ಕಲೆ ಅನ್ನೋದು ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ ಕೆಲವರನ್ನು ಮಾತ್ರ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಸಾಂಸ್ಕೃತಿಕ ಜಗತ್ತಿಗೆ ಯಾವ ನಂಟೂ ಇಲ್ಲದೆ ಚಿತ್ರರಂಗಕ್ಕೆ ಬಂದು ಪೋಷಕ ಕಲಾವಿದೆಯಾಗಿ ಬೆಳೆದವರು ಸುಜಾತ ಗೌಡ. ಹಾಸನದ, ಹೊಳೇನರಸೀಪುರ ಮೂಲದಿಂದ ಬಂದವರು ಸುಜಾತ. ತೀರಾ ಸಣ್ಣ ವಯಸ್ಸಿಗೇ ಮನೆಯಲ್ಲಿ ಇವರಿಗೆ ಮದುವೆಯನ್ನೂ ಮಾಡಿಬಿಟ್ಟಿದ್ದರು. ಮದುವೆಯಾದಮೇಲೆ ಕಂಡ ಕನಸುಗಳನ್ನೆಲ್ಲಾ ಮೂಟೆ ಕಟ್ಟಿಟ್ಟು, ಗಂಡ, ಮನೆ, ಮಕ್ಕಳು ಅಂತಾ ಸುಮ್ಮನಾಗಿಬಿಡುತ್ತಾರೆ. ಆದರೆ, ಸುಜಾತಾ ಅವರೊಳಗಿದ್ದ ಕಲಾವಿದೆ ಅವರನ್ನು ಸುಮ್ಮನೇ ಕೂರಲು ಬಿಡಲಿಲ್ಲ. ಸ್ನೇಹಿತೆಯೊಬ್ಬರ ಮೂಲಕ ಚಿತ್ರರಂಗದ ಪರಿಚಯಕ್ಕೆ ಬಂದರು. ಕೊರಿಯರ್ ಆಫೀಸಿನಲ್ಲಿ ಕೆಲಸ ಮಾಡಿಕೊಂಡಿದ್ದಾಗ ಕೊಟ್ಲಲ್ಲಪ್ಪೋ ಕೈ ಸಿನಿಮಾದ ನಿರ್ಮಾಪಕರ ಪರಿಚಯವಾಯ್ತಂತೆ. ಡ್ಯಾನ್ಸರ್ ಆಗಬೇಕು ಅಂತಾ ಬಯಸಿದ್ದ ಸುಜಾತಾ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದ್ದರು. ಕ್ರಮೇಣ ಪೋಷಕ ಕಲಾವಿದೆಯಾಗಿ ಗುರುತಿಸಿಕೊಂಡರು.

ಕಿರಿಕ್ ಪಾರ್ಟಿ, ಬಹದ್ದೂರ್, ಅಂಜನಿಪುತ್ರ, ಬ್ರಹ್ಮ, ಕನ್ನಡಿಗ, ವೇದ ಸೇರಿದಂತೆ ನಲವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿವರು ನಟಿಸಿದ್ದಾರೆ. ಕಲರ್ಸ್ ವಾಹಿನಿಯ ಹಾರರ್ ಧಾರಾವಾಹಿ, ಪುಟ್ಟಗೌರಿ ಮದುವೆ ಸೇರಿದಂತೆ ಸಾಕಷ್ಟು ಸೀರಿಯಲ್ಲುಗಳಲ್ಲಿ ನಟಿಸಿದ್ದಾರೆ. ಖ್ಯಾತ ನಟ ಮಣಿವಣ್ಣನ್ ಜೊತೆ ನಟಿಸಿದ ಚಿತ್ರವೂ ಸೇರಿದಂತೆ ಮೂರು ತಮಿಳು ಚಿತ್ರಗಳು, ಒರಿಸ್ಸಾ ಭಾಷೆಯ ಸಿನಿಮಾದಲ್ಲೂ ನಟಿಸಿದ್ದಾರೆ.

ಕನ್ನಡದಲ್ಲಿ ಪೋಷಕ ಕಲಾವಿದರಿಗೆ ಬೆಲೆಯಿಲ್ಲ. ನಮ್ಮನ್ನು ಕರೆದು ಅವಕಾಶ ಕೊಟ್ಟರೆ ಸಂಭಾವನೆ ಕೊಡಬೇಕು ಅನ್ನೋ ಕಾರಣಕ್ಕೆ ನಟನೆ ಬರದವರನ್ನೆಲ್ಲಾ ಕರೆದುಕೊಂಡು ಬಂದು ನಿಲ್ಲಿಸುತ್ತಾರೆ. ನಾವು ಒಂದು ಟೇಕಲ್ಲಿ ಮುಗಿಸೋ ದೃಶ್ಯಗಳನ್ನು ಅವರು ಐದು, ಹತ್ತು ಸಲವಾದರೂ ನಟಿಸುವುದಿಲ್ಲ. ಎಲ್ಲೋ ಉಳಿಸಲು ಹೋಗಿ ಇನ್ನೆಲ್ಲೋ ಕಳೆದುಕೊಳ್ಳುತ್ತಾರೆ ಎನ್ನುವುದು ಸುಜಾತಾ ಅವರ ಬೇಸರದ ಮಾತು. ʻʻನನಗೆ ಹೆಚ್ಚು ಗ್ಲಾಮರ್ ಪಾತ್ರಗಳೇ ಬರುತ್ತವೆ. ಫ್ರೆಂಚ್ ಬಿರಿಯಾನಿ ಸಿನಿಮಾ ಒಂದರಲ್ಲಿ ಒಪ್ಪಿಕೊಂಡು ಮಾಡಿದ್ದೆ. ನಂತರ ಎಲ್ಲವೂ ಅಂಥವೇ ರೋಲುಗಳು ಬರಲು ಶುರುವಾಯ್ತು. ಅದಕ್ಕೇ ಒಪ್ಪಿಕೊಳ್ಳೋದಿಲ್ಲ.

ನಾನು ಪಾತ್ರ ನಿರ್ವಹಿಸಿದ ಚಿತ್ರಗಳಲ್ಲಿ ನನಗೆ ಅತೀ ಹೆಚ್ಚು ಇಷ್ಟವಾಗಿರೋದು ಮುಮ್ತಾಜ್ ಚಿತ್ರ. ಆ ಸಿನಿಮಾದಲ್ಲಿ ನಟ ಚಿಕ್ಕಣ್ಣ ಅವರ ಜೋಡಿಯಾಗಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಎಲ್ಲ ಕಲಾವಿದರಿಗೆ ಇದ್ದಂತೇ ನನಗೂ ಒಳ್ಳೊಳ್ಳೇ ಪಾತ್ರಗಳಲ್ಲಿ ನಟಿಸಬೇಕು ಎನ್ನುವ ಬಯಕೆ ಇದೆ. ಆದರೆ ನಮ್ಮಂತಾ ನಟಿಯರಿಗೆ ಅತ್ಯುತ್ತಮವಾದ ಪಾತ್ರಗಳು ಸಿಗಬೇಕೆಂದರೆ ಅದೃಷ್ಟ ಕೂಡಾ ಇರಬೇಕು ಅಂತಾ ಹಲವು ಸಲ ಅನ್ನಿಸುತ್ತದೆ…ʼʼ ಹೀಗೆ ತಮ್ಮ ಮನಸ್ಸಿನ ಮಾತುಗಳನ್ನು ಯಾವ ಅಂಜಿಕೆಯೂ ಇಲ್ಲದೆ ಹೇಳಿಕೊಳ್ಳುವ ಸುಜಾತಾ ಗೌಡ ಸದ್ಯ ರಾಜಕೀಯ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾರಾಜಿನಗರದ ಜೆಡಿಎಸ್ ನಾಯಕ ತಿಮ್ಮೇಗೌಡರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದಾರೆ. ಸದ್ಯ ಜೆಡಿಎಸ್ ಪಕ್ಷದ ಬೆಂಗಳೂರು ಸಿಟಿ ಜನರಲ್ ಸೆಕರೇಟರಿಯಾಗಿದ್ದಾರೆ. ಕಸ್ತೂರಿ ಕನ್ನಡ ಜನಪರ ವೇದಿಕೆಯ ಮಹಿಳಾ ರಾಜ್ಯಾಧ್ಯಕ್ಷೆಯಾಗಿದ್ದುಕೊಂಡು, ಕಷ್ಟದಲ್ಲಿರುವವರಿಗೆ ತಮ್ಮಿಂದಾದ ಸಹಾಯ ಮಾಡುತ್ತಾ ಬರುತ್ತಿದ್ದಾರೆ. ಕರ್ನಾಟಕ ಪೋಷಕ ಕಲಾವಿದರ ಸಂಘದ ಸದಸ್ಯೆಯೂ ಆಗಿರುವ ಸುಜಾತಾ ಗೌಡ ಅವರಿಗೆ ಚಿತ್ರರಂಗವನ್ನೇ ನಂಬಿ ಬದುಕುತ್ತಿರುವ ಕಲಾವಿದರ ಬಗ್ಗೆ ಅತೀವವಾದ ಕಾಳಜಿಯೂ ಇದೆ. ಸಿನಿಮಾ, ರಾಜಕೀಯ ಯಾವುದೇ ಕ್ಷೇತ್ರಲ್ಲಿ ಬೆಳೆದು ನಿಲ್ಲಬೇಕೆಂದರೆ, ಮನೆಯವರ ಪ್ರೋತ್ಸಾಹ ಕೂಡಾ ಮುಖ್ಯ. ಈ ನಿಟ್ಟಿನಲ್ಲಿ ಸುಜಾತಾ ಅವರಿಗೆ ಗಂಡ, ಮಕ್ಕಳೆಲ್ಲರ ಪ್ರೋತ್ಸಾಹ, ಸಹಕಾರಗಳೆಲ್ಲಾ ಇವೆಯಂತೆ.
ಸಿನಿಮಾ ರಾಜಕಾರಣ ಎರಡೂ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಕಲಾವಿದೆ ಸುಜಾತಾ ಗೌಡ ಅವರಿಗೆ ಒಳ್ಳೆಯದಾಗಲಿ….











































