ಸುತ್ತಲೂ ಮೂಢರು, ಮತಿಹೀನರು, ಅವಿದ್ಯಾವಂತರು, ಕೇಡುಗರು, ಕುಯುಕ್ತಿ ಮನಸ್ಸಿನವರೇ ತುಂಬಿದ್ದಾಗ ಅವರ ಮಧ್ಯದಲ್ಲೊಬ್ಬ ತಿಳಿವಳಿಕೆ ಉಳ್ಳವನು, ಓದು ಬರಹ ಬಲ್ಲವನು ಇದ್ದಾನೆ ಅಂದುಕೊಳ್ಳಿ. ಸುತ್ತಲಿನ ಆ ಮಂದಿ ಈತನನ್ನು ನೋಡುವ ರೀತಿಯೇ ಬೇರೆ. ಅತಿಯಾಗಿ ಓದಿದವರು ಜಗತ್ತಿನ ಕಣ್ಣಿಗೆ ಅರೆಹುಚ್ಚರಂತೆ, ಕೆಲಸಕ್ಕೆ ಬಾರದವರಂತೆ ಕಾಣುವುದಿದೆ. ಇಲ್ಲಿ ಕಥಾನಾಯಕ ಪ್ರಾಣೇಶ ಅಲಿಯಾಸ್ ಪ್ರಾಣಿಯ ಪಾಡು ಕೂಡಾ ಹಾಗೇ ಆಗಿರುತ್ತದೆ.
ಆ ಹಳ್ಳಿಯಲ್ಲಿ ಇವನೊಬ್ಬನೇ ಅತಿ ಹೆಚ್ಚು ಓದಿದವನು. ಕೆ.ಎ.ಎಸ್. ಬರೆದು ಸರ್ಕಾರಿ ಅಧಿಕಾರಿಯಾಗಬೇಕು ಅಂತಾ ಬಯಸಿರುತ್ತಾನೆ. ʻʻಮೂಲಾ ನಕ್ಷತ್ರದಲ್ಲಿ ಹುಟ್ಟಿದವನು. ಭೂಮಿಗೆ ಬರುತ್ತಿದ್ದಂತೇ ತಾಯಿಯನ್ನು ನುಂಗಿಕೊಂಡವನುʼʼ ಅನ್ನೋ ಕೆಟ್ಟ ಹಣಪಟ್ಟಿಯೊಂದಿಗೇ ಬೆಳೆದಿರುತ್ತಾನೆ. ʻʻಇವನು ಕಾಲಿಟ್ಟ ಕಡೆ ಹುಲ್ಲುಕಡ್ಡಿಯೂ ಬೆಳೆಯೋದಿಲ್ಲ. ಯಾವ ಒಳ್ಳೇ ಕಾರ್ಯವೂ ನೆರವೇರೋದಿಲ್ಲʼʼ ಎನ್ನುವುದು ಮನೆಯವರು, ನೆಂಟರಿಷ್ಟರು ಸೇರಿದಂತೆ ಇಡೀ ಹಳ್ಳಿಯ ನಂಬಿಕೆ. ಟೋಟಲಿ ಎಲ್ಲರ ಪಾಲಿಗಿವನು ಗೇಲಿ ವಸ್ತು.

ಕೈಲಿ ಪುಸ್ತಕ ಹಿಡಿದುಕೊಂಡು, ಯಾರು ಏನೇ ಕೇಳಿದರೂ ಹಿರಿಯರ ನುಡಿಗಟ್ಟನ್ನು ಉದುರಿಸುವ ಇಂಥ ಪ್ರಾಣಿಗೆ ಮದುವೆಯನ್ನೂ ಮಾಡಿಬಿಡುತ್ತಾರೆ. ಓದಿದ್ದರೂ ಕೆಲಸವಿಲ್ಲದೆ ಸಂಸಾರ ನಡೆಸೋದು ಕಷ್ಟ. ಕೂಲಿ ಮಾಡಿ ಬದುಕಲು ಚೈತನ್ಯದ ಕೊರತೆ. ಇಂಥ ಪ್ರಾಣೇಶನ ಬದುಕಿನಲ್ಲಿ ಮುಂದೆ ಏನೇನು ಘಟನೆಗಳು ನಡೆಯುತ್ತವೆ? ಕಟ್ಟಿಕೊಂಡವರಳು ಜೊತೆಗೆ ಉಳಿಯುತ್ತಾಳಾ? ಸರ್ಕಾರಿ ಕೆಲಸ ಸಿಗುತ್ತದಾ? ಮನಸ್ಸೊಳಗೆ ಕಟ್ಟಿಕೊಂಡ ಕನಸು ನೆರವೇರತ್ತಾ? ಅನ್ನೋ ವಿವರಗಳ ಸುತ್ತ ʻರಾಜಯೋಗʼದ ವಿಚಾರ ಬೆಸೆದುಕೊಂಡಿದೆ.
ಲಿಂಗರಾಜ ಉಚ್ಚಂಗಿದುರ್ಗ ನಿರ್ದೇಶನದ ಚಿತ್ರವಿದು. ಹಳ್ಳಿಯಲ್ಲಿ ನಡೆಯುವ ನೈಜ ಕಥಾನಕವನ್ನೇ ಯಥಾವತ್ತಾಗಿ ಚಿತ್ರಿಸಿದ್ದಾರೆ. ಚಿತ್ರವನ್ನು ಎಲ್ಲೂ ಅತಿರಂಜಕಗೊಳಿಸದೆ, ಪೋಲಿ ಮಾತುಗಳನ್ನು ಬೆರೆಸದೆ, ಸಹಜ ಮಾತುಗಳಲ್ಲೇ ಸಿನಿಮಾ ಪೂರ್ತಿ ನಗುವನ್ನು ಸೃಷ್ಟಿಸಿದ್ದಾರೆ. ಬಹುಶಃ ಈ ವರೆಗೆ ಯಾರೂ ಬಳಸದಷ್ಟು ನಾಣ್ನುಡಿಗಳನ್ನು ಲಿಂಗರಾಜ ತಮ್ಮ ಚಿತ್ರಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ನಟ ಧರ್ಮಣ್ಣ ಅದ್ಭುತ ಪ್ರತಿಭಾವಂತ. ಅವರ ಟ್ಯಾಲೆಂಟಿಗೆ ತಕ್ಕುದಾದ ಸಿನಿಮಾವೊಂದರ ಮೂಲಕ ʻರಾಜಯೋಗʼ ದಕ್ಕಿದೆ!

ನಿರೀಕ್ಷಾ ರಾವ್ ಈ ಚಿತ್ರದಲ್ಲಿ ನಾಐಕಿಯಾಗಿ ಕಾಣಿಸಿಕೊಂಡಿದ್ದಾರೆ. ಧರ್ಮಣ್ಣನಿಗೆ ಜೋಡಿಯಾಗಿ ನಟಿಸಬೇಕು ಅಂದರೆ ಸುಮ್ಮನೇ ಮಾತಲ್ಲ. ಈ ನಿಟ್ಟಿನಲ್ಲಿ ನೋಡಿದರೆ ನಿರೀಕ್ಷಾ ʻರಾಜಯೋಗʼದ ಮೂಲಕ ಅಪಾರ ನಿರೀಕ್ಷೆ ಹುಟ್ಟುಹಾಕಿದ್ದಾರೆ. ನಾಗೇಂದ್ರ ಶಾ, ಎಂ.ಕೆ. ಮಠ ಮತ್ತು ಅಪೂರ್ವ ಕೂಡಾ ಚೆಂದದ ಅಭಿನಯ ನೀಡಿದ್ದಾರೆ. ಅವಿನಾಶ್ ರೈ ಎನ್ನುವ ನೈಜ ಪ್ರತಿಭೆ ಕೂಡಾ ಈ ಚಿತ್ರದಲ್ಲಿ ಅನಾವರಣಗೊಂಡಿದೆ. ಕಾಮಿಡಿ, ವಿಲನ್ ಯಾವುದೇ ಪಾತ್ರಕ್ಕೆ ಒಗ್ಗುವ ಗುಣ ಇವರಲ್ಲಿದೆ. ವಿಷ್ಣು ಪ್ರಸಾದ್ ಛಾಯಾಗ್ರಹಣ ಕೂಡಾ ನೀಟಾಗಿದೆ. ಚಿಕ್ಕ ನಾಗರಾಜ್ ಹಿನ್ನೆಲೆ ಸಂಗೀತ ಕೆಲವೊಮ್ಮೆ ಚೆಂದ ಅನ್ನಿಸಿದರೆ, ಹಲವು ಕಡೆ ಅತಿ ಅನ್ನಿಸುತ್ತದೆ. ಹೆಚ್ಚು ಕಂಟೆಂಟ್ ಇದ್ದ ಕಾರಣಕ್ಕೆ ಯಾವುದನ್ನು ತೆಗೆಯುವುದು ಯಾವುದನ್ನು ಬಿಡುವುದು ಅನ್ನೋದು ಬಹುಶಃ ಬಿ.ಎಸ್. ಕೆಂಪರಾಜ್ ಅವರಿಗೆ ಗೊಂದಲವಾಗಿತ್ತೋ ಏನೋ… ಇವೆಲ್ಲದರ ಹೊರತಾಗಿ ಅಪ್ಪಟ ನಮ್ಮ ನೆಲದ, ಚೆಂದದ, ಮನರಂಜನಾ ಚಿತ್ರವಾಗಿ ʻರಾಜಯೋಗʼ ಮೂಡಿಬಂದಿದೆ. ೈಾಔ ಮುಜುಗರವೂ ಇಲ್ಲದೇ ಫ್ಯಾಮಿಲಿ ಸಮೇತ ಹೋಗಿ ನೋಡಿ!








































