ಸಲಾರ್‌ ಮೇಲೆ ಯಾಕೆ ಇವರಿಗೆ ಸೇಡು?

Picture of Cinibuzz

Cinibuzz

Bureau Report

ಕಿತಾಪತಿ ಮಾಡಲು ಎಂತೆಂಥಾ ಕಿರಾತಕರು ಹೊಂಚು ಹಾಕಿ ಕಾದು ಕುಂತಿರುತ್ತಾರೆ ನೋಡಿ. ಹೊಂಬಾಳೆ ಫಿಲ್ಮ್ಸ್‌ ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದ ಹೆಮ್ಮೆಯ ನಿರ್ಮಾಣ ಸಂಸ್ಥೆ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ. ಕೆ.ಜಿ.ಎಫ್.‌, ಕಾಂತಾರ ಎನ್ನುವ ಎರಡು ಸಿನಿಮಾಗಳು ಸಾಕು ಹೊಂಬಾಳೆಯ ಹಿರಿಮೆಯನ್ನು ಸಾರಲು. ಸಧ್ಯ ಹೊಂಬಾಳೆ ಭಾರತೀಯ ಚಿತ್ರರಂಗದ ಮುಂಚೂಣಿ ನಿರ್ಮಾಣ ಸಂಸ್ಥೆಯಾಗಿದೆ. ಪ್ರಬಾಸ್ ನಟನೆಯ ಸಲಾರ್‌ ಚಿತ್ರದ ಮೂಲಕ ಹೊಂಬಾಳೆ ಮತ್ತೊಂದು ಮೈಲಿಗಲ್ಲನ್ನು ಸೃಷ್ಟಿಸಲು ಸಿದ್ದವಾಗಿದೆ. ಇದೇ ಹೊತ್ತಿನಲ್ಲಿ ಯಾರೋ ನೀಚನೊಬ್ಬ ಹೊಂಬಾಳೆ ಸಂಸ್ಥೆಯ ಹೆಸರಿಗೆ ಮಸಿ ಬಳೆಯುವ ವ್ಯರ್ಥ ಪ್ರಯತ್ನ ಮಾಡಿ, ಸಿಕ್ಕಿಬೀಳುವ ಹಂತದಲ್ಲಿದ್ದಾನೆ.

ತೆಲುಗಿನ ಅಧೀರ ಎನ್ನುವ ಇನ್ಫ್ಲೂಯೆನ್ಸರ್‌ ಬಹಿರಂಗಗೊಳಿಸಿರುವ ಮಾಹಿತಿಯ ಪ್ರಕಾರ ಹೊಂಬಾಳೆಯ ವಿರುದ್ಧ ಯಾರೋ ಒಬ್ಬ ಉತ್ತರ ಭಾರತದ ಪಿ.ಆರ್.ಓ. ಕರ್ನಾಟಕದ ಮೂಲದವನೊಬ್ಬನ ಮೂಲಕ ಸಲಾರ್‌ ಚಿತ್ರದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಲು ಸುಪಾರಿ ಕೊಟ್ಟಿದ್ದಾನಂತೆ. ʻʻನನಗೆ ಪರಿಚಯವಿರುವ ವ್ಯಕ್ತಿಯೊಬ್ಬ ಶಾರುಖ್‌ ಖಾನ್‌ ನಟನೆಯ ಡಂಕಿ ಸಿನಿಮಾವನ್ನು ಹೊಗಳಿ, ಸಲಾರ್‌ ಚಿತ್ರವನ್ನು ತೆಗಳಿ ಟ್ವೀಟ್‌ ಮಾಡು. ಸಲಾರ್‌ ಕನ್ನಡ ವಿರೋಧಿ ಸಿನಿಮಾ ಅಂತಾ ಪುಕಾರೆಬ್ಬಿಸು. ನಿನಗೆಷ್ಟು ಬೇಕೋ ಅಷ್ಟು ಹಣ ಕೊಡ್ತೀನಿʼʼ ಅಂತಾ ಆಮಿಷವೊಡ್ಡಿದ್ದಾನಂತೆ. ಇದಕ್ಕೆ ಮಣಿಯದ ಆ ಇನ್ಫ್ಲೂಯೆನ್ಸರ್‌ ಅಧೀರ ʻʻಈ ರೀತಿ ಹೇಳಿರುವ ವ್ಯಕ್ತಿಯ ಮುಖವಾಡ ಬಯಲು ಮಾಡ್ತೀನಿ” ಎಂದು ಟ್ವೀಟ್‌ ಮಾಡಿದ್ದಾರೆ.

ದೊಡ್ಡ ನಿರ್ಮಾಣ ಸಂಸ್ಥೆ ಅಂತಾ ಹೇಳಿಕೊಳ್ಳುವ ಎಷ್ಟೋ ಜನ ಇಂದು ಸಿನಿಮಾದಲ್ಲಿ ದುಡಿದ ಕಾರ್ಮಿಕರಿಗೆ ನೆಟ್ಟಗೆ ಪೇಮೆಂಟು ಕೊಡುತ್ತಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಹೊಂಬಾಳೆ ಫಿಲ್ಮ್ಸ್‌ ಮತ್ತು ಅದರ ಮುಖ್ಯಸ್ಥರಾದ ವಿಜಯ್‌ ಕಿರಗಂದೂರ್‌ ಸಿನಿಮಾ ಕಾರ್ಮಿಕರ ಹಿತ ಕಾಯುತ್ತಿದ್ದಾರೆ. ತಂತ್ರಜ್ಞರು ಬಯಸಿದ್ದಕ್ಕಿಂತಾ ಹೆಚ್ಚಿಗೆ ಸಂಬಳ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ನೂರಾರು ಕೋಟಿಗಳ ಲೆಕ್ಕ ನೋಡದೆ, ಸಿನಿಮಾಗಳ ಮೇಲೆ ಹೂಡಿಕೆ ಮಾಡುವುದೇ ದೊಡ್ಡ ಸವಾಲಿನ ಕೆಲಸ. ಅದನ್ನು ಹೊಂಬಾಳೆ ಫಿಲ್ಮ್ಸ್‌ ಯಾವುದೇ ಅಂಜಿಕೆಯಿಲ್ಲದೆ ಮಾಡುತ್ತಿದೆ. ಮಾರುಕಟ್ಟೆಯ ವ್ಯಾಪ್ತಿಯನ್ನೂ ನೋಡದೇ ಕೆ.ಜಿ.ಎಫ್.‌ ಮತ್ತು ಕಾಂತಾರ ಸಿನಿಮಾಗಳ ಮೇಲೆ ಇನ್ವೆಸ್ಟ್‌ ಮಾಡಿದ ಕಾರಣಕ್ಕೇ ಆ ಚಿತ್ರಗಳು ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದ್ದು. ಆ ಮೂಲಕ ಪ್ರೇಕ್ಷಕರ ದೃಷ್ಟಿಯಲ್ಲಿ ಕನ್ನಡ ಚಿತ್ರರಂಗಕ್ಕೆ ವಿಶ್ವಮಾನ್ಯತೆ ಸಿಕ್ಕಿರೋದು. ಇಂಥ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಾ ಬರುತ್ತಿರುವ ಹೊಂಬಾಳೆಯ ವಿರುದ್ದ ಚಿತಾವಣೆ ಮಾಡಿದ್ದು ಯಾರೇ ಆದರೂ ಅದು ಅಕ್ಷಮ್ಯ. ಯಾವುದೋ ಹಿಂದಿ ಸಿನಿಮಾದ ಪ್ರಚಾರಕ್ಕಾಗಿ ದಕ್ಷಿಣ ಭಾರತದ ಸಿನಿಮಾ ವಿರುದ್ಧ ಅಪಪ್ರಚಾರ ಮಾಡುವುದು ತಪ್ಪಲ್ಲವಾ? ಬಾಲಿವುಡ್‌ ಅಂದರೆ ಬರಿಯ ಹಿಂದಿ ಚಿತ್ರರಂಗಕ ಅಂತಲೇ ಈ ತನಕ ಬಿಂಬಿಸಿಕೊಂಡು ಬರಲಾಗಿತ್ತು. ಅದನ್ನು ಸುಳ್ಳಾಗಿಸಿ ಉತ್ತರ ಭಾರತದವರ ಮುಖದ ಮೇಲೆ ರಾಚಿದ್ದು ಕೆ.ಜಿ.ಎಫ್.‌ ಮತ್ತು ಪುಷ್ಪ ಥರದ ಸಿನಿಮಾಗಳು. ಏಕಾ ಏಕಿ ದಕ್ಷಿಣ ಭಾರತದ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಅಪಾರ ಗಳಿಕೆ ಮಾಡಿ ಹವಾ ಎಬ್ಬಿಸುತ್ತಿರುವುದು, ಆ ಮೂಲಕ ಗ್ಲೋಬಲ್‌ ಲೆವೆಲ್ಲಿನಲ್ಲಿ ತಲೆಯೆತ್ತಿ ನಿಲ್ಲುತ್ತಿರುವುದು ಕೆಲ ದುಷ್ಟ ಮನಸ್ಸುಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಸಲ ನೇರವಾಗಿ ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸಿರುವ ಸಲಾರ್‌ ಅನ್ನು ಟಾರ್ಗೆಟ್‌ ಮಾಡುತಿದ್ದಾರೆ. ಇನ್ಫ್ಲೂಯೆನ್ಸರುಗಳಿಗೆ ಹಣದ ಆಸೆ ತೋರಿಸಿ ಪುಸಲಾಯಿಸುತ್ತಿದ್ದಾರೆ. ಇದು ಹೆಚ್ಚು ದಿನ ನಡೆಯಲು ಸಾಧ್ಯವಿಲ್ಲ. ಅಧೀರ ಥರದವರು ಸಂಚುಕೋರರ ಬಂಡವಾಳವನ್ನು ಬಹಿರಂಗಗೊಳಿಸಬೇಕು. ಆಗಲಾದರೂ ಇಂತಾ ಹುನ್ನಾರಗಳಿಗೆ ಕಣಿವಾಣ ಬೀಳುತ್ತದೆ.

ಅಸಲಿಗೆ ಕನ್ನಡದ ಪಿ.ಆರ್.ಓ.ಗಳಲ್ಲಿ ಇಂಥ ಕೆಲಸಕ್ಕೆ ಕೈ ಇಡುವ ಮನಸ್ಥಿತಿ ಯಾರಿಗೂ ಇದ್ದಂತಿಲ್ಲ. ಸದ್ಯ ಅಧೀರ ಅವರ ಬಳಿ ಡೀಲು ಕುದುರಿಸಲು ಹೋಗಿದ್ದು ಉತ್ತರ ಭಾರತದ ಯಾವ ಪಿ.ಆರ್.ಓ ಅನ್ನೋದು ಇಷ್ಟರಲ್ಲೇ ಬಯಲಾಗುತ್ತದೆ. ನೇರ್ಪಾಗಿ ಕೆಲಸ ಮಾಡಿ, ಒಳ್ಳೇಮಾರ್ಗದಲ್ಲಿ ಬೆಳೆಯುವುದನ್ನು ಬಿಟ್ಟು ಹಣದ ಆಸೆಗೆ ಯಾಕೆ ಈ ರೀತಿ ನಾಡದ್ರೋಹದ ಕೆಲಸ ಮಾಡುತ್ತಿದ್ದಾರೋ ಗೊತ್ತಿಲ್ಲ. ಒಟ್ಟಾರೆ ಈ ವಿಚಾರ ಇಲ್ಲಿಗೇ ನಿಲ್ಲುವಂತೆ ಮಾತ್ರ ಕಾಣುತ್ತಿಲ್ಲ.
ಯಾರು ಏನೇ ಪಿತೂರಿ ಮಾಡಲಿ, ಸಿನಿಮಾವನ್ನು ಧ್ಯಾನದಂತೆ ಸ್ವೀಕರಿಸಿರುವ ಪ್ರಶಾಂತ್‌ ನೀಲ್‌ ಮತ್ತು ಇಂಥ ಕ್ರಿಯಾಶೀಲರ ಬೆನ್ನಿಗೆ ನಿಂತಿರುವ ಹೊಂಬಾಳೆ ಫಿಲ್ಮ್ಸ್‌ಗೆ ಕುತಂತ್ರಿಗಳ ಕಿರು ಬೆರಳೂ ಸೋಕೋದಿಲ್ಲ. ಏನಂತೀರಿ?

ಇನ್ನಷ್ಟು ಓದಿರಿ

Scroll to Top