ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಯಶ್!

Picture of Cinibuzz

Cinibuzz

Bureau Report

ಈಗ ಶ್ರೀ ಭರತ ಬಾಹುಬಲಿ ಚಿತ್ರದ ಮೂಲಕ ಹೀರೋ ಆಗಿ ಲಾಂಚ್ ಆಗುತ್ತಿರುವ ಮಂಜು ಮಾಂಡವ್ಯ ಕನ್ನಡ ಚಿತ್ರರಂಗದ ಪ್ರತಿಭಾವಂತ, ಬಹುಮುಖ ಪ್ರತಿಭೆ ಅನ್ನೋದು ಈಗಾಗಲೇ ಸಾಬೀತಾಗಿದೆ. ಉಪ್ಪಿ ಅಭಿಮಾನಿಯಾಗಿ ಚಿತ್ರರಂಗಕ್ಕೆ ಬಂದ ಮಂಜು ಮಾಂಡವ್ಯ ಕ್ರಮೇಣ ಸಂಭಾಷಣಾಕಾರರಾಗಿ ಗುರುತಿಸಿಕೊಂಡವರು. ಇವರ ಸಹೋದರ ಮಧು ಚಂದ್ರ ಸಹಾ ಕನ್ನಡದಲ್ಲಿ ಈಗಾಗಲೇ ಮೂರ‍್ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಡೈಲಾಗು ಬರೆಯುವುದರೊಂದಿಗೆ ರಾಜಾ ಹುಲಿ ಚಿತ್ರದಲ್ಲಿ ಯಶ್ ಜೊತೆ ಮಂಜು ನಟನೆ ಕೂಡಾ ಮಾಡಿದ್ದರು. ಆ ಸಂದರ್ಭದಲ್ಲೇ ಯಶ್ ‘ನೀವ್ಯಾವಾಗ್ರೀ ಡೈರೆಕ್ಟರ್ ಆಗೋದು?’ ಅಂತಾ ಪ್ರಶ್ನಿಸುತ್ತಿದ್ದರಂತೆ. ಯಶ್ ತಮಾಷೆಗೆ ಹಾಗನ್ನುತ್ತಾರೆ ಅಂದುಕೊಂಡಿದ್ದಾಗಲೇ ಅದೊಂದು ದಿನ ‘ಬಂದು ಮೀಟ್ ಮಾಡಿ’ ಅಂತಾ ಯಶ್ ಆಹ್ವಾನಿಸಿದ್ದರಂತೆ. ಹಾಗೆ ಹೋಗಿ ಭೇಟಿಯಾದಾಗ ನೀವು ಕಥೆ ರೆಡಿ ಮಾಡಿಕೊಳ್ಳಿ, ನನಗಾಗಿ ಸಿನಿಮಾ ಡೈರೆಕ್ಟ್ ಮಾಡಬೇಕು ಅಂದೇಬಿಟ್ಟರಂತೆ. ಆ ಮೂಲಕ ಶುರುವಾಗಿದ್ದೇ ಮಾಸ್ಟರ್ ಪೀಸ್. ಕೆ.ಜಿ.ಎಫ್. ನಿರ್ಮಾಪಕ ವಿಜಯ್ ಕಿರಗಂದೂರು ಆ ಸಿನಿಮಾಗೆ ಬಂಡವಾಳ ಹೂಡಿದ್ದರು. ಯಾರಲ್ಲಿ ಎಂಥಾ ಪ್ರತಿಭೆ ಇದೆ ಅನ್ನೋದನ್ನು ಗುರುತಿಸೋ ಗುಣ ಯಶ್ ಅವರಲ್ಲಿದೆ. ಹೀಗಾಗೇ ಇಂದು ಸಂತೋಷ್ ಆನಂದ್ ರಾಮ್, ಮಂಜು ಮಾಂಡವ್ಯರಂಥ ಕ್ರಿಯಾಶೀಲ ನಿರ್ದೇಶಕರು ಚಿತ್ರರಂಗಕ್ಕೆ ದಕ್ಕಿದ್ದಾರೆ.

ಸದ್ಯ ಮಂಜು ಮಾಂಡವ್ಯ ನಿರ್ದೇಶನದೊಂದಿಗೆ ನಟನೆಯನ್ನೂ ಆರಂಭಿಸಿದ್ದಾರೆ. ಮಂಜು ಅವರ ಅದೃಷ್ಟವೋ ಏನೋ ಇವರ ಮೊದಲ ಸಿನಿಮಾವನ್ನು ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಿಸಿತ್ತು. ಎರಡನೇ ಸಿನಿಮಾ ಶ್ರೀ ಭರತ ಬಾಹುಬಲಿಯನ್ನು ಐಶ್ವರ್ಯಾ ಡೆವಲಪರ‍್ಸ್’ನ ಶಿವಕುಮಾರ್ ಪ್ರೊಡ್ಯೂಸ್ ಮಾಡಿದ್ದಾರೆ. ಈ ಸಿನಿಮಾ ಕೂಡಾ ಅಂದುಕೊಂಡತೇ ಸಕ್ಸಸ್ ಆದರೆ ಕನ್ನಡಕ್ಕೆ ಒಬ್ಬ ಹೀರೋ ಸಿಗುವುದರ ಜೊತೆಗೆ ಧಾರಾಳಿಗ ನಿರ್ಮಾಪಕ ಕೂಡಾ ದೊರೆತಂತಾಗುತ್ತದೆ!

ಇನ್ನಷ್ಟು ಓದಿರಿ

Scroll to Top