ಈ ಯುವಕನ ಹೆಸರು ಅಭಿಷೇಕ್ ಗೌಡ. ಸಿನಿಮಾಗಾಗಿ ಯಶಸ್ ಅಭಿ ಅಂತಾ ನಾಮಕರಣ ಮಾಡಿಕೊಂಡಿದ್ದಾರೆ. ಮೂಲತಃ ತುಮಕೂರಿನವರಾದರೂ, ಹುಟ್ಟಿ ಬೆಳೆದಿರೋದೆಲ್ಲಾ ಬೆಂಗಳೂರಿನಲ್ಲೇ. ಕೆ.ಎಲ್.ಇ. ಕಾಲೇಜಿನಲ್ಲಿ ಓದು ಮುಗಿಸಿ ಅಭಿನಯ ತರಂಗದಲ್ಲಿ ನಟನೆಯ ಪಟ್ಟುಗಳನ್ನು ಕಲಿತಿರುವ ಅಭಿಯ ಹುಟ್ಟಿದ ದಿನ ಇವತ್ತು. ೦%ಲವ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿರುವ ಯಶಸ್ ಅಭಿಯ ಕುರಿತಾದ ಸಣ್ಣ ಪರಿಚಯ ಇಲ್ಲಿದೆ…

ಮನೆಯವರು ನೀನು ಚೆನ್ನಾಗಿ ಓದು. ಡಾಕ್ಟರ್, ಇಂಜಿನಿಯರ್ ಅಥವಾ ಪೊಲೀಸ್ ಆದರೂ ಆಗು ಅನ್ನುತ್ತಿದ್ದರಂತೆ. ಅದಕ್ಕೆ ಅಭಿ “ಎಲ್ಲವೂ ಆಗುತ್ತೀನಿ. ಅದು ಸಾಧ್ಯವಾಗಬೇಕೆಂದರೆ ನಾನು ಆಕ್ಟರ್ ಆಗಬೇಕು” ಅನ್ನುತ್ತಿದ್ದರಂತೆ. ಕಾಲೇಜಿಗೆ ಹೋಗು ಅಂತಾ ಕಳಿಸಿದರೆ, ಅಭಿ ಹೋಗಿ ಕೂರುತ್ತಿದ್ದುದು ಸಿನಿಮಾ ಥೇಟರಿನ ಒಳಗೆ. ಸುತ್ತ ಸ್ನೇಹಿತರನ್ನು ಕೂರಿಸಿಕೊಂಡು ಕನ್ನಡದ ಎಲ್ಲ ಹೀರೋಗಳ ಡೈಲಾಗು ಹೇಳೋದು ಅಭಿಗೆ ಹವ್ಯಾಸವಾಗಿತ್ತು. ಹಾಗೆ ಅಭಿ ಡೈಲಾಗು ಹೇಳುವಾಗಲೇ ಅವರೊಳಗಿನ ಕಲಾವಿದ ಸ್ನೇಹಿತರ ಕಣ್ಣಿಗೆ ಕಾಣಲು ಶುರುವಾಗಿದ್ದ. ನೀನೂ ಯಾಕೆ ಸಿನಿಮಾದಲ್ಲಿ ಛಾನ್ಸು ಗಿಟ್ಟಿಸಬಾರದು ಅಂತಾ ಎಷ್ಟೋ ಜನ ಅಂದಿದ್ದಿದೆ.

ಈ ಹೊತ್ತಿಗೇ ಸ್ವತಃ ಅಭಿಯ ಮನಸ್ಸಿನಲ್ಲೂ ನಾನು ನಟನಾಗಬೇಕು ಅನ್ನೋ ಬಯಕೆ ಬೆಳೆಯುತ್ತಾ ಹೋಗಿತ್ತು. ನಾನು ಏನಾದರೂ ಸಾಧಿಸಿದರೆ ಇದೇ ಕ್ಷೇತ್ರದಲ್ಲೇ ಎನ್ನುವ ದೃಢ ಸಂಕಲ್ಪ ಮಾಡಿದ ಅಭಿ ನಿಯಮಿತವಾದ ನಟನೆಯನ್ನು ಕಲಿಯುವ ತೀರ್ಮಾನಕ್ಕೆ ಬಂದಿದ್ದರು. ಆಗ ಹೋಗಿ ಸೇರಿದ್ದು ಅಭಿನಯ ತರಂಗಕ್ಕೆ. ಅಲ್ಲಿ ಕಲಿಕೆಯ ಜೊತೆಜೊತೆಗೇ ಸರಿಸುಮಾರು ೫೦ಕ್ಕೂ ಹೆಚ್ಚು ಬೀದಿ ನಾಟಕಗಳಲ್ಲಿ ಅಭಿನಯಿಸಿದ್ದರು. ಕರ್ಣದ್ಯುಮಣಿ ಎನ್ನುವ ನಾಟಕದಲ್ಲಿ ಕರ್ಣನಾಗಿ, ಬಿರುಗಾಳಿ ನಾಟಕದಲ್ಲಿ ಭೈರವನಾಗಿ, ಅದ್ವಾನ ಪುರ ನಾಟಕದಲ್ಲಿ ಕುಡುಕನಾಗಿ, ಮುಂದಣ ಕಥನ ನಾಟಕದಲ್ಲಿ ಸೈನಿಕನಾಗಿ, ಸಿಬಿಐ ಆಫೀಸರ್, ಹೀಗೆ ಹಲವಾರು ನಾಟಕಗಳಲ್ಲಿ ಅಚ್ಚುಕಟ್ಟಾಗಿ ಪಾತ್ರನಿರ್ವಹಿಸಿ ೨೦೧೬-೧೭ ಸಾಲಿನ ಉತ್ತಮ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಆನಂತರ ಸ್ನೇಹಿತರ ಜೊತೆಗೂಡಿ ಥೇಟರ್ ಕಲ್ಪವೃಕ್ಷ ತಂಡವನ್ನು ಕಟ್ಟಿಕೊಂಡು ಪುಗಳೇಂದಿ ಪ್ರಹಸನ ಎನ್ನುವ ನಾಟಕದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಆ ಹೊತ್ತಿಗಾಗಲೇ ಪಳಗಿದ ನಟನೆಯನ್ನು ನೀಡುತ್ತಿದ್ದ ಅಭಿ ರಂಗಭೂಮಿ ವಾತಾವರಣದಲ್ಲಿ ಒಂದು ಮಟ್ಟದ ಹೆಸರು ಸಂಪಾದಿಸಿದ್ದರು.

ಸದ್ಯ ಅರ್ಜುನ್ ಮಂಜುನಾಥ್ ಹೀರೋ ಆಗಿ ನಟಿಸುತ್ತಿರುವ, ಪೋಸ್ಟರುಗಳ ಮೂಲಕವೇ ಟಾಕ್ ಕ್ರಿಯೇಟ್ ಮಾಡಿರುವ ಪ್ರೆಸೆಂಟ್ ಪ್ರಪಂಚ ೦% ಲವ್ ಚಿತ್ರದಲ್ಲಿ ಅಭಿ ಎರಡನೇ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಸಿನಿಮಾಗೇ ಅರ್ಜುನ್ ಮಂಜುನಾಥ್ ಅವರ ಸಖ್ಯ ದೊರೆತಿರುವುದು ಅಭಿ ಪಾಲಿನ ಅದೃಷ್ಟ ಅಂದರೂ ತಪ್ಪಿಲ್ಲ. ಯಾಕೆಂದರೆ, ಈಗಾಗಲೇ ಸಂಯುಕ್ತ-೨ ಮತ್ತು ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾಗಳನ್ನು ನಿರ್ಮಿಸಿ, ನಟಿಸಿರುವ ಅರ್ಜುನ್ ಮಂಜುನಾಥ್ ತಾವು ಬೆಳೆಯುವುದರೊಂದಿಗೆ ಜೊತೆಗಿರುವವರನ್ನೂ ಕೈ ಹಿಡಿದು ಪೊರೆಯುವ ಗುಣ ಹೊಂದಿರುವರು. ತಮ್ಮೊಟ್ಟಿಗೆ ಸಹನಟನಾಗಿ ನಟಿಸುತ್ತಿರುವ ಅಭಿಯನ್ನು ಸ್ವತಃ ಅರ್ಜುನ್ ಮಂಜುನಾಥ್ ಪ್ರಮೋಟ್ ಮಾಡುತ್ತಿದ್ದಾರೆ.

ರಂಗಭೂಮಿಯಲ್ಲಿ ಎಷ್ಟೇ ಕೃಷಿ ಮಾಡಿದ್ದರೂ ಸಿನಿಮಾರಂಗದ ರೀತಿನೀತಿಗಳು, ಇಲ್ಲಿನ ವರಸೆಗಳೇ ಬೇರೆ. ಹೀರೋ ಆಗಲು ಬಂದವರಿಗೆ ನಟನೆ ಮಾತ್ರ ಇಲ್ಲಿ ಸಾಕಾಗೋದಿಲ್ಲ. ಅದರ ಜೊತೆಗೆ ಡ್ಯಾನ್ಸು, ಫೈಟ್ಸು ಸೇರಿದಂತೆ ಕ್ಯಾಮೆರಾ ಮುಂದೆ ನಿಲ್ಲುವ ಚಾಕಚಕ್ಯತೆಗಳೆಲ್ಲಾ ರೂಢಿಯಾಗಬೇಕು. ಈ ನಿಟ್ಟಿನಲ್ಲಿ ಯಶಸ್ ಅಭಿ ನೃತ್ಯ, ಸಾಹ ಸೇರಿದಂಥೆ ಹೀರೋ ಅನ್ನಿಸಿಕೊಳ್ಳಲು ಬೇಕಿರುವ ಸಕಲ ವಿದ್ಯೆಗಳ ತಾಲೀಮು ನಡೆಸಿದ್ದಾರೆ. ೦% ಲವ್ ಚಿತ್ರದ ಜೊತೆಗೆ ಕುಮಾರ್ ನಿರ್ದೇಶನದ ಕ್ರಿಟಿಕಲ್ ಕೀರ್ತನೆಗಳು ಸಿನಿಮಾದಲ್ಲಿ ಕೂಡಾ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಕೆಲವೇ ದಿನಗಳಲ್ಲಿ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ಅಭಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾರಂಗದಲ್ಲಿ ಏನಾದರೊಂದು ಸಾಧಿಸಲೇಬೇಕು ಅಂತಾ ಬಂದಿರುವ ಅಭಿಗೆ ಈ ಮೂಲಕ ಹುಟ್ಟು ಹಬ್ಬದ ಶುಭಾಶಯವನ್ನು ತಿಳಿಸೋಣ.











































