ಆಗಷ್ಟೇ ಕೊರೋನಾ ಲಾಕ್‌ಡೌನ್ ಘೋಷಣೆಯಾಗಿರುತ್ತದೆ. ಅವಳು ಬೇಡವೆಂದರೂ ಹಠ ಮಾಡಿ ಮೀಟ್ ಮಾಡಲು ಕರೆಯುತ್ತಾನೆ. ಆ ಮೂಲಕ ಕಲ್ಗುಂಡಿ ಪ್ರವೀಣ ಮತ್ತು ಆತನ ಗೆಳತಿ ಅಮ್ಮಿ ಕಾಡಿನೊಳಗೆ ಪ್ರವೇಶಿಸುವುದರೊಂದಿಗೆ ಕಥೆ ಪ್ರಾರಂಭವಾಗುತ್ತದೆ. ಇವರಿಬ್ಬರೂ ಕಾಡಿಗೆ ಹೋಗುವುದನ್ನು ನೋಡಿದ ಗ್ರಾಮಸ್ಥರು, ಇದು ಯಾವುದೋ ‘ವ್ಯವಹಾರ’ ಎಂದು ತಪ್ಪಾಗಿ ಊಹಿಸಿ, ತಮ್ಮ ಕಾಡನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಬಿಡಬಾರದೆಂದು ಅವರನ್ನು ಹಿಡಿದು ‘ಶಿಕ್ಷಿಸಲು’ ನಿರ್ಧರಿಸುತ್ತಾರೆ. ಆದರೆ, ಈ ಯುವಕ-ಯುವತಿ ಕಾಡಿಗೆ ಕಾಲಿಟ್ಟ ನಂತರ ಅಸಲಿ ಕಥೆ ತೆರೆದುಕೊಳ್ಳುತ್ತದೆ. ಅವರು ಅಲ್ಲಿ ಬಂದಿದ್ದು ಯಾಕೆ? ಅಲ್ಲಿ ಏನೆಲ್ಲಾ? ಎಂಬ ಪ್ರಶ್ನೆಗಳಿಗೆ ʻಜಂಗಲ್ ಮಂಗಲ್ʼ ಚಿತ್ರದಲ್ಲಿ ಉತ್ತರ ಸಿಗುತ್ತದೆ.

ನಿರ್ದೇಶಕ ರಕ್ಷಿತ್ ಕುಮಾರ್ ಹೇಳಿಕೊಂಡಂತೆ, ಈ ಕಥೆ ಹಿಂದೆ ನಡೆದಿರುವ, ಈಗ ನಡೆಯುತ್ತಿರುವ ಮತ್ತು ಭವಿಷ್ಯದಲ್ಲೂ ನಡೆಯಬಹುದಾದ ನೈಜ ಘಟನೆಗಳ ಆಧಾರಿತವಾಗಿದೆ. ಕೇವಲ ಪ್ರವೀಣ ಮತ್ತು ಅಮ್ಮಿ ಮಾತ್ರವಲ್ಲದೆ, ಇತರೇ ಪಾತ್ರಗಳು, ಘಟನೆಗಳು, ಷಡ್ಯಂತ್ರಗಳು, ಕಣ್ಣೀರು, ದ್ವೇಷ, ಅಸಹಾಯಕತೆ, ಸಿಟ್ಟು ಮತ್ತು ಅಪರಾಧಗಳಂತಹ ಹಲವು ಆಯಾಮಗಳನ್ನು ಈ ಚಿತ್ರದಲ್ಲಿ ನೋಡಬಹುದು. ಕಾಡಿನಲ್ಲಿ ನಡೆಯುವ ಹಲವು ಘಟನೆಗಳು ನಿಧಾನವಾಗಿ ಬಿಚ್ಚಿಕೊಳ್ಳುತ್ತವೆ, ಆರಂಭದಲ್ಲಿ ‘ಮಜ’ ಎಂದು ಅನಿಸಿದರೂ, ಕ್ರಮೇಣ ಚಿತ್ರ ಗಂಭೀರ ತಿರುವು ಪಡೆದುಕೊಳ್ಳುತ್ತದೆ. ಮೇಲ್ನೋಟಕ್ಕೆ ಕುಡುಕನಂತೆ ಕಾಣುವ ಅಪ್ಪ ಕಟ್ಟಕಡೆಯ ದೃಶ್ಯದಲ್ಲಿ ಕಣ್ಣಲ್ಲಿ ನೀರು ಜಿನಿಗುವಂತೆ ಮಾಡುತ್ತಾನೆ. ಮಾತೇ ಆಡದ ಮಗು ಕೈಲಿ ಗನ್ನು ಹಿಡಿದು ಇಡೀ ಚಿತ್ರಕ್ಕೆ ತಿರುವು ನೀಡುತ್ತದೆ. ʻʻನೀನು ಬದುಕಲ್ಲಿ ಉದ್ದಾರವಾಗುವಂತೆ ಕಾಣುತ್ತಿಲ್ಲ. ನಿನ್ನನ್ನು ನಂಬಿದ ನನ್ನಿಂದ ನನ್ನ ತಂಗಿಯರ ಬಾಳು ಹಾಳಾಗೋದು ಬ್ಯಾಡ. ನಾನು ಬೇರೆ ಮದುವೆಗೆ ಒಪ್ಪಿಗೆ ನೀಡಿಬಿಟ್ಟೆʼʼ ಎಂದು ಹೇಳುವ ಹುಡಿಗಿಯ ಪ್ರಾಮಾಣಿಕತೆ… ಇವೆಲ್ಲಾ ಕತೆ ಮತ್ತು ಚಿತ್ರಕತೆಯಲ್ಲಿನ ನಿಜವಾದ ತಾಕತ್ತು.
ಇತ್ತೀಚಿನ ದಿನಗಳಲ್ಲಿ ಕಾಡಿನ ಹಿನ್ನೆಲೆಯಲ್ಲಿ ಹಲವು ಚಿತ್ರಗಳು ಬರುತ್ತಿದ್ದರೂ, ‘ಜಂಗಲ್ ಮಂಗಲ್’ ಒಂದು ವಿಭಿನ್ನ ಪ್ರಯತ್ನ. ಸಾಮಾನ್ಯವಾಗಿ ಬೇಟೆ, ಸ್ಮಗ್ಲಿಂಗ್, ದೈವ ಅಥವಾ ನಿಗೂಢತೆಗಳಂತಹ ಅಂಶಗಳು ಪ್ರಮುಖವಾಗಿದ್ದರೂ, ರಕ್ಷಿತ್ ಕುಮಾರ್ ಕೊರೋನಾ ಕಾಲಘಟ್ಟದಲ್ಲಿ ಕಥೆಯನ್ನು ಸರಳವಾಗಿ ಶುರು ಮಾಡಿ, ಹೆಚ್ಚೆಚ್ಚು ನಾಟಕೀಯ ಅಂಶಗಳನ್ನು ಸೇರಿಸದೆ, ಒಂದೂವರೆ ಗಂಟೆಯಲ್ಲಿ ಮುಗಿಸಿದ್ದಾರೆ. ಫ್ಲಾಶ್ಬ್ಯಾಕ್ ಮತ್ತು ಕಾಕತಾಳೀಯ ಘಟನೆಗಳು ಸ್ವಲ್ಪ ಜಾಸ್ತಿ ಅನಿಸಿದರೂ, ನಿರ್ದೇಶಕರು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ನಿರೂಪಿಸಿದ್ದಾರೆ. ಚಿತ್ರಕಥೆ ಮತ್ತು ನಿರೂಪಣೆಯ ಜೊತೆಗೆ, ಮನು ಶೆಡ್ಗಾರ್ ಅವರ ಸಂಕಲನ ಚಿತ್ರದ ಪ್ರಮುಖ ಆಕರ್ಷಣೆ. ಯಾವುದೇ ಅನಗತ್ಯ ಫ್ರೇಮ್ ಅಥವಾ ಸಂಭಾಷಣೆ ಇಲ್ಲದೆ, ಕಥೆಗೆ ಬೇಕಾದ ಅಂಶಗಳನ್ನು ಮಾತ್ರ ಇಟ್ಟುಕೊಂಡು ಚುರುಕಾಗಿ ಸಂಕಲಿಸಲಾಗಿದೆ. ವಿಷ್ಟು ಪ್ರಸಾದ್ ಅವರ ಛಾಯಾಗ್ರಹಣ ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಹಿನ್ನೆಲೆ ಸಂಗೀತ ಚಿತ್ರವನ್ನು ನೋಡಿಸಿಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಥೆಗೆ ಬೇಕಾದ ಪೂರಕ ಶಬ್ದಗಳನ್ನು ಪೂರ್ಣ ಒದಗಿಸಿದ್ದಾರೆ. ಬಹುತೇಕ ವಾದ್ಯಗಳ ಲೈವ್ ಮಾಡಿಸಿದ್ದಾರೆ. ಇದು ಹಿನ್ನೆಲೆ ಸಂಗೀತದ ಗುಣಮಟ್ಟವನ್ನು ಹೆಚ್ಚಿಸಿದೆ.
ಯಶ್ ಶೆಟ್ಟಿ ಯಾವುದೇ ಬಿಲ್ಡಪ್ ಇಲ್ಲದೆ, ಪಾತ್ರದ ಅಸಹಾಯಕತೆ ಮತ್ತು ಭಯಗಳನ್ನು ಹಿಡಿದಿಟ್ಟುಕೊಂಡು ನಟಿಸಿದ್ದಾರೆ. ಅಮ್ಮಿ ಪಾತ್ರದಲ್ಲಿ ಹರ್ಷಿತಾ ರಾಮಚಂದ್ರ ಗಮನ ಸೆಳೆಯುತ್ತಾರೆ. ಬಲ ರಾಜವಾಡಿಯನ್ನು ಅವರ ಮಾಮೂಲಿ ನಟನೆಯಿಂದ ಹೊರಕ್ಕೆ ಕರೆತಂದು ತುಂಬಾ ಸೆಟಲ್ ಆಗಿ ಅಭಿನಯಿಸುವಂತೆ ನಿರ್ದೇಶಕರು ನೋಡಿಕೊಂಡಿದ್ದಾರೆ. ‘ಉಗ್ರಂ’ ಮಂಜು ಪಾತ್ರವನ್ನು ತಿಂದು ಬಿಸಾಕಿದ್ದಾರೆ. ಚಂದ್ರಹಾಸ ಉಲ್ಲಾಳ, ದೀಪಕ್ ರೈ ಪಣಾಜೆ ಸೇರಿದಂತೆ ಉಳಿದ ಕಲಾವಿದರು ಕೂಡ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಒಟ್ಟಾರೆ, ‘ಜಂಗಲ್ ಮಂಗಲ್’ ಕಾಡಿನ ಪರಿಸರದಲ್ಲಿ ನಡೆಯುವ ಮಾನವ ಸಂಬಂಧಗಳು, ದುರಾಸೆಗಳು ಮತ್ತು ಅನಿರೀಕ್ಷಿತ ತಿರುವುಗಳ ಕುರಿತಾದ ಕೌತುಕಮಯ ವಿಚಾರಗಳನ್ನು ಹೊಂದಿರುವ ಗುಣಮಟ್ಟದ ಸಿನಿಮಾವಾಗಿದೆ.








































