ಕನ್ನಡ ಚಿತ್ರರಂಗದ ಲಕ್ಕಿ ಚಾರ್ಮ್ ಕೋಬ್ರಾ ವಿಜಯ್!

Picture of Cinibuzz

Cinibuzz

Bureau Report

ಸ್ಯಾಂಡಲ್‌ವುಡ್‌ ಸಲಗ ವಿಜಯಕುಮಾರ್ ಅಲಿಯಾಸ್ ದುನಿಯಾ ವಿಜಿ ಕನ್ನಡ ಚಿತ್ರರಂಗದ ಪಾಲಿಗೆ ಒಂಥರಾ ಲಕ್ಕಿ ಚಾರ್ಮ್ ಇದ್ದಂತೆ…!

ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದ ಅಂತಾ ಭಗವಾನ್ ಬುದ್ಧನ ಬಗೆಗಿನ ಮಾತೊಂದಿದೆ. ಹಾಗೆಯೇ ಇಡೀ ಸ್ಯಾಂಡಲ್ ವುಡ್ ಕಳಾಹೀನವಾಗಿ, ನಿಸ್ತೇಜಗೊಂಡು ನೆಲಕ್ಕೊರಗಿದ್ದಾಗ ದುಬುಕ್ಕಂತಾ ಎದ್ದು ನಿಂತು ಇಡೀ ಚಿತ್ರರಂಗಕ್ಕೆ ಕಾಂತಿ ನೀಡುವ ತಾಕತ್ ಇರುವ ಹೀರೋ ದುನಿಯಾ ವಿಜಯ್. ಈ ಕಾರಣಕ್ಕೇ ಜನ ಯಾವತ್ತಿಗೂ ಇವರನ್ನು ಪ್ರೀತಿಯಿಂದ ʼಕರಿಯ ಐ ಲವ್ ಯೂʼ ಅನ್ನೋದು!

೨೦೦೬ರ ಹೊತ್ತಿಗೆ ಕನ್ನಡ ಚಿತ್ರರಂಗ ತುಂಬಾನೇ ಡಲ್ ಅನ್ನಿಸಿಕೊಂಡಿತ್ತು. ಬಂದ ಯಾವ ಸಿನಿಮಾಗಳೂ ಎದ್ದು ನಿಲ್ಲುತ್ತಿರಲಿಲ್ಲ. ಈ ಹೊತ್ತಲ್ಲೇ ಮುಂಗಾರು ಮಳೆಯ ಜೊತೆಗೇನೆ ಬಂತು ನೋಡಿ ʼದುನಿಯಾʼ ಎನ್ನುವ ನೈಜ ಸಿನಿಮಾ. ಕನ್ನಡ ಚಿತ್ರರಂಗದ ಪಥವನ್ನೇ ಬದಲಿಸಿತ್ತು. ತೀರಾ ಇತ್ತೀಚಿನ ವರ್ಷದಲ್ಲಿ ಕೋವಿಡ್ ಮಹಾ ಮಾರಿ ಇಡೀ ಜಗತ್ತನ್ನೇ ಜರ್ಝರಿತಗೊಳಿಸಿತ್ತು. ಕನ್ನಡ ಸಿನಿಮಾ ಇಂಡಸ್ಟ್ರಿಯಂತೂ ಕಂಗಾಲಾಗಿ ಕುಳಿತಿತ್ತು. ಆಗ ಎದ್ದು ಬಂದ ಸಲಗ ಇಡೀ ಸ್ಯಾಂಡಲ್ ವುಡ್ಡನ್ನು ಅನಾಮತ್ತಾಗಿ ಎಬ್ಬಿಸಿ ನಿಲ್ಲಿಸಿತ್ತು. ಈಗ ಮತ್ತೆ ಕರ್ನಾಟಕದ ಚಿತ್ರೋದ್ಯಮ ದೈನೇಸಿ ಸ್ಥಿತಿ ತಲುಪಿದೆ. ಒಂದರ ಹಿಂದೊಂದು ಚಿತ್ರಮಂದಿರಗಳಿಗೆ ಬೀಗ ಬೀಳುತ್ತಿವೆ. ಕಳೆದ ಒಂದೆರಡು ತಿಂಗಳಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ ಹದಿನೆಂಟು ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಈಗ ದುನಿಯಾ ವಿಜಯ್ ಅವರ ಭೀಮ ಚಿತ್ರಕ್ಕಾಗಿ ಆ ಎಲ್ಲ ಥೇಟರುಗಳೂ ಮತ್ತೆ ಕದ ತೆರೆಯುತ್ತಿವೆ.

ಯಾವಾಗೆಲ್ಲಾ ಸಿನಿಮಾ ಉದ್ಯಮ ಸುಸ್ತಾಗಿ ಮಲಗುತ್ತದೆಯೋ ಆ ಹೊತ್ತಿಗೆಲ್ಲಾ ಆಪತ್ ಬಾಂಧವನಂತೆ ಬಂದು ಕೈ ಹಿಡಿಯುವುದರ ಜೊತೆಗೆ ಬಾಕ್ಸಾಫೀಸನ್ನೂ ಲೂಟಿ ಮಾಡಿಕೊಂಡು ಹೋಗುವ ಕಿಲಾಡಿ ಈ ಕೋಬ್ರಾ ವಿಜಯ್… ಅದಕ್ಕೇ ಹೇಳಿದ್ದು ಈ ವಿಜಯ ಕುಮಾರ ಕನ್ನಡ ಚಿತ್ರರಂಗದ ಲಕ್ಕಿ ಚಾರ್ಮ್ ಅಂತಾ!

ಇನ್ನಷ್ಟು ಓದಿರಿ

Scroll to Top