‘ರಜನಿಕಾಂತ್ ಇಷ್ಟು ವರ್ಷ ದುಡಿದಿದ್ದಾರೆ. ಬದುಕು ಅವರಿಗೆ ಸಕಲವನ್ನೂ ಕೊಟ್ಟಿದೆ. ಈ ಹೊತ್ತಲ್ಲಿ ಮಕ್ಕಳು, ಮೊಮ್ಮಕ್ಕಳ ಜೊತೆ ಸಮಯ ಕಳೆಯೋದು ಬಿಟ್ಟು ತ್ರಾಸಪಟ್ಟು ಸಿನಿಮಾಗಳಲ್ಲಿ ನಟಿಸೋ ಜರೂರತ್ತೇನು?’ ಇದು ಸಾಕಷ್ಟು ಜನರ ಪ್ರಶ್ನೆ ಮತ್ತು ಅಭಿಪ್ರಾಯ. ಇಂಥ ಪ್ರಶ್ನೆಗಳಿಗೆ ನಮ್ಮ ನಡುವಿನ ಕ್ರಿಯಾಶೀಲ ನಿರ್ದೇಶಕ ರವೀಂದ್ರ ವೆಂಶಿ ಉತ್ತರಿಸಿದ್ದಾರೆ. ರಜನಿ ಭಾರತೀಯ ಚಿತ್ರೋದ್ಯಮಕ್ಕೆ ಈ ಕ್ಷಣಕ್ಕೂ ಎಷ್ಟು ಅವಶ್ಯಕ ಅನ್ನೋದನ್ನು ಬಿಡಿಸಿಟ್ಟಿದ್ದಾರೆ. ಓದಿದ ನಂತರ ನಿಮ್ಮಲ್ಲೂ ಇದೇ ಅನಿಸಿಕೆ ಮೂಡಬಹುದು….

ರಜನಿಕಾಂತ್ ಗೆ ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಿತ್ತಾ ..?
ಮಗ್ನನಾಗಿ ಕುಳಿತು ವೇಟೈಯನ್ ನೋಡುತ್ತಿದ್ದವನಿಗೆ ಪಕ್ಕದಲ್ಲಿದ್ದ ಗೆಳೆಯ ತಿವಿದು ಕೇಳಿದ. ಪರದೆಯ ಮೇಲೆ ರಜನಿ ಫೈಟ್ ಮಾಡುತ್ತಿದ್ದರು.
ಈ ಇಳಿವಯಸ್ಸಿನಲ್ಲಿ ಕುಣಿಯುವುದು , ಹೊಡೆಯುವುದು ಬೇಕಾ ರಜನಿಗೆ . ಅದೇನು ಹುಚ್ಚು ?
ಹಾಗೆ ನೋಡಿದರೆ ಇಳಿವಯಸ್ಸಿನಲ್ಲಿ ಸೂಪರ್ ಸ್ಟಾರ್ ಗಳಿಗೆ ಇದಾವುದೂ ಬೇಕಿಲ್ಲ. ಹಾಗೆಯೇ ರಜನಿಕಾಂತ್ ಅವರಿಗೂ. ಈಗಾಗಲೇ ಅವರ ಪ್ರಸಿದ್ಧಿ ಗಗನಕ್ಕೇರಿದೆ. ಈವತ್ತಿನಿಂದ ದುಡಿಯದೇ ಕುಳಿತು ತಿಂದರೂ ಕರಗದಷ್ಟು ಸಂಪತ್ತಿದೆ. ಪ್ರಶಸ್ತಿ ಪುರಸ್ಕಾರಗಳು ತುಂಬಿಹೋಗಿವೆ .
ಆದರೂ ಯಾಕೆ ಸಿನಿಮಾ ಮಾಡಬೇಕು.?
ಆದರೂ ಅವರು ಸಿನಿಮಾ ಮಾಡಬೇಕು ,
ಅವರಿಗಾಗಿ ಅಲ್ಲ , ಅವರ ಅಭಿಮಾನಿಗಳಿಗಾ .. ?
ಅದನ್ನೂ ಪಕ್ಕಕ್ಕಿಡಬಹುದು .
ಆದರೆ ನಮಗಾಗಿ ,
ಚಿತ್ರರಂಗಕ್ಕಾಗಿ
ನಮ್ಮಂತಹ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಒದ್ದಾಡುತ್ತಿರುವವರಿಗಾಗಿ
ಅವರು ಸಿನಿಮಾ ಮಾಡುತ್ತಾರೆ.
ಒಂದು ರಜನಿಕಾಂತ್ ಸಿನಿಮಾ ಎಂದರೆ ಚಿತ್ರಮಂದಿರಗಳು ಕ್ರಿಯಾಶೀಲವಾಗಿ ಬಿಡುತ್ತದೆ. ಚಿತ್ರೀಕರಣ ಸಮಯದಲ್ಲಿ ನೂರುಗಟ್ಟಲೆ ಜನರಿಗೆ ಕೆಲಸ ಸಿಗುವುದು ಬೇರೆ ಮಾತು. ಆದರೆ ಅದರ ನಂತರದ್ದು ಒಂದು ಸರಪಳಿಯೇ ಇದೆ.
ವಿತರಕರು, ಪ್ರದರ್ಶಕರ ಜೊತೆಗೆ ಪ್ರೇಕ್ಷಕರು ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬರುತ್ತಾರೆ. ಇಡೀ ಒಂದು ಕುಟುಂಬ ಸಿನಿಮಾಕ್ಕೆ ಬಂದಾಗಲೇ ಸಿನಿಮಾ ವೀಕ್ಷಣೆ ಎನ್ನುವ ಸಂಸ್ಕೃತಿ ಪೀಳಿಗೆಯಿಂದ ಪೀಳಿಗೆಗೆ ಹರಡುತ್ತದೆ.
ಒಮ್ಮೆ ಕೆಲಸದ ನಿಮಿತ್ತ ಹೈದೆರಾಬಾದ್ ನಲ್ಲಿದ್ದಾಗ ತೆಲುಗು ಸಿನಿಮಾಕ್ಕೆ ಬೆಳಿಗ್ಗೆ 9 ಪ್ರದರ್ಶನಕ್ಕೆ ಇಡೀ ಕುಟುಂಬವೆ ಸಮಾರಂಭಕ್ಕೆ ಬರುವ ಹಾಗೆ ಸಿದ್ಧರಾಗಿ ಬಂದದ್ದು ನೋಡಿ ಖುಷಿಯಾಗಿತ್ತು . ಮಕ್ಕಳು ಅಜ್ಜಿಯರು ತಾಂತದಿರು ಹೀಗೆ. ಈ ರೀತಿಯ ಚಿತ್ರಮಂದಿರದ ರಸಗವಳ ರೂಢಿಯಾದರೆ ಮೊಬೈಲ್ ಫಾಸ್ಟ್ ಫುಡ್ ರುಚಿಸುವ ಪರಿ ಕಡಿಮೆಯೇ .
ನಾನು ಗಮನಿಸಿದ ಹಾಗೆ ರಜನಿಕಾಂತ್ ಸಿನಿಮಾಗಳಿಗೆ ಇಡೀ ಕುಟುಂಬವೆ ಬಂದುಬಿಡುತ್ತದೆ. ಇಡೀ ಚಿತ್ರಮಂದಿರವೇ ಕಳೆಯಾಗಿ ಬಿಡುತ್ತದೆ. ಮಧ್ಯಂತರದ ತಿಂಡಿ ಮಳಿಗೆಯಲ್ಲಿ ಜನವೋ ಜನ.
ಈ ತರಹದ್ದು ಈವತ್ತಿನ ಪೀಳಿಗೆಗೆ ಹರಡಿದರೆ ಕುಟುಂಬದ ಜೊತೆ ಕಾಲ ಕಳೆಯುವ ಸೊಬಗು ಸಂಭ್ರಮದ ಅರಿವಾಗುತ್ತದೆ. ಆದರೆ ಇದರಿಂದ ಮಕ್ಕಳನ್ನು ದೂರ ಇಟ್ಟಾಗ ಅವರು ಮೊಬೈಲ್ ಗೆ ಅಂಟಿಕೊಳ್ಳುತ್ತಾರೆ. ಅವರದ್ದೇ ಆದ ಪ್ರಪಂಚದಲ್ಲಿ ಮುಳುಗಿಹೋಗುತ್ತಾರೆ .
ರಜನಿಕಾಂತ್ ಸಿನಿಮಾದ ಫಲಿತಾಂಶ ಏನಾದರೂ ಇರಲಿ. ಈವತ್ತಿಗೂ ನೂರಾರು ಕೋಟಿ ವಹಿವಾಟು, ಒಂದು ಸಂಭ್ರಮ ಹುಟ್ಟು ಹಾಕುವ ತಾಕತ್ತು ಅವರಿಗಿದೆ.
ಹಾಗಾಗಿ ಅವರು ನಮಗಾಗಿ , ನಮ್ಮಂಥವರಿಗಾಗಿ ಚಿತ್ರರಂಗಕ್ಕಾಗಿ ಸಿನಿಮಾ ಮಾಡುತ್ತಾರೆ. ಎಪ್ಪತ್ತರ ಹರೆಯದಲ್ಲಿ ಏನೇ ಸವಲತ್ತು ಕೊಟ್ಟರೂ ದೈಹಿಕವಾಗಿ ಒಂದಷ್ಟು ಏರು ಪೇರು ಇದ್ದೇ ಇರುತ್ತದೆ.
ಒಂದಷ್ಟು ದೂರ ನಡೆದರೂ ಸುಸ್ತು ಯಾಕೆ ಬೇಕು ಎನ್ನತ್ತೇವೆ ನಾವುಗಳು. ಇನ್ನು ರಜನಿಕಾಂತ್ , ಮಮ್ಮೂಟ್ಟಿ ಚಿರಂಜೀವಿ ನಮ್ಮ ಶಿವಣ್ಣ ಇವರುಗಳು ಆರಾಮವಾಗಿ ಮನೆಯಲ್ಲಿಯೇ ಇದ್ದು ಬಿಡಬಹುದು. ಮೇಲೆ ಹೇಳಿದಂತೆ ಯಶಸ್ಸು ಸಂಪತ್ತು ಎಲ್ಲವೂ ಅವರ ಬಳಿಯಲ್ಲಿ ಹೇರಳವಾಗಿಯೇ ಇವೆ.
ಇಲ್ಲಿ ದುಡಿಮೆಯಾಚೆಗಿನ ಘನ ಉದ್ದೇಶವಿದೆ. ದುಡಿಮೆ ಮೀರಿದ ಫಲಿತಾಂಶ ಇದೆ .
ಹಾಗಾಗಿ ಅವರುಗಳಿಗೆ ಬೇಕಿಲ್ಲದಿದ್ದರೂ ನಮಗಾಗಿ ಬೇಕು ..
ಎನ್ನುವ ಉತ್ತರ ನೀಡಿದೆ. ಗೆಳೆಯ ಒಂದೆರೆಡು ನಿಮಿಷ ಮಾತಾಡಲಿಲ್ಲ . ಆನಂತರ ನನ್ನನ್ನು ನೋಡಿ,
ನಿಜ, ಸಾರಿ ….
ನನಗೀಗ ರಜನಿ ಮುಂತಾದ ಸೂಪರ್ ಸ್ಟಾರ್ ಮೇಲಿನ ಗೌರವ ಹೆಚ್ಚಾಯಿತಷ್ಟೇ ಅಲ್ಲ. ಅವರ ಸಾಧನೆಯ ಅರಿವಾಯಿತು .
ಎಂದ.











































