ಇನ್ನುಮುಂದೆ ವರ್ಷಕ್ಕೆ ಎರಡು ಸಿನಿಮಾಗಳಾದರೂ ರಿಲೀಸಾಗಲೇಬೇಕು ಅಂತಾ ಸೂಪರ್ ಸ್ಟಾರ್ ರಜನಿಕಾಂತ್ ನಿರ್ಧರಿಸಿದಂತೆ ಕಾಣುತ್ತಿದೆ. ವಯಸ್ಸು ಎಪ್ಪತ್ತಕ್ಕೆ ಹತ್ತಿರವಾಗುತ್ತಿದ್ದಂತೇ ರಜನಿ ಧಾವಂತಕ್ಕೆ ಬಿದ್ದವರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ದರ್ಬಾರ್ ಚಿತ್ರದಲ್ಲಿ ರಜನಿ ತೊಡಗಿಕೊಂಡಿದ್ದಾರೆ. ಇನ್ನೇನು ಆ ಚಿತ್ರದ ತಮ್ಮ ಭಾಗವನ್ನು ಮುಗಿಸುತ್ತಿದ್ದಾರೆ. ಇದರ ಬೆನ್ನಿಗೇ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ‘ಸದ್ಯಕ್ಕೆ ತಲೈವರ್ ೧೬೮ ಎಂದು ಹೇಳಲಾಗುತ್ತಿರುವ ಈ ಸಿನಿಮಾ ರಜನಿ ಹುಟ್ಟುಹಬ್ಬವಾದ ಡಿಸೆಂಬರ್ ೧೨ರಂದು ಚಾಲನೆಗೊಳ್ಳಲಿದೆಯಂತೆ.

ಕಳೆದ ಹದಿನೈದು ವರ್ಷಗಳಿಂದ ತಮಿಳು ಮತ್ತು ತೆಲುಗು ಇಂಡಸ್ಟ್ರಿಯಲ್ಲಿ ವರ್ಷಕ್ಕೊಂದು ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿರುವ ನಿರ್ದೇಶಕ ಶಿವ ಈ ಚಿತ್ರವನ್ನು ಡೈರೆಕ್ಟ್ ಮಾಡಲಿದ್ದಾರೆ.

ಶೌರ್ಯಂ, ವೀರಂ, ವಿವೇಗಂ, ವೇದಾಳಂ, ವಿಶ್ವಾಸಂ… ಹೀಗೆ ಸರಿಸುಮಾರು ಹದಿನೈದು ಸಿನಿಮಾಗಳನ್ನು ನಿರ್ದೇಶಿಸಿರುವ ಶಿವ ರಜನಿಗಾಗಿ ನಿರ್ದೇಶಿಸುತ್ತಿರುವ ಮೊದಲ ಚಿತ್ರವಿದು. ಶಿವಾ ನಿರ್ದೇಶನದ ಶೌರ್ಯಂ ಕನ್ನಡದಲ್ಲಿ ಶೌರ್ಯ ಆಗಿ ರಿಮೇಕ್ ಆಗಿದೆ. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ‘ಒಡೆಯ ಚಿತ್ರ ಕೂಡಾ ಇದೇ ಶಿವಾ ನಿರ್ದೇಶನದ ವೀರಂ ಚಿತ್ರದ ರಿಮೇಕ್. ಇನ್ನು, ತಮಿಳು ಸಿನಿಮಾಗಳಾದ ವಿವೇಕಂ ಕಮಾಂಡೋ ಆಗಿ, ವಿಶ್ವಾಸಂ ‘ಜಗಮಲ್ಲನಾಗಿಯೂ ನೇರವಾಗಿ ಕನ್ನಡಕ್ಕೆ ಡಬ್ ಆಗಿವೆ.
ಸದ್ಯಕ್ಕೆ ಈ ಚಿತ್ರಕ್ಕೆ ತಲೈವರ್ ೧೬೮ ಎನ್ನುವ ವರ್ಕಿಂಗ್ ಟೈಟಲ್ ಇಡಲಾಗಿದೆಯಾದರೂ, ಡಿಸೆಂಬರ್ ೧೨ಕ್ಕೆ ಇದರ ಒರಿಜಿನಲ್ ಶೀರ್ಷಿಕೆ ಅನಾವರಣಗೊಳ್ಳಲಿದೆ.











































