ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ಟ್ರೆಂಡ್ ಸೃಷ್ಟಿಸಿದ, ಬೆಳ್ಳಿಪರದೆ ಮೇಲೆ ಅದ್ದೂರಿತನದ ಸಿಗ್ನೇಚರ್ ಹಾಕಿದ ಬ್ಯಾನರ್ ಈಶ್ವರಿ ಪ್ರೊಡಕ್ಷನ್ಸ್. ವೀರಾಸ್ವಾಮಿ ಅವರ ಕಾಲದಿಂದಲೂ ಕನ್ನಡಿಗರ ಎದೆಯಲ್ಲಿ ಬಣ್ಣದ ಕನಸುಗಳನ್ನು ಬಿತ್ತಿದ ಈ ಬ್ಯಾನರ್ ಕ್ಲಾಸಿಕ್ ಹಾಗೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದೆ. ಆ ಚಿತ್ರಗಳೆಲ್ಲಾ ಈಗ ಮತ್ತೆ ಥಿಯೇಟರ್‌ಗಳಲ್ಲಿ ಧೂಳೆಬ್ಬಿಸಲು ಸಿದ್ಧವಾಗುತ್ತಿವೆ ಎಂಬ ಸುದ್ದಿ ಓಡಾಡುತ್ತಿವೆ.

‘ಪ್ರೇಮಲೋಕ’ದ ರೊಮ್ಯಾಂಟಿಕ್ ಲೋಕ, ‘ರಣಧೀರ’ನ ಗತ್ತು, ‘ರಾಮಾಚಾರಿ’ಯ ಕ್ರೇಜ್ ಮತ್ತೆ ದೊಡ್ಡ ಪರದೆ ಮೇಲೆ ಅಬ್ಬರಿಸಲಿದೆ ಎಂದು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಈ ಸಂಭ್ರಮದ ನುಡವೆಯೇ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆ ಎದ್ದು ನಿಂತಿದೆ!!
ಸಿನಿಮಾಗಳ ಮರು ಬಿಡುಗಡೆಯ ಸುದ್ದಿ ಎಷ್ಟು ಜೋರಾಗಿ ಕೇಳಿಬರುತ್ತಿದೆಯೋ, ಅಷ್ಟೇ ಪ್ರಬಲವಾಗಿ ಈ ಚಿತ್ರಗಳ ಕಾನೂನುಬದ್ಧ ಹಕ್ಕುಗಳ ಕುರಿತು ದೊಡ್ಡ ಮಟ್ಟದ ಪ್ರಶ್ನೆಯೊಂದು ಉದ್ಭವಿಸಲಿದೆ ಅನ್ನೋದು ಅಕ್ಷರಶಃ ನಿಜ. ನಿಯಮ ಮತ್ತು ಕಾನೂನಿನ ಪ್ರಕಾರ, ಈಶ್ವರಿ ಸಂಸ್ಥೆಯ ಸಂಸ್ಥಾಪಕರಾದ ವೀರಾಸ್ವಾಮಿ ಅವರ ನಿಧನದ ನಂತರ, ಅವರು ನಿರ್ಮಿಸಿದ ಪ್ರಸಿದ್ಧ ಚಿತ್ರಗಳ ಎಲ್ಲಾ ರೀತಿಯ ಹಕ್ಕುಗಳು ಅಧಿಕೃತವಾಗಿ ಅವರ ಪುತ್ರ ವಿ. ಬಾಲಾಜಿ ಅವರ ಹೆಸರಿನಲ್ಲೇ ಇವೆ. ‘ನಾಗರಹಾವು’, ‘ಚಕ್ರವ್ಯೂಹ’ದಿಂದ ಹಿಡಿದು ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ‘ಪ್ರೇಮಲೋಕ’, ‘ರಣಧೀರ’, ‘ಶಾಂತಿ ಕ್ರಾಂತಿ’, ‘ರಾಮಾಚಾರಿ’ ಹಾಗೂ ‘ಚಿನ್ನ’ ಚಿತ್ರದವರೆಗಿನ ಎಲ್ಲಾ ಕಲ್ಟ್ ಸಿನಿಮಾಗಳ ಸಂಪೂರ್ಣ ಮಾಲೀಕತ್ವ ಮತ್ತು ರೈಟ್ಸ್ ಕಾನೂನುಬದ್ಧವಾಗಿ ಬಾಲಾಜಿ ಅವರ ಬಳಿಯೇ ಭದ್ರವಾಗಿವೆ.
ಹೀಗಿರುವಾಗ, ಇತ್ತೀಚೆಗೆ ವಿಕ್ರಮ್ ಅವರು ‘ಪ್ರೇಮಲೋಕ’ ಸೇರಿದಂತೆ ಕೆಲವು ಐಕಾನಿಕ್ ಸಿನಿಮಾಗಳನ್ನು ವೈಭವೋಪೇತವಾಗಿ ಮರು ಬಿಡುಗಡೆ ಮಾಡುವ ಬಗ್ಗೆ ಹಾಗೂ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ, ಮೂಲ ಹಕ್ಕುಗಳನ್ನು ಹೊಂದಿರುವ ಬಾಲಾಜಿ ಅವರಿಂದ ಯಾವುದೇ ರೀತಿಯ ಲಿಖಿತ ಸಹಮತಿ ಅಥವಾ ಎನ್‌ಒಸಿ ಪಡೆಯದೇ, ಕಾನೂನಾತ್ಮಕವಾಗಿ ಬೇರೆ ಯಾರೇ ಆದರೂ ಈ ಸಿನಿಮಾಗಳನ್ನು ಮುಟ್ಟುವುದು ಅಥವಾ ಪ್ರದರ್ಶನಕ್ಕೆ ತರುವುದು ಅಸಾಧ್ಯದ ಮಾತು. ಕಾನೂನಿನ ಚೌಕಟ್ಟಿನಲ್ಲಿ ಹಕ್ಕುಗಳೇ ಇಲ್ಲದಿರುವಾಗ, ಮೂಲ ಮಾಲೀಕರ ಗಮನಕ್ಕೇ ತರದೆ ಇಂತಹ ಬೃಹತ್ ಯೋಜನೆಗಳ ಘೋಷಣೆ ಹೊರಬೀಳುತ್ತಿರುವುದು ನಗೆಪಾಟಲಿಗೀಡಾಗಿದೆ!
ಇಷ್ಟಕ್ಕೂ ಶಾಂತಿ ಕ್ರಾಂತಿ ಸಿನಿಮಾದ ಮದರ್ ಪ್ರಿಂಟ್ ಮದರಾಸಿನ ಪ್ರಸಾದ್ ಲ್ಯಾಬ್‌ನಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಅಗ್ನಿಗೆ ಆಹುತಿಯಾಗಿದೆ. ನಾಗರಹಾವು ಚಿತ್ರವನ್ನು ಈ ಹಿಂದೆ ರೀ ರಿಲೀಸ್ ಮಾಡಿದ್ದರು. ಅದರ ಮೂಲ ಪ್ರಿಂಟ್ ಬಹುತೇಕ ಫಂಗಸ್ ನಿಂದ ಹಾಳಾಗಿತ್ತು. ಅಕ್ಷರಶಃ ಕಸದ ತಿಪ್ಪೆಯಲ್ಲಿ ಬಿದ್ದಿದ್ದ ಪ್ರಿಂಟನ್ನು ತೆಗೆದುಕೊಂಡು ಬಂದು ಅದಕ್ಕೆ ಬರೋಬ್ಬರಿ ಎರಡೂವರೆ ಕೋಟಿ ರೂಪಾಯಿಗಳನ್ನು ಸುರಿದು ಸರಿಪಡಿಸಿ, ಅದನ್ನು ಇವತ್ತಿನ ತಂತ್ರಜ್ಞಾನಕ್ಕೆ ಬೇಕಾದಂತೆ ಮಾರ್ಪಡಿಸಿದ್ದರು. ಬಿಡುಗಡೆ ಮಾಡಿ ಲಾಭವನ್ನೂ ಮಾಡಿಕೊಂಡಿದ್ದರು. ಆದರೆ, ಶಾಂತಿ ಕ್ರಾಂತಿ ಸಿನಿಮಾದ ಮೂಲ ಪ್ರಿಂಟ್‌ನ ತುಣುಕು ಕೂಡಾ ಈಗ ಲಭ್ಯವಿಲ್ಲ. ಸದ್ಯ ಟೀವಿ ರೈಟ್ಸ್‌ಗೆ ಕೊಟ್ಟಿರುವ 1080 HD ಗುಣಮಟ್ಟವಷ್ಟೇ ಉಳಿದಿದೆ. ಇದನ್ನು ತೆಗೆದುಕೊಂಡು, 4K, 8K ಕ್ವಾಲಿಟಿಯಲ್ಲಿ ರಿಲೀಸ್ ಮಾಡೋದು ತೀರಾ ತ್ರಾಸದ ಕೆಲಸ. ಆ ಕಾಲಕ್ಕೇ ಅಷ್ಟೊಂದು ಗುಣಮಟ್ಟದ ಚಿತ್ರ ಬಿಡುಗಡೆ ಮಾಡಿದ್ದ ರವಿಚಂದ್ರನ್ ಈಗ ತೀರಾ ಕಳಪೆ ಗುಣಮಟ್ಟದ ಪ್ರದರ್ಶನ ಮಾಡಲು ಸಾಧ್ಯವಾ? ಇವೆಲ್ಲಾ ವಿಕ್ರಂ ರವಿಚಂದ್ರನ್ ಅವರಿಗ್ಯಾಕೆ ಗೊತ್ತಾಗಿಲ್ಲ? ʻಅಪ್ಪ ಒಪ್ಪಿದ್ದಾರೆ. ನಾನು ರೀ ರಿಲೀಸ್ ಮಾಡಲು ರೆಡಿ ಮಾಡಿಬಿಡ್ತೀನಿʼ ಅಂತಾ ಏಕಾ ಏಕಿ ಹೇಳಿಕೆ ಕೊಟ್ಟರೆ ಸಾಕಾ? ಅದು ಹೇಗೆ ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ಹೇಗೆ ಸಾಧ್ಯವಾಗುತ್ತದೆ? ಅನ್ನೋದನ್ನೆಲ್ಲಾ ಥಿಂಕ್ ಮಾಡಬೇಕಲ್ಲವಾ?
ಒಟ್ಟಾರೆಯಾಗಿ ಹೇಳುವುದಾದರೆ, ಈಶ್ವರಿ ಪ್ರೊಡಕ್ಷನ್ಸ್‌ನ ಹಳೆಯ ಸೂಪರ್ ಹಿಟ್ ಚಿತ್ರಗಳನ್ನು ಮತ್ತೆ ಥಿಯೇಟರ್‌ಗಳಲ್ಲಿ ಕಣ್ಣುಂಬಿಕೊಳ್ಳಲು ಅಭಿಮಾನಿಗಳೇನೋ ಕಾತರಿಸುತ್ತಾರೆ ನಿಜ. ಆದರೆ, ಮೂಲ ಹಕ್ಕುಗಳನ್ನು ಹೊಂದಿರುವವರ ಸಮ್ಮತಿ ಇಲ್ಲದೆ, ಕಾನೂನುಬದ್ಧ ದಾಖಲೆಗಳ ಬೆಂಬಲವಿಲ್ಲದೆ ಇಂತಹ ಮರು ಬಿಡುಗಡೆಯ ಸಾಹಸಕ್ಕೆ ಕೈಹಾಕುವುದು ಎಷ್ಟು ಸರಿ, ಇದು ನಿಜಕ್ಕೂ ಸಾಕಾರಗೊಳ್ಳಲು ಸಾಧ್ಯವೇ ಅನ್ನೋದು ಸದ್ಯದ ಪ್ರಶ್ನೆ…
ರವಿಪುತ್ರ ವಿಕ್ಕಿಯೇ ಉತ್ತರಿಸಬೇಕು!!












































