ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ, ಸಿನಿ ರಸಿಕರ ಮೆಚ್ಚುಗೆಗೆ ಪಾತ್ರರಾಗಿರುವ ನಟ ಹರೀಶ್ ರಾಜ್ ಕೆಲವು ದಿನಗಳ ಗ್ಯಾಪ್ ನಂತರ ಈಗ ‘ಕಿಲಾಡಿ ಪೊಲೀಸ್ ‘ ಎಂಬ ಚಿತ್ರವನ್ನು ನಿರ್ದೇಶಿಸಿ ನಾಯಕನಾಗಿಯೂ ನಟಿಸಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ಚಿತ್ರ ಬಿಡುಗಡೆಗೆ ಸಿದ್ದವಾಗುತ್ತಿದೆ. ಚಿತ್ರದ ಟ್ರೇಲರ್ ಬಿಡುಗಡೆಯನ್ನು ಮೊನ್ನೆ ನಿರ್ದೇಶಕ ಹರೀಶ್‌ರಾಜ್ ಹಮ್ಮಿಕೊಂಡಿದ್ದರು. ಈ ಚಿತ್ರಕ್ಕೆ ನಿರ್ಮಾಪಕರೂ ಇವರೇ. ಈ ಹಿಂದೆ ಹರೀಶ್‌ರಾಜ್ 16 ಪಾತ್ರಗಳಲ್ಲಿ ನಟಿಸಿದ್ದ ಶ್ರೀಸತ್ಯನಾರಾಯಣ ಚಿತ್ರ ಲಿಮ್ಕಾ ದಾಖಲೆಗೆ ಆಯ್ಕೆಯಾಗಿತ್ತು. ಇತ್ತೀಚೆಗೆ ಖ್ಯಾತ ನಟ ಮೋಹನ್ ಲಾಲ್ ಪುತ್ರ ನಾಯಕನಾಗಿ ನಟಿಸಿರುವ ಚಿತ್ರ ಸೇರಿದಂತೆ ಮಲೆಯಾಳಂನ ಎರಡು ಚಿತ್ರಗಳಲ್ಲಿ ಮುಖ್ಯ ಖಳನಟನ ಪಾತ್ರದಲ್ಲಿ ಹರೀಶ್ ರಾಜ್ ಕಾಣಿಸಿಕೊಂಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಆರೆಂಜ್ ‘ ಚಿತ್ರದ ನಂತರ ‘ಕಿಲಾಡಿ ಪೊಲೀಸ್ ‘ ಚಿತ್ರದಲ್ಲಿ ಅಭಿನಯಿಸಿರುವ ಹರೀಶ್ ರಾಜ್ ಈ ಚಿತ್ರದ ನಿರ್ದೇಶಕರೂ ಹೌದು. ಹೆಚ್.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ 40 ದಿನಗಳ ಚಿತ್ರೀಕರಣ ನಡೆದಿದೆ. ಅಪ್ಪ-ಮಗನ ಭಾಂದವ್ಯ, ಹಾಸ್ಯ, ಸುಮಧುರ ಹಾಡುಗಳು ಹಾಗೂ ಮೈಜುಂ ಎನಿಸುವ ಸಾಹಸ ಸನ್ನಿವೇಶಗಳು ‘ಕಿಲಾಡಿ ಪೊಲೀಸ್’ ಚಿತ್ರದಲ್ಲಿದೆ ಎನ್ನುತ್ತಾರೆ ನಿರ್ದೇಶಕ ಹರೀಶ್ ರಾಜ್.

ಎಲ್ವಿನ್ ಜೋಶ್ವ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಜೆಜಿ ಕೃಷ್ಣ ಅವರ ಪುತ್ರ ದೀಪಕ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ವಿ. ಮನೋಹರ್, ಸಂತೋಷ್ ನಾಯಕ್ ಹಾಗೂ ಹರೀಶ್ ರಾಜ್ ಬರೆದಿದ್ದಾರೆ. ಹರೀಶ್ ರಾಜ್ ಜೊತೆ ನಾಯಕಿಯಾಗಿ ಸಾನ್ವಿ ಪೊನ್ನಮ್ಮ ನಟಿಸಿದ್ದಾರೆ. ತಂದೆ ತಾಯಿಯಾಗಿ ಶ್ರೀನಿವಾಸಮೂರ್ತಿ, ಪದ್ಮಾವಾಸಂತಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ಶೋಭರಾಜ್, ಗಿರಿ, ಮುನಿ, ಮೋಹನ್ ಜುನೇಜ, ರಮೇಶ್ ಪಂಡಿತ್ ಮುಂತಾದವರು ಈ ಚಿತ್ರದ ಇನ್ನುಳಿದ ತಾರಾಬಳಗದಲ್ಲಿದ್ದಾರೆ.











































