ಬೆಲ್ ಬಾಟಂ ಗೆ 125!

Picture of Cinibuzz

Cinibuzz

Bureau Report

ಕನ್ನಡ ಚಿತ್ರಗಳು ಆರ್ಧ ಶತಕ ಪೂರೈಸುವುದೇ ಕಡಿಮೆ ಇರುವ ಸಂದರ್ಭದಲ್ಲಿ ರೆಟ್ರೋ ಕತೆ ಹೊಂದಿರುವ ‘ಬೆಲ್‍ಬಾಟಂ’ಚಿತ್ರವು ಸತತ 125 ದಿವಸ ಯಶಸ್ವಿ ಪ್ರದರ್ಶನ ಕಂಡಿದೆ. ಇದಕ್ಕಾಗಿ ನಿರ್ಮಾಪಕರು ಸಣ್ಣದೊಂದು ಸಂತೋಷ ಕೂಟ ಏರ್ಪಾಟು ಮಾಡಿ ಕಲಾವಿದರು, ತಂತ್ರಜ್ಞರಿಗೆ ಗಣ್ಯರುಗಳಿಂದ ಫಲಕ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಜಯತೀರ್ಥ ಮಾತನಾಡಿ, ಸಿನಿಮಾದ ವಿವರ ಕೊಡುವುದು ಬೇಡ. ಅನ್ನಪೂರ್ಣ ಸಂಸ್ಥೆಯ ಕಲಾವಿದರು (ದಿವ್ಯಾಂಗರು) ಹಾಡಿರುವ ‘ಸಿದ್ದಯ್ಯ ಸ್ವಾಮಿ’ಗೀತೆಯು ಎಲ್ಲರಿಗೂ ಇಷ್ಟವಾಗಿದೆ. ನಿರ್ಮಾಪಕರು ಹೃದಯದಿಂದ ಮಾಡಿದ್ದರೆ, ಅಷ್ಟೇ ಪ್ರೀತಿಯಿಂದ ಎಲ್ಲರೂ ಮಾಡಿದ್ದಾರೆಂದು  ಶ್ಲಾಘಿಸಿದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಶರಣ್ ಮಾತನಾಡಿ, ಬೆಲ್‍ಬಾಟಂ ಚಿತ್ರವು ಟಾಪ್‍ಟು ಬಾಟಮ್‍ ತನಕ ಚೆನ್ನಾಗಿದೆ. ಶ್ರದ್ದೆ, ನಿಷ್ಟೆ ಇರುವ ತಂಡಕ್ಕೆ ಪ್ರೇಕ್ಷಕರು ಮನಸ್ಸುಕೊಟ್ಟಿದ್ದಾರೆ.ಇದಕ್ಕಾಗಿ ಕನ್ನಡ ಜನತಗೆ ಕೋಟಿ ಕೋಟಿ ನಮನ. ಬೇರೆತರಹ ಆಯಾಮವೆಂದು ನಂಬಿಕೊಂಡು ಬಂದವರಿಗೆ ಮೋಸ ಮಾಡಿಲ್ಲ. ಒಂದು ಚಿತ್ರವು ಯಶಸ್ಸುಕಂಡರೆ ನಿರ್ಮಾಪಕರು ಹೊಸದು ಶುರು ಮಾಡಿದಾಗ, ನೂರಾರು ಜನರಿಗೆ ಕೆಲಸ ಸಿಗುತ್ತದೆ. ಇದು ಇಲ್ಲಿಗೆ ನಿಲ್ಲುವುದು ಬೇಡ. ಬೆಲೆ ಬಾಟಂ ಭಾಗ-2,3 ಬರುವಂತಾಗಲಿ ಎಂದು ಹೇಳಿದರು. ಕತೆಗಾರ ಟಿ.ಕೆ. ದಯಾನಂದ್, ಛಾಯಾಗ್ರಾಹಕ ಅರವಿಂದ್‍ ಕಶ್ಯಪ್, ಸಂಭಾಷಣೆಗಾರ ರಘು ನಿಡುವಳ್ಳಿ, ಸಂಕಲನಕಾರ ಕೆ.ಎಂ.ಪ್ರಕಾಶ್, ಕಾಸ್ಟ್ಯೂಮ್‍ ಡಿಸೈನರ್ ಪ್ರಗತಿ ಶೆಟ್ಟಿ, ಕಾರ್ಯಕಾರಿ ನಿರ್ಮಾಪಕ ಪ್ರಮೋದ್‍ ಶೆಟ್ಟಿ, ಕಲಾವಿದರುಗಳಾದ ಯೋಗರಾಜ್‍ ಭಟ್, ಶಿವಮಣಿ, ಸುಜಯ್‍ ಶಾಸ್ತ್ರೀ, ಪಿ.ಡಿ.ಸತೀಶ್, ಪ್ರಕಾಶ್‍ ಕುಮ್ಮಿನಾಡು, ದಿನೇಶ್‍ ಮಂಗಳೂರು, ಅನ್ನಪೂರ್ಣ ಸಂಸ್ಥೆಯ ಅಂಧರು, ಜನಪದ ಗಾಯಕ ಕಡಬಗೆರೆ ಮುನಿರಾಜು ಹಾಜರಿದ್ದು ಫಲಕಗಳನ್ನು ಸ್ವೀಕರಿಸಿ ಚುಟುಕು ಮಾತನಾಡಿದರು.

ಇನ್ನಷ್ಟು ಓದಿರಿ

Scroll to Top