ಸುಕ್ಕಾ ಸೂರಿಗೆ ಯಾರು ದಕ್ಕಬಹುದು?

Picture of Cinibuzz

Cinibuzz

Bureau Report

ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ಚನ್ನಾಗೇ ಇತ್ತು. ಆದರೂ ಯಾಕೋ ಜನಕ್ಕೆ ಅದು ರುಚಿಸಲೇ ಇಲ್ಲ. ನಿರ್ದೇಶಕ ದುನಿಯಾ ಸೂರಿ ಯಾವತ್ತೂ ಬ್ಯಾಕ್‌ ಟು ಬ್ಯಾಕ್‌ ಸೋಲು ಕಂಡಿರಲಿಲ್ಲ. ಒಂದು ಸಿನಿಮಾ ಬ್ಲಾಕ್‌ ಬಸ್ಟರ್‌ ಆದರೆ, ಅದರ ನಂತರದ್ದು ಡುಬುಕ್‌ ಅನ್ನುತ್ತಿತ್ತು. ಈ ಪ್ರಕಾರವಾಗಿ ಪಾಪ್‌ ಕಾರ್ನ್‌ ಮಂಕಿ ನಂತರ ಬಂದ ಬ್ಯಾಡ್‌ ಮ್ಯಾನರ್ಸ್‌ ಹಿಸ್ಟರಿ ಕ್ರಿಯೇಟ್‌ ಮಾಡತ್ತೆ ಅಂತಲೇ ಎಲ್ಲರೂ ಭಾವಿಸಿದ್ದರು. ಆದರೆ ನಿರೀಕ್ಷೆಗಳೆಲ್ಲಾ ನೆಗೆದುಬಿದ್ದು, ಬ್ಯಾಡ್‌ ಬ್ಯಾನರ್ಸ್‌ ವೆರಿ ಬ್ಯಾಡ್‌ ರಿಯಾಕ್ಷನ್‌ ಪಡೆಯಿತು.

ಒಂದು ವೇಳೆ ಬ್ಯಾಡ್‌ ಬ್ಯಾನರ್ಸ್‌ ಗೆದ್ದಿದ್ದರೆ ದರ್ಶನ್ ಇಮೀಡಿಯೆಟ್ಟಾಗಿ ಡೇಟ್ಸ್‌ ಕೊಡುತ್ತಿದ್ದರು. ಅದೇನು ಹಣೇಬರವೋ ಗೊತ್ತಿಲ್ಲ. ಬಹಳ ಹಿಂದಿನಿಂದಲೂ ಸೂರಿ- ದರ್ಶನ್ ಕಾಂಬಿನೇಷನ್ನಿನ ಸಿನಿಮಾಗೆ ಈ ವರೆಗೂ ಮುಹೂರ್ತವೇ ಕೂಡಿಬರುತ್ತಿಲ್ಲ. ಹಾಗೆ ನೋಡಿದರೆ ದರ್ಶನ್ ಅಭಿನಯದ ಸುಂಟರಗಾಳಿ ಸಿನಿಮಾಗೆ ಕೋ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದವರು ಸೂರಿ. ಸ್ವತಂತ್ರ ನಿರ್ದೇಶಕರಾದಮೇಲೆ ಸೂರಿ ಹೇಳಿದ ಕತೆ ದರ್ಶನ್ ಗೆ ಇಷ್ಟವಾಗಿಲ್ಲ. ಕಥೆ ಓಕೆ ಅಂದಾಗ ಸಮಯ ಸಿಕ್ಕಿಲ್ಲ.

ಸದ್ಯ ಸೂರಿ  ಸೈಲೆಂಟಾಗಿ ಜಯಣ್ಣ- ಭೋಗೇಂದ್ರ ಅವರ ಕ್ಯಾಂಪಿಗೆ ಬಂದು ಒಂದು ವೈಲೆಂಟ್ ಕತೆ ರೂಪಿಸುತ್ತಿದ್ದಾರೆ. ಆದರೂ ಯಾಕೆ ಸಿನಿಮಾ ತಡವಾಗುತ್ತಿದೆ ಎಂದರೆ ಸೂರಿ ತಮ್ಮ ಕಪ್ಪು ಕನ್ನಡಕ ಸರಿ ಮಾಡಿಕೊಂಡು ಒಬ್ಬ ಸ್ಟಾರ್ ಹೀರೋ ಬೇಕು ಅಣ್ಣ ಅಂತಾ ಆಕಾಶ ದಿಟ್ಟಿಸುತ್ತಿದ್ದಾರೆ. ಸೂರಿಗೆ ಸ್ಟಾರ್ ಹೀರೋ ಹಂಗ್ಯಾಕೆ ಎಂದು ನೀವು ಕೇಳಬಹುದು. ಸೂರಿ ಅವರ ಮುಂದಿನ ಚಿತ್ರದ ಹೀರೋ ವಿರಾಟ್. ಕಿಸ್ ಹಾಗೂ ಇನ್ನೂ ಬಿಡುಗಡೆಗೊಳ್ಳದ ರಾಯಲ್ ಚಿತ್ರಗಳ ಹೀರೋ. ಎರಡು ಚಿತ್ರಗಳು ಇವರ ಖಾತೆಯಲ್ಲಿದ್ದರೂ ಚಿತ್ರೋದ್ಯಮಕ್ಕೆ ವಿರಾಟ್ ಇನ್ನೂ ಹೊಸ ಪೀಸು. ಈ ನೂತನ ಪ್ರತಿಭೆ ಜತೆಗೆ ಒಬ್ಬ ಸ್ಟಾರ್ ಹೀರೋ ಇದ್ದರೆ ಉತ್ತಮ ಎಂಬುದು ಸೂರಿ ಅವರ ಅಡ್ವೈಸು. ಮೊದಲೆಲ್ಲಾ  ಹೊಸಬರನ್ನು ಕರೆತಂದು ಸ್ಟಾರ್‌ ಮಾಡುತ್ತಿದ್ದ ಸೂರಿ ಈಗ ಹೊಸಬರ ಹೊಸಬರ ಜೊತೆಗೆ ಸ್ಟಾರ್‌ ಇದ್ದರೇನೇ ಸರಿ ಅನ್ನೋ ನಿಲುವಿಗೆ ಬಂದಿದ್ದಾರೆ. ಸದ್ಯಕ್ಕೆ ವಿರಾಟ್ ಜತೆಗೆ ಸ್ಟಾರ್ ಹೀರೋನನ್ನು ಜತೆ ಮಾಡಿ ಸಿನಿಮಾ ಮಾಡುವ ಐಡಿಯಾ ಕೊಟ್ಟಿದ್ದಾರೆ.  ನಿರ್ಮಾಪಕರಿಗೂ ನಿರ್ದೇಶಕರ ಈ ಸಲಹೆ ಇಷ್ಟವಾಗಿದೆಯಂತೆ.

ಹಾಗೆ ನೋಡಿದರೆ ಟಗರು, ಸಲಗ ಚಿತ್ರಗಳು ಸೌಂಡು ಮಾಡಿ ಗೆದ್ದಿದ್ದು ಇಂಥ ಡಿಫರೆಂಟ್ ಕಾಂಬಿನೇಶನ್ ಗಳಿಂದಲೇ ಎಂಬುದು ಚಿತ್ರರಂಗದ ಮಾರುಕಟ್ಟೆಯ ಬಲವಾದ ನಿಂಬಿಕೆ. ಇದೇ ನಂಬಿಕೆಯನ್ನು ಸೂರಿ ಕೂಡ ನಿಜ ಎಂದುಕೊಂಡಿದ್ದಾರೆ. ಈಗ ದುನಿಯಾ ಸೂರಿ ಅವರನ್ನು ನಂಬಿ ವಿರಾಟ್ ಮುಂದೆ ನಟಿಸಲು ಯಾವ ಹೀರೋ ರೆಡಿ ಇರಬಹುದು ಅದರೆ, ಎಲ್ಲರೂ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಕಡೆಗೆ ನೋಡುತ್ತಿದ್ದಾರೆ!

ಇನ್ನಷ್ಟು ಓದಿರಿ

Scroll to Top