ಸೊಸೈಟಿಯಲ್ಲಿ ಆಗಬಹುದಾದ ಸಡನ್ ಸುದ್ದಿಗಳಿಗೆ ಜನಸಾಮಾನ್ಯರು ಟಿವಿ, ನ್ಯೂಸ್ ಪೇಪರ್ ಗಳನ್ನು ನಂಬುವ ಕಾಲ ಮರೆಯಾಯ್ತು. ಅಂಗೈಲ್ಲಿರುವ ಮೊಬೈಲ್ ನಲ್ಲಿಯೇ ಎಲ್ಲ ಸುದ್ದಿಗಳು ಘಟಿಸಿದ ಕೆಲವೇ ಸೆಕೆಂಡುಗಳಲ್ಲಿ ತಲುಪಿಬಿಡುತ್ತದೆ. ಅಷ್ಟರಮಟ್ಟಿಗೆ ತಂತ್ರಜ್ಞಾನ ಬೆಳೆದು, ನೋಡುಗರೇ ನಿಬ್ಬೆರಗಾಗುವಂತೆ ಮಾಡುತ್ತಿದೆ. ಇನ್ನು ಸೋಶಿಯಲ್ ಮೀಡಿಯಾವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ ತಳ್ಳಿ ತನ್ನ ಕಬಂಧ ಬಾಹುವಿನಿಂದ ಆಕ್ರಮಿಸಿಕೊಂಡುಬಿಟ್ಟಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾಗುವ ಸುದ್ದಿಗಳು, ವಿಚಾರಗಳು ಸತ್ಯವೋ, ಸುಳ್ಳೋ ಎಂಬುದನ್ನು ಅರಿಯುವಷ್ಟರಲ್ಲಿ ಎಲ್ಲರಿಗೂ ಸುದ್ದಿಗಳು ಹರಡಿ ಮತ್ತಾವುದೋ ಪ್ರಮಾದವನ್ನು ಸೃಷ್ಟಿಸಿ ಬಿಟ್ಟಿರುತ್ತದೆ.

ಇತ್ತೀಚಿಗೆ ಹಿರಿಯ ನಟ ದ್ವಾರಕೀಶ್ ರವರು ವಯೋ ಸಹಜ ಆರೋಗ್ಯ ಏರುಪೇರಿನಿಂದ ತಮ್ಮ ಪತ್ನಿಯೊಂದಿಗೆ ಆಸ್ಪತ್ರೆಗೆ ತೆರಳಿ ಚೆಕಪ್ ಮಾಡಿಸಿಕೊಂಡು ಬಂದರಂತೆ. ಅದನ್ನು ನೋಡಿದವರಾರೋ ದ್ವಾರಕೀಶ್ ಅವರ ಆರೋಗ್ಯ ಗಂಭೀರವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಅದಾದ ಮೇಲೆ ಸುದ್ದಿ ಅಪ್ ಡೇಟ್ ಎಂಬಂತೆ ದ್ವಾರಕೀಶ್ ನಿಧನರಾಗಿದ್ದಾರೆಂದು ಸುದ್ದಿಯನ್ನು ಹರಿಬಿಟ್ಟು ಜನಸಾಮಾನ್ಯರನ್ನು ಕನ್ ಫ್ಯೂಸ್ ಮಾಡಿಬಿಟ್ಟಿದ್ದಾರೆ. ಆದರೆ ಇದು ಶುದ್ಧ ಸುಳ್ಳು ಸುದ್ದಿಯಾಗಿದ್ದು, ಸ್ವತಃ ದ್ವಾರಕೀಶ್ ಅವರ ಮಗ ಗಿರೀಶ್ ದ್ವಾರಕೀಶ್ ಹಾಗೂ ಚೈತನ್ಯ ಅವರೇ ಸ್ಪಷ್ಟಪಡಿಸಿದ್ದು, ದ್ವಾರಕೀಶ್ ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ.
ಇನ್ನು ಈ ಸುಳ್ಳು ಸುದ್ದಿಗೆ ವಿಷಾಧ ವ್ಯಕ್ತಪಡಿಸಿರುವ ದ್ವಾರಕೀಶ್ ಅವರೇ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಗೆ ಬಂದು ಕರ್ನಾಟಕದ ಕುಳ್ಳ ಆರೋಗ್ಯವಾಗಿ ಇದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸದಿಂದ ನಾನು ಚೆನ್ನಾಗಿ ಇದ್ದೇನೆ. ಮುಂದೆ ಚೆನ್ನಾಗಿ ಇರುತ್ತೇನೆ. ಎಲ್ಲವೂ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ.” ಎಂದು ತಿಳಿಸಿದ್ದಾರೆ. ನಾನು ಬದುಕಿದ್ದೇನೆ ಎಂದು ಸ್ವತಃ ಸಂಬಂಧಪಟ್ಟ ವ್ಯಕ್ತಿಯೇ ಕನ್ ಫರ್ಮ್ ಮಾಡಲು ಬರಬೇಕೆಂದರೆ ನಮ್ಮ ಸಮಾಜದ ದುರಂತವಲ್ಲದೇ ಮತ್ತೇನು.











































