ನಟಿ ಭಾವನಾ ಬಸುರಾಗಿದ್ದಾರೆ. ಅಧಿಕೃತವಾಗಿ ಯಾರನ್ನೂ ಗಂಡ ಅಂತಾ ತೋರಿಸದೇ ಗರ್ಭಿಣಿಯಾಗುವ, ಮಕ್ಕಳನ್ನು ಹೆರುವ ಸಂಪ್ರದಾಯ ತೀರಾ ಹೊಸದೇನೂ ಅಲ್ಲ. ಎರಡು ದಶಕಗಳ ಹಿಂದೆ ಜಗತ್ತಿನ್ನೂ ಇಷ್ಟು ಬೋಲ್ಡ್ ಆಗಿರಲಿಲ್ಲ. ಮಡಿವಂತಿಕೆ, ಜಿಗುಟುತನ ಹೆಚ್ಚಿದ್ದ ಕಾಲದಲ್ಲೇ ನಿರ್ದೇಶಕಿ ಕವಿತಾ ಲಂಕೇಶ್ ಮಗುವನ್ನು ಹೆತ್ತು, ತಾನು ʻಸಿಂಗಲ್ ಪೇರೆಂಟ್ʼ ಅಂತಾ ಘೋಷಿಸಿಕೊಂಡಿದ್ದರು. ಇವತ್ತು ಮಗಳು ಇಶಾಳನ್ನು ಅಂತಾರಾಷ್ಟ್ರೀಯ ಮಟ್ಟದ ಚಿತ್ರಕಲಾವಿದೆಯನ್ನಾಗಿ ಬೆಳೆಸಿ, ಯಶಸ್ವೀ ತಾಯಿ ಅನ್ನಿಸಿಕೊಂಡಿದ್ದಾರೆ. ಭಾರತದಂತಹ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಹೀಗೆ ಸಿಂಗಲ್ ಪೇರೆಂಟ್ ಅನ್ನಿಸಿಕೊಂಡು, ಮಕ್ಕಳನ್ನು ಹೆತ್ತು, ಬೆಳೆಸಿ, ಪೋಷಿಸುವುದು ತುಂಬಾನೇ ಕಷ್ಟದ ಕೆಲಸ. ಅದನ್ನು ಅನೇಕ ಹೆಣ್ಣುಮಕ್ಕಳು ಸಾಧಿಸಿದ್ದಾರೆ.

ಈಗ ಭಾವನಾ ಅಂಥದ್ದೊಂದು ಸಾಸಹವನ್ನು ಮಾಡಿದ್ದಾರೆ. ಅವರ ತೀರ್ಮಾನದ ಬಗ್ಗೆ ಅನೇಕರು ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವಾರು ಜನ ಟೀಕೆಯನ್ನೂ ಮಾಡುತ್ತಿದ್ದಾರೆ. ಖುದ್ದು ಭಾವನಾ ಮೀಡಿಯಾ, ಯೂಟ್ಯೂಬುಗಳಿಗೆ ಸಂದರ್ಶನವನ್ನೂ ನೀಡಿ, ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಕೆಲವು ಯೂಟ್ಯೂಬು ಹುಡುಗರಂತೂ ಭಾವನಾಗೇ ಬೇಜಾರಾಗುವಂತೆ ಎಳಸು ಪ್ರಶ್ನೆಗಳನ್ನು ಕೇಳಿ ಹಿಂಸಿಸುತ್ತಿದ್ದಾರೆ.
ಇದೆಲ್ಲ ಇರಲಿ, ಭಾವನಾ ಐವಿಎಫ್ ಮೂಲಕ ಗರ್ಭಧರಿಸಿರುವುದಾಗಿ ಹೇಳಿಕೊಂಡಿದ್ದಾರೆ. ತಾವು ಇಷ್ಟ ಪಟ್ಟರೆ ʻದಾನಿʼ ಯಾರೆಂದು ಹೇಳಿಕೊಳ್ಳಬಹುದು ಎಂದು ಕೂಡಾ ಹೇಳಿಕೊಂಡಿದ್ದಾರೆ. ಅದರಂತೆ ಮುಂದೊಂದು ದಿನ ತಮ್ಮ ಮಗುವಿಗೆ ಅಪ್ಪ ಯಾರು ಎನ್ನುವ ವಿಚಾರವನ್ನು ಖುದ್ದು ಭಾವನಾ ಜಾಹೀರು ಮಾಡುವ ಸಾಧ್ಯತೆಯೂ ಇದೆ.
ಸಿನಿಮಾ ನಟನೆಯ ಜೊತೆಗೆ ರಾಜಕಾರಣ, ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡಿರುವ ಭಾವನಾರನ್ನು ಸಾಕಷ್ಟು ಜನ ಪ್ರೀತಿಸುತ್ತಾರೆ, ಆರಾಧಿಸುತ್ತಾರೆ. ಆದರೆ, ಭಾಗೀರತಿ ಭಾವನಾ ಮಾತ್ರ ಖ್ಯಾತ ನಟರೊಬ್ಬರನ್ನು ಮನಸಾರೆ ಇಷ್ಟಪಟ್ಟಿದ್ದಾಗಿ ಆಪ್ತರಲ್ಲಿ ಹೇಳಿಕೊಂಡಿದ್ದಾರೆ. ಸರಿಸುಮಾರು ಹದಿನೈದು ವರ್ಷಗಳಿಂದಲೂ ಈಕೆ ಆ ನಟನ ಜೊತೆ ಲಿವಿಂಗ್ ರಿಲೇಷನ್ಷಿಪ್ಪಲ್ಲಿದ್ದಾರೆ ಎನ್ನುವ ಗಾಳಿಸುದ್ದಿಯಿದೆ. ಅದಕ್ಕೆ ಪೂರಕವಾಗಿ ಇತ್ತೀಚೆಗಷ್ಟೇ ಆ ನಟ ತಾವು ನಟಿಸಿದ ಸಿನಿಮಾವೊಂದರ ಸಂಭಾವನೆಯ ಚೆಕ್ಕನ್ನು ಭಾವನಾ ಹೆಸರಿಗೆ ಬರೆಸಿ ಕಳಿಸಿದ್ದರ ಬಗ್ಗೆ ಕೂಡಾ ಮಾಹಿತಿಗಳಿವೆ. ಆ ಪ್ರಜ್ಞಾವಂತ ನಟನಿಗೆ ಈಗಾಗಲೇ ಅಧಿಕೃತ ಸಂಸಾರ ಇರುವುದರಿಂದ ಭಾವನಾ ಜೊತೆಗಿನ ಸ್ನೇಹ-ಸಂಬಂಧವನ್ನು ಬಹಿರಂಗಗೊಳಿಸಿಕೊಳ್ಳಲು ಸಾಧ್ಯವಾಗಿಲ್ಲವೇನೋ. ಏನಾದರೂ ಆಗಲಿ, ತುಂಬು ಬಸುರಿ ಭಾವನಾ ಆರೋಗ್ಯ ನೋಡಿಕೊಂಡು, ತಾಯ್ತನವನ್ನು ಆನಂದಿಸುತ್ತಾ ಹುಲಿಯಂತಾ ಮಕ್ಕಳಿಗೆ ಜನ್ಮ ಕೊಡಲಿ….!











































