ದಿಲ್ ಮಾರ್ ಚಿತ್ರಕ್ಕೆ ಚಾಲನೆ!

Picture of Cinibuzz

Cinibuzz

Bureau Report

ಭಾರತದ ಬ್ಲಾಕ್ ಬಸ್ಟರ್ ಕನ್ನಡ ಸಿನಿಮಾ ಕೆಜಿಎಫ್ ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿದ್ದ ಎಂ. ಚಂದ್ರಮೌಳಿ ನಿರ್ದೇಶನದಲ್ಲಿ ಹೊಸ ಸಿನಿಮಾವೊಂದು ಸೆಟ್ಟೇರಿದೆ. ಈ ಚಿತ್ರಕ್ಕೆ ದಿಲ್ ಮಾರ್ ಎಂದು ಟೈಟಲ್ ಇಡಲಾಗಿದ್ದು, ಇತ್ತೀಚಿಗೆ ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮೀ ಲೇಔಟ್ ನ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಶ್ರೀ ವಿಘ್ನೇಶ್ವರ ಸಿನಿಮಾಸ್ ಲಾಂಛನದಲ್ಲಿ ನಾಗರಾಜ್ ಭದ್ರಾವತಿ ಅವರು ನಿರ್ಮಿಸುತ್ತಿರುವ ದಿಲ್ ಮಾರ್ ಚಿತ್ರದ ಮೊದಲ ಸನ್ನಿವೇಶಕ್ಕೆ ಲಹರಿ ಸಂಸ್ಥೆಯ ವೇಲು ಅವರು ಆರಂಭ ಫಲಕ ತೋರಿದ್ದು, ಸಂಜೀವ್ ಕ್ಯಾಮೆರಾ ಚಾಲನೆ ಮಾಡಿದರು.

ರಥಾವರ ಚಿತ್ರಕ್ಕೆ ಗೀತರಚನೆ ಮಾಡಿದ್ದ ಚಂದ್ರಮೌಳಿ ಅವರು ಸಾಕಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಚಾಲೆಂಜಿಂಗ್ ಸ್ಟಾರ್ ಅಭಿನಯದ ರಾಬರ್ಟ್ ಚಿತ್ರಕ್ಕೂ ಚಂದ್ರಮೌಳಿಯವರೇ ಸಂಭಾಷಣೆ ಬರೆಯುತ್ತಿದ್ದಾರೆ. ದಿಲ್ ಮಾರ್ ಗೆ ರಾಮ್ ನಾಯಕನಾಗಿ ನಟಿಸುತ್ತಿದ್ದು, ಆಂಧ್ರ ಮೂಲಕ ಡಿಂಪಲ್ ಹಯಾತಿ ನಾಯಕಿಯಾಗಿ ಜತೆಯಾಗಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಬಹುಭಾಷಾ ನಟ ಡೈಲಾಗ್ ಕಿಂಗ್ ಸಾಯಿಕುಮಾರ್ ಹಾಗೂ ಶರತ್ ಲೋಹಿತಾಶ್ವ ನಟಿಸುತ್ತಿದ್ದಾರೆ. ತೆಲುಗಿನ ಅರ್ಜುನ್ ರೆಡ್ಡಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದ ರದನ್ ದಿಲ್ ಮಾರ್ ಗೆ ಸಂಗೀತ ನೀಡುತ್ತಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್ ಹಾಗೂ ಬಹದ್ದೂರ್ ಚೇತನ್ ಗೀತಸಾಹಿತ್ಯವನ್ನು ಬರೆದಿದ್ದಾರೆ. ಇನ್ನುಳಿದಂತೆ ಗಿರೀಶ್ ಆರ್ ಗೌಡ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಮೋಹನ್ ನೃತ್ಯ ನಿರ್ದೇಶನ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ಜಿ.ಮೂರ್ತಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top