ಒಂದು ಕಾಲದ ಹೀರೋ, ಸದ್ಯದ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್. ಚೌಕ, ರಾಬರ್ಟ್, ಕಾಟೇರ ಸಿನಿಮಾಗಳನ್ನು ನಿರ್ದೇಶನ ಮಾಡಿದವರು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಪ್ರತಿಭಾವಂತ ನಾಯಕನಟಿ ಸೋನಲ್ ಮಾಂಥೇರೋ. ಈಗ ಇಬ್ಬರೂ ಒಬ್ಬರನ್ನೊಬ್ಬರು ಒಪ್ಪಿ ಮದುವೆಯಾಗುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ಈ ಮದುವೆಯ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೇಯ್ಡ್ ಪ್ರಮೋಷನ್ ನಡೆಯುತ್ತಲೇ ಬಂದಿದೆ. ಒಂದು ಕಡೆ ಮದುವೆ ಪ್ರಚಾರ ಮಾಡಿಕೊಳ್ಳುತ್ತಿದ್ದ ತರುಣ್ ಸುಧೀರ್ ಅವರಿಗೆ ದರ್ಶನ್ ಜೈಲಿನಲ್ಲಿರುವುದು ನುಂಗಲಾರದ ತುತ್ತಾಗಿತ್ತು.
ಈ ಕಾರಣಕ್ಕೇ ಖುದ್ದು ದರ್ಶನ್ ಅವರನ್ನೇ ಭೇಟಿ ಮಾಡಿ ಬಂದಿದ್ದರು. ದರ್ಶನ್ ಕೂಡಾ ʻಮದುವೆ ದಿನಾಂಕವನ್ನು ಮುಂದೂಡಬೇಡ. ಅಷ್ಟರಲ್ಲಿ ನಾನು ಬಂದುಬಿಡ್ತೀನಿʼ ಅಂದಿದ್ದರಂತೆ. ಈ ಪ್ರಕಾರ ಈಗ ತರುಣ್ ಮತ್ತು ಸೋನಲ್ ಮದುವೆ ಆಗಸ್ಟ್ 10-11ರಂದು ನಡೆಯಲಿದೆ.
ʻಬಾಸ್ ನೀವಿಲ್ಲದೆ ಹೇಗೆ ಮದುವೆ ಮಾಡಿಕೊಳ್ಳೋದು?ʼ ಅಂತಾ ಬೇಜಾರಲ್ಲಿ ಮಾತಾಡಿಕೊಂಡು ಬಂದಿದ್ದವರು ತರುಣ್. ದರ್ಶನ್ ಅವರೇ ಮದುವೆ ಮುಂದೂಡಬೇಡ ಅಂದಮೇಲೆ ಮತ್ತಿನ್ನೇನು. ಈಗ ತಮ್ಮ ಮದುವೆಯ ವಿಚಾರವನ್ನು ಅಧಿಕೃತವಾಗಿ ಅನೌನ್ಸ್ ಮಾಡಿಕೊಂಡಿದ್ದಾರೆ. ನವರಂಗ್ ಥೇಟರಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿ, ವಿಡಿಯೋವನ್ನೂ ರಿಲೀಸ್ ಮಾಡಿದ್ದಾರೆ.
ಇದನ್ನು ನೋಡಿದ ದರ್ಶನ್ ಅಭಿಮಾನಿಗಳು ʻʻಅಣ್ಣ ಜೈಲಿನಲ್ಲಿ ಸಂಕಟದಲ್ಲಿರುವಾಗ, ತರುಣ್ ಇಷ್ಟೊಂದು ಗ್ರಾಂಡ್ ಆಗಿ ಮದುವೆ ಅನೌನ್ಸ್ ಮಾಡಿಕೊಳ್ಳಬೇಕಿತ್ತಾ?. ಬಾಸ್ ಹೇಳಿದಂತೆ ದಿನಾಂಕವನ್ನು ಮುಂದೂಡದೆ ಸಿಂಪಲ್ಲಾಗಿ ಮದುವೆಯಾಗಬಹುದಿತ್ತು…ʼʼ ಅಂತಾ ಕೊಂಕು ತೆಗೆದಿದ್ದಾರೆ!
ಮದುವೆ ಅನ್ನೋದು ಅವರವರ ಖಾಸಗೀ ವಿಚಾರ. ಅವರ ಇಷ್ಟಕ್ಕೆ ತಕ್ಕಂತೆ ಮಾಡಿಕೊಳ್ಳಲಿ ಬಿಡಿ… ದರ್ಶನ್ ಎಲ್ಲಿದ್ದರೇನು? ತರುಣ್-ಸೋನಲ್ ಸಂಭ್ರಮ ಮುಂದುವರೆಯಲಿ…!











































