ನಡೆದುಹೋದ ಒಂದು ಭಯಾನಕ ಘಟನೆಯನ್ನು ತೆರೆಯ ಮೇಲೆ ಯಥಾವತ್ತಾಗಿ ಮರುಸೃಷ್ಟಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಪ್ರಕರಣವೊಂದು ಇನ್ನೂ ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ, ದಿನನಿತ್ಯ ಸುದ್ದಿಯಲ್ಲಿರುವಾಗಲೇ ಅದನ್ನೇ ಕಥಾವಸ್ತುವನ್ನಾಗಿಸಿಕೊಂಡು ಸಿನಿಮಾ ಮಾಡುವುದು ಸಿಕ್ಕಾಪಟ್ಟೆ ರಿಸ್ಕಿ! ಆದರೆ, ಇಂಥದ್ದೊಂದು ಅತೀವ ಧೈರ್ಯ ಮತ್ತು ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ ತನುಷ್ ಶಿವಣ್ಣ ಮತ್ತು ಅವರ ತಂಡ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಹಿಂದೆ-ಮುಂದೆ ಏನೆಲ್ಲಾ ಕರಾಳ ಅಧ್ಯಾಯಗಳು ಜರುಗಿದವು ಎಂಬುದನ್ನು ಪತ್ರಿಕೆಗಳ ಪುಟಗಳಲ್ಲಿ ಓದಿ, ಟಿವಿ ಪರದೆಗಳಲ್ಲಿ ನೋಡಿ ತಲ್ಲಣಗೊಂಡಿದ್ದ ಜನರಿಗೆ, ಆ ಇಡೀ ಘಟನಾವಳಿಗಳನ್ನು ಕಣ್ಣಿಗೆ ಕಟ್ಟುವಂತೆ ದೃಶ್ಯರೂಪದಲ್ಲಿ ತೆರೆದಿಟ್ಟಿದೆ ಈ ‘ಬಾಸ್’ ಸಿನಿಮಾ. ಚಿತ್ರದಲ್ಲಿ ಪಾತ್ರಗಳ ಹೆಸರುಗಳನ್ನು ಜಾಣತನದಿಂದ ಬದಲಾಯಿಸಲಾಗಿದೆ. ಇಲ್ಲಿ ನಾಯಕ ‘ಬಾಸ್’ ಸಿನಿಮಾ ರಂಗದವನಾಗುವ ಬದಲು ಪ್ರಖ್ಯಾತ ಸ್ಟಾರ್ ಕ್ರಿಕೆಟರ್ ಆಗಿ ಕಾಣಿಸಿಕೊಂಡಿದ್ದಾನೆ. ಅದನ್ನು ಹೊರತುಪಡಿಸಿದರೆ, ರಕ್ತ ಹೆಪ್ಪುಗಟ್ಟಿಸುವ ಮಿಕ್ಕ ಎಲ್ಲಾ ನೈಜ ದೃಶ್ಯಗಳೂ ಇಲ್ಲಿ ಜೀವ ಪಡೆದುಕೊಂಡಿವೆ.
ಸೆಲೆಬ್ರಿಟಿಯೊಬ್ಬ ಭೀಕರ ಕ್ರೈಂ ಪ್ರಕರಣದಲ್ಲಿ ಸಿಲುಕಿದಾಗ, ಆತನ ಸುತ್ತಲೂ ಮುಸುಕು ಧರಿಸಿ ತಿರುಗುತ್ತಿದ್ದ ನಂಬಿಕಸ್ಥರು, ಗೇಣೆಕ್ಕಾರರು ಎಂತೆಂಥಾ ನವರಂಗೀ ಆಟವಾಡುತ್ತಾರೆ? ಹಣದಾಸೆಗೆ ಬಿದ್ದು ಅಮಾಯಕರನ್ನು ಹೇಗೆ ಬಲಿಪಶು ಮಾಡುತ್ತಾರೆ? ಕಣ್ಣು ಮುಚ್ಚಿ ಆರಾಧಿಸುವ ಅಂಧಾಭಿಮಾನ ಎಂಬುದು ಕೊನೆಗೆ ಅದೆಷ್ಟು ಅಮಾಯಕರ ಬದುಕನ್ನು ಬಲಿಪಡೆಯುತ್ತದೆ? ವಿಧಿಯಾಟಕ್ಕೆ ಸಿಲುಕಿ, ಘಟನೆಗೂ ತಮಗೂ ಯಾವುದೇ ಸಂಬಂಧವಿಲ್ಲದವರು ಹೇಗೆ ಅಪರಾಧದ ಸುಳಿಯಲ್ಲಿ ಬಿದ್ದು ನರಳುತ್ತಾರೆ ಎಂಬುದನ್ನು ಚಿತ್ರ ಕಟು ಸತ್ಯವಾಗಿ ಬಿಚ್ಚಿಡುತ್ತದೆ. ಇತ್ತ ಯಾರೋ ಮಾಡಿದ ಅನಾಚಾರವನ್ನು ತಮ್ಮ ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳುವ ಕುತಂತ್ರಿ ರಾಜಕಾರಣಿಗಳು, ಖ್ಯಾತಿಯ ಶಿಖರದಲ್ಲಿದ್ದ ವ್ಯಕ್ತಿಯನ್ನು ಕೆಳಗೆ ಉರುಳಿಸಲು ವಿರೋಧಿಗಳು ಹಣೆದ ನಿಗೂಢ ಷಡ್ಯಂತ್ರಗಳು ನಿಜಕ್ಕೂ ಆಘಾತವನ್ನುಂಟು ಮಾಡುತ್ತವೆ.
ಇದಷ್ಟೇ ಅಲ್ಲ, ಸೆಲೆಬ್ರಿಟಿಯೊಬ್ಬನ ಮೋಹದ ಬಲೆಗೆ ಬಿದ್ದು ಮೆರೆಯುವ ಹೆಣ್ಣಿನ ಅತಿಯಾದ ದೌಲತ್ತು, ಆಕೆಯ ಮತ್ತು ಆತನ ಬೆನ್ನಹಿಂದೆ ನಿಂತು ಭಟ್ಟಂಗಿತನ ಮಾಡುತ್ತಾ ಬೃಹತ್ ಅವಾಂತರ ಸೃಷ್ಟಿಸುವ ಸಹಾಯಕರು, ಒಮ್ಮೆ ಯಡವಟ್ಟು ಮಾಡಿಕೊಂಡ ಮೇಲೆ ಸಮಾಜದ ಮುಂದೆ ಆ ಪ್ರಖ್ಯಾತ ವ್ಯಕ್ತಿ ಅನುಭವಿಸುವ ನರಕಯಾತನೆ… ಪ್ರತಿಯೊಂದೂ ವಿವರಗಳು ಇಲ್ಲಿ ದಾಖಲಾಗಿವೆ. ಪೊಲೀಸ್ ಇಲಾಖೆಯಲ್ಲಿದ್ದುಕೊಂಡೇ ಅಪರಾಧಿಗಳ ಎಂಜಲಿಗೆ ಆಸೆ ಬೀಳುವ ಭ್ರಷ್ಟರ ನಡುವೆ, ‘ಕೊಲೆಗಾರ ಎಷ್ಟೇ ಪ್ರಭಾವಿಯಾಗಿದ್ದರೂ ಬಿಡುವುದಿಲ್ಲ’ ಎಂದು ಸಿಂಹದಂತೆ ತೊಡೆತಟ್ಟಿ ನಿಲ್ಲುವ ನಿಷ್ಠಾವಂತ ಪೊಲೀಸ್ ಅಧಿಕಾರಿಯ ಪಾತ್ರ ಕಥೆಗೆ ದೊಡ್ಡ ಬಲ ತಂದಿದೆ. ಇವೆಲ್ಲದರ ನಡುವೆ, ಸೋಷಿಯಲ್ ಮೀಡಿಯಾದಲ್ಲಿ ಅಸಹ್ಯವಾಗಿ ವರ್ತಿಸುವ ಸ್ತ್ರೀ ಪೀಡಕ ಕ್ರಿಮಿಯೊಬ್ಬನ ಅಸಲಿ ಮನಸ್ಥಿತಿ ಮತ್ತು ಆತನ ವಿಕೃತ ಬುದ್ದಿ ಆತನನ್ನು ಹೇಗೆ ಸಾವಿನ ಅಂಚಿಗೆ ತಳ್ಳುತ್ತದೆ ಅನ್ನೋದಿಲ್ಲಿ ಕಣ್ಣಿಗೆ ಕಟ್ಟಿದಂತೆ ತೆರೆದುಕೊಂಡಿದೆ.
ಒಟ್ಟಾರೆಯಾಗಿ ನೋಡಿದರೆ, ಇಲ್ಲೊಬ್ಬ ಹಣದ ಅಮಲಿನಲ್ಲಿ ತೇಲುತ್ತಾ ದುಷ್ಟಕೂಟ ಮತ್ತು ಅನೈತಿಕ ಸಂಬಂಧದ ದಾಸನಾದ ಹೆಸರಾಂತ ವ್ಯಕ್ತಿ; ಮತ್ತೊಂದೆಡೆ ಕೀಳು ಅಭಿರುಚಿಯ ಕೊಳಕು ಮನಸ್ಸಿನ ಕ್ರಿಮಿ; ಇನ್ನೊಂದೆಡೆ ತನ್ನ ಸಂಸಾರವನ್ನೂ ನೆಟ್ಟಗೆ ಮಾಡಿಕೊಳ್ಳದೆ, ಮತ್ತೊಬ್ಬರ ಹಸನು ಸಂಸಾರವನ್ನು ಮುರಿಯಲು ನಿಂತ ಮನೆಮುರುಕಿ; ಇನ್ನೊಂದೆಡೆ ಖ್ಯಾತ ವ್ಯಕ್ತಿಯ ತಪ್ಪನ್ನೇ ಬಂಡವಾಳ ಮಾಡಿಕೊಂಡು ಕೋಟಿ ಕೋಟಿ ಬಾಚಲು ಹೊಂಚುಹಾಕಿದ ದ್ರೋಹಿ ಪಡೆ… ಹೀಗೆ ಈ ಕಥೆಯಲ್ಲಿರುವ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ತಪ್ಪಿತಸ್ಥರೇ! ಇಲ್ಲಿ ಒಬ್ಬರು ಮಾಡಿದ ಅಕ್ಷಮ್ಯ ತಪ್ಪು, ಮತ್ತೊಬ್ಬರ ಪಾಲಿಗೆ ಶಿಕ್ಷೆಯಾಗಿ ಪರಿಣಮಿಸುತ್ತದೆ.
ಪಾಪ-ಪುಣ್ಯದ ಅರಿವಿಲ್ಲದೆ, ಕೇವಲ ಕಾಮದ ಆಸೆಗೆ ಬಿದ್ದು ಸಂಬಂಧವೇ ಇಲ್ಲದ ವರ್ತುಲದಲ್ಲಿ ಸಿಲುಕುವ ಬಡಪಾಯಿ, ಕೊನೆಗೆ ರಕ್ತಸಿಕ್ತವಾಗಿ ಬಡಿಸಿಕೊಂಡು ಜೀವವನ್ನೇ ಕಳೆದುಕೊಳ್ಳುತ್ತಾನೆ. ಆತನ ಒಂದು ತಪ್ಪಿನಿಂದ ಇಡೀ ದುಷ್ಟಕೂಟವೇ ಜೈಲು ಪಾಲಾಗುತ್ತದೆ. ಆದ್ದರಿಂದ, `ಬಾಸ್’ ಬರಿ ನೈಜ ಘಟನೆಯನ್ನಷ್ಟೇ ಆಧರಿಸಿದ ಸಿನಿಮಾ ಅಲ್ಲ; ಇದು “ನಾವು ಬಿತ್ತಿದ್ದನ್ನೇ ಬೆಳೆಯುತ್ತೇವೆ” ಎಂಬ ನಿಷ್ಠುರ ‘ಕರ್ಮ ಸಿದ್ಧಾಂತ’ದ ಆಧಾರದಲ್ಲಿ ರೂಪುಗೊಂಡಿರುವ ಚಿತ್ರ.
ನಿರ್ದೇಶಕ ಲವ ಎಲ್ಲೂ ಗೊಂದಲವಾಗದಂತೆ ನಿರ್ದೇಶನ ಮಾಡಿದ್ದಾರೆ. ತನುಷ್ ಶಿವಣ್ಣ ಅವರ ಮ್ಯಾನರಿಸಂ ಥೇಟು ಸೆಲೆಬ್ರಿಟಿಯನ್ನೇ ಹೋಲುವಂತಿದೆ. ನಾಯಕಿಯರಾಗಿ ವಂದಿತಾ ಗೌಡ ಮತ್ತು ಪಾಯಲ್ ಚೆಂಗಪ್ಪ ತಮ್ಮ ಉತ್ತಮ ನಟನೆಯಿಂದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಡಿಸಿಪಿ ಹರೀಶ್ ಪಾತ್ರಧಾರಿ ಅದ್ಭುತವಾಗಿ ನಟಿಸಿದ್ದಾರೆ. ಸ್ವಾಮಿ ಪಾತ್ರಧಾರಿ ಸಂದೀಪ್ ತಮ್ಮ ಪ್ರತಿಭೆಯನ್ನು ಇಲ್ಲಿ ಸಂಪೂರ್ಣವಾಗಿ ಪ್ರದರ್ಶಿಸಿದ್ದಾರೆ. ಇವೆಲ್ಲದರ ಜೊತೆಗೆ ಶರತ್ ಎನ್.ಆರ್. ಪುರ ಅವರ ಛಾಯಾಗ್ರಹಣ ಬೆಂಗಳೂರಿನ ರಾತ್ರಿ ವಾತಾವರಣವನ್ನು ಕಟ್ಟಿಕೊಡುವುದರ ಜೊತೆಗೆ ಕ್ರೈಮ್ ವಾತಾವರಣಕ್ಕೆ ತಕ್ಕಂತೆ ದೃಶ್ಯಗಳಿಗೆ ಜೀವ ನೀಡಿದ್ದರೆ, ಮಹೇಶ್ ರೆಡ್ಡಿ ಅವರ ತೀಕ್ಷ್ಣವಾದ ಸಂಕಲನ ಸಿನಿಮಾದ ವೇಗವನ್ನು ಎಲ್ಲೂ ತಗ್ಗದಂತೆ ಕಾಯ್ದುಕೊಂಡಿದೆ. ಸುರೇಶ್ ಮ್ಯೂಸಿಕ್ಕಿನಲ್ಲಿ, ನವೀನ್ ಸಜ್ಜು ಹಾಡಿರುವ ಏನಿದೆಯೋ ನಿನ್ನ ಮಾಯೆ ಹಾಡು ಮತ್ತೆ ಮತ್ತೆ ಕಾಡುತ್ತದೆ. ಈ ಹಾಡಿಗೆ ಪ್ರಮೋದ್ ಮರವಂತೆ ಬರೆದಿರುವ ಸಾಲುಗಳು ತುಂಬಾನೇ ಶಕ್ತಿಯುತವಾಗಿವೆ; ಇಡೀ ಪ್ರಕರಣವನ್ನು ಒಂದೇ ಹಾಡಿನಲ್ಲಿ ಹಿಡಿದಿಟ್ಟಿದ್ದಾರೆ…
ಒಟ್ಟಾರೆ ಬಾಸ್ ನೋಡಿಸಿಕೊಂಡು ಹೋಗುವ, ಎಲ್ಲರೂ ನೋಡಬಹುದಾದ ಸಿನಿಮಾ












































