ಗೆದ್ದಮೇಲೆ ಒದ್ದು ನಡೆಯಬಾರದು!

Picture of Cinibuzz

Cinibuzz

Bureau Report

ಗೆದ್ದಮೇಲೆ ಒದ್ದು ನಡೆಯಬಾರದು!

ನಮ್ಮವರ ಬೆಳವಣಿಗೆ ನಮಗೇ ಮಾರಕವಾಗಬಾರದು!
ಕೆ.ಜಿ.ಎಫ್ ಸಿನಿಮಾ ಐತಿಹಾಸಿಕ ಗೆಲುವಿನ ನಂತರ ಅದರ ಹೀರೋ ಯಶ್ ನಟಿಸಬೇಕಿದ್ದ ಒಂದಿಷ್ಟು ಕನ್ನಡ ಸಿನಿಮಾಗಳು ಅಸುನೀಗಿದವು. ಕೆಲವೊಂದನ್ನು ಭ್ರೂಣಾವಸ್ಥೆಯಲ್ಲೇ ಚಿವುಟಿಹಾಕಲಾಯಿತು. ಮತ್ತೆ ಕೆಲವು ಸಿನಿಮಾಗಳ ಚಿತ್ರೀಕರಣವನ್ನು ನಿಲ್ಲಿಸಿ, ಆ ತನಕ ಚಿತ್ರೀಕರಿಸಿದ್ದ ಫುಟೇಜುಗಳನ್ನು ನಿರ್ದಾಕ್ಷಿಣ್ಯವಾಗಿ ಬಿಸಾಕಿದರು. ಒಂದೇ ಒಂದು ವಿಚಾರವನ್ನು ನೆನಪಿಡಬೇಕು. ಯಶ್ ಈ ಸಿನಿಮಾಗಳಿಗೆ ಸಂಬಂಧಪಟ್ಟ ಯಾವುದೇ ನಿರ್ಮಾಪಕ, ನಿರ್ದೇಶಕ, ತಂತ್ರಜ್ಞರಿಗೆ ನಷ್ಟವಾಗಲು ಬಿಟ್ಟಿರಲಿಲ್ಲ. ಖರ್ಚಾಗಿದ್ದ ಮೊತ್ತವನ್ನು ತಮ್ಮ ಕೈಯಾರೆ ನೀಡಿದ್ದರು; ಅವರವರ ಶ್ರಮಕ್ಕೆ ಬೆಲೆ ʻಕಟ್ಟಿʼಕೊಟ್ಟಿದ್ದರು. ಆ ಮೂಲಕ ಅವರ ವ್ಯಕ್ತಿತ್ವವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದರು. ಈ ವಿಚಾರದಲ್ಲಿ ಯಶ್ ಅವರನ್ನು ನಿಜಕ್ಕೂ ಮೆಚ್ಚಬೇಕು.

ಈಗ ರಿಷಬ್ ಸರದಿ. ಕಾಂತಾರ ಎನ್ನುವ ಸಿನಿಮಾದ ಮೂಲಕ ರಿಷಬ್ ಕೂಡಾ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇಡೀ ಭಾರತೀಯ ಚಿತ್ರರಂಗದ ದೊಡ್ಡ ನಿರ್ಮಾಪಕರು ಇವರ ಮೇಲೆ ಕಣ್ಣಿಟ್ಟಿದ್ದಾರೆ; ಒಂದರ ಹಿಂದೊಂದು ಸಿನಿಮಾಗಳು ಅನೌನ್ಸ್ ಆಗುತ್ತಿವೆ… ಸಂತೋಷ!

ಆದರೆ, ಕಾಂತಾರ ತೆರೆಗೆ ಬರುವ ಮುಂಚೆ ರಿಷಬ್ ಒಪ್ಪಿಕೊಂಡಿದ್ದ ಸಿನಿಮಾಗಳ ಕತೆ ಈಗ ಏನಾಗಿವೆ. ರಿಷಬ್ ಇನ್ನೂ ನ್ಯಾಷನಲ್ ಸ್ಟಾರ್ ಆಗುವ ಮುಂಚೆ ಅವರನ್ನು ನಂಬಿ ಹಣ ಹೂಡಿಕೆ ಮಾಡಿದ್ದವರ ಗತಿ ಏನೇನಾಗಿದೆ? ಕನ್ನಡ ಸಿನಿಮಾವನ್ನು ಮಾತ್ರ ನಂಬಿರುವ ʻಬಡಪಾಯಿʼ ನಿರ್ಮಾಪಕರನ್ನು ಶೆಟ್ಟರು ಮರೆತುಬಿಟ್ಟರಾ? ಅಥವಾ ಬೇಕಂತಲೇ ಕೈ ಬಿಟ್ಟರಾ? ಇಂಥದ್ದೊಂದು ಪ್ರಶ್ನೆಯನ್ನು ಕೇಳಲೇಬೇಕಿರುವ ಪರಿಸ್ಥಿತಿ ಈಗ ಎದುರಾಗಿದೆ!

ರಿಷಭ್ ಶೆಟ್ಟಿ ಒಂದಿಷ್ಟು ಸಿನಿಮಾಗಳ ಸೋಲು-ಗೆಲುವಿನ ನಂತರ ನಿರ್ದೇಶಕನಾಗಿ ಗುರುತು ಮೂಡಿಸಿದ್ದರು. ಅವರನ್ನು ಪೂರ್ಣ ಪ್ರಮಾಣದ ನಟನಾಗಿ ಗುರುತಿಸಿದ್ದು ಬೆಲ್ ಬಾಟಮ್ ಸಿನಿಮಾ. ಬೆಲ್ ಬಾಟಮ್ ರೂಪುಗೊಳ್ಳದೇ ಹೋಗಿದ್ದರೆ ಬಹುಶಃ ರಿಷಬ್ ಆ ನಂತರ ನಾಯಕ ನಟನಾಗಿ ಮೇಲಿಂದ ಮೇಲೆ ಅವಕಾಶ ಪಡೆಯಲು ಸಾಧ್ಯವೇ ಆಗುತ್ತಿರಲಿಲ್ಲವೇನೋ. ಬೆಲ್ ಬಾಟಮ್ ಬರುವ ತನಕ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಬೆಲ್ ಬಾಟಮ್ ಗೆಲುವಿನ ನಂತರ ಏಕಾ ಏಕಿ ರಿಷಬ್ ಪೂರ್ಣ ಪ್ರಮಾಣದಲ್ಲಿ ʻಹೀರೋʼ ಆಗಿಬಿಟ್ಟರು. ಅದು ಅವರನ್ನು ಕಾಂತಾರ ತನಕ ಕರೆದುಕೊಂಡುಹೋಗಿ ಬಿಟ್ಟಿತು!
ರಿಷಬ್ ಇಷ್ಟು ಬೇಗ ಅದನ್ನೆಲ್ಲಾ ಹೇಗೆ ಮರೆತರು? ಒಂದು ಅದ್ಭುತ ಗೆಲುವು ಹಳೆಯದ್ದನ್ನೆಲ್ಲಾ ಮರೆಯುವಂತೆ ಮಾಡಿಬಿಡತ್ತಾ? ಬಂದ ದಾರಿಯನ್ನು ಹಿಂತಿರುಗಿ ನೋಡಲು ಮುಜುಗರ ಹುಟ್ಟಿಸುತ್ತಾ? ತಾನು ಬೆಳೆದೇಟಿಗೆ ಜೊತೆಗಿದ್ದವರ ಕುತ್ತಿಗೆ ಮೇಲೆ ಕಾಲಿಡುವ ಗುಣ ಎಷ್ಟು ಸರಿ? – ರಿಷಭ್ ಅವರ ಸದ್ಯದ ಮನಸ್ಥಿತಿಯನ್ನು ಕಂಡರೆ ಖಂಡಿತಾ ಹೀಗನ್ನಿಸುತ್ತದೆ!

ಕಾಂತಾರಾ ಗೆಲುವಿನ ನಂತರ ಶೆಟ್ರು ಒಂದಿಷ್ಟು ಸಿನಿಮಾಗಳಿಂದ ಮೆಲ್ಲಗೆ ನುಣಿಚಿಕೊಂಡರು. ಇನ್ನು ಕೆಲವು ಸಿನಿಮಾಗಳಿಗೆ ʻಖಂಡಿತಾ ಮಾಡೋಣʼ ಅಂತಾ ಸುಮ್ಮನೇ ಕಾಗೆ ಹಾರಿಸಿ ಸುಮ್ಮನಾದರು. ಆದರೆ ತಮಗೆ ಫುಲ್ ಟೈಮ್ ಹೀರೋ ಎನ್ನುವ ಪಟ್ಟ ಕೊಟ್ಟ ಸಿನಿಮಾವೊಂದರ ನಿರ್ಮಾಪಕರಿಗೆ ದೋಖ ಕೊಟ್ಟಿರೋದಂತೂ ಸರಿಯಲ್ಲ. ಎಲ್ಲ ಅಂದುಕೊಂಡಂತೇ ಆಗಿದ್ದಿದ್ದರೆ ಕಾಂತಾರ ಸಿನಿಮಾ ತೆರೆಗೆ ಬರುತ್ತಿದ್ದಂತೇ ರಿಷಬ್ ಬೆಲ್ ಬಾಟಮ್ -2 ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಶೂಟಿಂಗಿಗೆ ಸಕಲ ತಯಾರಿಯೂ ನಡೆದಿತ್ತು. ಯಾರೂ ನಿರೀಕ್ಷೆ ಮಾಡಲಾಗದ ರೇಂಜಿಗೆ ಕಾಂತಾರ ಗೆಲ್ಲುತ್ತಿದ್ದಂತೇ ರಿಷಭ್ ಟ್ರ್ಯಾಕು ಬದಲಿಸಿದರು. ʻಕಾಂತಾರ ಪ್ರೀಕ್ವೆಲ್ ಪ್ಲಾನು ಮಾಡಿಬಿಟ್ಟಿದೀನಿ. ಅದನ್ನು ಮುಗಿಸಿಕೊಳ್ತಿದ್ದಂಗೇ, ಓಡೋಡಿ ಬಂದು ಬೆಲ್ ಬಾಟಮ್ ಮಾಡ್ತೀನಿʼ ಅಂತಾ ಪ್ರಾಮಿಸ್ ಮಾಡಿದ್ದರು. ಈಗ ಅದು ಶುದ್ಧ ಸುಳ್ಳು ಅನ್ನೋದು ಇಡೀ ಇಂಡಸ್ಟ್ರಿಗೇ ಗೊತ್ತಾಗಿದೆ. ಯಾಕೆಂದರೆ, ರಿಷಬ್ ನಟನೆಯ ಶಿವಾಜಿ, ಜೈ ಹನುಮಾನ್ ಸಿನಿಮಾಗಳು ಈಗ ಅನೌನ್ಸ್ ಆಗಿದೆ. ಇದು ಮಾತ್ರವಲ್ಲದೆ, ಇನ್ನೊಂದಿಷ್ಟು ತೆಲುಗು, ತಮಿಳು ಚಿತ್ರಗಳೂ ಆರಂಭಗೊಳ್ಳಲಿವೆಯಂತೆ. ಈ ನಡುವೆ ನಿಜಕ್ಕೂ ರಿಷಬ್ ಬೆಲ್ ಬಾಟಮ್ ತಂಡವನ್ನು ಸೇರುತ್ತಾರಾ ಅನ್ನೋದೆ ಡೌಟು ಡೌಟು!

ಬೆಲ್ ಬಾಟಮ್ ನಿರ್ಮಾಪಕ ಸಂತೋಷ್ ಕುಮಾರ್ ಕೆ.ಸಿ. ಬೆಲ್ ಬಾಟಮ್-2 ಸಿನಿಮಾವನ್ನು ನಂಬಿ ಸರಿಸುಮಾರು ಒಂದು ಕೋಟಿಗೂ ಅಧಿಕ ಮೊತ್ತವನ್ನು ಈಗಾಗಲೇ ಇನ್ವೆಸ್ಟ್ ಮಾಡಿದ್ದಾರೆ. ಸಿನಿಮಾ ಅನೌನ್ಸ್ ಆಗಿ ಎರಡು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಅವರು ಖರ್ಚು ಮಾಡಿರುವ ಹಣದ ಮೇಲೆ ಅದೆಷ್ಟು ಬಡ್ಡಿ ಏರಿಕೊಂಡಿದೆಯೋ ಗೊತ್ತಿಲ್ಲ. ಬೆಲ್ ಬಾಟಮ್ ಮಾತ್ರವಲ್ಲ, ಸರ್ಕಾರಿ ಶಾಲೆ ನಂತರ ನಿರ್ಮಾಪಕ ಜಯಣ್ಣ ಅವರ ಬ್ಯಾನರಿಗೆ ಶಿವಣ್ಣನ ಸಿನಿಮಾವನ್ನು ನಿರ್ದೇಶನ ಮಾಡಬೇಕಿತ್ತು. ಆ ನಂತರ ರುದ್ರಪ್ರಯಾಗ ಚಿತ್ರವನ್ನು ಅನೌನ್ಸ್ ಮಾಡಿದರು. ಇದರ ಜೊತೆಗೆ ಸೀರಿಯಲ್ ಡೈರೆಕ್ಟರ್ ವಿನು ಬಳಂಜ ಅವರ ನಿರ್ದೇಶನದಲ್ಲಿ ನಾಥೂರಾಮ್ ಎನ್ನುವ ಸಿನಿಮಾದ ಘೋಷಣೆ ಕೂಡಾ ಆಗಿತ್ತು. ಶೂಟಿಂಗ್ ಕೂಡಾ ಶುರುವಾಗಿತ್ತು. ಇವೆಲ್ಲಾ ಈಗ ಏನಾಯ್ತೋ ಗೊತ್ತಿಲ್ಲ!

ರಿಷಭ್ ಈಗ ನೂರಾರು ಕೋಟಿಗೆ ಬಾಳುತ್ತಿದ್ದಾರೆ. ದುಬೈ ದೇಶದಲ್ಲಿ ಹೊಟೇಲ್ ಇಂಡಸ್ಟ್ರಿಗೂ ಕೈಯಿಟ್ಟಿದ್ದಾರೆ ಎನ್ನುವ ಮಾತುಗಳಿವೆ. ಇರಲಿ; ಆದರೆ, ಸಂತೋಷ್ ಅವರ ಪಾಲಿಗೆ ಒಂದು ಕೋಟಿ ನಿಜಕ್ಕೂ ದೊಡ್ಡ ಮೊತ್ತ ಅಲ್ಲವೇ. ಒಂದು ವೇಳೆ ರಿಷಬ್ ಅವರಿಗೆ ಈಗ ಬೆಲ್ ಬಾಟಮ್ ಥರದ ಸಿನಿಮಾದಲ್ಲಿ ನಟಿಸುವ ಮನಸ್ಸಿಲ್ಲದಿದ್ದರೆ ಬಿಟ್ಟುಬಿಡಲಿ. ಯಶ್ ಮಾಡಿದಂತೆ ಯಾರೆಲ್ಲಾ ಇವರನ್ನು ನಂಬಿ ಹಣ ಹೂಡಿದ್ದಾರೋ, ಆ ನಷ್ಟವನ್ನು ಭರಿಸಿ, ಪಡೆದುಕೊಂಡ ಅಡ್ವಾನ್ಸ್ ಇತ್ಯಾದಿ ಖರ್ಚನ್ನು ವಾಪಾಸು ಕೊಟ್ಟುಬಿಡಲಿ. ಆಮೇಲೆ ಇವರು ಇಂಡಿಯಾ ಮಾತ್ರವಲ್ಲ, ಜಗತ್ತಿನ ಯಾವುದೇ ಭಾಷೆಯ ಸಿನಿಮಾಗಳನ್ನು ಒಪ್ಪಿಕೊಂಡು ಮುಂದುವರೆಯಬಹುದು!

ಹಳೆಯ ಮಾತು ನೆನಪಿದೆಯಾ ಶೆಟ್ರೇ?
ಹಿಂದೊಮ್ಮೆ ಟೀವಿ ನಿರೂಪಕ ಸೋಮಣ್ಣ ಮಾಚಿಮಾಡ ರಿಷಭ್ ಶೆಟ್ಟಿ ಅವರನ್ನು ವಾಹಿನಿಯೊಂದಕ್ಕೆ ಸಂದರ್ಶನ ಮಾಡಿದ್ದರು. ಅದರ ತುಣುಕು ಈಗಲೂ ಸೋಷಿಲ್ ಮೀಡಿಯಾದಲ್ಲಿ ಹುಡುಕಿದರೆ ಸಿಗುತ್ತದೆ. ʻನೀವು ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಅವಕಾಶ ಸಿಕ್ಕರೆ ಏನು ಮಾಡ್ತೀರ?ʼ ಎನ್ನುವ ಸೋಮಣ್ಣ ಅವರ ಪ್ರಶ್ನೆಗೆ ʻಮೊದಲೆಲ್ಲಾ ನನಗೆ ಅಂತಾ ಆಸೆ ಇತ್ತು. ಈಗ ಮೆಚ್ಯೂರಿಟಿ ಬಂದಿದೆ. ಹೇ… ಯಾಕೆ ಬೇರೆ ಭಾಷೆಗೆ ಹೋಗಬೇಕು? ನಮ್ಮೂರು, ನಮ್ಮ ಜಾಗ, ನಮ್ಮ ಭಾಷೆಯಲ್ಲಿ ಏನಾದರೂ ಮಾಡಬೇಕು… ಬೇರೆ ಭಾಷೆಯ ಸಿನಿಮಾ ಮಾಡೋ ಐಡಿಯಾನೇ ಹೋಗಿಬಿಡ್ತು… ಏನೇ ಮಾಡಿದರೂ ಇಲ್ಲೇ ಮಾಡಬೇಕು…ʼ ಅಂತಾ ಉತ್ತರ ಕೊಡುತ್ತಾರೆ… ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲೂ ರಿಷಭ್ ಇದೇ ಮಾತನ್ನು ಪುನರುಚ್ಚರಿಸಿದ್ದರು. ಗೋವಾ ಫಿಲ್ಮ್ ಫೆಸ್ಟಿವಲ್ನಲ್ಲೂ ರಿಷಬ್ ಈ ಮಾತನ್ನು ಪುನರುಚ್ಚರಿಸಿ ಕನ್ನಡಿಗರ ಚಪ್ಪಾಳೆ ಗಿಟ್ಟಿಸಿದ್ದರು!
ಈಗ ರಿಷಭ್ ತಮ್ಮ ಮಾತನ್ನು ತಾವೇ ಮರೆತಂತೆ ಕಾಣುತ್ತಿದೆ. ಇಷ್ಟೊಂದು ಮರೆವು ಒಳ್ಳೇದಲ್ಲ ಶೆಟ್ರೇ!

ಇನ್ನಷ್ಟು ಓದಿರಿ

Scroll to Top