ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪಿ. ವಾಸು, ಗುರುಕಿರಣ್, ರಚಿತಾ ರಾಮ್, ಅನಂತ್ ನಾಗ್ ಜೊತೆಗೆ ದ್ವಾರಕೀಶ್ ಚಿತ್ರ ನಿರ್ಮಾಣ- ಇಷ್ಟೆಲ್ಲಾ ಕಾಂಬಿನೇಷನ್ ಇರುವ ಚಿತ್ರ ಆಯುಷ್ಮಾನ್ ಭವ. ಇದೇ ತಿಂಗಳು ೧೫ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ರಿಲೀಸಿಗೆ ದಿನ ಹತ್ತಿರಾಗುತ್ತಿದ್ದಂತೇ ಆಯುಷ್ಮಾನ್ ಭವದ ಬಗ್ಗೆ ಕುತೂಹಲ ಹೆಚ್ಚುತ್ತಲೇ ಇದೆ.

ಈಗ ನಿಧಿ ಸುಬ್ಬಯ್ಯ ಪಾಲ್ಗೊಂಡಿರುವ ತೆಂಬರೆ ಬೊಟ್ಟುವಾನ ಎನ್ನುವ ಹಾಡಿನ ಲಿರಿಕಲ್ ವಿಡಿಯೋ ರಿಲೀಸಾಗಿದೆ. ತೀರಾ ಹೊಸದೆನ್ನುವ ಸೌಂಡು, ಸಾಲುಗಳಿರುವ ಈ ಗೀತೆ ಆಲಿಬಾಬಾ ಎಂದು ಶುರುವಾಗುತ್ತದೆ. ಎಂಥವರೂ ಎದ್ದೆದ್ದು ಕುಣಿಯುವಂತೆ ಇರುವ ಈ ಹಾಡಿನಲ್ಲಿ ನಿಧಿ ಸುಬ್ಬಯ್ಯ ಮಾದಕವಾಗಿ ಸ್ಟೆಪ್ ಹಾಕಿದ್ದಾರೆ.

ಇದೇ ನವೆಂಬರ್ ೧೫ರಂದು ತೆರೆಗೆ ಬರುತ್ತಿರುವ ಆಯುಷ್ಮಾನ್ ಭವ ಚಿತ್ರದ ಟ್ರೇಲರ್ ಗಾಗಿ ಶಿವಣ್ಣನ ಅಭಿಮಾನಿಗಳು ಮಾತ್ರವಲ್ಲ, ಇಡೀ ಚಿತ್ರರಂಗ ಕಾದಿದೆ. ಯಾವುದೇ ಗದ್ದಲವಿಲ್ಲದೆ ಶೂಟಿಂಗ್ ಮುಗಿಸಿಕೊಂಡು, ಸಮಾಧಾನವಾಗಿ ಬಿಡುಗಡೆಯಾಗುತ್ತಿರುವ ಆಯುಷ್ಮಾನ್ ಭವ ಸಿನಿಮಾದ ಕುರಿತಾಗಿ ಜನರಲ್ಲಿ ಕುತೂಹಲ ಮನೆ ಮಾಡಲೂ ಕಾರಣಗಳಿವೆ. ದ್ವಾರಕೀಶ್ ಚಿತ್ರದಿಂದ ನಿರ್ಮಾಣವಾಗುವ ಯಾವುದೇ ಸಿನಿಮಾಗಳು ಜನಮೆಚ್ಚುವಂತಾ ಕಂಟೆಂಟ್ ಹೊಂದಿರುತ್ತವೆ. ಹೀರೋ ಡೇಟ್ಸ್ ಇದೆ, ಡೈರೆಕ್ಟರ್ ಸಿಕ್ಕಿದ್ದಾರೆ ಅಂತಾ ಸಂತೆ ಹೊತ್ತಿಗೆ ಸೀರೆ ನೇಯುವ ಜಾಯಮಾನ ದ್ವಾರಕೀಶ್ ಚಿತ್ರದಲ್ಲ. ಸಾಮಾನ್ಯಕ್ಕೆ ಕಮರ್ಷಿಯಲ್ ಹೀರೋಗಳ ಸಿನಿಮಾವನ್ನು ವ್ಯಾಪಾರೀ ದೃಷ್ಟಿಯಿಂದಷ್ಟೇ ಬಹುತೇಕರು ರೂಪಿಸುತ್ತಾರೆ. ಆದರೆ ದ್ವಾರಕೀಶ್ ಚಿತ್ರದ ಹಿಂದೆ ಹಲವಾರು ಪ್ರತಿಭಾವಂತರ ತಂಡವಿದೆ. ಮೇಲಾಗಿ ದ್ವಾರಕೀಶ್ ಅವರ ಪುತ್ರ ಯೋಗಿ ಕತೆಯೊಂದನ್ನು ಒಪ್ಪಿದರು ಅಂದರೆ, ಆ ಸಿನಿಮಾದಲ್ಲಿ ಗಟ್ಟಿಯಾದ ಕಥೆ ಇದೆ ಎಂದೇ ಅರ್ಥ.

ಒಂದು ನಿರ್ಮಾಣ ಸಂಸ್ಥೆ ಬರೋಬ್ಬರಿ ಐವತ್ತು ವರ್ಷ ಪೂರೈಸಿ, ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸುವುದೆಂದರೆ ಸುಮ್ಮನೆ ಮಾತಲ್ಲ. ದ್ವಾರಕೀಶ್ ಚಿತ್ರವೆಂಬ ಬ್ಯಾನರು ಅದನ್ನು ಸಾಧಿಸಿದೆ. ಈ ಸಂಸ್ಥೆ ಆರಂಭಗೊಂಡು ಅರ್ಧ ಶತಮಾನದ ಸಂಭ್ರಮಕ್ಕೆ ಆಯುಷ್ಮಾನ್ ಭವ ಎನ್ನುವ ಕಂಪ್ಲೀಟ್ ಫ್ಯಾಮಿಲಿ ಸಬ್ಜೆಕ್ಟಿನ ಸಿನಿಮಾವೊಂದನ್ನು ಉಡುಗೊರೆಯಾಗಿ ನೀಡುತ್ತಿದೆ. ಈ ಸಿನಿಮಾ ಹೇಳಿ ಕೇಳಿ ಮನೆಮಂದಿಯೆಲ್ಲಾ ಕೂತು ನೋಡುವ ಚಿತ್ರವಾಗಿದೆ ಅನ್ನೋದಕ್ಕೆ ಈಗ ಬಿಡುಗಡೆಯಾಗಿರುವ ಟ್ರೇಲರೇ ಸಾಕ್ಷಿ!











































