ಎಲ್ಲೆಲ್ಲೂ ಗೀತಾ ಗುಂಗು!

Picture of Cinibuzz

Cinibuzz

Bureau Report

ದಸರಾ ಅಂಗವಾಗಿ ವರ್ಷಪ್ರತಿ ಏರ್ಪಡಿಸುವ ಯುವಸಂಭ್ರಮವನ್ನು ಯೂತ್ ಐಕಾನ್, ಗೋಲ್ಡನ್ ಸ್ಟಾರ್ ಗಣೇಶ್ ಮೊನ್ನೆ ಉದ್ಘಾಟಿಸಿದರು. ದಸರಾ ಪ್ರಯುಕ್ತ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಹತ್ತು ದಿನಗಳ ಕಾಲ ನಡೆಯುವ ಯುವ ಸಂಭ್ರಮಕ್ಕೆ ಗಣೇಶ್ ಚಾಲನೆ ನೀಡಲು ಮೈಸೂರಿಗೆ ತೆರಳಿದ್ದರು. ಗಣೇಶ್ ಸಮಾರಂಭಕ್ಕೆ ಉದ್ಘಾಟಿಸಲು ಸಂಪ್ರದಾಯಿಕ ಡೋಲು ಬಡಿಯುತ್ತಾ, ‘ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ, ಕನ್ನಡಿಗನೇ ಸಾರ್ವಭೌಮ’ ಅಂತಾ ಗೀತಾ ಚಿತ್ರದ ಡೈಲಾಗು ಹೇಳುತ್ತಿದ್ದಂತೆ ಮುಗಿಲು ಮುಟ್ಟುವ ಶಿಳ್ಳೆ, ಚಪ್ಪಾಳೆಯ ಸದ್ದು. ಜೊತೆಗೆ ‘ಗೀತಾ ಸಂಗೀತಾ..’ ಹಾಡು ಹೇಳುತ್ತಿದ್ದಾಗಲಂತೂ ಜನ ಹುಚ್ಚೆದ್ದು ಕುಣಿದರು.
ಕರ್ನಾಟಕದಾದ್ಯಂತ ಪ್ರತೀ ಜಿಲ್ಲೆಯಲ್ಲೂ ‘ಗೀತಾ’ ಚಿತ್ರದ ಬಗ್ಗೆ ಜನರಲ್ಲಿ ವಿಶೇಷವಾದ ಕುತೂಹಲ ಮೂಡಿದೆ. ಅದಕ್ಕೆ ಬಹುಮುಖ್ಯ ಕಾರಣ ಕನ್ನಡ. ಗೋಕಾಕ್ ಚಳವಳಿಯ ಹಿನ್ನೆಲೆ, ಗಣೇಶ್ ಕನ್ನಡದ ಬಗ್ಗೆ ಆಡಿರುವ ಖಡಕ್ಕು ಮಾತುಗಳು. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಮತ್ತು ಟ್ರೇಲರುಗಳು, ಪುನೀತ್ ರಾಜ್ ಕುಮಾರ್ ಹಾಡಿರುವ ಹಾಡು ಪ್ರೇಕ್ಷಕರೆದೆಗೆ ನಾಟಿವೆ.
ಮೈಸೂರಿನಲ್ಲಿ ಸಮಾರಂಭ ಮುಗಿಸಿ ಹೊಟೇಲಲ್ಲಿ ತಂಗಿದ್ದ ಗಣೇಶ್ ಅವರನ್ನು ನೋಡಲು ಜನ ಮುಗಿಬಿದ್ದಿದ್ದರು. ಗಣೇಶ್ ಕಣ್ಣಿಗೆ ಕಾಣಿಸುತ್ತಿದ್ದಂತೇ ‘ಗೀತಾ ಗೀತಾ’ ಅಂತಾ ಕೂಗಲು ಶುರು ಮಾಡಿದ್ದಾರೆ. ಅದೂ ಅಲ್ಲದೆ ತಾವಿದ್ದ ಹೋಟೆಲಿನ ಮುಂದೆ ಅಭಿಮಾನಿಗಳು ಸಾಲುಗಟ್ಟಿನಿಂತು, ನೆಚ್ಚಿನ ನಟನನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ವೇದಿಕೆಗೂ ಬಂದ ಅಭಿಮಾನಿಗಳು ತಾವೇ ಕೈಯಿಂದ ಬಿಡಿಸಿದ ಗೀತಾ ಚಿತ್ರದ ಗಣೇಶ್ ಅವರ ಫೋಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ. ಗಣೇಶ್ ತಲೆಗೊಂದು ಕ್ಯಾಪ್ ಹಾಕಿಕೊಂಡಿರುವ ಗೀತಾ ಚಿತ್ರ ಫೋಟೋ ಅಂತೂ ಶಂಕರ್ ನಾಗ್ ಅವರನ್ನು ನೆನಪಿಸುವಂತಿದೆ. ಇವೆಲ್ಲಾ ಸಾಮಾನ್ಯ ಪ್ರೇಕ್ಷಕರಿಗೂ ಬೇಗ ಸೆಳೆಯುವಂಥ ವಿಚಾರಗಳು. ಈ ಎಲ್ಲಾ ಹಿನ್ನೆಲೆಯಲ್ಲಿ ನೋಡಿದರೆ ಗೀತಾ ಸಿನಿಮಾದ ಬಗ್ಗೆ ಇಡೀ ರಾಜ್ಯದಲ್ಲಿ ವ್ಯಾಪಕ ನಿರೀಕ್ಷೆಯಿದೆ. ಇದೇ ತಿಂಗಳ ಇಪ್ಪತ್ತೇಳರಂದು ತೆರೆಗೆಬರಲಿರುವ, ವಿಜಯ್ ನಾಗೇಂದ್ರ ನಿರ್ದೇಶನದ,  ಸೈಯದ್ ಸಲಾಂ ಮತ್ತು ಶಿಲ್ಪ ಗಣೇಶ್ ನಿರ್ಮಾಣದ ಚಿತ್ರ ಪ್ರೇಕ್ಷಕರ ಕುತೂಹಲವನ್ನು ತಣಿಸಲಿದೆ.

ಇನ್ನಷ್ಟು ಓದಿರಿ

Scroll to Top