ದೇವರ ಸ್ನಾನ ತೋರಿಸೋದು ತಪ್ಪಾ?

Picture of Cinibuzz

Cinibuzz

Bureau Report

ಸಿನಿಮಾದಿಂದ ಸಿನಿಮಾಗೆ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವ, ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದುತ್ತಾ ತನ್ನದೇ ಆದ ಪ್ರೇಕ್ಷಕರನ್ನು ಪಡೆಯುತ್ತಿರುವ ನಟ ವಿಜಯ್ ಸೇತುಪತಿ. ಪಾತ್ರ ಯಾವುದಾದರೂ ಸರಿ ಅದಕ್ಕೆ ಒಗ್ಗಿಕೊಂಡು ನಟಿಸುವುದನ್ನೇ ಧ್ಯಾನವಾಗಿಸಿಕೊಂಡಿರುವ ಈತ ಸದ್ಯ ತಮಿಳು ಚಿತ್ರರಂಗದ ಸ್ಟಾರ್‌ ನಟ.

ವಿಜಯ್‌ ಸೇತುಪತಿ  ನಿರೂಪಣೆಯ ʻನಮ್ಮ ಊರು ಹೀರೋʼ ಎನ್ನುವ ಶೋವೊಂದು ಸನ್‌ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಆ ಕಾರ್ಯಕ್ರಮದಲ್ಲಿ ಹಿಂದೂ ದೇವಾಲಯಗಳ ಕುರಿತಾಗಿ ಹುಡುಗಿಯೊಬ್ಬಳು ಕೇಳಿದ ಪ್ರಶ್ನೆಗೆ ವಿಜಯ್‌ ʻಹಿಂದೂ ದೇವಾಲಯಗಳಲ್ಲಿ ವಿಗ್ರಹಗಳಿಗೆ ಸ್ನಾನ ಮಾಡಿಸುವುದನ್ನು ಜನರ ವೀಕ್ಷಣೆಗೆ ಬಿಡುವ ಪುರೋಹಿತರು, ಆ ವಿಗ್ರಹಕ್ಕೆ ಅಲಂಕಾರ ಮಾಡುವುದನ್ನು ಮುಚ್ಚಿಡುತ್ತಾರೆʼ ಎಂದು ಉತ್ತರಿಸಿದ್ದರು. ಈ ಕಾರ್ಯಕ್ರಮ ಪ್ರಸಾರವಾಗಿ ವ‍ರ್ಷ ಕಳೆದ ಮೇಲೆ ಈಗ ವಿವಾದ ಹುಟ್ಟಿಕೊಂಡಿದೆ. ಈ ಬಗ್ಗೆ ಅಖಿಲ ಭಾರತ ಹಿಂದೂ ಸಭಾದವರು ತಿರುಚಿ ಪೊಲೀಸ್‌ ಠಾಣೆಯಲ್ಲಿ ಸೇತುಪತಿ ವಿರುದ್ಧ ದೂರು ನೀಡಿದ್ದಾರೆ. ಸದಾ ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ, ಅವರಿವರ ಮೇಲೆ ಆರೋಪ ಮಾಡಿ ಪ್ರಚಾರ ಪಡೆಯುವ  ತಮಿಳುನಾಡಿನ ಬಿಜೆಪಿ ನಾಯಕ ಹೆಚ್.‌ ರಾಜಾ ವಿಜಯ್‌ ಸೇತುಪತಿಯನ್ನು ಈ ಕೂಡಲೇ ಬಂಧಿಸಬೇಕು ಎಂದು ಗುಟುರು ಹಾಕಿದ್ದಾನೆ. ವಿಜಯ್‌ ಸೇತುಪತಿಯ ಮಾತಿನಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ದೇವಾಲಯಗಳ ಆಚರಣೆ ಬಗ್ಗೆ ಆತ ಹೀಗೆಲ್ಲಾ ಮಾತಾಡಬಾರದಿತ್ತು. ಈ ಕಾರಣಕ್ಕೆ ಸೇತುಪತಿಗೆ ಶಿಕ್ಷೆ ನೀಡಬೇಕು ಎಂದು ಆರ್ಭಟಿಸಿದ್ದಾನೆ.

ಇತರೆ ಭಾಷೆಗಳಿಗೆ ಹೋಲಿಸಿದರೆ ತಮಿಳಿನಲ್ಲಿ ವಿಚಾರವಾದಿ ಹೀರೋಗಳಿದ್ದಾರೆ. ತಮ್ಮ ಸಿನಿಮಾಗಳ ಮೂಲಕ ಮೌಢ್ಯವನ್ನು ವಿರೋಧಿಸುತ್ತಾ, ಜನರನ್ನು ಜಾಗೃತಗೊಳಿಸುತ್ತಾ ಬಂದಿರುವ ನಾಯಕನಟರು, ಕಲಾವಿದರು ಅಲ್ಲಿದ್ದಾರೆ. ಸಿನಿಮಾಗಳ ಮೂಲಕವೇ ಚಳವಳಿ ಕಟ್ಟುವ ತಾಕತ್ತು ಕೂಡಾ ಅವರಲ್ಲಿದೆ.   ಸದ್ಯ ವಿಜಯ್‌ ಸೇತುಪತಿಯ ಕಾರ್ಯಕ್ರಮ ಟೆಲಿಕಾಸ್ಟ್‌ ಆಗಿ ವರ್ಷದ ನಂತರವೂ ಅದು ಕಾವು ಪಡೆದು ವಿವಾದಕ್ಕೆ ಕಾರಣವಾಗಿದೆಯೆಂದರೆ ಅಲ್ಲಿನ ಜನ ಯಾವ ರೇಂಜಿಗೆ ಡಿಸ್ಟರ್ಬ್‌ ಆಗಿರಬಹುದು ಲೆಕ್ಕಹಾಕಿ!

ಇನ್ನಷ್ಟು ಓದಿರಿ

Scroll to Top