ಆಡಿಷನ್ ಮುಗಿಸಿದ ಕ್ಷತ್ರಿಯ ಆಟ ಶುರು ಮಾಡಲಿದ್ದಾನೆ! 

Picture of Cinibuzz

Cinibuzz

Bureau Report

ಅನಿಲ್ ಮಂಡ್ಯ ನಿರ್ದೇಶನದಲ್ಲಿ ಚಿರಂಜೀವಿ ಸರ್ಜಾ ನಟಿಸಲಿರುವ ಸಿನಿಮಾ ಕ್ಷತ್ರಿಯ. ಕಳೆದ ಒಂದೆರಡು ತಿಂಗಳ ಮುಂಚೆ ಈ ಚಿತ್ರಕ್ಕಾಗಿ ಅದ್ದೂರಿ ಮೂಹೂರ್ತವನ್ನು ನಡೆಸಲಾಗಿತ್ತು. ಈ ಚಿತ್ರದ ಹೀರೋ ಚಿರಂಜೀವಿ ಸರ್ಜಾ ಕೈಯಲ್ಲಿ ಕನಿಷ್ಠಪಕ್ಷ ಸಾಕಷ್ಟು ಸಿನಿಮಾಗಳು ಇದ್ದರಿಂದ ಕ್ಷತ್ರಿಯ ಚಿತ್ರೀಕರಣಕ್ಕೆ ಹೊರಡುವುದು ಕೊಂಚ ತಡವಾಗಿತ್ತು.
ಈ ಗ್ಯಾಪ್‌ನಲ್ಲಿ ನಿರ್ದೇಶಕ ಅನಿಲ್ ಸಿನಿಮಾದ ಪಾತ್ರಗಳಿಗಾಗಿ ಆಡಿಷನ್ ಕೂಡ ನಡೆಸಿದ್ದಾರೆ. ಮೊನ್ನೆ ಮೋದಿ ಆಸ್ಪತ್ರೆ ಬಳಿ ಆಡಿಷನ್ಗಾಗಿ ಕಲಾವಿದರನ್ನು ಆಹ್ವಾನಿಸಲಾಗಿತ್ತು. ಈ ಸಂದರ್ಭದಲ್ಲಿ ನಾನೂರಕ್ಕೂ ಅಧಿಕ ಮಂದಿ ಕ್ಷತ್ರಿಯ ಸಿನಿಮಾದಲ್ಲಿ ನಟಿಸುವ ಅಪೇಕ್ಷೆಯಿಂದ ಆಗಮಿಸಿದ್ದರು. ಈ ೪೦೦ ಜನರನ್ನು ನಟನೆಯನ್ನು, ಮೂರು ಕ್ಯಾಮೆರಾಗಳ ಮೂಲಕ ಸೆರೆಹಿಡಿದಿದ್ದಾರೆ. ಇಷ್ಟು ಜನರಲ್ಲಿ ಯಾರು ಉತ್ತಮವಾಗಿ ನಟಿಸಿದ್ದಾರೆ ಅವರಿಗೆ ಕ್ಷತ್ರಿಯ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ದೊರಕಲಿದೆ.
ಅಕ್ಟೋಬರ್ ೯ರಿಂದ ಕ್ಷತ್ರಿಯನ ಚಿತ್ರೀಕರಣ ಆರಂಭವಾಗಲಿದ್ದು ಹದಿನೈದು ಇಪ್ಪತ್ತು ದಿನ ಒಂದೇ ಶೆಡ್ಯೂಲ್ ನಲ್ಲಿ ಶೂಟಿಂಗ್ ಮುಗಿಸಲಿದ್ದಾರೆ. ನಂತರ ಚಿರಂಜೀವಿ ಸರ್ಜಾ ಅವರ ಸಹೋದರ ಧ್ರುವ ಸರ್ಜಾ ಮದುವೆಗಾಗಿ  ಬ್ರೇಕ್ ನೀಡಲಾಗುತ್ತದೆ. ಆಮೇಲೆ ಎರಡನೇ ಹಂತದ ಚಿತ್ರೀಕರಣ ಆರಂಭಗೊಂಡು ಕ್ಷತ್ರಿಯ ಕೆಲಸ ಮುಗಿಸಲಿದ್ದಾರೆ.
ನಿರ್ದೇಶಕ ಅನಿಲ್ ಈವರೆಗೆ ಸಾಕಷ್ಟು ಸ್ಟಾರ್ ಡೈರೆಕ್ಟರ್‌ಗಳ ಬಳಿ ಸಹ ನಿರ್ದೇಶಕರಾಗಿ ದುಡಿದು, ಅನುಭವ ಹೊಂದಿದ್ದಾರೆ. ಪಿ ವಾಸು, ಎಸ್ ಕೃಷ್ಣ, ದಿನಕರ್ ತೂಗುದೀಪ, ಸಂತೋಷ್ ಆನಂದ್ ರಾಮ್ ಸೇರಿದಂತೆ ಹಲವಾರು ನಿರ್ದೇಶಕರ ಬಳಿ ಕಳೆದ ಒಂದೂವರೆ ದಶಕಗಳಿಂದ ಕಾರ್ಯನಿರ್ವಹಿಸಿದ್ದಾರೆ. ಸಂತೋಷ್ ನಿರ್ದೇಶನದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮತ್ತು ರಾಜಕುಮಾರ ಸಿನಿಮಾಗಳಿಗೆ ಅನಿಲ್ ಮಂಡ್ಯ ಕೋ ಡೈರೆಕ್ಟರ್ ಹಾಗೂ ಕೋ ರೈಟರ್ ಆಗಿ ಕಾರ್ಯನಿರ್ವಹಿಸಿದ್ದರು. ಸಿನಿಮಾ ವಲಯದಲ್ಲಿ ಅನಿಲ್ ಮಂಡ್ಯ ಅನುಭವಿ ತಂತ್ರಜ್ಞ ಎಂಬ ಹೆಸರು ಪಡೆದಿದ್ದಾರೆ. ಅನಿಲ್ ಕೆಲಸ ಮಾಡಿದ ಸಿನಿಮಾಗಳಲ್ಲಿ ಉತ್ತಮ ಹೆಸರು ಹೊಂದಿದ್ದಾರೆ. ಅನಿಲ್ ಇದ್ದಾರೆ ಎಂದರೆ ನಿರ್ದೇಶಕರ ಶ್ರಮ ಕಡಿಮೆಯಾಗುತ್ತದೆ ಎನ್ನುವ ಮಾತಿತ್ತು ಈಗ ಅನಿಲ್ ಪೂರ್ಣಪ್ರಮಾಣದ ನಿರ್ದೇಶಕನಾಗಿ ಪರಿಚಯವಾಗುತ್ತಿದ್ದಾರೆ. ಮೊದಲ ಸಿನಿಮಾದ ಬಗ್ಗೆ ಹತ್ತಾರು ಕನಸು ಹೊಂದಿರುವ ಅನಿಲ್ ಕ್ಷತ್ರಿಯನನ್ನು ಪವರ್ ಫುಲ್ ಆಗಿ ನಿಲ್ಲಿಸಬೇಕು ಎನ್ನುವ ಬಯಕೆ ಹೊಂದಿದ್ದಾರೆ.
ಈವರೆಗೂ ಚಿರಂಜೀವಿ ಸರ್ಜಾ ಅವರನ್ನು ಯಾರೂ ತೋರಿಸಿದ ರೀತಿಯಲ್ಲ್ಲಿ ಕ್ಷತ್ರಿಯ ಚಿತ್ರದಲ್ಲಿ ಹೊರಹೊಮ್ಮಿ ಸಬೇಕು ಎಂಬ ಕಾರಣಕ್ಕೆ ಸಾಕಷ್ಟು ತಯಾರಿಯನ್ನು ಅನಿಲ್ ಮಾಡಿಕೊಂಡಿದ್ದಾರೆ.
ರಥಾವರ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ ಹೆಸರು ಮಾಡಿದ್ದ ಧರ್ಮವಿಶ್ ಕ್ಷತ್ರಿಯ ಚಿತ್ರಕ್ಕೆ ಮ್ಯೂಸಿಕ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಅವರ ಸಹೋದರಿ ಪಾತ್ರದಲ್ಲಿ ಹಿರಿಯ ನಟಿ ಸುಧಾರಾಣಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇದಲ್ಲದೆ ಇನ್ನೂ ಅನೇಕ ಅನುಭವೀ ನಟರು ಮತ್ತು ಹೊಸ ಕಲಾವಿದರ ಸಮಾಗಮ ಇಲ್ಲಿ ಆಗಲಿದೆ ಆಗಲಿದೆಯಂತೆ!

ಇನ್ನಷ್ಟು ಓದಿರಿ

Scroll to Top