ರೌಡಿಸಂ ಕಥಾವಸ್ತು ಹೊಂದಿರುವ ಹಲವಾರು ಚಲನಚಿತ್ರಗಳು ಬಂದಿವೆ. ಈಗ ರೌಡಿಯೊಬ್ಬನ ಕಥೆಯನ್ನು ಹಾಸ್ಯದ ಹಿನ್ನೆಲೆಯಲ್ಲಿ ಹೇಳಲಿರುವ ಚಿತ್ರ ಸವರ್ಣದೀರ್ಘ ಸಂಧಿ ಸದ್ದಿಲ್ಲದೆ ರೆಡಿಯಾಗಿದೆ. ತುಳು ಭಾಷೆಯ ಹಿಟ್ ಚಿತ್ರ ಚಾಲಿಪೋಲಿಲು ನಿರ್ದೇಶಿಸಿದ್ದ ವೀರೇಂದ್ರ ಶೆಟ್ಟಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ರಚಿಸಿ ಆಕ್ಷನ್ ಕಟ್ ಹೇಳಿದ್ದಾರೆ. ಆನೇಕಲ್, ಜಗಣಿ, ದೇವರಾಯದುರ್ಗದ ಇನ್ನೂರು ವರ್ಷದಷ್ಟು ಹಳೆಯ ಮನೆಯಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಕುರಿತಂತೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲು ಇದೇ ಮೊದಲಬಾರಿಗೆ ಚಿತ್ರತಂಡ ಮಾದ್ಯಮದ ಮುಂದೆ ಹಾಜರಾಗಿತ್ತು.

ಚಿತ್ರದ ನಿರ್ದೇಶಕ ಹಾಗೂ ನಾಯಕನಟ ವೀರೇಂದ್ರ ಶೆಟ್ಟಿ ಅವರು ಮಾತನಾಡಿ ಚಿತ್ರದ ಪ್ರಮುಖ ಪಾತ್ರಕ್ಕಾಗಿ ಹಲವು ನಾಯಕ ನಟರನ್ನು ಸಂಪರ್ಕಿಸಿದೆ, ಯಾರಿಂದಲೂ ಸೂಕ್ತ ಸ್ಪಂದನೆ ಸಿಗಲಿಲ್ಲ. ಅನಿವಾರ್ಯವಾಗಿ ನಾನೇ ನಾಯಕನಾಗಬೇಕಾಯಿತು. ನಾಯಕ ಇಲ್ಲಿ ಅವಿದ್ಯಾವಂತ, ರೌಡಿಗಳ ಟೀಮ್‌ನ ಮುಖ್ಯಸ್ಥ. ಆದರೆ ಆತ ಅಪ್ಪಟ ಕನ್ನಡ ಪ್ರೇಮಿಯಾಗಿದ್ದು, ಮಾತಿನಲ್ಲಿ ಶುದ್ದ ವ್ಯಾಕರಣವನ್ನು ಬಳಸುತ್ತಾನೆ. ಇವನಲ್ಲಿಗೆ ಬಂದವರನ್ನು ಆತ ಮೊದಲು ಕನ್ನಡದ ಬಗ್ಗೆ ಪ್ರಶ್ನೆ ಮಾಡುತ್ತಾನೆ, ಅವರೇನಾದರೂ ತಪ್ಪು ಹೇಳಿದರೆ ಅವರಿಗೆ ಶಿಕ್ಷೆ ತಪ್ಪಿದ್ದಲ್ಲ, ಸರಿಯಾಗಿ ಉತ್ತರ ನೀಡಿದರಷ್ಟೇ ಅವರಿಗೆ ಮುಕ್ತಿ. ಆತನಿಗೆ ವಿದ್ಯೆ ಇಲ್ಲದೆ ಇದ್ದರೂ ಕನ್ನಡ ಭಾಷೆ ಹಾಗೂ ವ್ಯಾಕರಣದ ಬಗ್ಗೆ ಹೇಗೆ ತಿಳಿದುಕೊಂಡಿರುತ್ತಾನೆ ಎನ್ನುವುದಕ್ಕೆ ಚಿತ್ರದಲ್ಲಿಯೇ ಉತ್ತರವಿದೆ ಎಂದು ಹೇಳಿದರು. ಇನ್ನು ಈ ಚಿತ್ರದ ನಾಯಕಿಯಾಗಿ ಕೃಷ್ಣಾ ಅವರು ನಟಿಸಿದ್ದಾರೆ. ಚಿತ್ರದ ಏಳು ಹಾಡುಗಳಿಗೆ ಸಂಗೀತ ಒದಗಿಸಿರುವ ಮನೋಮೂರ್ತಿ ಮಾತನಾಡಿ ಚಿತ್ರದಲ್ಲಿರುವ ಎಲ್ಲಾ ಹಾಡುಗಳು ಕಥೆಯ ಜೊತೆಗೇ ಸಾಗುತ್ತವೆ. ಸದ್ಯ ಚಿತ್ರದ ಮಿಕ್ಸಿಂಗ್ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. ಲುಷ್ಟಿಂಗ್ಟನ್ ಥಾಮಸ್, ಹೇಮಂತ್ ಕುಮಾರ್ ಹಾಗೂ ಮನೋಮೂರ್ತಿ ಸೇರಿ ಬಂಡವಾಳ ಹೂಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಾಮಿಡಿಯನ್ನೇ ಪ್ರಮುಖವಾಗಿಟ್ಟುಕೊಂಡು ಕಥೆ ಮಾಡಲಾಗಿರುವ ಸವರ್ಣದೀರ್ಘ ಸಂಧಿ ಚಿತ್ರವು ಸದ್ಯದಲ್ಲೆ ಸೆನ್ಸಾರ್ ಮನೆಗೆ ಹೋಗಲಿದ್ದು, ಮುಂದಿನ ತಿಂಗಳು ಚಿತ್ರವನ್ನು ರಾಜ್ಯದ್ಯಂತ ರಿಲೀಸ್ ಮಾಡುವ ಯೋಚನೆ ಚಿತ್ರತಂಡಕ್ಕಿದೆ.











































