ಇದು ವಿಜಯ ಪ್ರಸಾದ್ ಪ್ರಯೋಗ!

Picture of Cinibuzz

Cinibuzz

Bureau Report

ಇದು ಸ್ಕಿಟ್ಟಾ? ಸಂದರ್ಶನವಾ? ಕಿರುಚಿತ್ರಾನಾ? ಅನ್ನೋದು ಕರಾರುವಕ್ಕಾಗಿ ತಿಳಿದುಬಂದಿಲ್ಲ. ಒಟ್ಟಿನಲ್ಲಿ ವಿಜಯಪ್ರಸಾದ್ ವಿಶೇಷವಾದ ಅಟೆಂಪ್ಟ್ ಮೂಲಕ ಎದುರಾಗಲಿದ್ದಾರೆ ಅನ್ನೋದಷ್ಟೇ ನಿಜ!

ಬದುಕಿನುದ್ದಕ್ಕೂ ದುಡಿಯೋದು ಇದ್ದೇ ಇರುತ್ತದೆ ಅಂತಾ ಒಂದಷ್ಟು ಜನ ಕೊರೋನಾ ರಜೆಯನ್ನು ವಿಶ್ರಾಂತಿಗಾಗಿ ಮೀಸಲಿಟ್ಟಿದ್ದಾರೆ. ಆದರೆ ಕ್ರಿಯಾಶೀಲ ಜೀವಗಳು ಕೊರೋನಾ, ಲಾಕ್ ಡೌನು ಅಂತಾ ಕೈಕಾಲು ಕಟ್ಟಿ ಕೂರಿಸಿದರೂ ಹೊಸದೇನನ್ನೋ ಸೃಷ್ಟಿಸುವ ತವಕದಲ್ಲಿರುತ್ತಾರೆ. ಸಿದ್ಲಿಂಗು, ನೀರ್ ದೋಸೆ, ತೋತಾಪುರಿ, ಈಗ ಪರಿಮಳ ಲಾಡ್ಜ್ ನಂಥಾ ಘಮ್ಮೆನ್ನುವ ಸಿನಿಮಾಗಳ ಮೂಲಕವೇ ಖ್ಯಾತಿ ಪಡೆದಿರುವ ನಿರ್ದೇಶಕ ವಿಜಯ ಪ್ರಸಾದ್. ಸೀರಿಯಲ್ ಯುಗದಲ್ಲಿದ್ದಾಗಲೇ ಸಾಕಷ್ಟು ಹೊಸತುಗಳನ್ನು ಸೃಷ್ಟಿಸಿದ ವಿಜಯಪ್ರಸಾದ್ ತಾವು ನಿರ್ದೇಶಿಸಿದ ಎಲ್ಲ ಸಿನಿಮಾಗಳಲ್ಲೂ ತಮ್ಮತನದ ಸಿಗ್ನೇಚರ್ ಮೂಡಿಸಿದ್ದಾರೆ. ಹಾಗೆ ನೋಡಿದರೆ ವಿಜಯಪ್ರಸಾದ್ ಸ್ಪೀಡಿಗೆ ಇಷ್ಟೊತ್ತಿಗೆ ಇನ್ನೂ ನಾಲ್ಕಾರು ಸಿನಿಮಾಗಳನ್ನು ಹೆಚ್ಚಿಗೇ ನಿರ್ದೇಶಿಸಬಹುದಿತ್ತು. ಅದು ಸಾಧ್ಯವಾಗದೇ ಇರಲು ನೂರೆಂಟು ಕಾರಣಗಳೂ ಇವೆ. ಸದ್ಯ ಕೊರೋನಾ ಪ್ರಾಬ್ಲಮ್ಮಿನ ಸುತ್ತ ಸೃಷ್ಟಿಯಾಗಿರುವ ಅಧ್ವಾನಗಳ ಸುತ್ತ ಸಣ್ಣದೊಂದು ಕಿರುಚಿತ್ರದಂತಾ ಮೆಟೀರಿಯಲ್ಲನ್ನು ವಿಜಯ್ ಪ್ರಸಾದ್ ರೆಡಿ ಮಾಡುತ್ತಿದ್ದಾರೆ.

ಪ್ರೇಕ್ಷಕರಿಗೂ ಥೇಟರುಗಳಿಗೂ ಬಿಟ್ಟೂಬಿಡಲಾರದ ನಂಟಿದೆ. ಖುಷಿಯಾದಾಗಲೂ, ಬೇಸರವಾದರೂ ಕರೆದು ಕೂರಿಸಿ ಸಾಂತ್ವನ ಹೇಳುವ ತಾಕತ್ತು ಥೇಟರಿನ ಸೀಟುಗಳಿಗಿದೆ. ನೊಂದ ಮನಸ್ಸನ್ನು ಪ್ರಫುಲ್ಲಗೊಳಿಸುವ ಶಕ್ತಿ ಬೆಳ್ಳಿಪರದೆಗಿದೆ. ಈ ಕತ್ತಲು ಬೆಳಕಿನ ಪುಟ್ಟ ಜಗತ್ತನ್ನು ಬಿಟ್ಟು ಜನ ಜೀವಿಸಲು ಸಾಧ್ಯವಾ? ಇವತ್ತು ಸಿನಿಮಾಗಳು ಓಟಿಟಿ ಪ್ಲಾಟ್’ಫಾರ್ಮುಗಳಲ್ಲೆಲ್ಲಾ ಪ್ರದರ್ಶನಗೊಳ್ಳುತ್ತಿವೆಯಲ್ಲಾ? ಬೆರಳ ತುದಿಯಲ್ಲಿ ಸಾವಿರ ಸಿನಿಮಾಗಳು ಲಾಟು ಬಿದ್ದಿವೆ. ಹಾಗಂತಾ ಮಂದಿ ಥೇಟರಿಗೆ ಬರೋದನ್ನು ನಿಲ್ಲಿಸಿಬಿಟ್ಟರಾ? ವೈರಸ್ಸಿಗೆ ಹೆದರಿ ಪ್ರೇಕ್ಷಕರು ಇನ್ನುಮುಂದೆ ಚಿತ್ರಮಂದಿರಗಳತ್ತ ಮುಖ ಮಾಡುವುದಿಲ್ಲವಾ? ಕೊರೋನಾದ ಸೈಡ್ ಎಫೆಕ್ಟಿನಿಂದ ಚಿತ್ರರಂಗ ಹೇಗೆ ಚೇತರಿಸಿಕೊಳ್ಳುತ್ತದೆ? ಸಿನಿಮಾ ಥೇಟರಿಗೆ ಬಂದಮೇಲೆ ಅದನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ವಿಜಯಪ್ರಸಾದ್ ಉತ್ತರ ನೀಡುವ ಪ್ರಯತ್ನ ಮಾಡುತ್ತಿದ್ದಾರಂತೆ.

ಈ ಪ್ರಯತ್ನದಲ್ಲಿ ನೀನಾಸಂ ಸತೀಶ್, ಡಾಲಿ ಧನಂಜಯ, ಲೂಸ್ ಮಾದ ಯೋಗಿ, ಗೊಂಬೆಗಳ ಲವ್ ಅರುಣ್ ಮುಂತಾದವರು ಭಾಗಿಯಾಗಿದ್ದಾರಂತೆ. ಎಂದಿನಂತೆ ಇಲ್ಲಿಯೂ ವಿಜಯಪ್ರಸಾದ್ ಅವರ ಅಚ್ಛರಿಯ ಸಾಲುಗಳಿಯಂತೆ. ಇದು ಸ್ಕಿಟ್ಟಾ? ಸಂದರ್ಶನವಾ? ಕಿರುಚಿತ್ರಾನಾ? ಅನ್ನೋದು ಕರಾರುವಕ್ಕಾಗಿ ತಿಳಿದುಬಂದಿಲ್ಲ. ಒಟ್ಟಿನಲ್ಲಿ ವಿಜಯಪ್ರಸಾದ್ ವಿಶೇಷವಾದ ಅಟೆಂಪ್ಟ್ ಮೂಲಕ ಎದುರಾಗಲಿದ್ದಾರೆ ಅನ್ನೋದಷ್ಟೇ ನಿಜ!

ಇನ್ನಷ್ಟು ಓದಿರಿ

Scroll to Top