ಗೂಳಿಹಟ್ಟಿ ಮತ್ತು ಹಾಲು ತುಪ್ಪ ಎಂಬೆರಡು ಸಿನಿಮಾಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದವರು ನಟ ಪವನ್ ಶೌರ್ಯ. ಈಗ ಇವರ ಮೂರನೇ ಸಿನಿಮಾ ‘ಉಡುಂಬಾ’ ಇದೇ ವಾರ ತೆರೆಗೆ ಬರುತ್ತಿದೆ. ಸಿನಿಮಾರಂಗದಲ್ಲಿ ಗಾಡ್ ಫಾದರ್ ಗಳಿದ್ದೂ ನೆಲೆ ನಿಲ್ಲೋದು ಕೆಲವೊಮ್ಮೆ ಕಷ್ಟ ಕಷ್ಟ ಎನಿಸುವಂತಿರುತ್ತದೆ. ಆದರೆ ಪವನ್ ಶೌರ್ಯ ಚಿತ್ರರಂಗದ ಯಾವ ಹಿನ್ನೆಲೆಯೂ ಇಲ್ಲದವರು. ತಾನೊಬ್ಬ ಸಿನಿಮಾ ನಟನಾಗಬೇಕು ಅನ್ನೋದು ಪವನ್ ‘ ಗೆ ಕನಸಾಗಿತ್ತಾದರೂ, ಅದನ್ನು ಸಾಧಿಸೋದು ಅಷ್ಟು ಸುಲಭವಾಗಿರಲಿಲ್ಲ.

ಮೂಲತಃ ಬೆಂಗಳೂರಿನ ಕೆಂಗೇರಿಯವರಾದ ಪವನ್ ಜಿಮ್ ತರಬೇತುದಾರನಾಗಿ ಕೆಲಸ ಮಾಡಿಕೊಂಡಿದ್ದವರು. ಆರಂಭದ ದಿನಗಳಲ್ಲಿ ಅವಕಾಶಕ್ಕಾಗಿ ಸಿಕ್ಕ ಸಿಕ್ಕಲ್ಲೆಲ್ಲಾ ಆಡಿಷನ್ ಕೊಟ್ಟು ಬರುತ್ತಿದ್ದರು. ಅದೊಂದು ದಿನ ಉಪ್ಪಿ-2 ಚಿತ್ರಕ್ಕಾಗಿ ಆಡಿಷನ್ ನಡೆದಿತ್ತು. ಹೇಗಾದರೂ ಮಾಡಿ ಈ ಸಿನಿಮಾದಲ್ಲೊಂದು ಛಾನ್ಸು ಪಡೆಯಬೇಕು ಅನ್ನೋ ಆಸೆಯಿಂದ ಹೋದ ಪವನ್ ಎದುರಾಗಿದ್ದು ದೊಡ್ಡ ಅವಮಾನ. ಆವತ್ತೇ ಪವನ್ ‘ನಾನು ಸಿನಿಮಾ ಹೀರೋ ಆಗಲೇಬೇಕು’ ಅಂತಾ ಡಿಸೈಡು ಮಾಡಿದ್ದರು. ಅದೇ ಹೊತ್ತಿಗೆ ನಿರ್ದೇಶಕ ಶಶಾಂಕ್ ರಾಜ್ ತಮ್ಮ ಗೂಳಿ ಹಟ್ಟಿ ಚಿತ್ರ ಆರಂಭಿಸುವ ತಯಾರಿಯಲ್ಲಿದ್ದರು. ಎಂದಿನಂತೆ ಅಲ್ಲಿಗೂ ಹೋಗಿ ಆಡಿಷನ್ ನೀಡಿದ್ದೆ ಪವನ್ ಸೂರ್ಯಗೆ ಆ ಚಿತ್ರದಲ್ಲಿ ನಿರೀಕ್ಷೆಗೂ ಮೀರಿದ ಪಾತ್ರವೊಂದು ಸಿಕ್ಕಿತ್ತು. ಪವನ್ ಗಿದ್ದ ಪ್ರತಿಭೆಗೆ ತಕ್ಕಂತಾ ಅವಕಾಶ ನೀಡಿದ್ದರು ಶಶಾಂಕ್ ರಾಜ್. ಆ ನಂತರ ಹಾಲು ತುಪ್ಪ, ತಮಿಳು ಮತ್ತು ತೆಲುಗಿನ ಒಂದೊಂದು ಸಿನಿಮಾಗಳಲ್ಲೂ ಪವನ್ ಪತ್ರ ನಿರ್ವಹಿಸುವಂತಾಯಿತು.
https://www.facebook.com/darshanhdIN/videos/2545271142183516/
ಸಿನಿಮಾಗೆ ಬರುವ ಮುಂಚೆ ಜಿಮ್ ಟ್ರೇನರ್ ಆಗಿ ಕೆಲಸ ಮಾಡಿಕೊಂಡಿದ್ದವರು. ನಿರ್ದೇಶಕ ಶಿವರಾಜ್‌ಗೆ ತಾನು ಕನಸಿಟ್ಟು ಬರೆದುಕೊಂಡಿದ್ದ ‘ಉಡುಂಬಾ’ಸಿನಿಮಾದ ಪಾತ್ರಕ್ಕೆ ಪವನ್ ಹೇಳಿಮಾಡಿಸಿದ್ದಾರೆ ಅನ್ನಿಸಿತ್ತು. ಆಗ ಪವನ್ ರನ್ನು ಭೇಟಿ ಮಾಡಿ ಕತೆ ಹೇಳಿ ಈ ಸಿನಿಮಾಗಾಗಿ ಬಾಡಿ ಬಿಲ್ಡ್ ಮಾಡಬೇಕು ಅಂದರಂತೆ. ಮೊದಲೇ ಜಿಮ್ ಕೋಚ್ ಆಗಿದ್ದ ಪವನ್ ಗೆ ಅದು ಅಂತಾ ಕಷ್ಟದ ಕೆಲಸವೂ ಆಗಿರಲಿಲ್ಲ. ಆದರೆ ಶಿವರಾಜ್ ‘ಜಿಮ್ ನಲ್ಲಿ ತಯಾರಾದಂತಾ ಬಾಡಿ ಬೇಡ. ನ್ಯಾಚುರಲ್ ಆಗಿರಬೇಕು’ ಅಂದರಂತೆ. ಸಾಮಾನ್ಯಕ್ಕೆ ಬಾಡಿ ಬಿಲ್ಡ್ ಮಾಡುವವರು ಕೇಜಿಗಟ್ಟಲೇ ಚಿಕನ್ನು, ಪ್ರೊಟೀನು ಅಂತೆಲ್ಲಾ ಸೇವಿಸುತ್ತಾರೆ. ಉಡುಂಬಾ ಚಿತ್ರದಲ್ಲಿ ನಾಯಕ ಬೆಸ್ತರ ಹುಡುಗ. ಮೀನು ಹಿಡಿಯುವ ಹುಡುಗರ ದೇಹ ಬಲಿಷ್ಟವಾಗಿ, ಕಟ್ಟುಮಸ್ತಾಗಿರುತ್ತಾದರೂ ಅವರು ಜಿಮ್‌ನಲ್ಲಿ ಬಿಲ್ಡ್ ಮಾಡಿದಂತಾ ಫಿಸಿಕ್ಕು ಹೊಂದಿರುವುದಿಲ್ಲ. ಹಾಗೇನಾದರೂ ಪ್ರೋಟೀನು, ಚಿಕನ್ನುಗಳನ್ನು ತಿಂದು ಬಾಡಿ ಬಿಲ್ಡ್ ಮಾಡಿದರೆ ಅದು ಅಸಹಜವಾಗಿರುತ್ತದೆ ಅನ್ನೋದು ನಿರ್ದೇಶಕರ ಅಭಿಪ್ರಾಯವಾಗಿತ್ತು. ಆಗ ‘ವೆಜಿಟೇರಿಯನ್ ಡಯಟ್’ ಮೂಲಕ ಬಾಡಿ ಬಿಲ್ಡ್ ಮಾಡಲು ಪವನ್ ನಿರ್ಧರಿಸಿದ್ದರು. ಬರೀ ಸೊಪ್ಪು, ತರಕಾರಿಗಳನ್ನು ತಿಂದು ಸಹಜವಾಗಿ ದೇಹವನ್ನು ದಂಡಿಸುವ ಮೂಲಕ ‘ಉಡುಂಬ’ನ ಅವತಾರವೆತ್ತಿದ್ದರು ಪವನ್. ಅವರು ಪಟ್ಟ ಶ್ರಮದ ಪ್ರತಿಫಲವೆನ್ನುವಂತೆ ‘ಉಡುಂಬಾ, ಅಂದುಕೊಂಡದ್ದಕ್ಕಿಂತಾ ಹೆಚ್ಚು ಚೆಂದವಾಗಿ ಮೂಡಿ ಬಂದಿದೆ ಅನ್ನೋ ಖುಷಿ ಪವನ್ ಮುಖದಲ್ಲಿ ಕಾಣುತ್ತಿದೆ.

ಸರಿಸುಮಾರು ಮೂರು ದಶಕಗಳ ಹಿಂದೆ ಡಾ. ರಾಜ್ ನಟನೆಯಲ್ಲಿ ಶಂಕರ್ ನಾಗ್ ನಿರ್ದೇಶಿಸಿದ್ದ ಒಂದು ಮುತ್ತಿನ ಕತೆ ಚಿತ್ರದಲ್ಲಿ ಸಮುದ್ರ ಮತ್ತು ಮೀನುಗಾರರ ಸುತ್ತ ಬೆಸೆದ ಕತೆಯ ಸಿನಿಮಾ ಬಂದಿತ್ತು. ಅದು ಬಿಟ್ಟರೆ, ಬೆಸ್ತರ ಬದುಕನ್ನೇ ಜೀವಾಳವಾಗಿಸಿಕೊಂಡು ಬೇರೆ ಯಾವ ಸಿನಿಮಾಗಳೂ ತಯಾರಾಗಿರಲಿಲ್ಲ. ‘ಉಡುಂಬಾ’ದಲ್ಲಿ ಅಂಥದ್ದೊಂದು ಈ ನೆಲದ ಮಕ್ಕಳ ಬದುಕು-ಬವಣೆಯ ಸುತ್ತ ಹೆಣೆದ ಸೊಗಸಾದ ಕತೆಯಿದೆ. ಇದೇ ಶುಕ್ರವಾರ ಈ ಚಿತ್ರ ತೆರೆಗೆ ಬರುತ್ತಿದೆ. ಪ್ರತಿಯೊಬ್ಬರಿಗೂ ‘ಉಡುಂಬಾ’ ಇಷ್ಟವಾಗುವಂತಾಗಲಿ…











































