ಖಳ ನಟನಾಗಿ ಕೋಟೆ ಕಟ್ಟಲಿದ್ದಾರೆ ಕಿಟ್ಟಿ!

Picture of Cinibuzz

Cinibuzz

Bureau Report

ಉಪೇಂದ್ರ ಅಭಿನಯದ ಜಯರಾಮ್‌ ಭದ್ರಾವತಿ ನಿರ್ದೇಶನದ ಬುದ್ದಿವಂತ-೨ ಚಿತ್ರದಲ್ಲಿ ಕಿಟ್ಟಿ ಪ್ರಮುಖ ವಿಲನ್‌ ಆಗಿ ನಟಿಸಿದ್ದಾರೆ. ಬೆಂಗಳೂರಿನಿಂದ ಮಂಗಳೂರಿನ ತನಕ ಇಪ್ಪತ್ತು ದಿನಗಳ ಚಿತ್ರೀಕರಣ ಕೂಡಾ ಈಗಾಗಲೇ ನೆರವೇರಿದೆ.

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಲ್ಲಿ ಶ್ರೀನಗರ ಕಿಟ್ಟಿ ಪ್ರಮುಖರು. ತೀರಾ ಸಣ್ಣ ವಯಸ್ಸಿಗೇ ನಟನಾವೃತ್ತಿಗಿಳಿದ ಕಿಟ್ಟಿ ರಂಗಭೂಮಿ, ಕಿರುತೆರೆಗಳನ್ನು ಧಾಟಿ ಸಿನಿಮಾಗೆ ಬಂದವರು. ಆರಂಭದ ದಿನಗಳಲ್ಲಿ ಖಳನಟನಾಗಿ ಕಾಣಿಸಿಕೊಂಡ ಕಿಟ್ಟಿ ಹೀರೋ ಆಗದೇ ಉಳಿದಿದ್ದರೆ ಈ ಹೊತ್ತಿಗೆ ಬರೀ ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಬಿಡುವಿರದ ನಟನಾಗಿರುತ್ತಿದ್ದರು.

ಹಾಗೆಂದು ಕಿಟ್ಟಿ ಹೀರೋ ಆಗಿ ಸೋತಿಲ್ಲ. ನಾಯಕನಟನಾಗಿ ಮೇಲಿಂದ ಮೇಲೆ ಅವಕಾಶ ಸಿಗುತ್ತಾ ಹೋದಾಗ, ಆ ಒತ್ತಡದಲ್ಲಿ ಕಿಟ್ಟಿ ಯಾವುದನ್ನು ಒಪ್ಪುವುದು ಯಾವುದನ್ನು ಬಿಡುವುದು ಅನ್ನೋ ಗೊಂದಲದಲ್ಲಿ ಆಯ್ಕೆಯಲ್ಲಿ ಎಡವಿದ್ದು ನಿಜ. ಇಂತಿ ನಿನ್ನ ಪ್ರೀತಿಯ ಭಿನ್ನ ಸಿನಿಮಾ, ‘ಸವಾರಿ’ಯ ಥರದ ಕ್ಲಾಸಿಕ್ ಚಿತ್ರ, ಸಂಜು ವೆಡ್ಸ್ ಗೀತಾ ದಂಥ ಸೂಪರ್ ಹಿಟ್ ಚಿತ್ರ ಕೊಟ್ಟವರು ಕಿಟ್ಟಿ. ಯಾವತ್ತಿಗೂ ಇಂಥದ್ದೇ ಪಾತ್ರ ಬೇಕು ಅಂತಾ ಇಮೇಜಿಗೆ ಅಂಟಿಕೊಂಡು ಕುಂತವರಲ್ಲ. ಇಂಥ ಕಿಟ್ಟಿಯನ್ನು ನಮ್ಮ ಚಿತ್ರರಂಗದವರು ಸರಿಯಾಗಿ ಬಳಸಿಕೊಳ್ಳಲಿಲ್ಲ ಅಷ್ಟೇ.

ಹೆಚ್ಚೂಕಮ್ಮಿ ಧನಂಜಯ್ ಪರಿಸ್ಥಿತಿ ಕೂಡಾ ಹೀಗೇ ಆಗಿತ್ತು. ಆದರೆ, ಟಗರು ಅನ್ನೋ ಒಂದು ಚಿತ್ರ ಧನಂಜಯ್ ಇಮೇಜನ್ನೇ ಬದಲಿಸಿ ಡಾಲಿಯನ್ನಾಗಿ ರೂಪಾಂತರಗೊಳಿಸಿದೆ. ಹಾಗೆ ನೋಡಿದರೆ, ಶ್ರೀನಗರ ಕಿಟ್ಟಿ ಹೀರೋ ಆಗಿದ್ದ ಕಾಲದಿಂದಲೂ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಬಂದವರು. ಉಪೇಂದ್ರ ಅಭಿನಯದ ಜಯರಾಮ್‌ ಭದ್ರಾವತಿ ನಿರ್ದೇಶನದ ಬುದ್ದಿವಂತ-೨ ಚಿತ್ರದಲ್ಲಿ ಕಿಟ್ಟಿ ಪ್ರಮುಖ ವಿಲನ್‌ ಆಗಿ ನಟಿಸಿದ್ದಾರೆ. ಬೆಂಗಳೂರಿನಿಂದ ಮಂಗಳೂರಿನ ತನಕ ಇಪ್ಪತ್ತು ದಿನಗಳ ಚಿತ್ರೀಕರಣ ಕೂಡಾ ಈಗಾಗಲೇ ನೆರವೇರಿದೆ. ಉಪ್ಪಿ ಮತ್ತು ಕಿಟ್ಟಿ ಎದುರಾಬದುರು ನಿಂತು ಸವಾಲೊಡ್ಡುವಂತೆ ಅಬ್ಬರಿಸಿದ್ದಾರೆ.

ಈ ಚಿತ್ರದಲ್ಲಿ ಬುದ್ದಿವಂತನಿಗೇ ಟಕ್ಕರ್‌ ಕೊಡವ ಪಾತ್ರ ಕಿಟ್ಟಿ ಅವರದ್ದು. ಮೈಂಡ್‌ ಗೇಮ್‌ ಕ್ರಿಯೇಟ್‌ ಮಾಡಿ, ಹೀರೋ ತಲೆಗೆ ಕೆಲಸ ಕೊಡುವ ಕೆಲಸ ಕಿಟ್ಟಿ ಪಾತ್ರ ಕೂಡಾ ಪವರ್‌ ಫುಲ್‌ ಆಗಿ ಮೂಡಿಬಂದಿದೆಯಂತೆ. ಶೂಟಿಂಗ್‌ ಸಮಯದಲ್ಲಿ ಕಿಟ್ಟಿ ಪಾತ್ರವನ್ನು ನೋಡಿದವರು ʻಅಬ್ಬಬ್ಬ ಭಯ ಹುಟ್ಟಿಸುವಂತೆ ನಟಿಸಿದ್ದಾರೆʼ ಎಂದು ಅಚ್ಛರಿ ವ್ಯಕ್ತಪಡಿಸುತ್ತಿದ್ದಾರೆ. ಬಿಡುಗಡೆಯಾಗಬೇಕಿರುವ ಸಿಂಪಲ್ ಸುನಿ ನಿರ್ದೇಶನದ ಅವತಾರ್ ಪುರುಷ ಚಿತ್ರದಲ್ಲಿ ವಾಮಾಚಾರ ಮಾಡುವ ಮಂತ್ರವಾದಿಯ ಪಾತ್ರದಲ್ಲಿ ನಟಿಸಿರುವ ಕಿಟ್ಟಿ ಬುದ್ಧಿವಂತ-೨ ಮೂಲಕ ಮೇನ್‌ ವಿಲನ್‌ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಕಿಟ್ಟಿಯಂಥಾ ಅಪ್ಪಟ ನಟನ ಪಾಲಿಗೆ ಅಕ್ಷರಶಃ ಪವಾಡವೊಂದು ನಡೆಯಬೇಕಾದ ಜರೂರತ್ತಿದೆ. ಯಾವುದೋ ಒಂದು ಬಗೆಯ ಪಾತ್ರಕ್ಕೆ ಸೀಮಿತವಾಗದೆ ಜನ ಊಹಿಸಲೂ ಸಾಧ್ಯವಾಗದಂಥ ರೋಲುಗಳು ಕಿಟ್ಟಿಗೆ ದಕ್ಕಬೇಕು. ಅದು ಘಟಿಸಬೇಕಾದರೆ ಬುದ್ಧಿವಂತ-೨ ರಿಲೀಸ್‌ ಆಗಬೇಕು.

ಟಿ.ಆರ್. ಚಂದ್ರಶೇಖರ್ ಅವರ ಕ್ರಿಸ್ಟಲ್ ಪಾರ್ಕ್ ಸಿನೆಮಾಸ್‌ ನ ಈ ಹಿಂದಿನ ಎಲ್ಲ ಸಿನಿಮಾಗಳಿಗಿಂತಲೂ ಹೆಚ್ಚು ಬಜೆಟ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಬುದ್ಧಿವಂತ-2. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಸಾಕಷ್ಟು ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಎಂ.ಜಯರಾಮ್ ‘ಬುದ್ಧಿವಂತ-2 ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top