ಕಿಚ್ಚ-ದಚ್ಚು ಮೀಟ್ ಮಾಡಿದ್ರಾ ಇಲ್ವಾ?
ಕನ್ನಡದ ಇಬ್ಬರು ಸೂಪರ್ ಸ್ಟಾರ್‌ಗಳ ಸಮಾಗಮವಾಗಿದೆ. ಮಲ್ಟಿಸ್ಟಾರ್ ಸಿನಿಮಾ ಶುರುವಾಯ್ತಾ? ಅಂತಾ ಪ್ರಶ್ನಿಸಬೇಡಿ. ಬಾದ್‌ಶಾ ಸುದೀಪ ಮತ್ತು ದರ್ಶನ್ ಇಬ್ಬರೂ ಒಂದೇ ಕೌಂಪೌಂಡಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಸುದೀಪ್ ಅವರ ಬಿಲ್ಲ ರಂಗ ಬಾಷ ಚಿತ್ರಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಅದ್ಭುತವಾದ ಸೆಟ್ ಹಾಕಲಾಗಿದೆ. ಅದೇ ಕಂಠೀರವ ಸ್ಟುಡಿಯೋದ ಮತ್ತೊಂದು ಫ್ಲೋರ್‌ನಲ್ಲಿ ದರ್ಶನ್ ನಟಿಸುತ್ತಿರುವ ಡೆವಿಲ್ ಕೂಡಾ ಚಿತ್ರೀಕರಣಗೊಳ್ಳುತ್ತಿದೆ.

ಯಾವುದೇ ಭಾಷೆಯ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳ ಕೆಲಸ ಅಕ್ಕ-ಪಕ್ಕದಲ್ಲೇ ನಡೆಯುತ್ತಿದೆ ಅಂದರೆ, ಪರಸ್ಪರರು ಒಬ್ಬರ ಸೆಟ್‌ಗೆ ಮತ್ತೊಬ್ಬರು ಹೋಗಿ ವಿಸಿಟ್ ಕೊಟ್ಟು ಬರುತ್ತಾರೆ. ಪುನೀತ್ ರಾಜ್ ಕುಮಾರ್ ಅವರಂತೂ ತಮ್ಮ ಸಿನಿಮಾದ ಚಿತ್ರೀಕರಣದ ಆಸುಪಾಸಿನಲ್ಲಿ ಯಾರದ್ದೇ ಚಿತ್ರದ ಶೂಟಿಂಗ್ ನಡೆಯುತ್ತಿದೆ ಅಂತಾ ಗೊತ್ತಾದರೆ, ಹಿಂದೆ-ಮುಂದೆ ಯೋಚನೇನೆ ಮಾಡದೆ ಸೀದಾ ಹೋಗಿ ಅಲ್ಲಿದ್ದವರನ್ನು ಮಾತಾಡಿಸಿಕೊಂಡು ಬರುತ್ತಿದ್ದರು. ತಮ್ಮ ಶೂಟಿಂಗ್ ಸ್ಪಾಟ್‌ಗೆ ಹತ್ತಿರದಲ್ಲಿ ಗೊತ್ತಿರುವವರು ಯಾರಾದರೂ ಇದ್ದಾರೆ ಅಂದರೆ, ತಕ್ಷಣ ಅವರನ್ನು ಕರೆಸಿಕೊಂಡು, ಉಪಚಾರ ಮಾಡಿ ಕಳಿಸೋದನ್ನು ಸುದೀಪ್ ಕೂಡಾ ಪಾಲಿಸಿಕೊಂಡು ಬಂದಿದ್ದಾರೆ. ವರ್ಷದ ಹಿಂದೆ ಕಿಚ್ಚನ ಮ್ಯಾಕ್ಸ್ ಚಿತ್ರದ ಚಿತ್ರೀಕರಣ ಚೆನ್ನೈನಲ್ಲಿ ನಡೆದಿತ್ತು. ಅದೇ ದಿನ ಕನ್ನಡದ ನಾಲ್ಕಾರು ಜನ ಪತ್ರಕರ್ತರು ಚೆನ್ನೈ ಪ್ರವಾಸ ಹೋಗಿದ್ದರು. ವಿಚಾರ ತಿಳಿದ ಕಿಚ್ಚ ಕೂಡಲೇ ಅವರನ್ನು ಕರೆಸಿಕೊಂಡು ಮನಸಾರೆ ಮಾತಾಡಿಸಿ, ಟ್ರೀಟ್ ಕೊಟ್ಟು ಕಳಿಸಿದ್ದರು. ದರ್ಶನ್ ಕೂಡಾ ಇತರೆ ನಟರ ಚಿತ್ರೀಕರಣಕ್ಕೆ ವಿಸಿಟ್ ಕೊಟ್ಟ ಉದಾಹರಣೆಗಳಿವೆ.
ಸದ್ಯ ಕನ್ನಡ ಚಿತ್ರರಂಗದ ಪರಿಸ್ಥಿತಿಯಾಗಲಿ, ಇಲ್ಲಿನ ಹೀರೋಗಳ ಮನಸ್ಥಿತಿಯಾಗಲಿ ಅಷ್ಟು ಸರಿಯಿಲ್ಲ. ಒಂದು ಕಾಲದಲ್ಲಿ ಒಟ್ಟಿಗೇ ಓಡಾಡಿಕೊಂಡಿದ್ದವರ ನಡುವೆ ಬಿರುಕು ಮೂಡಿದೆ. ಅಕ್ಕಪಕ್ಕದಲ್ಲೇ ಇದ್ದರೂ ಪರಸ್ಪರರು ಭೇಟಿಯಾಗುವ ಗೋಜಿಗೆ ಹೋಗಿಲ್ಲ. ಹಾಗೆ ನೋಡಿದರೆ, ದರ್ಶನ್ ಕೆಟ್ಟ ಪರಿಸ್ಥಿತಿಯಲ್ಲಿದ್ದಾಗಲೂ ಅವರಿಗೆ ಒಳ್ಳೇದನ್ನೇ ಬಯಸಿದವರು ಸುದೀಪ್. ಹದಿನಾಲ್ಕು ವರ್ಷಗಳ ಹಿಂದೆ ಜೈಲಿಗೆ ಹೋದಾಗ ಇಡೀ ಚಿತ್ರರಂಗ ದರ್ಶನ್ ವಿರುದ್ಧ ತೊಡೆ ತಟ್ಟಿ ನಿಂತಿತ್ತು. ಅದು ಸಾರಥಿ ಬಿಡುಗಡೆ ಹಿಂದಿನ ರಾತ್ರಿ…. ಖುದ್ದು ನಿರ್ದೇಶಕ ದಿನಕರ್ ಅವರಿಗೆ ಕರೆ ಮಾಡಿದ ಕಿಚ್ಚ ಒಂದು ಮಾತು ಹೇಳಿದ್ದರು; ʻʻಇಡೀ ಜಗತ್ತು ನಿಮ್ಮ ನೆತ್ತಿಮೇಲೆ ಕಾಲಿಟ್ಟುಕೊಂಡು ನಿಂತಿದೆ. ಧೈರ್ಯದಿಂದ ಎದ್ದು ನಿಲ್ಲಿ. ಕಾಲಿಟ್ಟು ನಿಂತವರೆಲ್ಲಾ ತೊಪತೊಪನೆ ನೆಲಕ್ಕೊರಗಿಬಿಡ್ತಾರೆ…ʼʼ ನಿಮ್ಮ ಜೊತೆಗೆ ನಾನಿದ್ದೀನಿ… ಅಂತಾ ಧೈರ್ಯ ತುಂಬಿದ್ದರು. ಸಾರಥಿ ಅತ್ಯದ್ಭುತ ಯಶಸ್ಸನ್ನು ಕಂಡಿತು. ಕಿಚ್ಚ ನುಡಿದಿದ್ದ ಆ ಭವಿಷ್ಯ ಅಕ್ಷರಶಃ ನಿಜವಾಯ್ತು. ಇವೆಲ್ಲದರ ನಡುವೆ ಅದ್ಯಾವ ಕೇಡುಗರ ಕಣ್ಣು ಬಿತ್ತೋ ಏನೋ ಜೋಡೆತ್ತುಗಳಂತಿದ್ದವರ ನಡುವೆ ಭಯಾನಕ ಕಿತ್ತಾಟ, ಕದನಗಳೇರ್ಪಟ್ಟವು. ಆದರೆ, ಸುದೀಪ್ ಯಾವತ್ತೂ ಲಿಮಿಟ್ಟು ಮೀರಿ ವರ್ತಿಸಲಿಲ್ಲ. ತಮ್ಮ ಗಾಂಭೀರ್ಯವನ್ನು ತಾವು ಕಾಪಾಡಿಕೊಂಡೇ ಬಂದರು…. ಅದೆಲ್ಲ ಏನೇ ಇರಲಿ, ಕಡೇ ಪಕ್ಷ ಈ ಇಬ್ಬರೂ ನಟರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕಿತ್ತು. ಕಂಠೀರವ ಸ್ಟುಡಿಯೋ ಕನ್ನಡ ಚಿತ್ರರಂಗದ ಪಾಲಿಗೆ ಶಕ್ತಿಕೇಂದ್ರ. ಅದೇ ಕಾಂಪೌಂಡಿನಲ್ಲಿದ್ದೇವೆ ಅಂಥಾ ಗೊತ್ತಾದಮೇಲಾದರೂ ಒಬ್ಬರನ್ನೊಬ್ಬರು ಭೇಟಿ ಮಾಡಬೇಕಿತ್ತು. ದೌರ್ಭಾಗ್ಯವೆಂದರೆ, ಇಬ್ಬರೂ ಆ ಮನಸ್ಸು ಮಾಡಿಲ್ಲ. ಕಡೇಪಕ್ಷ ಔಪಚಾರಿಕವಾಗಿಯಾದರೂ ಪರಸ್ಪರರು ಮೀಟ್ ಮಾಡಿ, ಒಮ್ಮೆ ಕೈ ಕುಲುಕಿ ಬಂದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಎರಡೂ ಸಿನಿಮಾಗಳಿಗೆ ಸಂಬಂಧಿಸಿದ ಚಿತ್ರತಂಡದ ಯಾರೂ ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಸುಳಿದಾಡಬಾರದು ಅಂತಾ ಕಟ್ಟಪ್ಪಣೆಯಾಗಿತ್ತಂತೆ. ಬಿಲ್ಲನ ಬಿಡಾರಕ್ಕೆ ಹೋಗಬಾರದು ಅಂತಾ ಡೆವಿಲ್ ಕಡೆಯವರು ತಾಕೀತು ಮಾಡಿದ್ರೆ, ಡೆವಿಲ್ ಡೇರೆಯ ಕಡೆ ತಿರುಗಿಯೂ ನೋಡಬೇಡಿ ಅಂತಾ ಬಿಲ್ಲನ ಬಂಟರು ಕಣ್ಣಿಟ್ಟು ಕಾದಿದ್ದು ಮಾತ್ರ ದೇವರಾಣೆಗೂ ನಿಜ!
ದೇಶಗಳ ನಡುವಿನ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾದರೂ, ಈ ಇಬ್ಬರೂ ಸ್ಟಾರ್‌ಗಳು ಹಳೇ ಮುನಿಸನ್ನೇ ಈ ಕ್ಷಣಕ್ಕೂ ಜಾಲ್ತಿಯಲ್ಲಿಟ್ಟಿದ್ದಾರೆ. ಅದು ಯಾವತ್ತಿಗೆ ಕೊನೆಯಾಗುತ್ತದೋ ನೋಡೋಣ!











































