ಈಗಾಗಲೇ ತನ್ನ ಚಿತ್ರದ ಟೈಟಲ್ ಮೂಲಕವೇ ಭರ್ಜರಿ ಸದ್ದನ್ನ ಮಾಡಿರುವಂತಹ ಚಿತ್ರ “Congratulations ಬ್ರದರ್”. ಈಗ ಟೀಸರ್ ಹವಾ ಜೋರಾಗಿದೆ. ಅದರಲ್ಲೂ ಈ ಚಿತ್ರದ ಟೀಸರ್ ಬಹಳ ವಿಶೇಷವಾಗಿದ್ದು, ಸಾಮಾನ್ಯವಾಗಿ ಚಿತ್ರ ನೋಡಲು ಚಿತ್ರಮಂದಿರಕ್ಕೆ ಹೋದಾಗ ಆರಂಭದಲ್ಲಿ ತೆರೆಯ ಮೇಲೆ ಪಾನ್, ಗುಟ್ಕಾ ಆರೋಗ್ಯಕ್ಕೆ ಹಾನಿಕರ ಎಂಬ ವಿಡಿಯೋ ನಲ್ಲಿ `ನನ್ನ ಬದುಕು ಈ ರೀತಿ ಆಗುತ್ತೆ ಅಂತ ಯೋಚನೆ ಮಾಡೇ ಇರಲಿಲ್ಲ’ ಎಂಬ ದೃಶ್ಯ ಜನರಲ್ಲಿ ಜಾಗೃತಿ ಮೂಡಿಸೋದು ನಿರಂತರ. ಈಗ ಈ ಫಾರ್ಮೆಟ್ ನಲ್ಲೆ ಪ್ರೀತಿ ಪ್ರೇಮ ಇಂದೇ ತ್ಯಜಿಸಿ… ಹೆಚ್ಚಿನ ಮಾಹಿತಿಗೆ ಕಾಂಟಾಕ್ಟ್ ಮಾಡಿ ಎನ್ನುವ ಟೀಸರ್ ಪ್ರೇಮಿಯ ನೋವು , ಸಂಕಟ , ಪರದಾಟದ ದೃಶ್ಯಗಳು ಜನರನ್ನು ಸೆಳೆಯುವಂತೆ ಮಾಡಿದೆ. ಪ್ರೀತಿಯ ಕಥೆಯನ್ನು ಒಳಗೊಂಡಿರುವ ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಗೊಂಡ ಎಕ್ಕ ಹಾಗೂ ಜೂನಿಯರ್ ಚಿತ್ರದ ಪ್ರದರ್ಶನದ ಜೊತೆಗೆ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನಗೊಂಡು ಎಲ್ಲರ ಗಮನ ಸೆಳೆದಿದೆ.

ಇದೊಂದು ವಿಭಿನ್ನ ಪ್ರೇಮ ಕಥೆಯನ್ನು ಒಳಗೊಂಡಿದ್ದು, ಒಬ್ಬ ಹುಡುಗನ ಜೀವನದಲ್ಲಿ ಇಬ್ಬರು ಹುಡುಗಿಯರು ಬಂದಾಗ ಏನೆಲ್ಲಾ ಆಗಲಿದೆ ಎನ್ನುವುದನ್ನು ಬಹಳ ನವಿರಾಗಿ, ಕುತೂಹಲ ಮೂಡಿಸುವಂತೆ ಚಿತ್ರೀಕರಿಸಿದ್ದಾರಂತೆ ತಂಡ. ಈ ಚಿತ್ರದ ‘ಪ್ರೀತಿ ಪಜೀತಿ’ ಹಾಡುಈಗಾಗಲೇ ಎಲ್ಲರ ಗಮನ ಸೆಳೆದಿದ್ದು, ಈಗ ಟೀಸರ್ ಸದ್ದು ಜೋರಾಗಿದೆ. ಈ “Congratulations ಬ್ರದರ್” ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಅಭಿನಯಿಸಿದ್ದು , ಚಿತ್ರದ ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಸುಪ್ರೀಂ ಹೀರೋ ಶಶಿಕುಮಾರ್ ನಟಿಸಿದ್ದಾರೆ.

ಪೆನ್ ಎನ್ ಪೇಪರ್ ಸ್ಟುಡಿಯೋಸ್ ಹಾಗೂ ಕಲ್ಲೂರ್ ಸಿನಿಮಾಸ್ ಲಾಂಛನದಲ್ಲಿ ಪ್ರಶಾಂತ್ ಕಲ್ಲೂರ್ ಅವರು ನಿರ್ಮಿಸಿರುವ ಈ ಚಿತ್ರವನ್ನು ಪ್ರತಾಪ್ ಗಂಧರ್ವ ನಿರ್ದೇಶಿಸಿದ್ದಾರೆ. ಹೆಸರಾಂತ ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿರುವ ಈ ಚಿತ್ರದ ನಾಯಕನಾಗಿ ಯುವ ನಟ ರಕ್ಷಿತ್ ನಾಗ್ ಅಭಿನಯಿಸಿದ್ದಾರೆ. ನಾಯಕಿಯರಾಗಿ ಸಂಜನಾ ದಾಸ್ ಮತ್ತು ಅನುಶಾ ನಟಿಸಿದ್ದಾರೆ. ಹರೀಶ್ ರೆಡ್ಡಿ ಸಹ ನಿರ್ಮಾಪಕರಾಗಿ ಹಾಗೂ ಶ್ರೀಕಾಂತ್ ಕಶ್ಯಪ್ ಕಾರ್ಯಕಾರಿ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಈ ಚಿತ್ರವನ್ನು ಕಾರವಾರ, ಬೆಂಗಳೂರು ಸೇರಿದಂತೆ ಅನೇಕ ಕಡೆ ಚಿತ್ರೀಕರಣ ಮಾಡಲಾಗಿದೆ.

ಸಾಮಾನ್ಯವಾಗಿ ಹುಡುಗರಿಗೆ ಹುಡುಗಿಯರು ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಒಬ್ಬ ಹುಡುಗನಿಗೆ ಇಬ್ಬರು ಹುಡುಗಿಯರು ಸಿಕ್ಕಾಗ ಎಲ್ಲರೂ “Congratulations ಬ್ರದರ್” ಎಂದು ಹೇಳುತ್ತಾರೆ. ಅಂತಹುದೇ ಕಥೆಯ ಮೂಲಕ ಮನೋರಂಜನೆಯ ಚಿತ್ರ ನೀಡಲು ಮುಂದಾಗಿರುವ ಈ ಚಿತ್ರದ ನಿರ್ಮಾಪಕ ಪ್ರಶಾಂತ್ ಕಲ್ಲೂರ್ ಈ ಹಿಂದೆ ಎರಡು ಮೂರು ಚಿತ್ರಗಳಿಗೆ ಸಹ ನಿರ್ಮಾಪಕನಾಗಿ ಕೆಲಸ ಮಾಡಿದ್ದು, ಇದು ಅವರ ನಿರ್ಮಾಣದ ಮೊದಲ ಚಿತ್ರವಾಗಿದೆ. ಅದೇ ರೀತಿ ಯುವ ಸಾರಥಿ ಪ್ರತಾಪ್ ಗಂಧರ್ವ ನಿರ್ದೇಶನದ ಮೊದಲ ಚಿತ್ರವಾಗಿದೆ. ಇಡೀ ತಂಡಕ್ಕೆ ಬೆನ್ನೆಲುಬಾಗಿ ಖ್ಯಾತ ನಿರ್ದೇಶಕ ಹರಿ ಸಂತೋಷ್ ಸಾತ್ ನೀಡಿದ್ದಾರೆ. ಈ ಚಿತ್ರಕ್ಕೆ ಸಂಗೀತ ಸೂರಜ್ ಜೋಯಿಸ್, ಛಾಯಾಗ್ರಾಹಣ ಗುರುಪ್ರಸಾದ್ ಮಾಡಿದ್ದಾರೆ. ಇನ್ನು ರಂಗಭೂಮಿ ಪ್ರತಿಭೆ , ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿರುವ ರಕ್ಷಿತ್ ನಾಗ್ ನಾಯಕನಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ .

ಇನ್ನು ಬೋಲ್ಡ್ ಅಂಡ್ ಇಂಡಿಪೆಂಡೆಂಟ್ ಪಾತ್ರದಲ್ಲಿ ಯುವ ನಟಿ ಸಂಜನಾ ದಾಸ್ ಕಾಣಿಸಿಕೊಂಡಿದ್ದಾರಂತೆ. ಹಾಗೆಯೇ ಆಡಿಶನ್ ಮೂಲಕ ಆಯ್ಕೆಯಾಗಿರುವ ಮತ್ತೋರ್ವ ಪ್ರತಿಭೆ ಅನುಶಾ ನಾಯಕಿಯಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಹಿರಿಯ ನಟ ಶಶಿಕುಮಾರ್ ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಉಳಿದಂತೆ ಚಿತ್ರದಲ್ಲಿ ರಕ್ಷಿತ್ ಕಾಪು , ಸುದರ್ಶನ್, ಚೇತನ್ ದುರ್ಗ ನಟಿಸಿದ್ದು , ಚಿತ್ರ ಬಹಳ ವಿಭಿನ್ನವಾಗಿ ಮೂಡಿ ಬಂದಿದೆಯಂತೆ. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು , ಅತಿ ಶೀಘ್ರದಲ್ಲಿ ಚಿತ್ರ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ.











































