ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಗೆ ಹಾಜರಾಗಲಿದ್ದರೆ ಜಾಮೀನು ಕ್ಯಾನ್ಸಲ್ ಮಾಡುವುದಾಗಿ ಜೋಧ್ ಪುರ್ ಕೋರ್ಟ್ ಸಲ್ಮಾನ್ ಖಾನ್ ಗೆ ಖಡಕ್ ವಾರ್ನಿಂಗ್ ನೀಡಿದೆ. ‘ಹಮ್ ಸಾಥ್ ಸಾಥ್ ಹೈ’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಜೋಧ್ಪುರ್ ಕಂಕಣಿ ಗ್ರಾಮದ ಬಳಿ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು ಬೇಟೆ ಆಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಜೆಎಂ ನ್ಯಾಯಾಲಯ ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ಪರಿಗಣಿಸಿ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿತ್ತು.

ಬೇಟೆ ವೇಳೆ ಅವರೊಂದಿಗೆ ಇದ್ದ ಟಬು, ಸೈಫ್ ಅಲಿ ಖಾನ್, ನೀಲಂ, ಸೋನಾಲಿ ಬೇಂದ್ರೆ, ದುಷ್ಯಂತ್ ಸಿಂಹ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳು ಇಲ್ಲವೆಂದು ಐವರನ್ನೂ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ದೋಷ ಮುಕ್ತಗೊಳಿಸಿ ಆದೇಶ ಹೊರಡಿಸಿತ್ತು. ಈ ತೀರ್ಪಿನ ವಿರುದ್ಧ ರಾಜಸ್ಥಾನ ಸರ್ಕಾರ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆ ಮತ್ತೆ ವಿಚಾರಣೆ ನಡೆಸಿದ್ದ ಜೋಧ್ಪುರ್ ಕೋರ್ಟ್ 2019 ಮೇ ತಿಂಗಳಲ್ಲಿ ಈ ಐವರಿಗೂ ಹೊಸದಾಗಿ ನೋಟೀಸ್ ನೀಡಿತ್ತು.











































