ನಳನಳಿಸುವ ನವರತ್ನದ ಸುತ್ತ ನಿಗೂಢದ ಹುತ್ತ!

Picture of Cinibuzz

Cinibuzz

Bureau Report

ಚರಿತ್ರೆಯ ದ್ವೇಷ, ವಾಸ್ತವದ ಗೊಂದಲಗಳನ್ನು ಸೇರಿಸಿ ನವರತ್ನ ಎನ್ನುವ ಸಿನಿಮಾವನ್ನು ರೂಪಿಸಿದ್ದಾರೆ. ನವರತ್ನಗಳಿಂದ ಕೂಡಿದ ಹಾರ, ಕಾಡು, ಫೋಟೋಗ್ರಫಿ, ಪತ್ತೇದಾರಿ, ಸರಣಿ ಕೊಲೆಗಳು, ಮಾಫಿಯಾ ಮತ್ತು ನಂಬಿಕೆಗಳು – ಹೀಗೆ ನಾನಾ ವೆರೈಟಿಗಳು ಒಂದೇ ಸಿನಿಮಾದಲ್ಲಿ ಅಡಕವಾಗಿವೆ.

ಕಟ್ಟಡ ನಿರ್ಮಾಣಕ್ಕಾಗಿ ಭೂಮಿ ಅಗೆದಾಗ ಅಲ್ಲಿದ್ದ ಕೆಲಸಗಾರನಿಗೆ ಪೆಟ್ಟಿಗೆಯೊಂದು ಸಿಗುತ್ತದೆ. ಆ ಪೆಟ್ಟಿಗೆಯಲ್ಲಿ ನವರತ್ನದ ಹಾರ ಸಿಗುತ್ತದೆ. ಅದರ ಜೊತೆಗೊಂದು ತಾಳೆಗರಿಯೂ ದೊರೆಯುತ್ತದೆ. ಆ ಹಾರ ಅಲ್ಲಿಂದ ಸಂಚಾರ ಆರಂಭಿಸಿ ಒಬ್ಬರ ಕೈಯಿಂದ ಒಬ್ಬರಿಗೆ ರವಾನೆಯಾಗುತ್ತಲೇ ಇರುತ್ತದೆ. ವಿಚಿತ್ರವೆಂದರೆ ಆ ನವರತ್ನದ ಹಾರ ಯಾರ ಬಳಿ ಹೋದರೂ ಅವರು ಅನಾಹುತಕ್ಕೀಡಾಗಿ ಸಾವನ್ನಪ್ಪುತ್ತಿರುತ್ತಾರೆ. ಯಾಕೆ ಹೀಗಾಗುತ್ತದೆ? ಹಾರಕ್ಕೂ, ವಿಚಿತ್ರ ಸಾವುಗಳಿಗೂ ಏನು ಸಂಬಂಧ? ಅಸಲಿಗೆ ಆ ಹಾರವನ್ನು ಭೂಮಿಯಲ್ಲಿ ಅಡಗಿಸಿಟ್ಟವರು ಯಾರು? ಯಾ ಕಾರಣಕ್ಕೆ ಆ ಹಾರವನ್ನು ಹೂತಿಟ್ಟಿರುತ್ತಾರೆ? ಆ ಹಾರಕ್ಕೆ ಜೀವ ತೆಗೆಯುವ ಶಕ್ತಿ ಬಂದಿದ್ದಾದರೂ ಹೇಗೆ? ನಾಯಕಿ ಫೋಟೋಗ್ರಫಿ ಮಾಡಲು ಬಂದವಳು ಮತ್ತೇನನ್ನೋ ಹುಡುಕುವಂಥೆ ಕಾಣುತ್ತದಲ್ಲಾ? ಏನದು? ಇಲ್ಲಿ ನಾಯಕನ ಪಾತ್ರವೇನು? – ಹೀಗೆ ಘಳಿಗೆಘಳಿಗೆಗೂ ಕುತೂಹಲ ಸೃಷ್ಟಿಸುತ್ತಾ ಸಾಗುವ ಸಿನಿಮಾ ನವರತ್ನ. ಕಿಗ್ಗ ಹಾಗೂ ಇಂಡೋನೇಷಿಯಾದ ತೀಕ್ಷ್ಣ ಕಾಡುಗಳಲ್ಲಿ ಬಹುತೇಕ ಚಿತ್ರೀಕರಣ ನಡೆಸಿದ್ದಾರೆ. ಕಾಡಿನಲ್ಲಿ ಶೂಟ್ ಮಾಡುವುದು ಸುಲಭದ ಮಾತಲ್ಲ, ಆದರೆ ನವರತ್ನ ಚಿತ್ರದಲ್ಲಿ ಈ ಕಾಡು ಮತ್ತದರ ಸೊಬಗನ್ನು ಸುಂದರವಾಗಿ ದಾಖಲಿಸಲಾಗಿದೆ.

ರಿಜೋ ಪಿ ಜಾನ್ ಅವರ ಕ್ಯಾಮೆರಾ ಕೆಲಸಕ್ಕೆ ತಕ್ಕ ಸಾತ್ ನೀಡಿರುವುದು ವಿಷ್ಣು ಅವರ ಸಂಕಲನ. ಈ ಚಿತ್ರಲ್ಲಿ ಸಂಕಲನ ಬಹುಮುಖ್ಯ ಪಾತ್ರ ವಹಿಸಿದೆ. ಸಸ್ಪೆನ್ಸ್ ಜಾನರಿನ ಈ ಚಿತ್ರದಲ್ಲಿ ಎಡಿಟಿಂಗ್ ಕೆಲಸ ಸ್ವಲ್ಪ ಮಂಕಾಗಿದ್ದರೂ ಚಿತ್ರದ ಅಂದಗೆಡುವ ಸಾಧ್ಯತೆಯಿತ್ತು. ಆದರೆ ವಿಷ್ಣು ಎಲ್ಲೂ ಅಂತಾ ಆಭಾಸಗಳಿಗೆ ಜಾಗ ಕೊಡದೆ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದಾರೆ. ಆ ಮೂಲಕ ಚಿತ್ರರಂಗಕ್ಕೆ ಹೊಸ ಸಂಕಲನಕಾರರಾಗಿ ಆರಂಭಿಕ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಾಸ್ಯ ಕಲಾವಿದನಾಗಿ ಹೆಚ್ಚು ಚಾಲ್ತಿಗೆ ಬರುತ್ತಿರುವ ಅಮಿತ್ ಚೆಂದದ ನಟನೆ ನೀಡಿದ್ದಾರೆ. ಮೋಕ್ಷ ಕುಶಾಲ್ ಮತ್ತು ಪ್ರತಾಪ್ ರಾಜ್ ಜೋಡಿಯನ್ನು ತೆರೆ ಮೇಲೆ ನೋಡುವುದೇ ಸೊಬಗು. ಅಷ್ಟು ಚೆಂದಗೆ ಪಾತ್ರ ನಿರ್ವಹಿಸಿದ್ದಾರೆ. ನಟನೆಯೊಂದಿಗೆ ನಿರ್ದೇಶನವನ್ನೂ ಮಾಡಿರುವ ಪ್ರತಾಪ್ ರಾಜ್ ಸಾಕಷ್ಟು ಹೊಸ ಸಾಧ್ಯತೆಗಳನ್ನು ಮೊದಲ ಸಿನಿಮಾದಲ್ಲೇ ಪ್ರಯೋಗಿಸಿದ್ದಾರೆ.

ಒಟ್ಟಾರೆಯಾಗಿ ಎಲ್ಲೂ ಬೇಸರ ಮೂಡಿಸದ, ರೋಚಕ ಕತೆಯನ್ನು ಒಳಗೊಂಡ ಸಿನಿಮಾ ನವರತ್ನ. ಎಲ್ಲರೂ ನೋಡಿ ಎಂಜಾಯ್ ಮಾಡುವ ಸಾಕಷ್ಟು ಅಂಶಗಳು ಇಲ್ಲಿವೆ. ಮಿಸ್ ಮಾಡದೇ ಒಮ್ಮೆಯಾದರೂ ನೋಡಿಬನ್ನಿ!

ಇನ್ನಷ್ಟು ಓದಿರಿ

Scroll to Top