಾಗಿ ನಿಂತಿದ್ದಾರಲ್ಲಾ? ಅನ್ನೋ ಪ್ರಶ್ನೆ ಮೂಡುತ್ತದೆ. ಈ ನಿಟ್ಟಿನಲ್ಲಿ ಸಿನಿಮಾ ನೋಡಿದಾಗ ಸಾರ್ವತ್ರಿಕವಾಗಿ ಒಂದಿಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತವೆ.

ಸಣ್ಣ ಕಾರಣಗಳಿಗೂ ಕಿತ್ತಾಡಿಕೊಂಡು, ರೌಡಿಗಳೊಂದಿಗೆ ಬಡಿದಾಡುತ್ತಾ ತಾನೂ ರೌಡಿಯಾಗಿಬಿಡುವ ಮಧ್ಯಮವರ್ಗದ ಯುವಕ. ಮಾನ ಮರ್ಯಾದೆಗೆ ಅಂಜುವ ಆತನ ಕುಟುಂಬದವರು. ಜೀವಕ್ಕಿಂತಾ ಹೆಚ್ಚು ಪ್ರೀತಿಸುವ ಸ್ನೇಹಿತರನ್ನು ಬಲಿ ಪಡೆದವರನ್ನು ಸದೆಬಡಿಯುವ ನಾಯಕನಟ. ಇಂಥಾ ಮಗನನ್ನು ಹೆತ್ತ ತಪ್ಪಿಗೆ ರೌಡಿಗಳಿಂದ ಹಲ್ಲೆಗೊಳಗಾಗಿ ಜೀವ ಬಿಡುವ ತಾಯಿ, ಇಂಥವನೊಬ್ಬ ಇರದಿದ್ದರೂ ಸರಿ ಎಂದು ತೀರ್ಮಾನಿಸುವ ಒಡಹುಟ್ಟಿದವನು. ಇದು ಚಿತ್ರದ ಒಟ್ಟಾರೆ ಸಾರ. ಈ ಕಥೆಯನ್ನೇ ಅಚ್ಚುಕಟ್ಟಾಗಿ ನಿರೂಪಿಸಿ ಒಂದೊಳ್ಳೆ ಚಿತ್ರವನ್ನಾಗಿಸುವ ಎಲ್ಲ ಸಾಧ್ಯತೆಯಿತ್ತು. ಆದರೆ ನಿರ್ದೇಶಕರು ಯಾಕೆ ಮನಸ್ಸು ಮಾಡಲಿಲ್ಲವೋ ಗೊತ್ತಿಲ್ಲ.

ಏಟು ತಿಂದು ಆಸ್ಪತ್ರೆಯಲ್ಲಿ ಮಲಗಿದ್ದ ಹೀರೋ ದಡಕ್ಕೆಂದು ಎದ್ದು ಹೋಗಿರುತ್ತಾನೆ. ಮತ್ತೆ ಅಲ್ಲಿ ಮಾರಾಮಾರಿ ಬಡಿದಾಟಕ್ಕೆ ನಿಂತಿರುತ್ತಾನೆ. ಆದರೆ ಹಿಂದೆ ಆಗಿದ್ದ ಗಾಯದ ಗುರುತುಗಳೆಲ್ಲಾ ಟಪಕ್ಕನೆ ಮಾಯವಾಗಿಬಿಟ್ಟಿರುತ್ತದೆ. ಇಂಥಾ ಸಾಕಷ್ಟು ಯಡವಟ್ಟುಗಳು ಸಂಭವಿಸಿ ಅವು ನಗೆಪಾಟಲಿಗೀಡಾಗಿವೆ.

ಪ್ರತೀ ದೃಶ್ಯಕ್ಕೂ ಬಿಲ್ಡಪ್ ಡೈಲಾಗು ಮೈ ಪರಚಿಕೊಳ್ಳುವಂತೆ ಮಾಡುತ್ತದೆ. ನಾಯಕಿಯ ಪಾತ್ರದಲ್ಲಿ ಮೇಘನಾರಾಜ್ ಎಂದಿನಂತೆ ಚೆಂದನೆಯ ನಟನೆ ನೀಡಿದ್ದಾರೆ. ಆದರೆ ಅವರನ್ನು ಇನ್ನೂ ಕಾಲೇಜು ಹುಡುಗಿಯನ್ನಾಗಿ ನೋಡೋದು ಸ್ವಲ್ಪ ಕಷ್ಟ!

ನಾಯಕನಟ ಆರ್ಯ ಚಿತ್ರರಂಗಕ್ಕೆ ಬಂದು ದಶಕ ಕಳೆದಿದ್ದರೂ ನಟನೆಯಲ್ಲಿ ಲವಲೇಶವೂ ಇಂಪ್ರೂವ್ ಆಗಿಲ್ಲ. ಮುಖದಲ್ಲಿನ ರೇಖೆಗಳು ಅಲುಗಾಡಿಸದ ಅವರ ಅಭಿನಯವನ್ನು ಸಹಿಸಿಕೊಳ್ಳೋದೇ ತ್ರಾಸದಾಯಕ. ಕಾಮಿಡಿ ಪಾತ್ರದಲ್ಲಿ ನಟಿಸಿರುವ ಮಜಾ ಟಾಕೀಸ್ ಪವನ್ ಟೀವಿ ಶೋನಲ್ಲಿ ನಟಿಸುವುದಕ್ಕೂ ದೊಡ್ಡ ಪರದೆಗಾಗಿ ಪಾತ್ರ ನಿರ್ವಹಿಸುವುದಕ್ಕೂ ವ್ಯತ್ಯಾಸ ತಿಳಿಯಲೇಬೇಕಿರುವ ಅನಿವಾರ್ಯತೆ ಇದೆ.

ತಾಂತ್ರಿಕತೆಯ ವಿಚಾರದಲ್ಲಿ `ಒಂಟಿ’ಯ ಬಗ್ಗೆ ಯಾವ ತಕರಾರುಗಳೂ ಇಲ್ಲ. ಕೆ.ಕಲ್ಯಾಣ್ ಹಾಗೂ ಡಾ. ವಿ.ನಾಗೇಂದ್ರಪ್ರಸಾದ್ ಬರೆದಿರುವ ಹಾಡುಗಳು ಮತ್ತು ಮನೋಜ್.ಎಸ್ (ಶ್ರೀಲಂಕ) ಸಂಗೀತ ಮುದಗೊಳಿಸುತ್ತವೆ. ಕೆ.ಶಶಿಧರ್ ಅವರ ಛಾಯಾಗ್ರಹಣ, ಚಿತ್ರಕ್ಕೆ ಹೊಂದಿಸಿರುವ ಬಣ್ಣ ಬ್ಯೂಟಿಫುಲ್. ದೇವರಾಜ್ ಪಾತ್ರ ಮನಸ್ಸಿನಲ್ಲಿ ಉಳಿಯೋದಿಲ್ಲ. ಆದರೆ ನೀನಾಸಂ ಆಶ್ವಥ್ ಎಂಥಾ ಪಾತ್ರ ಕೊಟ್ಟರೂ ಅಚ್ಚುಕಟ್ಟಾಗಿ ನಿಭಾಯಿಸಬಲ್ಲೆ ಅನ್ನೋದನ್ನ ಇಲ್ಲೂ ಸಾಕ್ಷೀಕರಿಸಿದ್ದಾರೆ. ಶರತ್ ಲೋಹಿತಾಶ್ವ ಮತ್ತು ಗಿರಿಜಾ ಲೋಕೇಶ್ ಕೂಡಾ ಇದಕ್ಕೆ ಹೊರತಾಗಿಲ್ಲ.

ಇನ್ನಷ್ಟು ಓದಿರಿ

Scroll to Top