ಯುವ ರಾಜ ಇಟ್ಟ ಮೊದಲ ಹೆಜ್ಜೆ ಹೀಗಿದೆ….

Picture of Cinibuzz

Cinibuzz

Bureau Report

ಸಂತೋಷ್ ಆನಂದ್ ರಾಮ್ ಅವರ ಐದನೇ ಕಲಾಕೃತಿ ತೆರೆ ಮೇಲೆ ಅರಳಿಕೊಂಡಿದೆ. ಈ ಹಿಂದೆ ಸಂತೋಷ್ ನಿರ್ದೇಶನ ಮಾಡಿದ್ದೆಲ್ಲಾ ಸ್ಟಾರ್ ನಟರಿಗೆ. ಈ ಬಾರಿ ಹೊಸಾ ನಾಯಕನಟನನ್ನು ಲಾಂಚ್ ಮಾಡುವ ಜವಾಬ್ದಾರಿ ಹೆಗಲಿಗೇರಿಸಿಕೊಂಡಿದ್ದರು. ಅದನ್ನು ನೇರ್ಪಾಗಿ ಮಾಡಿದ್ದಾರಾ? ಡಾ.ರಾಜ್ ಕುಟುಂಬದ ಮತ್ತೊಂದು ಕುಡಿಯ ಸಿನಿಮಾವನ್ನು ಯಾವ ಮಟ್ಟದಲ್ಲಿ ಕಟ್ಟಿ ನಿಲ್ಲಿಸಿದ್ದಾರೆ? ಕಳೆದ ಎರಡು ಸಿನಿಮಾಗಳ ಭಯಾನಕ ಸೋಲಿನಿಂದ ಸ್ವತಃ ಸಂತೋಷ್ ಆನಂದರಾಮ್ ಹೊರಬಂದಿದ್ದಾರಾ? ಹೊಂಬಾಳೆ ಜೊತೆಗಿನ ನಾಲ್ಕನೇ ಸಲದ ನಡಿಗೆ ಗೆಲುವಾಗಬಹುದಾ? ಈ ಎಲ್ಲ  ಪ್ರಶ್ನೆಗಳಿಗೆ ಉತ್ತರದಂತೆ ಮೂಡಿಬಂದಿರುವ ಸಿನಿಮಾ ಯುವ!

ಇಂಜಿನಿಯರಿಂಗ್ ಕಾಲೇಜು. ಅಲ್ಲಿ ಲೋಕಲ್ ಮತ್ತು ಹಾಸ್ಟೆಲ್ ಎಂಬೆರಡು ಬಣ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗೋದಿಲ್ಲ. ಇವರ ಬೈಕುಗಳನ್ನು ಅವರು, ಅವರ ಬೈಕುಗಳನ್ನು ಇವರು ಕುಟ್ಟಿ ಪುಡಿ ಮಾಡುತ್ತಾರೆ. ಲೋಕಲ್ ಹುಡುಗರೆಲ್ಲಾ ಸೇರಿ ಗ್ಯಾಂಗು ರೂಪಿಸಿಕೊಂಡರೆ, ಒಂದಿಡೀ ಗ್ಯಾಂಗಿನ ಹಿತ ಕಾಯಲು ನಿಂತವನು ಯುವ. ಅವನಿಗೊಂದು ಹಿನ್ನೆಲೆ. ಇವನನ್ನು ಕಂಡರೆ ಸ್ವತಃ ಹೆತ್ತಪ್ಪನಿಗೇ ರೇಜಿಗೆ. ಅಪ್ಪನನ್ನು ಕಂಡರೆ ಇವನಿಗೂ ಕೋಪ. ಇಂತವನೊಬ್ಬ ಮುಂದೆ ಹೇಗೆ ಅಪ್ಪನ ದಾರಿಗೆ ಬರುತ್ತಾನೆ, ಆಪಾದನೆಯೊಂದರ ಇಕ್ಕಳಕ್ಕೆ ಸಿಲುಕಿ ಅರ್ಧಕ್ಕೇ ನಿಂತ ವಿಚಾರವೊಂದು ಗಮ್ಯ ತಲುಪುತ್ತದಾ? ಅಡ್ಡ ಬಂದವರು ಯಾರೇ ಆದರೂ ಹೊಡೆದುರುಳಿಸುವ ಯುವನ ಬದುಕಿನಲ್ಲಿ ಎದುರಾಗುವ ಸವಾಲುಗಳೇನು? ಸಮಾಜದ  ದೃಷ್ಟಿಯಲ್ಲಿ ಪೊರ್ಕಿ ಅಂತಾ ಹಣೆಪಟ್ಟಿ  ಕಟ್ಟಿಸಿಕೊಂಡವನು ಅದನ್ನು ಹೇಗೆ ಕಳಚಿಕೊಳ್ಳುತ್ತಾನೆ.. ಎಂಬಿತ್ಯಾದಿ ವಿವರಗಳು ʻಯುವʼನ ಜೊತೆಯಾಗಿವೆ.

ಸಂತೋಷ್ ಆನಂದರ್ ರಾಮ್ ಮೊದಲಿನಿಂದಲೂ ಕಮರ್ಷಿಯಲ್ ಫಾರ್ಮುಲಾದ ಚೌಕಟ್ಟಿನಲ್ಲೇ ಸಿನಿಮಾ ರೂಪಿಸುತ್ತಾ ಬಂದವರು. ಒಂದು ಸಿನಿಮಾದಲ್ಲಿ, ಲವ್ವು,  ಫಾದರ್ ಸೆಂಟಿಮೆಂಟು, ಫೈಟು, ಟ್ರ್ಯಾಜಿಡಿಗಳನ್ನೆಲ್ಲಾ ಸೇರಿಸಿ ಅದಕ್ಕೊಂದು ಕತೆಯ ರೂಪ ಕೊಟ್ಟು ಎರಡು ಬಾರಿ ಗೆಲುವು ಕಂಡಿದ್ದವರು. ಅದನ್ನೇ ಮತ್ತೆ ಮತ್ತೆ ಮುಂದುವರೆಸುತ್ತಾ ಸೋಲನ್ನೂ ಕಂಡವರು. ಈಗ ತಮ್ಮ ಐದನೇ ಪ್ರಯತ್ನದಲ್ಲಿ ಕೂಡಾ ತಮ್ಮ ಹಳೇ ಫಾರ್ಮುಲಾವನ್ನೇ  ಪ್ರಯೋಗಿಸಿದ್ದಾರೆ.

ಸಿನಿಮಾದ ಮೊದಲ ಭಾಗ ಕಾಲೇಜು, ಹೊಡೆದಾಟ, ರಾಜಿ, ಪಂಚಾಯ್ತಿಗಳೇ ನಡೆಯುತ್ತಿರುತ್ತವೆ. ಎರಡನೇ ಭಾಗದಲ್ಲಿ ಮನೆಯವರ ಬಾಂಧವ್ಯ, ಎದುರಾಗುವ ಸವಾಲುಗಳು, ಸೆಂಟಿಮೆಂಟು, ಎಮೋಷನ್ನುಗಳ ನಡುವೆ ಕಥೆ ಟ್ರ್ಯಾಕಿಗೆ ಬರುತ್ತದೆ. ಏಕ ಕಾಲಕ್ಕೆ ನಾಲ್ಕಾರು ಎಲಿಮೆಂಟುಗಳನ್ನು ಮಿಕ್ಸ್ ಮಾಡಿರೋದರಿಂದ ಯಾವುದನ್ನೂ ನೆಟ್ಟಗೆ ಫೋಕಸ್ ಮಾಡಲು ಸಾಧ್ಯವಾಗಿಲ್ಲ. ಚಿತ್ರದಲ್ಲಿ ಕಿಶೋರ್ ಪಾತ್ರ ಆಗಾಗ ʻಫೋಕಸ್ ಮಾಡುʼ ಅನ್ನುತ್ತಿರುತ್ತದೆ. ಅದನ್ನು ಸ್ವತಃ ಸಂತೋಷ್ ಕೂಡಾ ಅರ್ಥ ಮಾಡಿಕೊಳ್ಳಬೇಕಿತ್ತು. ಇಂಥಾ ಒಂದಿಷ್ಟು ದೋಷಗಳ ಹೊರತಾಗಿ ʻಯುವ ʼಚಿತ್ರದಲ್ಲಿ ಸಾಕಷ್ಟು ಕಾಡುವ ಅಂಶಗಳೂ ಇವೆ. ಮಕ್ಕಳಿಗಾಗಿಯೇ ಜೀವ ಸವೆಸುವ ತಂದೆ. ಹೇಗಾದರೂ ಮಾಡಿ ಮಿಡ್ಲ್‌ ಕ್ಲಾಸ್‌ನಿಂದ ಬದುಕನ್ನು ಮೇಲೆತ್ತಬೇಕು ಎನ್ನುವ ನಿಟ್ಟಿನಲ್ಲಿ  ಅವನ ಪಡಿಪಾಟಲುಗಳು, ಸಾಲ ಮಾಡಿಯಾದರೂ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಅನ್ನುವ ನಿಲುವು, ಬದುಕು ಹಸನಾಯ್ತು ಅಂದುಕೊಳ್ಳೋ ಹೊತ್ತಿಗೇ ಸುತ್ತಿಕೊಳ್ಳುವ ವಂಚನೆಯ ಜಾಲ. ಅದರಿಂದ ಎದುರಾಗುವ ಅವಮಾನ, ಯಾತನೆಗಳೆಲ್ಲಾ  ಮನಸ್ಸಿಗೆ ಹತ್ತಿರವಾಗುತ್ತವೆ. ಕೈ ಹಿಡಿದು ನಡೆಸುವ ಅಪ್ಪನ ಕೈಯನ್ನೇ ಮಗ ಹಿಡಿದು ನಡೆಯುವ ದೃಶ್ಯ, ಯಾವ ಮಗನನ್ನು ನೋಡಿದರೆ ಅಪ್ಪ ಕಸಿವಿಸಿಯಾಗುತ್ತಾನೋ ಅದೇ ಮಗನ ಗೆಲುವನ್ನು ಕಂಡು ಶರ್ಟು ಬಿಚ್ಚಿಕೊಂಡು ಕುಣಿಯುವ ಅವನ ಆನಂದ…  ಇವೆಲ್ಲಾ  ಕಣ್ಣುಗಳನ್ನು ತೇವಗೊಳಿಸುತ್ತವೆ.

ಒಟ್ಟಾರೆ ನೋಡಿದರೆ ಯುವ ಒಂದು ಸರಾಸರಿ ಚಿತ್ರವಷ್ಟೇ.   ಯುವ ರಾಜ್‌ ಕುಮಾರ್‌ ಪಾಲಿಗೆ ಇದು ಮೊದಲ ಚಿತ್ರವಾದ್ದರಿಂದ ಇನ್ನಷ್ಟು ಮುತುವರ್ಜಿ ವಹಿಸಬೇಕಿತ್ತು. ತೆರೆಮೇಲೆ ಯುವ ತೀರಾ ಹೊಸಬ ಅಂತೇನೂ ಅನ್ನಿಸುವುದಿಲ್ಲ. ನಟನೆಯಲ್ಲಿ ಇನ್ನಷ್ಟು ಪಳಗಿದರೆ, ಕನ್ನಡಕ್ಕೊಬ್ಬ ʻಪವರ್‌ʼಫುಲ್‌ ಹೀರೋ ಆಗಿ ನಿಲ್ಲಬಹುದು. ಇನ್ನು ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ತಮ್ಮ ಪುರಾತನ ಫಾರ್ಮುಲಾದ ಹೊರತಾಗಿ ಸಿನಿಮಾ ಕಟ್ಟುವುದನ್ನು ಕಲಿಯಬೇಕು. ನಾಯಕಿ ಸಪ್ತಮಿಯ ಸಪ್ಪೆ ನಟನೆಯೇ ಪಾತ್ರಕ್ಕೂ ಪೂರಕವಾಗಿದೆ. ಗೋಪಾಲ್‌ ದೇಶಪಾಂಡೆ ಅಭಿನಯ ಅದ್ಭುತ. ಎಂದಿನಂತೆ ಅಚ್ಯುತ್‌ ಕುಮಾರ್‌, ಸುಧಾರಾಣಿ, ಹಿತಾ ಚಂದ್ರಶೇಖರ್‌ ಚೆನ್ನಾಗಿಯೇ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಅನೇಕ ಪಾತ್ರಗಳು ಒಂದೇ ರೀತಿ ಮಾತಾಡುವುದು, ವರ್ತಿಸುವುದು ತಮಾಷೆಯಂತೆ ಕಾಣುತ್ತದೆ. ಮೊದಲ ಭಾಗವನ್ನು ಸಾರಾಸಗಟಾಗಿ ಕಿತ್ತುಹಾಕಿ, ದ್ವಿತೀಯ ಭಾಗಕ್ಕೆ ಒಪ್ಪುವಂತೆ ಬೇರೇನನ್ನಾದರೂ ಸೇರಿಸಿದ್ದಿದ್ದರೆ ಬಹುಶಃ ʻಯುವʼ ಒಳ್ಳೆ ಕಂಟೆಂಟ್‌ ಸಿನಿಮಾ ಅನ್ನಿಸಿಕೊಳ್ಳುತ್ತಿತ್ತು. ಫಸ್ಟ್‌ ಹಾಫ್‌ನ ತಪ್ಪುಗಳು ಅದನ್ನು ವಂಚಿತಗೊಳಿಸಿದೆ…!

ಇನ್ನಷ್ಟು ಓದಿರಿ

Scroll to Top