ಹುಚ್ಚವೆಂಕಟ್ ರನ್ನು ಹೊಡೆಯಬೇಡಿ: ಭುವನ್ ಪೊನ್ನಣ್ಣ

Picture of Cinibuzz

Cinibuzz

Bureau Report

ಸೋಶಿಯಲ್ ಮೀಡಿಯಾದ ವೈಭವೀಕರಣದ ಜತೆ ಜತೆಗೆ ಸುದ್ದಿ ಮಾಧ್ಯಮದವರು ಟಿ ಆರ್ ಪಿ ಹುಚ್ಚಿಗೆ ಬಿದ್ದು ವೆಂಕಟ್ ನನ್ನು ಹುಚ್ಚ ವೆಂಕಟ್ ರನ್ನಾಗಿ ಮಾರ್ಪಡಿಸಿದ ಶಾಪ ತಡ್ಡದೇ ಬಿಡುವುದಿಲ್ಲ. ಸಿನಿಮಾವನ್ನೇ ಉಸಿರಾಗಿಸಿಕೊಂಡಿದ್ದ ವೆಂಕಟ್ ರ ಸಾಮಾಜಿಕ ಕಳಕಳಿ ವಿಶಾಲವಾಗಿದ್ದರೂ ಅದನ್ನು ಸಮಾಜಕ್ಕೆ ತಲುಪಿಸುವ ಸಂವಹನದ ಕೊರತೆ ಅವರಲ್ಲಿ ಬಹಳವಿತ್ತು. ಉತ್ತಮ ಉದ್ದೇಶದೊಂದಿಗೆ ಸಿನಿಮಾ ಮಾಡುತ್ತಿದ್ದ ವೆಂಕಟ್ ಗೆ ಉಂಟಾದ ಸೋಲು ಆತನನ್ನು ಮಾನಸಿಕವಾಗಿ ದ್ವಂದ್ವಕ್ಕೆ ಸಿಲುಕುವಂತೆಯೂ ಮಾಡಿಬಿಟ್ಟಿತು. ಸದ್ಯ ಆ ದ್ವಂದ್ವ ಯಾವುದೋ ಬೀದಿಯಲ್ಲಿ ಯಾರೊಂದಿಗೂ ಜಗಳಕ್ಕೆ ಬಿದ್ದು, ಹೊಡೆತ ತಿನ್ನುವ ಪರಿಸ್ಥಿತಿಗೆ ತಲುಪಿಸಿಬಿಟ್ಟಿದೆ. ಇತ್ತೀಚಿಗಷ್ಟೇ ತಮಿಳುನಾಡಿನಲ್ಲಿ ತಿರುಪೆಯವರಿಗಿಂತಲೂ ಕಡೆಯಾಗಿ ಕಾಣಿಸಿಕೊಂಡಿದ್ದ ಹುಚ್ಚವೆಂಕಟ್ ಆಮೇಲೆ ಮಡಿಕೇರಿಯ ಡಿಪೋ ನ ಬೀದಿಯಲ್ಲಿ ಕಾಣಿಸಿಕೊಂಡಿದ್ದಾರೆ.

https://www.facebook.com/bhuvann.ponannaa/videos/2363253387276082/

ನಾಪೋಕ್ಲುವಿನ ದಿಲೀಪ್ ಎಂಬಾತನು ಎಟಿಎಂ ಗೆ ತೆರಳಿ ವಾಪಸ್ಸಾಗುವಾಗ ಅಲ್ಲೇ ನಿಂತಿದ್ದ ಹುಚ್ಚವೆಂಕಟ್ ರನ್ನು ಆಶ್ಚರ್ಯ ಕಮ್ ಅಭಿಮಾನದಿಂದ ನೋಡಿದ್ದಾರೆ. ಅಷ್ಟಕ್ಕೇ ಹುಚ್ಚವೆಂಕಟ್ ಗೊಂದಲದಲ್ಲಿಯೇ ಏನು ಗುರಾಯಿಸುತ್ತಿದ್ದಿಯಾ ಎಂದು ಕೆರಳಿ ಅಲ್ಲೇ ನಿಂತಿದ್ದ ದಿಲೀಪ್ ಕಾರಿನ ಗ್ಲಾಸನ್ನು ಪುಡಿ ಪುಡಿ ಮಾಡಿದ್ದಲ್ಲದೇ ದಿಲೀಪ್ ನ ಜತೆ ತಕರಾರು ತೆಗೆದಿದ್ದಾರೆ. ಮಾಡಿದ ತಪ್ಪಿಗೆ ಸುತ್ತುವರೆದ ಜನರಿಂದ ಥಳಿತವನ್ನು ತಿನ್ನುವಂತೆಯೂ ಆಗಿದೆ. ಇದನ್ನೇ ಎನ್ ಕ್ಯಾಶ್ ಮಾಡಿಕೊಂಡು ಸುದ್ದಿ ಮಾಧ್ಯಮಗಳು ಸಾಕಷ್ಟು ಸುದ್ದಿಯನ್ನು ಬಿತ್ತರಿಸುತ್ತಿವೆಯೇ ವಿನಃ ಒಬ್ಬರೂ ಹುಚ್ಚ ವೆಂಕಟ್ ನ ಸ್ಥಿತಿಗೆ ಮರುಕಪಟ್ಟ ಸಹಾಯ ಮಾಡುವ ಕೆಲಸವನ್ನು ಮಾಡುವ ಧಾವಂತ ತೋರಿಲ್ಲ.

ಈ ಮಧ್ಯೆ ತಮಿಳುನಾಡಿನಿಂದಲೂ ಹುಚ್ಚವೆಂಕಟ್ ಚಲನವಲನಗಳನ್ನು ಗಮನಿಸುತ್ತಿದ್ದ ರಾಂಧವ ಚಿತ್ರದ ನಾಯಕ ಭುವನ್ ಪೊನ್ನಣ್ಣ ಸೋಶಿಯಲ್ ಮೀಡಿಯಾದಲ್ಲಿ “ಹುಚ್ಚ ವೆಂಕಟ್ ರನ್ನು ಎಲ್ಲಿ ಕಂಡರೂ ಹೊಡೆಯಬೇಡಿ. ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇದೆ. ಅವರು ಕೆಟ್ಟವರಲ್ಲ. ಮಾನಸಿಕವಾಗಿ ತೊಂದರೆಯಲ್ಲಿದ್ದಾರೆ ಅವರಿಗೆ ನಾವೆಲ್ಲರೂ ಸ್ಪಂದಿಸೋಣ”ವೆಂದು ಭಾವನಾತ್ಮಕವಾಗಿ ವಿಡಿಯೋವೊಂದನ್ನು ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಹುಚ್ಚ ವೆಂಕಟ್ ಪರವಿರೋಧ ಚರ್ಚೆಗಳು ಸಾಕಷ್ಟಾಗುತ್ತಿವೆ.

ಇನ್ನಷ್ಟು ಓದಿರಿ

Scroll to Top