ಇದೇ ನವೆಂಬರ್ ೧ರ ರಾಜ್ಯೋತ್ಸವದ ಕೊಡುಗೆಯಾಗಿ ಸ್ಟಾರ್ ಕನ್ನಡಿಗ ಸಿನಿಮಾ ತೆರೆಗೆ ಬರುತ್ತಿದೆ. ಆಟೋ ಗೆಳೆಯರು ಸೇರಿ ನಿರ್ಮಿಸಿರುವ ಈ ಸಿನಿಮಾದಲ್ಲಿ ಶಾಲಿನಿ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಇವರ ಹಿನ್ನೆಲೆ ಏನು? ಚಿತ್ರರಂಗಕ್ಕೆ ಬಂದಿದ್ದಾದರೂ ಹೇಗೆ ಅನ್ನೋ ವಿವರಗಳು ಇಲ್ಲಿವೆ…
ಈ ಸಿನಿಮಾದಲ್ಲಿ ನಿಮಗೆ ಅವಕಾಶ ಸಿಕ್ಕಿದ್ದು ಹೇಗೆ? : ಈ ಸಿನಿಮಾಕ್ಕೂ ಮುನ್ನ ಸೀರಿಯಲ್‌ಗಳಲ್ಲಿ ಕಾಮಿಡಿ, ವಿಲ್ಲನ್ ಆಗಿ ಹಲವಾರು ಪಾತ್ರಗಳಲ್ಲಿ ನಾನು ಅಭಿನಯಿಸಿದ್ದೇನೆ. ಇದರ ಮಧ್ಯೆ ಇನ್ನೂ ವಿಭಿನ್ನವಾದ ಪಾತ್ರದಲ್ಲಿ ನಾನು ಅಭಿನಯಿಸಬೇಕು ಅಂತ ಯೋಚನೆ ಮಾಡ್ತಿದ್ದೆ. ನನ್ನ ಕರಾಲಿ ಚಿತ್ರ ನೋಡಿ ಚಿತ್ರಕ್ಕೆ ಆಫರ್ ಕೊಟ್ರು. ಇದು ತುಂಬಾ ಒಳ್ಳೇ ಅವಕಾಶ ಅನ್ನಿಸಿತು. ಸ್ಟಾರ್ ಕನ್ನಡಿಗ ಚಿತ್ರದ ಮೂಲಕ ನನ್ನ ಪ್ರತಿಭೆಯನ್ನು ಹೊರಗೆ ತರಲು ಸಾಧ್ಯವಾಗಿದೆ. ಚಿತ್ರದ ಹಾಡುಗಳು, ನಿರ್ದೇಶನ, ನಿರ್ಮಾಪಕ, ಕಥೆ, ಚಿತ್ರಕಥೆ, ಹೀರೋ, ಟೀಮ್ ಲೀಡರ್ ಎಲ್ಲವೂ ಮಂಜುನಾಥ್ ರವರೇ ನಿರ್ವಹಿಸಲಿದ್ದಾರೆ ಎಂದು ತಿಳಿಯಿತು.

ನಿಮ್ಮ ಹಿನ್ನೆಲೆ ಏನು? : ನಾನು ಮೂಲತಃ ಶೃಂಗೇರಿಯ ಚಿಕ್ಕ ಹಳ್ಳಿಯಿಂದ ಬಂದವಳು. ಓದು ಮುಗಿಸಿ ಅನಿವಾರ್ಯ ಕಾರಣಗಳಿಂದ ಕೆಲಸಕ್ಕಾಗಿ ಬೆಂಗಳೂರಿಗೆ ಬಂದೆ. ಆಕ್ಟಿಂಗ್ ಮೇಲೆ ಒಲವಿದ್ದುದರಿಂದ ನಾಟಕಕ್ಕೆ ಸೇರಿಕೊಂಡೆ.
ಸ್ಟಾರ್ ಕನ್ನಡಿಗನ ಬಗ್ಗೆ ಹೇಳಿ… : ಕನ್ನಡದಲ್ಲಿ ಪ್ರತಿ ವಾರ ೪ರಿಂದ ೫ ಸಿನಿಮಾಗಳು ಬರ್ತಿವೆ. ಹೊಸ ಹೊಸ ಪ್ರತಿಭೆಗಳು ಕನ್ನಡ ಸಿನಿಮಾಕ್ಕೆ ಪರಿಚಯವಾಗ್ತಿದ್ದಾರೆ. ಬೆಂಗಳೂರು ತುಂಬಾ ಬೇಗೆ ಬೆಳೆಯುತ್ತಿರುವ ನಗರವಾದ್ದರಿಂದ ಬೇರೆ ಬೇರೆ ದೇಶ ಬೇರೆ ಬೇರೆ ಊರುಗಳಿಂದ ಬಂದು ಇಲ್ಲಿ ಬದುಕು ಕಂಡುಕೊಳ್ಳುತ್ತಿದ್ದಾರೆ. ಇದರಿಂದಾಗಿ ಕನ್ನಡದ ಬಗ್ಗೆ ಕನ್ನಡಿಗರಿಗೇ ಅಭಿಮಾನ ಕಡಿಮೆಯಾಗುತ್ತಾ ಬರುತ್ತಿದೆ, ಅದಾಗಬಾರದು. ನಮ್ಮ ಕರ್ನಾಟಕದಲ್ಲಿ ಕನ್ನಡ ಉಳೀಬೇಕು, ಬೆಳೀಬೇಕು. ನಮ್ಮ ಕನ್ನಡ ಚಿತ್ರರಂಗದಲ್ಲಿ ಕನ್ನಡವನ್ನು ಉಳಿಸಿಕೊಳ್ಳೊದಕ್ಕೆ ಸಿಕ್ಕಿರೋ ಒಂದು ಅವಕಾಶ ಇದು. ಕನ್ನಡ ಸಿನಿಮಾ ಅಂದ್ರೆ ಒಂದು ಎಂಟರ್‌ಟೈನ್‌ಮೆಂಟ್ ಅಲ್ಲದಲೆ ಕನ್ನಡ ಉಳಿಸಿಕೊಳ್ಳೋ ಒಂದು ಪ್ರಯತ್ನ ಇದು. ಬನ್ನಿ ಸಿನಿಮಾ ನೋಡಿ ಕನ್ನಡ ಉಳಿಸಿ ಅಂತ ಕೇಳೋ ಅನಿವಾರ್ಯತೆ ಬರಬಾರದು. ಕನ್ನಡಿಗರು ಅವರಾಗೇ ಬಂದು ಕನ್ನಡ ಸಿನಿಮಾಗಳನ್ನು ನೋಡಬೇಕು, ಕನ್ನಡವನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಸ್ಟಾರ್ ಕನ್ನಡಿಗ ಚಿತ್ರ ಕನ್ನಡದ ಮೇಲಿನ ಅಭಿಮಾನ ಇಟ್ಟು ಕನ್ನಡದ ಹುಡುಗರು ಈ ಚಿತ್ರವನ್ನು ಮಾಡಿದ್ದಾರೆ. ಕನ್ನಡ ಉಳಿಸಿಕೊಳ್ಳೋಕೆ ಎಲ್ಲರೂ ಇದರಲ್ಲಿ ಶ್ರಮ ಪಟ್ಟಿದ್ದೇವೆ. ದಯವಿಟ್ಟು ಎಲ್ಲ ಪ್ರೇಕ್ಷಕರೂ ಬಂದು ಈ ಚಿತ್ರವನ್ನು ನೋಡಬೇಕು. ಎಲ್ಲ ಭಾಷೆಗಳನ್ನು ಗೌರಿಸೋಣ. ಇದರೊಂದಿಗೆ ಕನ್ನಡವನ್ನೂ ಉಳಿಸಿ ಬೆಳೆಸೋಣ.

ಸಿನಿಮಾದಲ್ಲಿ ನಟಿಸೋ ಮುಂಚೆ ಎಲ್ಲಾದರೂ ನಟನೆಯಲ್ಲಿ ಕೋರ್ಸ್ ಮಾಡಿದ್ರಾ : ನನ್ನ ತಂದೆ ತಾಯಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ನನಗೂ ಸಹ ಇದರಲ್ಲಿ ಆಸಕ್ತಿ ಇದ್ದುದರಿಂದ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಆದರೆ ಬೆಂಗಳೂರಿನಲ್ಲಿ ಒಂದು ಕಂಪನಿ ಕೆಲಸ ಬಿಟ್ಟು ನಾನು ಏನೋ ಸಾಧನೆ ಮಾಡಬೇಕು ಅಂತ ಬಂದಾಗ ಯಾರನ್ನ ಕೇಳಬೇಕು, ಹೇಗೆ ಅಪ್ರೋಚ್ ಮಾಡಬೇಕು ಎಂಬುದು ತಿಳಿಯಲಿಲ್ಲ. ಆಪ್ತರೊಬ್ಬರು ನಾಟಕಗಳಲ್ಲಿ ಅಭಿನಯಿಸಬೇಕೆಂದರೆ ಆಕ್ಟಿಂಗ್ ಕೋರ್ಸ್‌ಗೆ ಸೇರಿಕೊ ಎಂಬ ಸಲಹೆ ನೀಡಿದರು. ನಾನು ನಾಗರಾಜ್ ಕೋಟೆ ಅವರ ಬಣ್ಣ ಅಭಿನಯ ಶಾಲೆಗೆ ಸೇರಿಕೊಂಡೆ. ನಾಟಕದಲ್ಲಿ ಅಭಿನಯಿಸುವ ಒಲವಿದ್ದರಿಂದ ಸಿನಿಮಾ, ಟಿವಿಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಇರಲಿಲ್ಲ.
ಈ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ? : ಸ್ಟಾರ್ ಕನ್ನಡಿಗ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ರೂಪ. ಆಟೋ ಡ್ರೈವರ್ ಪಾತ್ರ ನಿರ್ವಹಿಸಿದ್ದೇನೆ. ಒಬ್ಬ ಅನಾಥೆ, ಓದನ್ನೂ ಮುಂದುವರೆಸಿಕೊಂಡು ಆಟೋ ಚಾಲಕಿಯಾಗಿ ಸ್ವಾಭಿಮಾನಿಯಾಗಿ ಹೆಣ್ಣೊಬ್ಬಳು ಪ್ರೀತಿಯ ಬಲೆಗೆ ಬಿದ್ದು ಮೋಸ ಹೋಗುವಂತಹ ಪಾತ್ರ. ಈಗಿನ ಜನರೇಷನ್ ನೋಡಲೇಬೇಕಾದಂತಹ ಕಥೆ.

ನಟನೆಗೆ ಬರುವ ಮುಂಚೆ ಏನೆಲ್ಲಾ ತಯಾರಿ ಮಾಡಿಕೊಂಡಿದ್ದಿರಿ? : ಶೃಂಗೇರಿಯ ಶಾರದಾಂಬೆಯ ಮಡಿಲಿನ ಊರು ನನ್ನದು. ಪಕ್ಕ ಆರ್ಥೋಡೆಕ್ಸ್ ಬ್ರಾಹ್ಮ ಕುಟುಂಬ. ನನ್ನ ಕುಟುಂಬದಲ್ಲಿ ವೇದ-ಮಂತ್ರಗಳನ್ನು ಕಲಿತು, ಮಾಸ್ಟರ್ ಡಿಗ್ರಿ ಪೂರೈಸಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾನು ಮಾತ್ರ ಬಣ್ಣದ ಲೋಕವೆಂಬ ಬೇರೆಯದೇ ಬದುಕನ್ನು ಆಯ್ಕೆ ಮಾಡಿಕೊಂಡೆ. ಇದಕ್ಕೆ ಮನೆಯವರೆಲ್ಲರ ವಿರೋಧವೂ ಇತ್ತು. ನನ್ನದೊಂದು ಚಿಕ್ಕ ಹಳ್ಳಿಯಾದ್ದರಿಂದ ಅಲ್ಲಿನ ಜನರ ಮನಸ್ಥಿತಿ ಬೇರೆಯದೇ ಆಗಿತ್ತು. ಇವೆಲ್ಲವನ್ನೂ ಮೀರಿ ಆ ಬಾರ್ಡರ್ ದಾಟಿ ಈ ರಂಗಕ್ಕೆ ಬಂದಾಗ ಎಲ್ಲರಿಗೂ ಬೇಸರವಾಯಿತು. ನಾನು ನಾಟಕಗಳಿಂದ ಸೀರಿಯಲ್‌ಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದೆ. ಸೀರಿಯಲ್‌ಗಳು ಟೆಲಿಕಾಸ್ಟ್ ಆಗಿ ನನ್ನ ಊರಿನವರೆಲ್ಲಾ ನೋಡಿ ಖುಷಿಪಟ್ಟರು. ಎಲ್ಲರನ್ನೂ ಗೌರವಿಸುತ್ತಾ ಬಂದಿದ್ದೇನೆ. ಅವರೆಲ್ಲರ ನಂಬಿಕೆಯನ್ನು ಉಳಿಸಿಕೊಂಡು ಹೋಗುತ್ತಿದ್ದೇನೆ.
ನಿರ್ದೇಶಕ ಕಂ ಹೀರೋ ಮಂಜುನಾಥ್ ಅವರ ಬಗ್ಗೆ ಹೇಳಿ : ಮಂಜುನಾಥ್ ಅವರು ಅಂದಾಕ್ಷಣ ನೆನಪಾಗೋದು ತುಂಬಾ ಶ್ರಮಜೀವಿ, ಟ್ಯಾಲೆಂಟೆಡ್, ತುಂಬಾ ಸೀರಿಯಸ್ ವರ್ಕರ್. ಸಿನಿಮಾ ಗೆಲ್ಲಬೇಕು, ನನ್ನ ಹುಡುಗರಿಗೆಲ್ಲಾ ಒಂದು ಒಳ್ಳೆ ಭವಿಷ್ಯ ರೂಪಿಸಬೇಕು. ನನ್ನನ್ನು ನಂಬಿ ಅವರೆಲ್ಲಾ ದುಡ್ಡು ಹಾಕಿದ್ದಾರೆ. ಎಲ್ಲರೂ ಅಟೋ, ಕ್ಯಾಬ್ ಓಡಿಸ್ಕೊಂಡು ಒಂದಷ್ಟು ಕೂಡಿಟ್ಟ ಹಣವನ್ನು ನನ್ನ ಸ್ಟೋರಿ ನಂಬಿಕೊಂಡು ಈ ಸಿನಿಮಾದಲ್ಲಿ ಹಾಕಿದ್ದಾರೆ. ಅವರೆಲ್ಲರ ಭವಿಷ್ಯ ರೂಪಿಸಬೇಕು, ಅವರೂ ಸಹ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದೊಳ್ಳೆ ಜೀವನ ರೂಪಿಸಿಕೊಳ್ಳಬೇಕು ಅನ್ನೋ ಛಲದಿಂದ ಒಳ್ಳೇ ಕೆಲಸ ಮಾಡುತ್ತಿದ್ದಾರೆ. ಅವರು ಗೆಲ್ಲಬೇಕು, ಅವರ ಟೀಮ್ ಗೆಲ್ಲಬೇಕು ಅಂತ ಹಾರೈಸುತ್ತೇನೆ.











































