ಭಾರತದಲ್ಲಿ ಉದೋ ಎಂದು ಸುರಿಯುತ್ತಿರುವ ಮಳೆಗೆ ಕರ್ನಾಟಕವೂ ಸೇರಿದಂತೆ ಸಾಕಷ್ಟು ರಾಜ್ಯಗಳು ಸಿಲುಕಿಕೊಂಡಿವೆ. ಇತ್ತೀಚಿಗೆ ಹಿಮಾಚಲ ಪ್ರದೇಶದಲ್ಲಾಗುತ್ತಿರುವ ಪ್ರವಾಹದಲ್ಲಿ ಮಲಯಾಳಂ ನಟಿಯೊಬ್ಬಳು ಸಿಲುಕಿದ್ದಾಳೆ. ಹೌದು.. ಖ್ಯಾತ ನಟಿ ಮಂಜು ವಾರಿಯರ್ ಹಾಗೂ ಆಕೆಯ ಜತೆಗೆ ಅಂದಾಜು 30 ಮಂದಿ ಪ್ರವಾಹದಲ್ಲಿ ಲಾಕ್ ಆಗಿದ್ದು, ಅವರನ್ನು ರಕ್ಷಿಸಿ ಮನಾಲಿಗೆ ಕರೆತರಲಾಗಿದೆ ಎಂದು ಕೇಂದ್ರ ಸಚಿವ ವಿ. ಮುರಳೀಧರನ್ ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿಟಿಯ ಜಿಲ್ಲೆಯ ಛಾತ್ರು ಪ್ರದೇಶದಲ್ಲಿ ಸಿಲುಕಿದ್ದ ಮಂಜು ವಾರಿಯರ್ ಸೇರಿದಂತೆ ಇನ್ನಿತರ 127 ಮಂದಿಯನ್ನು ಮನಾಲಿಗೆ ಕರೆ ತಂದಿರುವುದಾಗಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಂ ಠಾಕೂರ್ ತಿಳಿಸಿದ್ದಾರೆ. ಮಂಜು ವಾರಿಯರ್ ಹಾಗೂ ನಿರ್ಮಾಪಕ ಸುನಾಲ್ ಕುಮಾರ್ ಶಶಿಧರನ್ ಮತ್ತಿತರ ತಂಡ ಛಾತ್ರು ಪ್ರದೇಶದಲ್ಲಿ ಮಲಯಾಳಂನ ಕಾಯ್ಯಾಟಂ ಚಿತ್ರದ ಚಿತ್ರೀಕರಣದಲ್ಲಿ ತೊಡಗಿತ್ತು. ಆದರೆ, ಪ್ರವಾಹದಿಂದಾಗಿ ಮಂಡಿ- ಲೆಹ್ ಹೆದ್ದಾರಿ ಕುಸಿತಗೊಂಡು ಮಂಜು ವಾರಿಯರ್ ಮತ್ತಿತರರು ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ.











































