ಜನ ಲೇವಡಿ ಮಾಡುತ್ತಿದ್ದಾರೆ!

Picture of Cinibuzz

Cinibuzz

Bureau Report

ಮೈಸೂರಿನಲ್ಲಿ ನಡೆಯುವ ದಸರಾ ಹಬ್ಬ, ಅಲ್ಲಿನ ಕಾರ್ಯಕ್ರಮಗಳಿಗೆ ಅದರದ್ದೇ ಆದ ವ್ಯಾಲ್ಯೂ ಇದೆ. ಈ ವೇದಿಕೆಯನ್ನು ಚಂದನ್ ಶೆಟ್ಟಿ ತೀರಾ ಖಾಸಗಿ ವಿಚಾರಕ್ಕೆ ಬಳಸಿಕೊಂಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಚರ್ಚೆ ಮತ್ತು ಠೀಕೆಗಳು ಶುರುವಾಗಿವೆ.
ಚಂದನ್ ಶೆಟ್ಟಿ ಮತ್ತು ನಿವೇದಿತಾ ಅನ್ನೋ ಜೋಡಿ ಮದುವೆಯಾಗುತ್ತಾರಂತೆ. ಆಗಲಿ.. ಮದುವೆ ಅವರವರ ಇಚ್ಚೆ. ಇಷ್ಟಪಟ್ಟೇ ಆಗಬೇಕು. ತಕರಾರು ಅದಲ್ಲ. ಮೈಸೂರಿನಲ್ಲಿ ನಡೆದ ಯುವ ದಸರಾದ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾಳ ಜೊತೆ ಎಂಗೇಜ್ ಆದನಂತೆ. ಸರ್ಕಾರಿ ಪ್ರಾಯೋಜಿತ ವೇದಿಕೆ ಕಾರ್ಯಕ್ರಮವೆಂದರೆ ಅಲ್ಲಿ ಮೊದಲೇ ರೂಪುರೇಷೆ ರೆಡಿಯಾಗಿರುತ್ತದೆ. ಯಾರ‍್ಯಾರ ಜವಾಬ್ದಾರಿ ಎಷ್ಟೆಷ್ಟೋ ಅಷ್ಟಕ್ಕೆ ಮಾತ್ರ ಅನುಮತಿ ಇರುತ್ತದೆ. ಈಗ ಚಂದನ್ ಶೆಟ್ಟಿ ಯಾವ ಸೂಚನೆಯನ್ನೂ ನೀಡದೆ ಏಕಾಏಕಿ ವೇದಿಕೆಯಲ್ಲಿ ಹುಡುಗಿಯನ್ನು ಪ್ರಪೋಸ್ ಮಾಡಿರುವ ವಿಚಾರ ಸರ್ಕಾರಿ ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದೆ. ದಸರಾ ಆಯೋಜಕರು  ಉಳಿದ ದಿನಗಳ ಅತಿಥಿಗಳು, ಶೋ ಕೊಡಲು ಬರುವವರಿಗೆಲ್ಲಾ ಕರೆ ಮಾಡಿ ‘ದಯವಿಟ್ಟು ವೇದಿಕೆಯನ್ನು ನಿಮ್ಮ ಪರ್ಸನಲ್ ವಿಚಾರಗಳಿಗೆ ಬಳಸಿಕೊಳ್ಳಬೇಡಿ ಅಂತಾ ವಿನಂತಿಸುತ್ತಿದ್ದಾರಂತೆ.
ಇನ್ನು ಈ ವಿಚಾರ ಟ್ರೋಲ್ ಮಾಡುವವರಿಗೂ ಸರಕಾಗಿದೆ. ‘ಅಂಬಾರಿ ದಿನ ಮದುವೆ ಅರಮನೆಯಲ್ಲಿ ಮದುವೆ ಮಾಡಿಸಿಬಿಡಿ, ‘ಸರ್ಕಾರದವರು ದಸರಾದಲ್ಲಿ ಮದುವೆ ಮಾಡಿಸ್ತಾರೆ, ‘ಬಲಿ ಪಾಡ್ಯಮಿ ದಿನ ಬೀಗರೂಟ ಹಾಕಿಸ್ತೀರಾ? ಅಂತೆಲ್ಲಾ ಪೋಸ್ಟ್’ಗಳು ಶೇರ್ ಆಗುತ್ತಿವೆ.
ಈ ಚಂದನ್ ಶೆಟ್ಟಿ ಅನ್ನೋ ಹುಡುಗ ಡಬಾಡಬಾಡಬಾ ಡಬ್ಬಿ ಬಡೆಯುತ್ತಾ, ಎಲ್ಲಾ ಸಾಲುಗಳಿಗೂ ಒಂದೇ ಟ್ಯೂನಲ್ಲಿ ಸಾಂಗು ಹೇಳುತ್ತಾನೆ. ಪ್ರಾಸ-ತ್ರಾಸಗಳನ್ನೆಲ್ಲಾ ಸೇರಿಸಿ ಹಾಡು ಕಟ್ಟುತ್ತಾನೆ. ಅದು ಆ ಕ್ಷಣಕ್ಕೆ ಕೇಳಲೂ ಒಂಥರಾ ಚನ್ನಾಗಿರುತ್ತದೆ ಅನ್ನೋದೇನೋ ನಿಜ. ಇದರಿಂದ, ಹೋದಲ್ಲಿ ಬಂದಲ್ಲಿ ಜನ ಆತನನ್ನು ಗುರುತಿಸುತ್ತಾರೆ.
ಹಾಗಂತಾ ಇಷ್ಟಕ್ಕೇ ತನಗೆ ಬೇಕಾದಂತೆಲ್ಲಾ, ಲಂಗೂ ಲಗಾಮು ಇಲ್ಲದೆ  ನಡೆದುಕೊಳ್ಳಬಹುದಾ? ರೆಬೆಲ್ ಸ್ಟಾರ್ ಅಂಬರೀಶ್ ತೀರಿಕೊಂಡ ದಿನ ಇಡೀ ರಾಜ್ಯ ಕಣ್ಣೀರಲ್ಲಿ ಮುಳುಗಿತ್ತು. ಪ್ರತಿಯೊಬ್ಬರ ಫೇಸ್ ಬುಕ್ಕಿನ ವಾಲುಗಳು ಅಂಬಿಯ ಕುರಿತಾದ ಪೋಸ್ಟುಗಳಿಂದ ತುಂಬಿಕೊಂಡಿದ್ದವು. ಆದರೆ ಈ ಹುಡುಗ ಚಂದನ್ ಮಾತ್ರ ‘ಐ ಮಿಸ್ ಯೂ ನಿವೀ… ಅಂತಾ ಬರೆದುಕೊಂಡಿದ್ದ.  ಯಾಕೆಂದರೆ ನಿವೇದಿತಾ ಆವತ್ತು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಳಂತೆ!
ಇಂಥಾ ಚಂದನ್ ಶೆಟ್ಟಿ ಈಗ ಸರ್ಕಾರಿ ವೇದಿಕೆಯನ್ನು ಖಾಸಗಿ ವಿಚಾರಕ್ಕಾಗಿ ಬಳಸಿಕೊಂಡಿದ್ದಾನೆ. ಒಂದು ವೇಳೆ ಯಾವುದೇ ಸಂಭಾವನೆಯನ್ನು ಪಡೆಯದೇ ಕಾರ್ಯಕ್ರಮ ನೀಡಲು ಹೋಗಿದ್ದರಾದರೂ ಪರವಾಗಿಲ್ಲ. ಇಷ್ಟು ಪೇಮೆಂಟು ಅಂತಾ ಫಿಕ್ಸ್ ಮಾಡಿಕೊಂಡು, ಕಾಸು ಪಡೆದು ಹೋದ ಜಾಗದಲ್ಲಿ, ಡಬ್ಬಾ ಬಡಿದು, ಹಾಡು ಹೇಳಿ ಬರೋದಷ್ಟನ್ನು ಬಿಟ್ಟು ಇನ್ನೇನೋ ಮಾಡಿ ಎಲ್ಲರ ಬಾಯಿಗೆ ಆಹಾರವಾಗಿದ್ದಾನೆ!

ಇನ್ನಷ್ಟು ಓದಿರಿ

Scroll to Top